ಸತ್ಯದ ಹಿಂದೆ ಹೋಗುವ ಕಷ್ಟ...

ಸತ್ಯದ ಹಿಂದೆ ಹೋಗುವ ಕಷ್ಟ...

ತುಂಬಾ ತುಂಬಾ ಕಷ್ಟವಾಗುತ್ತಿದೆ.

ಸತ್ಯದ ಹಿಂದೆ ಹೋಗುವುದೇ,

ವಾಸ್ತವದ ಹಿಂದೆ ಹೋಗುವುದೇ,

ನಂಬಿಕೆಯ ಹಿಂದೆ ಹೋಗುವುದೇ

ವೈಚಾರಿಕತೆಯ ಹಿಂದೆ ಹೋಗುವುದೇ

ಭಾವನೆಗಳ ಹಿಂದೆ ಹೋಗುವುದೇ

ಜನಪ್ರಿಯತೆಯ ಹಿಂದೆ ಹೋಗುವುದೇ.

ಹಠದಿಂದ ಇದರಲ್ಲಿ ಯಾವುದಾದರೂ ಒಂದರ ಹಿಂದೆ ಹೋಗುವುದೇ.

ಕಾಲಕ್ಕೆ ತಕ್ಕಂತೆ ಕುಣಿಯುವುದೇ,

ಸ್ವತಂತ್ರ ಯೋಚನಾ ಶಕ್ತಿಯನ್ನು ಅಡವಿಡುವುದೇ,

ಮನುಷ್ಯ ಜೀವಿಯ ಪ್ರಾರಂಭದಲ್ಲಿ ಆತನಿಗೆ ಸಾವು ನೋವಿನ ಭಯವಿರಲಿಲ್ಲ. ಸುಳ್ಳು ಸತ್ಯದ ಅರಿವಿರಲಿಲ್ಲ. 

ಹಸಿವು ಬಾಯಾರಿಕೆ ನಿದ್ದೆಗಳ ಪ್ರಜ್ಞೆ ಮಾತ್ರವಿತ್ತು.... 

ನಂತರದಲ್ಲಿ ಭಯ ಕೌತುಕದಿಂದ ಧಾರ್ಮಿಕ ಪ್ರಜ್ಞೆ ಬೆಳೆಯುತ್ತದೆ.

ಧಾರ್ಮಿಕ ಪ್ರಜ್ಞೆ ಶ್ರೇಷ್ಠತೆಯ ಪ್ರಜ್ಞೆಗೆ ಕಾರಣವಾಗುತ್ತದೆ.

ಶ್ರೇಷ್ಠತೆಯ ಪ್ರಜ್ಞೆ ಸ್ವಾರ್ಥ ಪ್ರಜ್ಞೆಯಾಗಿ ಮಾರ್ಪಡುತ್ತದೆ.

ಸ್ವಾರ್ಥದ ಪ್ರಜ್ಞೆ ಆಕ್ರಮಣ ಪ್ರಜ್ಞೆಯಾಗಿ ಬದಲಾಗುತ್ತದೆ.

ಆಕ್ರಮಣ ಪ್ರಜ್ಞೆ ಅಧಿಕಾರ ಪ್ರಜ್ಞೆಯಾಗಿ ಜಾಗೃತವಾಗುತ್ತದೆ.

ಅಧಿಕಾರದ ಪ್ರಜ್ಞೆ ಶೋಷಿಸುವ ಪ್ರಜ್ಞೆಯಾಗಿ ಚಲಾವಣೆಯಾಗುತ್ತದೆ.‌

ಶೋಷಿತರ ಪ್ರಜ್ಞೆ ಗುಲಾಮಿ ಪ್ರಜ್ಞೆಯಾಗಿ ಪರಿವರ್ತನೆಯಾಗುತ್ತದೆ.

ಗುಲಾಮಿ ಪ್ರಜ್ಞೆ ಭಜನಾ ಅಥವಾ ಆರಾಧನಾ ಪ್ರಜ್ಞೆಯಾಗಿ ಸ್ಥಾಪಿತವಾಗುತ್ತದೆ.

ಆರಾಧನಾ ಪ್ರಜ್ಞೆ ಮೌಢ್ಯದ ಪ್ರಜ್ಞೆಯಾಗಿ ಉಳಿದು ಬಿಡುತ್ತದೆ..

ನರ್ಸರಿ, ಪ್ರೈಮರಿ, ಸೆಕೆಂಡರಿ, ಪ್ರೌಢಶಾಲೆ, ಪದವಿ, ಸ್ನಾತಕೋತ್ತರ, ಡಾಕ್ಟರೇಟ್ ಇನ್ನೂ ಇನ್ನೂ ಕಲಿಕೆ ಬೆಳೆದಂತೆಲ್ಲ ಸಹಜ ಪ್ರಜ್ಞೆ ನಾಶವಾಗುತ್ತಾ ಕೃತಕ ಪ್ರಜ್ಞೆ ಸೃಷ್ಟಿಯಾಗುತ್ತದೆ.

 ಆಗ..

ಡಾಕ್ಟರು, ಆಕ್ಟರು, ಮಾಸ್ಟರು, ಇಂಜಿನಿಯರು, ಆರಕ್ಷಕರು, ಹೋರಾಟಗಾರರು, ಆಡಳಿತಗಾರರು, ರಾಜಕಾರಣಿಗಳು, ಪತ್ರಕರ್ತರು, ವ್ಯಾಪಾರಿಗಳು ಎಲ್ಲರೂ ಉದ್ದವಾವಾಗುತ್ತಾರೆ. 

ಅಂತಹ ಸಮಯದಲ್ಲಿ ಇರುವಾಗ...

ಕೊರೋನಾ ವೈರಸ್ ಪ್ರತ್ಯಕ್ಷವಾಗುತ್ತದೆ.

ಸಾವಿನ ಪ್ರಜ್ಞೆ ಕಾಡಲಾರಂಭಿಸುತ್ತದೆ.

ಈಗ.....

ಎಲ್ಲರೂ ಬೆತ್ತಲಾಗುತ್ತಾರೆ.

ಎಲ್ಲಾ ಪ್ರಜ್ಞೆಗಳು ಮಾಯವಾಗುತ್ತದೆ.....

ರೋಬೋಟ್ ಗಳೆಂಬ ಕೃತಕ ಪ್ರಜ್ಞೆ ಜಗತ್ತನ್ನು ಆಳತೊಡಗುತ್ತದೆ.....

( ಪ್ರಕಟವಾಗದ ‘ಹುಚ್ಚನೊಬ್ಬನ ಕನಸಿನಾ ಬಡಬಡಿಕೆಗಳು’ ಎಂಬ ಕವನ ಸಂಕಲನದಿಂದ ಆಯ್ದ ಪುಟಗಳು .......)

  •  ಜ್ಞಾನ ಭಿಕ್ಷಾ ಪಾದಯಾತ್ರೆಯ 137 ನೆಯ ದಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ...  

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ:  ಇಂಟರ್ನೆಟ್ ತಾಣ