ಸತ್ಯನಿಷ್ಠೆ ಪ್ರಾಮಾಣಿಕತೆಯ ಅನರ್ಘ್ಯ ರತ್ನ ಶಾಸ್ತ್ರೀಜಿ

ಸತ್ಯನಿಷ್ಠೆ ಪ್ರಾಮಾಣಿಕತೆಯ ಅನರ್ಘ್ಯ ರತ್ನ ಶಾಸ್ತ್ರೀಜಿ

ಸ್ವತಂತ್ರ ಭಾರತದ ಎರಡನೇ ಪ್ರಧಾನಿ, ದೇಶ ಕಂಡ ಸರಳತೆಯ ಸಹಕಾರಿ, ಹಿರಿಯ ರಾಜಕಾರಿಣಿ, ದೂರದೃಷ್ಟಿ ವ್ಯಕ್ತಿತ್ವ, ಸ್ವಾಭಿಮಾನಿ, ಸರಳತೆಗೆ ಹೆಸರಾದಲಾಲ್ ಬಹದೂರ್ ಶಾಸ್ತ್ರಿಯವರ ಬಗ್ಗೆ ಹೇಳಲು ಪದಗಳೇ ಸಿಗಲಾರದು ಅನ್ನಿಸುವುದುಂಟು.ರೈತರ,ಬಡವರ ಕಷ್ಟಗಳಿಗೆ ಸ್ಪಂದಿಸಿದ ಹೃದಯವಂತಿಕೆಯವರು. ‘ಕಠಿಣ ಪರಿಶ್ರಮ ಎನ್ನುವುದು ಪ್ರಾರ್ಥನೆಗೆ ಸಮ’ ಎಂದವರು. ಅಷ್ಟೂ ಏಕಾಗ್ರತೆ, ನಿಷ್ಠೆ, ಕೆಲಸದ ಮೇಲೆ ಪ್ರೀತಿಯಿರಬೇಕು. ಸುಖಾಸುಮ್ಮನೆ ಯಾವುದೂ ದೊರೆಯದೆಂದರು, ಹಾಗೆ ಪಡೆದರೂ ಅದಕ್ಕೆ ಬೆಲೆಯಿಲ್ಲ.

ಅತ್ಯಂತ ಬಡತನದ ಕುಟುಂಬದಲ್ಲಿ ಜನಿಸಿದ ಶ್ರೀಯುತರು, ಕಲಿಕೆಗಾಗಿ ಬಹಳ ಕಷ್ಟ ಪಟ್ಟವರು. ಅಂಬಿಗನಿಗೆ ಕೊಡಲು ಕಾಸಿಲ್ಲದ ಸಂದರ್ಭ ನದಿಯನ್ನು ಈಜಿ ದಾಟುತ್ತಿದ್ದರಂತೆ. ಚಪ್ಪಲಿ ಕೊಳ್ಳಲು ಹಣವಿಲ್ಲದೆ ಕಾಲ್ನಡಿಗೆ ಬರಿಯ ಕಾಲಲಿ. ಬಡವರಿಗಾಗಿ ಮರುಗಿ ವಾರದ ಒಂದು ದಿನ ಒಂದು ಹೊತ್ತಿನ ಊಟ ಬಿಟ್ಟು, ಇತರರನ್ನೂ ಊಟ ಬಿಡುವಂತೆ ಹೇಳಿದ್ದರಂತೆ. ‘ಮೃದು ಬಾಹ್ಯನೋಟದೊಳಗೆ ಕಲ್ಲಿನೋಪಾದಿಯ ಕಠಿಣ ದೃಢ ಮನಸ್ಸು’ ಶಾಸ್ತ್ರೀಜಿಯವರದಾಗಿತ್ತೆಂದು ಅವರ ಜೊತೆಗಾರರು ಹೇಳುತ್ತಿದ್ದರಂತೆ.

೧೩ವರ್ಷದ ಬಾಲಕ, ಕಾಶಿ ವಿದ್ಯಾಪೀಠದಲ್ಲಿ ಓದುತ್ತಿದ್ದಾಗ ಅಲ್ಲಿ ದೊರೆತ ಬಿರುದೇ ಶಾಸ್ತ್ರಿ. ಬಾಪೂರವರು ಅವರ ಮೇಲೆ ತುಂಬಾ ಪರಿಣಾಮ ಬೀರಿದವರಾಗಿ, ೧೩ನೆಯ ವಯಸ್ಸಿಗೆ ಅಸಹಕಾರ ಚಳುವಳಿಯಲ್ಲಿ ಸೇರಿಕೊಂಡವರು, ಹಿಂದಿರುಗಿ ನೋಡದೆ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡು ಅಹರ್ನಿಶಿ ದುಡಿದ ಮಹಾನುಭಾವರು. ಅಧಿಕಾರದಾಸೆಯಿಲ್ಲದವರೆಂದು ಅವರ ಸಚಿವ ಸ್ಥಾನದ ರಾಜಿನಾಮೆಯಿಂದ ತಿಳಿಯಬಹುದು. ಸುಮಾರು ೭ವರ್ಷ ಸೆರೆಮನೆವಾಸ ಅನುಭವಿಸಿದವರು.

ವರದಕ್ಷಿಣೆ ವಿರೋಧಿಯಾದ ಶ್ರೀಯುತರು ತಮ್ಮ ವಿವಾಹ ಸಂದರ್ಭದಲ್ಲಿ ಮಾವನ ಮಾತಿಗೆ ಕಟ್ಟುಬಿದ್ದು ಗಾಂಧಿ ಟೋಪಿ, ಚರಕ, ಖಾದಿ ಬಟ್ಟೆಗಳನ್ನು ಮಾತ್ರ ಸ್ವೀಕರಿಸಿ ನುಡಿದಂತೆ ನಡೆದರು.ಲಲಿತಾದೇವಿ ಇವರ ಪತ್ನಿ. ಶಾಸ್ತ್ರಿಯವರು ಕಾಂಗ್ರೆಸ್ ಪಕ್ಷದಲ್ಲಿದ್ದವರು. ತಾನೋರ್ವ ಪ್ರಧಾನಿಯಾಗಿದ್ದರೂ ಕಾರು ಖರೀದಿಸಲು ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರಂತೆ. ಇದು ಸ್ವಾಭಿಮಾನಕ್ಕೊಂದು ಉದಾಹರಣೆ. ಗಾಂಧೀಜಿಯವರ ಅನುಯಾಯಿಯಾಗಿ ದುಡಿದವರು. ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ಜೊತೆಗೇ ಇದ್ದವರು.ಮಗಳಿಗೆ ಅಸೌಖ್ಯವಾದಾಗ ಔಷಧಿ ತರಲೂ ಹಣವಿರಲಿಲ್ಲವಂತೆ. ಶ್ರೀಯುತರ ಜೀವನದ ಹಾದಿ ಎಲ್ಲರಿಗೂ ಸ್ಫೂರ್ತಿದಾಯಕ. ಸ್ವಾತಂತ್ರ್ಯ ಹೋರಾಟದಲ್ಲಿ ದುಡಿದ ಅಪ್ರತಿಮ ನಾಯಕ. ಪಾಕಿಸ್ತಾನ ಯುದ್ಧ ನಿಭಾಯಿಸಿ ಜಯಶಾಲಿಯಾದ ರಾಜಕೀಯ ಮುತ್ಸದ್ದಿ. ಪುಸ್ತಕಪ್ರಿಯರಾಗಿದ್ದರು ಎಂಬುದಕ್ಕೆ ಒಂದು ಉದಾಹರಣೆ ಮೇಡಂ ಕ್ಯೂರಿಯವರ ಆತ್ಮಕಥೆಯನ್ನು ಹಿಂದಿಗೆ ಅನುವಾದಿಸಿದರು. ಓದುವುದು ಅವರ ನೆಚ್ಚಿನ ಹವ್ಯಾಸವಾಗಿತ್ತಂತೆ. ‘ಜೈ ಜವಾನ್ ಜೈ ಕಿಸಾನ್’ ಘೋಷಣೆ. ಅನ್ನದಾತರಿಗಾಗಿ ಮರುಗಿದವರು. ಹಸಿರು ಕ್ರಾಂತಿಯ ಹರಿಕಾರ. ಅವರ ಒಂದೊಂದು ನುಡಿಮುತ್ತುಗಳೂ ಆಭರಣದಷ್ಟು ಅಮೂಲ್ಯವಾದವುಗಳು.

‘ನಾನು ನನಗಾಗಿ ಬೇಡ, ದೇಶಕ್ಕಾಗಿ ಮಿಡಿಯುವ ಮನವಿರಲಿ. ಮಾತುಗಳು ಕೃತಿಗಿಳಿಯಲಿ, ಉತ್ತಮ ಫಲಿತಾಂಶ ಬರಲಿ. ಕಾನೂನುಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಸುಳ್ಳನ್ನು, ಹಿಂಸೆಯನ್ನು ತ್ಯಜಿಸಬೇಕು. ಸ್ವಾತಂತ್ರ್ಯದ ಜವಾಬ್ದಾರಿ ಬರಿಯ ರಕ್ಷಣೆಯವರದಲ್ಲ, ದೇಶದ ಪ್ರಜೆಗಳದ್ದು. ಇಂದಿನವರಿಗೆ ಇದೆಲ್ಲ ಅಗತ್ಯವಿದ್ದ ಹೇಳಿಕೆಗಳು. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದು, ವ್ಯವಹರಿಸಿದವರು. ದೇಶಕ್ಕಾಗಿ ಹೋರಾಡಿದ ಮಹನೀಯರು ಮರಣಿಸಿದಾಗ ಬ್ಯಾಂಕ್ ಖಾತೆಯಲ್ಲಿ ಹಣವೇ ಇರಲಿಲ್ಲವಂತೆ. ತನಗೂ, ತನ್ನವರಿಗೂ ಏನೊಂದು ಆಸ್ತಿ ಮಾಡದ ಸತ್ಯವಂತ ರಾಜಕಾರಿಣಿ. ರಾಷ್ಟ್ರಕಂಡ ಮಹಾನ್ ಚೇತನಕ್ಕೆ ನಮೋ ನಮಃ

ಸಂಗ್ರಹ: ರತ್ನಾ ಕೆ.ಭಟ್,ತಲಂಜೇರಿ

(ವಿವಿಧ ಪುಸ್ತಕಗಳಿಂದ ಓದಿದ ವಿಷಯಗಳು)