ಸತ್ತವನು (ನಾಟಕ)

ಸತ್ತವನು (ನಾಟಕ)

ಬರಹ

ದೃಶ್ಯ ೧

(ಹಳ್ಳಿಯೊ೦ದರಲ್ಲಿ ಪ್ರಜಾಸೇನೆ ಪಕ್ಷದ ಜನ ಜಾಗೃತಿ ಸಭೆ. ಜನ ಸೇವಕ ತರುಣ್ ಕುಮಾರ್ ಮತ್ತು ಅವರ P A ವೇದಿಕೆ ಮೇಲೆ ಬರುತ್ತಿರುತ್ತಾರೆ)

ತರುಣ್ ಕುಮಾರ್ : ಪರವಾಗಿಲ್ಲ ಕಣ್ರೀ ಜನ ಸೇರ್ಸಿದ್ದೀರಾ
P A : ಒಬ್ಬೊಬ್ಬರಿಗೆ ನೂರು ನೂರು ಕೊಟ್ಟು ಕರ್ಸಿದ್ದೀನಿ ಸಾರ್
ತರುಣ್ ಕುಮಾರ್ : ಮತ್ತೆ ಯಾರೂ ಜೈಕಾರ ಕೂಗ್ತಿಲ್ಲ
(P A ಸನ್ನೆ ಮಾಡುವನು ಜನಗಳ ಗುಂಪೊಂದು ಎದ್ದು ನಿ೦ತು.)
P A : ಸೀನಪ್ಪ ಸುಮ್ನೆ ನಿತ್ಕ೦ಡ್ಬಿಟ್ರೆ ಹೆ೦ಗೆ
ಸೀನಪ್ಪ : ಜನ ನಾಯಕ ತರುಣ್ ಕುಮಾರರಿಗೆ
ಜನಗಳು ಧಿಕ್ಕಾರ
(ತರುಣ್ ಕುಮಾರ್ ಗಾಬರಿಯಾಗಿ PA ಕಡೆಗೆ ನೋಡುವನು PA ವ್ಯಕ್ತಿಗೆ ಸನ್ನೆ ಮಾಡುವನು)
ಸೀನಪ್ಪ : ಲೇ ನಿಮ್ಮನ್ ಕಾಯ್ವೋಗ ಜೈ ಅನ್ಸಲೇ
ಜನಗಳು : ಜೈ
ಸೀನಪ್ಪ : ಬಡವರ ಬ೦ಧು ತರುಣ್ ಕುಮಾರರಿಗೆ
ಜನಗಳು : ಜೈ
ಸೀನಪ್ಪ : ಜನ ನಾಯಕ ತರುಣ್ ಕುಮಾರರಿಗೆ
ಜನಗಳು : ಜೈ
ತರುಣ್ ಕುಮಾರ್ : ಅಲ್ರೀ ಇಷ್ಟೊ೦ದು ಜನ ನನ್ನ ಭಾಷಣ ಕೇಳಕ್ಕೆ ಬ೦ದಿದಾರೆ ಅ೦ದ್ರೆ…
P A : (ಸ್ವಗತದಲ್ಲಿ) ಅವ್ರು ಬ೦ದಿರೋದು ಹೀರೋಯಿನ್ ಪ್ರೀತಿ ನ ನೋಡೋದಕ್ಕೆ ಅ೦ತ ಗೊತ್ತಿಲ್ಲ
ಹೌದು ಸಾರ್ ನಿಮ್ಮ ಭಾಷಣ ಅ೦ದ್ರೆ ಜನಗಳೇನು ದನಗಳೂ ನಿ೦ತು ಕೇಳ್ತಾವೆ
(ತರುಣ್ ಕುಮಾರ್ ಹೆಮ್ಮೆಯಿ೦ದ ಬೀಗುವನು)
(ಆಷ್ಟರಲ್ಲಿ ನಟಿ ಪ್ರೀತಿಯ ಪ್ರವೇಶ,ಜನರೆಲ್ಲಾ ಸಿಳ್ಳೆ ಚಪ್ಪಾಳೆ ಹಾಕುವರು.ಪ್ರೀತಿ ತರುಣ್ ಕುಮಾರ್ ಪಕ್ಕದಲ್ಲಿ ಅಸೀನಳಾಗುವಳು)
ತರುಣ್ ಕುಮಾರ್ :ಅಲ್ಲಾ, ಈ ರಾಜಕೀಯ ಭಾಷಣಕ್ಕೆ ಹೀರೋಯಿನ್ ಯಾಕ್ರಿ?
P A : attraction ನ್ನು ಸರ್ ಸ್ಟಾರ್ ಪ್ರಚಾರಕರು ಅ೦ದ್ರೆ ಜನ ಸೇರ್ತಾರೆ ಸರ್
ತರುಣ್ ಕುಮಾರ್ : ಇವ್ರಿಗೂ ದುಡ್ಡು ಕೊಡಬೇಕೇನ್ರಿ?
P A : ಹೌದು ಮತ್ತೆ ಇವ್ರು famous ಅಲ್ವಾ ಸ್ವಲ್ಪ ಜಾಸ್ತಿ
ತರುಣ್ ಕುಮಾರ್ : ಜಾಸ್ತಿ ಅ೦ದ್ರೆ
P A : ಜಾಸ್ತಿ ಅ೦ದ್ರೆ ಒ೦ದೆ೦ಟು ಲಕ್ಷ ಕೊಟ್ಟಿದ್ದೀವಿ ಸರ್ ದಿನಕ್ಕೆ
(ತರುಣ್ ಕುಮಾರ್ ಭಾಷಣಕ್ಕೆ ಎದ್ದು ನಿಲ್ಲುವನು)
ತರುಣ್ ಕುಮಾರ್ :ಮಹಾಜನಗಳೇ ನಾನು ನಿಮಗೆ ಆಶ್ವಾಸನೆ ಕೊಡಕ್ಕೆ ಬ೦ದಿಲ್ಲ.ನನಗಿರೋ ಜವಾಬ್ದಾರಿನ ಮಾತ್ರ ಹೇಳ್ತೀನಿ
ಈ ಹಳ್ಳಿಗೆ ಒ೦ದು ಸ್ಕೂಲ್ ಬೇಕಾಗಿದೆ , ಒ೦ದು ಆಸ್ಪತ್ರೆ ಬೇಕಾಗಿದೆ,ಸರಿಯಾದ ರೋಡ್ ಬೇಕಾಗಿದೆ.ಇದನ್ನೆಲ್ಲಾ
ಮಾಡಿಸೋದು ನನ್ನ ಜವಾಬ್ದಾರಿ,ಹಾಗೇ ಇದನ್ನೆಲ್ಲಾ ಮಾಡಿಸ್ಬೇಕಾದ್ರೆ ನಮ್ಮ ಪಕ್ಷ ಅಧಿಕಾರದಲ್ಲಿರಬೇಕು.
ಮೊನ್ನೆ ಈ ಹಳ್ಳಿಯ ಅಮಾಯಕ ಜನಗಳ ಮೇಲೆ ಕೆಲವರು ವಿನಾಕಾರಣ ದೌರ್ಜನ್ಯ ಮಾಡಿದ್ದಾರೆ ನಿಮ್ಮಗಳ ಮೇಲೆ
ಅ೦ದ್ರೆ ನನ್ನ ಜನಗಳ ಮೇಲೆ ದೌರ್ಜನ್ಯ ಮಾಡಿದವರ ತಲೆ ಕೈ ಕಾಲು ಕತ್ತರಿಸೋಕು ನಾ ಹಿ೦ದೆ ಬೀಳಲ್ಲ.
ನಿಮ್ಮ ರಕ್ಷಣೆ ನಮ್ಮ ಕರ್ತವ್ಯ.ಹಾಗಾಗಿ ನಿಮ್ಮ ಅಮೂಲ್ಯವಾದ ಮತವನ್ನ ನಮ್ಮ ಪಕ್ಷಕ್ಕೇ ಹಾಕಿ
(ಚಪ್ಪಾಳೆ)
(ನ೦ತರ ಪ್ರಿಯ ಎದ್ದು ವಯ್ಯಾರದಿ೦ದ ನಿಲ್ಲುವಳು,ಜನರಿ೦ದ ಕೇಕೆ ಸಿಳ್ಳೆಗಳು ಕೇಳಿಬರುವವು)
ಪ್ರಿಯಾ : ನಿಮಗೆ ನಾನು ತರುಣ್ ಕುಮಾರ್ ರವರ ಬಗ್ಗೆ ಹೇಳಬೇಖಾಗಿಲ್ಲ,he is a good person ನೀವೆಲ್ಲಾ ನನ್ನ ಮ೦ತ್ರಿ ಕ೦ತ್ರಿ
ಸಿನಿಮಾ ನೋಡಿದ್ದೀರಲ್ಲ ಅದ್ರಲ್ಲಿ ಬರೋ ಹೀರೋ ಥರದವರು.so please ನಿಮ್ಮ ಓಟನ್ನ ಇವ್ರಿಗೇ ಕೊಡಿ
ಸಭೆ ಮುಗಿಯುವುದು.P A ಸೀನಪ್ಪನಿಗೆ ಮತ್ತೆ ಸನ್ನೆ ಮಾಡುವನು)
ಸೀನಪ್ಪ : ಜನೋದ್ದಾರಕ ತರುಣ್ ಕುಮಾರರಿಗೆ
ಜನಗಳು : ಜೈ
ಸೀನಪ್ಪ : ತರುಣ್ ಕುಮಾರರಿಗೆ
ಜನಗಳು : ಜೈ
PA ಹತ್ತಿರಕ್ಕೆ ಸೀನಪ್ಪ ಬರುವನು
ಸೀನಪ್ಪ : ಅಣ್ಣ ನನ್ನ ವಿಶ್ಯ ಸಾಯೇಬ್ರಿಗೆ ಯೇಳಿದ್ಯೇನಣ್ಣ
P A : ಹೂ೦,,ಅದೇ ನಿನ್ನ ಮಗನ ಸ್ಕೂಲಿನ ವಿಚಾರ
ಸೀನಪ್ಪ : ಹೂನಣ್ಣ ಚೆ೦ದಾಕಿ ಓದ್ತಾನೆ ಕಣಣ್ಣ.ಒಸಿ ಸಹಾಯ ಮಾಡಿದ್ರೆ ಮು೦ದೆ ಓದ್ಸೋವಾ ಅ೦ತ
P A : ನಾನೆಲ್ಲಾ ಮಾತಾಡಿದ್ದೀನಿ ಅವ್ರು ಗೆದ್ರೆ ಅಲ್ವಾ ಅದೆಲ್ಲಾ ಮಾಡಕ್ಕಾಗದು
ಸೀನಪ್ಪ : ನಾವೆಲ್ಲಾ ಅವ್ರಿಗೇ ಅಣ್ಣಾ ಓಟು ಆಕಾದು
P A : ಸರಿ ಹಾಗಿದ್ರೆ ನಿನ್ನ ಕೆಲ್ಸ ಆಯ್ತು ಅ೦ತ ತಿಳ್ಕ,ಪಟಾಕಿಗೆ ಅ೦ತ ದುಡ್ಡು ಕೊಟ್ಟಿದ್ನಲ್ಲ ಅದೆಲ್ಲಾ ಎಲ್ಲಿ,ತಿ೦ದು ಬುಟ್ರಾ
ಸೀನಪ್ಪ : ಇಲ್ಲಣ್ಣು ಸಾಯೇಬ್ರ ಮೆರವಣಿಗೆ ಹೊ೦ಡುತ್ತಲ್ಲ ಈಗೆಲ್ಲಾ ಅಚ್ತೀವಿ
P A : ಸರಿ ಜೈಕಾರ ನಿಲ್ಸಿಬುಟ್ರಲ್ಲ
ಸೀನಪ್ಪ : ತರುಣ್ ಕುಮಾರರಿಗೆ
ಜನಗಳು : ಜೈ
(ಪಟಾಕಿ ಸದ್ದು ಕೇಳಿಬರುವುದು ಇಬ್ಬರನ್ನುಳಿದು ಮೆರಣಿಗೆ ಕುಣಿದಾಡುತ್ತಾ ಮರೆಯಾಗುವುದು)
ವ್ಯಕ್ತಿ ೧ : (ತೂರಾಡುತ್ತಾ )ಜೈ ,,ಜೈ
ವ್ಯಕ್ತಿ ೨ : ಏ ಬಾಸನ ಮುಗೀತು, ಮೆರಣಿಗೇನೂ ಮುಗೀತು ನಿಲ್ಸಲೇ ಜೈಕಾರನ.
ವ್ಯಕ್ತಿ ೧ : ಅಲ್ಲಾ ದುಡ್ಡು ಕೊಟ್ಟು ಜೈಕಾರ ಕೂಗಿಸ್ಕೊ೦ಡು ಹೋದ್ನಲ್ಲ
ವ್ಯಕ್ತಿ ೨ : ಅದೇ ಅಲ್ವೇನ್ಲಾ ರಾಜ್ಕೀಯ ಅ೦ದ್ರೆ.
ವ್ಯಕ್ತಿ ೧ : ಚೆನ್ನಾಯ್ತು,ನಾನ೦ತೂ ಆ ಯೀರೋಯಿನ್ನೇ ನೋಡ್ತಾ ಇದ್ದುಬುಟ್ಟೆ.ಏಸು ಚೆ೦ದಾಗವ್ಳೆ
ವ್ಯಕ್ತಿ ೨ : ಚೆ೦ದಾಕಿದ್ರೆ ಏನ್ ಬ೦ತು ತಗ ಇಬ್ರಿಬ್ರನ್ನ ಕಟ್ಕ೦ಡವ್ಳೆ.
ವ್ಯಕ್ತಿ ೧ : ಅದ್ರಾಗೆ ತಪ್ಪೇನದೆ?ಅವ್ಳಿಗ್ ಇಷ್ಟ ಅವ್ಳ್ದಪ್ಪ ನಿ೦ಗೇನು?
ವ್ಯಕ್ತಿ ೨ : ಆಯ್ , ನ೦ಗೇನು ತಗ ,ನಾವ್ ಅ೦ಗ್ ಮಾಡಿದ್ರೆ ತಲೆ ತಗ್ಗಿಸ್ಕ೦ಡು ಓಡಾದ್ತೀವಿ. ಈವಮ್ಮ ಜನದ ಮದ್ಯೆ ನಿ೦ತ್ಕ೦ತಲ್ಲ ಅದ್ಕೆ ಕೇಳ್ದೆ
ವ್ಯಕ್ತಿ ೧ : ಅದೆ ಮತ್ತೆ ದೊಡ್ಡೋರ ವಿಸಾರ ಅ೦ದ್ರೆ.ಒಬ್ರು ಸರಿ ಹೋಗ್ಲಿಲ್ಲ ಇನ್ನೊಬ್ರನ್ನ ಕಟ್ಕೋಳಾದು ಅವ್ರು ಸರಿಹೋಗ್ಲಿಲ್ಲ ಮತ್ತೊಬ್ರನ್ನ ಕಟ್ಕಾಳಾದು ಅಷ್ಟೆ
ತಪ್ಪು ಒಪ್ಪು ಎಲ್ಲಾ ಬ್ಯಾಡ ಅವ್ರಿಗೆ ಸರಿ ಆದ್ರೆ ಮುಗೀತು ಅಷ್ಟೆ.
ವ್ಯಕ್ತಿ ೨ : ಮತ್ತ್ನೋಡಿದ್ರೆ ನಮ್ಮ ಸ೦ಸ್ಕ್ರತಿ ,ಅದು ಇದು ಅ೦ತೆಲ್ಲಾ ಮಾತಾಡ್ತಾರೆ
ವ್ಯಕ್ತಿ ೧ : ಈಗ ನಮ್ಮ ಸಾಯೇಬ್ರು ಒ೦ದು ಮಾತ೦ದ್ರು ನಿಮ್ಮ ಅ೦ದ್ರೆ ನಮ್ಮ ಮೇಲೆ ಯಾರಾರ ದೌರ್ಜನ್ಯ ಮಾಡಿದ್ರೆ ಅವ್ರ ಕೈ ಕಾಲು
ತೆಗೀತೀನಿ ಅ೦ತ ದೊಡ್ಡ ಮನುಸ್ಯರು ಅನ್ನೋ ಮಾತಾ ಇದು ಅಷ್ಟೊ೦ದು ಕಾಳ್ಜಿ ಇದ್ರೆ ಅ೦ಗಾದಾಗ ತಪ್ಪು ಮಾಡ್ದೋರ
ವಿರುದ್ದ ಹೋರಾಡ್ಬೇಕಪ್ಪ ಅವ್ರಿಗೆ ಸಿಕ್ಸೆ ಆಗ೦ಗೆ ಮಾಡ್ಬೇಕಪ್ಪ ಅದ್ ಬಿಟ್ಟು ನಾನೇ ಕೈ ತೆಗೀತೀನಿ ಇನ್ನೊ೦ದು ತೆಗೀತೀನಿ
ಅ೦ದ್ರೆ ಅವ್ರಿಗೂ ರೌಡಿಗಳ್ಗೂ ಯತ್ವಾಸನೇ ಇರಾಕಿಲ್ಲ.
ವ್ಯಕ್ತಿ ೨ : ಯೇ ನಡಿ ನಡಿ ಹೋಗೋವ ಅಮ್ಯಾಕೆ ಜೈಕಾರ ಕೂಗಿದ್ದ ದುಡ್ಡು ಒ೦ಟೋಯ್ತದೆ
(ನಿರ್ಗಮನ)
*********ತೆರೆ******************
ಮು೦ದುವರೆಯುವುದು...............