ಸತ್ತ ಶಿಕ್ಷಣದ ನಡುವೆ ಬದುಕಿನ ಉದ್ದ + ಅಗಲ

ಸತ್ತ ಶಿಕ್ಷಣದ ನಡುವೆ ಬದುಕಿನ ಉದ್ದ + ಅಗಲ

ಕವನ

ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ

ನಮ್ಮವರೆಂಬುವರು ಇರುತ್ತಾರೆ , ಇರುವುದಿಲ್ಲ

ಜೊತೆಗಾರರು ಸಂಭ್ರಮಿಸುತ್ತಾರೆ 

ನಮ್ಮ ನೋವಿಗೆ ಬರುವುದೇ ಇಲ್ಲ ! 

ಮಗನಿಗೋಸ್ಕರ ಊಟ ಬಿಟ್ಟ ತಾಯಿಯೇ

ನಂಬಿಕೆ ಕಳೆದುಕೊಂಡು ಹಾರಾಡಿದ ದಿನಗಳು

ಯಾರನ್ನೋ ನಂಬಿದ ತಪ್ಪಿಗೆ ಪ್ರೀತಿ ಕಳಕೊಂಡ

ದಿನಗಳು ಇಂದಿಗೆ ನೆನಪು ಮಾತ್ರ ! 

 

ಬಾಲಕನಾಗಿದ್ದ ದಿನಗಳೇ ಎಷ್ಟೋ ಸುಖವಿದ್ದವು

ಕಾಲಿಗೆ ಹಾಕಲು ಚಪ್ಪಲಿ ಇಲ್ಲದಿದ್ದರೂ , 

ಹೊಟ್ಟೆಗೆ ಸರಿ ಹಿಟ್ಟಿಲ್ಲದಿದ್ದರೂ , 

ಹಾರಾಡಲು ಕುಣಿದು ಕುಪ್ಪಳಿಸಲು ಗುಡ್ಡ ಬೆಟ್ಟಗಳು

ಹಳ್ಳಕೊಳ್ಳಗಳು ಪ್ರಕೃತಿಯ ಸ್ವಚ್ಚಂದ ಗಿಡ ಮರ ಬಳ್ಳಿ

ತೋಟಗಳು ನನ್ನ ಗೆಳೆಯರಾಗಿದ್ದವು ಜೊತೆಗೆ 

ಪ್ರೀತಿಯ ಮನೆಯ ನಾಲ್ಕು ಕಾಲಿನ ಪ್ರಾಣಿಗಳು.

 

ನಾನು ಈ ಬುವಿಯಲ್ಲಿ ಎಷ್ಟು ಬಾರಿ ಹುಟ್ಟಿ ಸತ್ತಿರುವೆನೋ

ನನಗೇ ತಿಳಿಯದು ? ನನ್ನ ಬದುಕೇ ಒಂದು ಹುಟ್ಟು ಸಾವು ! 

ಹುಟ್ಟುಗಳಲ್ಲಿ ಸಂಭ್ರಮ ಪಡಲೂ ಇಲ್ಲ ; ಸಾವಿನಲ್ಲಿ ದುಃಖಿಸಲೂ ಇಲ್ಲ !

ಅನಾರೋಗ್ಯದ ಬದುಕೂ ಕೆಲವೊಮ್ಮೆ ಆರೋಗ್ಯಕರ ಬದುಕಿಗಿಂತ

ಸುಖವಾಗಿರುತ್ತದೆ ಜೊತೆಗೆ ಒಂಟಿತನದ ಪಾಠವ ಕಲಿಸುತ್ತದೆ ! 

ಸೇರುವಿಕೆ ಮತ್ತು ಕಳಕೊಳ್ಳುವಿಕೆ ಬದುಕಿನ ಎರಡು ಚಕ್ರಗಳು

ಸೋತಾಗ ಕುಗ್ಗದಿರು ,ಗೆದ್ದಾಗ ಹಿಗ್ಗದಿರು ಇದೇ ಬದುಕಿನ ಸೂತ್ರ ! 

 

ಹಣವೇ ಮುಖ್ಯ ಎನ್ನುವ ಸಮಾಜದಲ್ಲಿ ನಾನಿದ್ದೇನೆ 

ಜೀವನವ ಸುಸೂತ್ರವಾಗಿ ಒಯ್ಯಲು ನನಗೆ ನನ್ನ ಒಳ್ಳೆಯತನ

ಮುಖ್ಯವಾಗಲೇ ಇಲ್ಲ , ನಾನೂ ಗಾಂಧೀಜಿಯವರಂತೆ ಎಲ್ಲರೂ ಇದ್ದೂ

ಒಂಟಿಯಾಗಿರಬೇಕೆಂದು ಅಂದಿಗೂ ಇಂದಿಗೂ , ಆಲೋಚಿಸುತ್ತಿದ್ದೇನೆ

ಸಾವ ಸಮಯ ಬಂದರೂ ! ಕಾರಣ  ? ಹಣ ಸಂಪತ್ತು ವೈಭೋಗ

ನೋಡಿ ಮಣೆ ಹಾಕುವ ಈಗಿನ ಕಾಲ ಮನೆಯೊಳಗಿಂದ ಹಿಡಿದು, 

ಕುಟುಂಬ ಬಂಧು ಬಾಂಧವರು ಮುಂದುವರಿದಂತೆ ಬೂಟಾಟಿಕೆಯಲ್ಲೆ 

ಮಿಂದೇಳುತ್ತಿರುವ ಸಮಾಜ ಅಲ್ಲಿಯ ಜನರು ಹೀಗೆ 

ಹೀಗೆಯೇ ಮುಂದುವರಿಯುತ್ತಿದೆ !

ಸತ್ತ ಶಿಕ್ಷಣದ ನಡುವೆ ಎಲ್ಲವೂ ಮಿಥ್ಯವಾಗುತ್ತಿದೆ !!

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್