ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ...

ನಿಮ್ಮ ಭಾವನೆಗಳಲ್ಲಿ ಭಕ್ತಿ ಆಧ್ಯಾತ್ಮ ದೈವಿಕ ಪ್ರಜ್ಞೆ ತುಂಬಿದ್ದರೂ
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,
ನಿಮ್ಮ ಮನದಾಳದಲ್ಲಿ ಅದ್ಬುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರೂ
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,
ನಿಮ್ಮ ಬರಹಗಳಲ್ಲಿ ಅತ್ಯುತ್ತಮ ಪದ ಲಾಲಿತ್ಯ, ಭಾಷೆಯ ಸೊಗಡು, ಸಾಹಿತ್ಯ ನಲಿದಾಡುತ್ತಿದ್ದರೂ
ಸತ್ಯದ ಹುಡುಕಾಟ ನಿರಂತರವಾಗಿರಲಿ,
ನಿಮ್ಮ ಪ್ರತಿಭೆ ಯಾವ ಪ್ರಕಾರದ ಕಲೆಯಲ್ಲಾದರೂ ಅರಳುತ್ತಿರಲಿ
ಸತ್ಯದ ಹುಡುಕಾಟ ನಿರಂತರವಾಗಿರಲಿ,
ನಿಮ್ಮ ಜ್ಙಾನದ ಮಟ್ಟ ತುಂಬಿ ಹರಿಯುತ್ತಿದ್ದರೂ
ಸತ್ಯದ ಹುಡುಕಾಟ ನಿರಂತರವಾಗಿರಲಿ...
ಏಕೆಂದರೆ,
ಸತ್ಯ ಮಾತ್ರವೇ ಸೃಷ್ಟಿಯ , ಸಮಾಜದ ತಳಹದಿ,
ಸತ್ಯವೆಂಬುದೇ ಇದೆಲ್ಲದರ ಪ್ರತ್ಯಕ್ಷ ಪರೋಕ್ಷ ಶಕ್ತಿ,
ಸತ್ಯದ ಅಗ್ನಿ ಪರೀಕ್ಷೆಯಲ್ಲಿ ಇವು ಗೆದ್ದು ಬಂದಾಗ ಮಾತ್ರವೇ ಈ ಎಲ್ಲಾ ಸಾಧನೆಗಳಿಗೆ ಅರ್ಥ ಸಿಗುವುದು.
ನಿಮ್ಮ ಆತ್ಮಾವಲೋಕನದ ಮೂಲವೂ ಸತ್ಯವೇ ಆಗಿರಲಿ,
ಸತ್ಯದ ಹುಡುಕಾಟದ ವಿಫಲತೆಯೇ ಇಂದಿನ ಸಮಾಜದ ಬಹುತೇಕ
ಸಮಸ್ಯೆಗಳ ಮೂಲ.
ಅದು ರಾಜಕೀಯವಾಗಿರಲಿ, ಆಡಳಿತವಾಗಿರಲಿ, ಧಾರ್ಮಿಕವಾಗಿರಲಿ.
ಸುಳ್ಳಿನ ಬುದ್ಧಿವಂತಿಕೆಯ ಪ್ರದರ್ಶನ ಹೆಚ್ಚಾಗಿ ಆಚರಣೆಗೆ ಬಂದು
ಮನುಷ್ಯನ ಅಸ್ತಿತ್ವವೇ ಅನುಮಾನಕ್ಕೆ ಒಳಗಾಗಿದೆ.
ಆತನ ವ್ಯಕ್ತಿತ್ವದ
ವಿಶ್ವಾಸಾರ್ಹತೆಯೇ ಪ್ರಶ್ನಾರ್ಥಕವಾಗಿದೆ.
ಇಡೀ ಸಮಾಜ ವಾಸ್ತವಿಕ ಸತ್ಯ ಒಪ್ಪಿಕೊಂಡು ಮುಂದುವರೆದಲ್ಲಿ ,
ಖಂಡಿತವಾಗಿಯೂ ಈಗ ನಮ್ಮನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳು
ತನ್ನಿಂದ ತಾನೇ ಮಾಯವಾಗುತ್ತವೆ.
ಎಲ್ಲರೂ ಸತ್ಯ ಹರಿಶ್ಚಂದ್ರರಂತೆ ಆಗದಿದ್ದರೂ
ಕನಿಷ್ಠ ಅನವಶ್ಯಕ ಮತ್ತು ಅಪಾಯಕಾರಿ ಸುಳ್ಳುಗಳಿಂದ ದೂರವಿದ್ದರೂ ಸಾಕು,
ಅದೇ ನಮ್ಮ ವ್ಯಕ್ತಿತ್ವ ಉತ್ತಮಗೊಳ್ಳಲು ಮತ್ತು ಸಾಕಷ್ಟು ನೆಮ್ಮದಿಯ,
ಬದುಕಿಗೆ ಸಹಕಾರಿಯಾಗುತ್ತದೆ.
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ. ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಸಾರ್ವಕಾಲಿಕ ಸತ್ಯ, ತಾತ್ಕಾಲಿಕ ಸತ್ಯ, ಘಟನೆಯ ಸತ್ಯ,
ಸಾಂದರ್ಭಿಕ ಸತ್ಯ, ಅರಿವಿನ ಸತ್ಯ, ಊಹಾತ್ಮಕ ಸತ್ಯ, ವ್ಯಾವಹಾರಿಕ ಸತ್ಯ, ಭಕ್ತಿ ಭಾವಗಳ ಸತ್ಯ, ವೈಚಾರಿಕ ಸತ್ಯ,
ಈ ಕ್ಷಣದ ಸತ್ಯ, ವಾಸ್ತವಿಕ ಸತ್ಯ.. ಹೀಗೆ ಸತ್ಯವೂ ಒಂದಷ್ಟು ರೂಪದಲ್ಲಿ ಸಿಗುತ್ತದೆ. ಸಮಗ್ರ ಚಿಂತನೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು....
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ