ಸತ್ತಾಗಲೂ ಲಾಭ ಲೆಕ್ಕಿಸಿದ ನಾಡಕೋಣಗಳು!

ಸತ್ತಾಗಲೂ ಲಾಭ ಲೆಕ್ಕಿಸಿದ ನಾಡಕೋಣಗಳು!

ಬರಹ

‘ಕರುಮದವತಾರಗಳು’.

ಕಳಸನಕೊಪ್ಪದ ಮಟ್ಟಿಮಾಡ ಹಳ್ಳದ ಶಾನುಭೋಗರ ಕೆರೆಯ ದಂಡೆಯ ಮೇಲೆ ೫ ದಿನಗಳ ಹಿಂದೆ ಸತ್ತು ಬಿದ್ದಿದ್ದ ಕಾಡುಕೋಣದ ವಿಷಯ ನಿಮಗೆ ತಿಳಿದಿದೆ. ಇಂದು (ಮಂಗಳವಾರ) ಕಾಡುಕೋಣದ ಶವ ಪರೀಕ್ಷೆ ನಡೆದ ರೀತಿ ನೋಡಿ ನನಗೆ ಈ ಮನುಷ್ಯರ ಬಗ್ಗೆ ಅಸಹ್ಯ ಮೂಡಿತು. ಸತ್ತಾಗಲೂ ಲಾಭಲೆಕ್ಕಿಸುವ ನಾಡಕೋಣಗಳ ಮನಸ್ಸಿನ ಪರಿ ಹೃದಯಹಿಂಡಿತು.

ಕಾಡುಕೋಣಕ್ಕೆ ಕೊಂಬು ಅಪರಿಮಿತ ಸೌಂದರ್ಯವನ್ನು ತಂದುಕೊಡುತ್ತದೆ. ಕಳಸನಕೊಪ್ಪದ ಪ್ರಗತಿಪರ ರೈತ ಸುಭಾಶ್ ಈ ಮಾತು ಅನುಮೋದಿಸುವಂತೆ.."ನಾವು ಸಾಕಿದ ಎತ್ತುಗೋಳ ಕೋಡ ಕೆತ್ತಿಸಿ, ಕೊಬ್ಬರಿ ಎಣ್ಣಿ ಹಚ್ಚಿ ತಿಕ್ಕಿದರೂ ಈ ಹೊಳಪು ಬರುದುಲ್ಲ ಸಾಹೇಬ್ರ.." ಅಂದ್ರು. ಆದರೆ ಇಲ್ಲಿ ಕೋಣದ ಎಡ ಕೊಂಬು ಅದರ ಸಾವಿಗೆ ಮುನ್ನುಡಿ ಬರೆದಿತ್ತು. ವಿಪರ್ಯಾಸವೆಂದರೆ ವೈರಿಗಳಿಂದ ರಕ್ಷಿಸಿಕೊಳ್ಳಲು ಅದಕ್ಕೆ ಇರುವ ಅಸ್ತ್ರವೇ ಕೊಂಬು. ಪ್ರಾಣ ರಕ್ಷಕವಾಗಿದ್ದ ಅಸ್ತ್ರ ಮಾರಣಾಂತಿಕವಾಗಿ ಪರಿಣಮಿಸಿದ್ದು ವಿಧಿ ನಿಶ್ಚಯ!

ಅಂತೂ ಕಲಘಟಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ, ಎಲ್ಲರನ್ನೂ ಅಲ್ಲಿಂದ ತೆರವುಗೊಳಿಸುವ ಕೆಲಸ ಮೊದಲು ಮಾಡಿದರು. ನಂತರ ಗಬ್ಬೆದ್ದು ನಾರುತ್ತಿದ್ದ ಕಾಡುಕೋಣದಿಂದ ಹತ್ತು ಅಡಿ ದೂರನಿಂತು ಮಹಜರು ನಡೆಸಿದರು. ಈ ಸಂದರ್ಭದಲ್ಲಿ ತಮಗೆ ಆಪ್ತರಾದವರನ್ನು ಬಿಟ್ಟು ಯಾರನ್ನೂ ಹತ್ತಿರ ಸುಳಿಯಲು ಬಿಡಲಿಲ್ಲ. ಕಂಠಪೂರ್ತಿ ಕುಡಿದು ಬಂದಿದ್ದ ಕೆಲ ‘ವೀರಬಾಹು’ ಕುಲದವರು ಮರದ ಟಿಸಿಲೊಡೆದ ಬೊಡ್ಡೆಯನ್ನು ಕತ್ತರಿಸಿದರು. ಸಿಕ್ಕಿಕೊಂಡಿದ್ದ ಕೋಡು ಬಿಡುಗಡೆಗೊಂಡ ತಕ್ಷಣ ನಿರ್ಜೀವ ಗೋಣು ಧಪ್ಪೆಂದು ನಿರಾಯಾಸವಾಗಿ ನೆಲಕ್ಕೊರಗಿತು. ಶಾನುಭೋಗರ ಕೆರೆಯ ಕಣಿವೆಗೆ ಎಳೆದು ಕೆಡವಿದ ಅವರು ದೂರ ಸರಿದು ನಿಂತರು.

ಅತ್ಯಂತ ವೃತ್ತಿಪರ ಮೌಲ್ವಿಯೋರ್ವ ಈ ವೀರಬಾಹುಗಳ ಸಹಕಾರದಲ್ಲಿ ಅಡ್ಡ ಕೆಡವಿದ. ೧೫ ನಿಮಿಷದಲ್ಲಿ ಕಾಡುಕೋಣದ ಚರ್ಮ ಪೂರ್ತಿ ಸುಲಿದ. ಮಾಂಸ ಬೇರ್ಪಡಿಸಿದ. ಚರ್ಮವನ್ನು ಒಂದು ಚೀಲಕ್ಕೆ ಹಾಗು ಕೊಂಬು ಸಮೇತ ತಲೆಯನ್ನು ಮತ್ತೊಂದು ಚೀಲಕ್ಕೆ ತುಂಬಿದ. ಗಂಟು ಕಟ್ಟಿದ. ಕಾಡುಕೋಣದ ಶವ ಪರೀಕ್ಷೆ ನಡೆಸಿ, ಮಹಜರು ಮುಗಿಸಿ ಎಲ್ಲವನ್ನೂ ಅರಣ್ಯಾಧಿಕಾರಿಗಳು ತಮ್ಮ ಸಮಕ್ಷಮ ಸುಟ್ಟು ಬಿಡಲು ಆದೇಶಿಸುತ್ತಾರೆ ಎಂದುಕೊಂಡಿದ್ದ ನಮಗೆ ಈ ಬೆಳವಣಿಗೆಗಳು ಸಖೇದಾಶ್ಚರ್ಯ ಮೂಡಿಸಿತು.

ಎಲ್ಲವನ್ನೂ ಒಂದು ಜೀಪಿನಲ್ಲಿ ತುಂಬಿಕೊಂಡ ಆತ ಹೊರಟೇ ಹೋದ. ಕಾನೂನು ಪ್ರಕಾರ ಸುಟ್ಟು ಬಿಡಬೇಕಿತ್ತು ಎಂದು ನಮ್ಮ ಅರೆಜ್ಞಾನ ಪ್ರದರ್ಶಿಸಲು ನಾವು ಮುಂದಾದೆವು. ‘ಸುಮ್ಮನೆ ತಳ ಬುಡ ಇಲ್ಲದ ಪ್ರಶ್ನೆ ಕೇಳ ಬೇಡ್ರಿ’ ಅಂದ್ರು ಅರಣ್ಯ ಹಾಗು ವನ್ಯಜೀವಿ ಪಾಲಕರು! ‘ಹಾಗಾದ್ರೆ..ನೀವು ಮಾಡಿದ್ದು ಕಾನೂನು ಪ್ರಕಾರ ಸರೀನಾ?’ ಎಂದು ಮರು ಪ್ರಶ್ನಿಸಿದೆವು. ‘ನಮಗಿಂತ ನಿಮಗೆ ಹೆಚ್ಚು ಗೊತ್ತಿದ್ರೆ ನಮ್ಮನ್ಯಾಕೆ ಪ್ರಶ್ನಿಸುತ್ತೀರಿ? ಸಂಬಂಧಪಟ್ಟವರಿಗೆ ಉತ್ತರ ಏನು ಕೊಡಬೇಕು ನಮಗೆ ಗೊತ್ತಿದೆ. ಸದ್ಯ ಹೇಗೆ ಮಾಡಬೇಕು..ಹೇಗೆ ಮಾಡಬಾರದು ಎಂದು ನೀವೇ ನಮಗೆಲ್ಲ ಪಾಠ ಮಾಡಿಬಿಡಿ!" ಎಂದು ಧ್ವನಿಯ ಏರಿಳಿತಗಳಲ್ಲಿಯೇ ನಮ್ಮನ್ನು ಹಿಯಾಳಿಸಿದರು. ಪ್ರೊ. ಗಂಗಾಧರ ಕಲ್ಲೂರ್ ಇದಕ್ಕೆಲ್ಲ ಸಾಕ್ಷಿಯಾದರು. ಇಂದು ಬೆಳಿಗ್ಗೆ ೧೮ ಕಿ.ಮೀ. ಸೈಕಲ್ ಹೊಡೆದುಕೊಂಡು ಯಾರಿಗೂ ಗೊತ್ತಗದಂತೆ ಅವರು ಕಾಡು-ಮೇಡು ಅಲೆದು ಆ ಸ್ಥಳಕ್ಕೆ ಹೋಗಿದ್ದರು.

ಅಕ್ಕ ಪಕ್ಕ ನೋಡಿದೆವು. ಗ್ರಾಮಸ್ಥರು ಸಹ ಇವರ ಪರವಾಗಿರುವುದು ಮೇಲ್ನೋಟಕ್ಕೆ ಸಾಬೀತಾಯಿತು. ಹೆಸರು ಉಲ್ಲೇಖಿಸುವುದಿಲ್ಲ ಎಂಬ ಖಾತ್ರಿಯ ಮೇಲೆ ಕಳಸನಕ್ಪೊಪ್ಪದ ಯುವಕನೋರ್ವ ಹೇಳಿದ. ಆ ಭಾಗದಲ್ಲಿ ಅರಣ್ಯ ಇಲಾಖೆ ನಿಯೋಜಿಸಿರುವ ಗಾರ್ಡಗಳ ಸಂಖ್ಯೆ ಕೇವಲ ೨. ಅದೂ ಕೂಡ ಕೈಯಲ್ಲಿ ಲಾಠಿ. ನಿತ್ಯವೂ ಮರಗಳ ಹನನ, ನಾಟಾಗಳ ಕಳ್ಳ ಸಾಗಾಣಿಕೆ ಅವರ ಮೂಗಿನ ನೇರಕ್ಕೆ ನಡೆಯುತ್ತಿದೆ. ನಾಡ ಬಂದೂಕು ಹೊಂದಿರುವ ಕಾಡುಗಳ್ಳರಿಗೆ ಇವರು ಯಾವುದೇ ರೀತಿಯಲ್ಲಿ ತ್ರಾಸು ಕೊಡುವಂತಿಲ್ಲ. ಅಪರೋಕ್ಷವಾಗಿ ಸಹಕರಿಸುವುದೊಂದೇ ದಾರಿ.

ಈ ಭಾಗದಲ್ಲಿ ಬೇಡರ ಜನಾಂಗ ಬಹಳಷ್ಟು ಇರುವುದರಿಂದ ಜಿಂಕೆಯ ಮಾಂಸದ ರುಚಿ ತೀವ್ರ. ಹಾಗಾಗಿ ವಾರಕ್ಕೊಮ್ಮೆ ಅಥವಾ ಹಬ್ಬ ಹರಿದಿನಗಳಲ್ಲಿ ಜಿಂಕೆ, ಮೊಲ, ಕಾಡುಕೋಳಿಗಳ ಹನನ ನಿರಂತರವಾಗಿದೆ. ಈ ಕಾಡುಕೋಣವನ್ನು ಸಹ ಯಾರೋ ಬೆನ್ನಟ್ಟಿ ಬಂದಿದ್ದಾರೆ. ಪ್ರಾಣ ಉಳಿಸಿಕೊಳ್ಳುವ ಭಯದಲ್ಲಿ ಕಾಲುಜಾರಿ ಕೊಳ್ಳದಲ್ಲಿ ಬಿದ್ದಿದೆ. ಏಕೆಂದರೆ ತೀರ ಸೂಕ್ಷ್ಮ ಸಂವೇದಿಯಾದ ಕಾಡು ಪ್ರಾಣಿ ಹೀಗೆ ಲೆಕ್ಕಿಸದೇ ಬಂದು ಬೀಳುವುದು ಕಲ್ಪನೆಗೆ ನಿಲುಕದ್ದು. ಲೆಕ್ಕಹಾಕಿ ‘ರಿಸ್ಕ್ ತೆಗೆದುಕೊಳ್ಳುವ ಪ್ರಾಣಿ ಇಷ್ಟು ಸುಲಭದಲ್ಲಿ ಜವರಾಯನ ತೆಕ್ಕೆಗೆ ಜಾರುವುದು ಸಂದೇಹಾಸ್ಪದ. ಕೊಂಬು ಹಾಗು ಚರ್ಮದ ಆಸೆಗೆ ಹೀಗೆ ಮಾಡಿರಬಹುದು ಎಂದ.

ನನ್ನ ಮಿತ್ರನೋರ್ವ ಈಗ ಪೊಲೀಸ್ ಅಧಿಕಾರಿ. ಈ ಘಟನೆಯ ಬಗ್ಗೆ ಆತನಿಗೆ ಹೇಳಿದೆ. ೩೦ ದಿನಗಳ ಹಿಂದೆ ಕಿತ್ತೂರು ಸಮೀಪ ಇಬ್ಬರನ್ನು ಬಂಧಿಸಿ ೪೦ ಲಕ್ಷ ರುಪಾಯಿ ಬೆಲೆಯ ಹುಲಿ, ಚಿರತೆ, ಕಾಡುಕೋಣ, ಹೆಬ್ಬಾವು ಸೇರಿದಂತೆ ಅನೇಕ ಕಾಡು ಪ್ರಾಣಿಗಳ ಚರ್ಮ, ಕೊಂಬು, ಉಗುರು ಹಾಗು ಹಲ್ಲುಗಳನ್ನು ವಶ ಪಡಿಸಿಕೊಂಡಿದ್ದಾಗೆ ಹೇಳಿದ. ಈಗ ಅದೆಲ್ಲ ಸರಕಾರದ ಆಸ್ತಿಯಂತೆ. ಆದರೆ ವಿಷಾದದಿಂದ ಹೇಳಿದ.. ಆರೋಪಿಗಳನ್ನು ಹಿಡಿದಿದ್ದಕ್ಕೆ ೧ ಲಕ್ಷ..ಹಾಗೆಯೇ ನಾಳೆ ಪಾರುಮಾಡಿ ಬಿಡುವುದಕ್ಕೆ ಮತ್ತೊಂದು ಲಕ್ಷ! ಈ ವ್ಯವಹಾರ ಕುದುರದಿದ್ದರೆ ಕೇಸು! ಮಾಧ್ಯಮಗಳಿಗೆ ಸುದ್ದಿ ಬಿತ್ತರಣೆ. ಇಲ್ಲದಿದ್ದರೆ ವ್ಯವಸ್ಥಿತವಾಗಿ ತಿಪ್ಪೆಸಾರಿಸುವುದು!

ಜಗತ್ತಿನ ಏಕೈಕ ವಿಚಾರವಂತ, ಜಾಣ ಪ್ರಾಣಿಯ ನಡವಳಿಕೆ ಅಂದ್ರೆ ಇದು..?!