ಸತ್ಯ ಮತ್ತು ವಾಸ್ತವ
ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ,
ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ,
ಇಡೀ ದೇಹದಲ್ಲಿರುವ ನೀರು ಹಿಂಗುವಂತೆ ಕಣ್ಣೀರಾಗಿದ್ದೇನೆ,
ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ,
ಹಲವಾರು ಸಲ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಶೋಷಣೆಗೊಳಗಾಗಿದ್ದೇನೆ,
ಈ ಬದುಕು ಸಾಕೆನಿಸುವಷ್ಡು ನೊಂದಿದ್ದೇನೆ,
ಜೀವನದಲ್ಲಿ ಮತ್ತೆಂದೂ ಮೇಲೇರಲು ಸಾಧ್ಯವಾಗದಷ್ಟು ಸೋತಿದ್ದೇನೆ,
ಸಮಾಜದ ಯಾರೂ ಗಮನಿಸದಷ್ಟು ಅಲಕ್ಷಿತನಾಗಿದ್ದೇನೆ,
ಇಲ್ಲಿಯವರೆಗೂ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡಿದ್ದೇನೆ,
ಅನಾಥಪ್ರಜ್ಙೆ ಹಗಲಿರುಳು ಕಾಡುತ್ತಾ ಬಸವಳಿದಿದ್ದೇನೆ,
ಆದರೂ,..............
ಬದುಕನ್ನು ಎದುರಿಸುತ್ತಿದ್ದೇನೆ,
ಈ ಕ್ಷಣಕ್ಕೂ ನಗು ನಗುತಲಿದ್ದೇನೆ,
ಮತ್ತೆ ಮತ್ತೆ ಮನದಲ್ಲಿ ಸುಂದರ ಭವಿಷ್ಯದ ಕನಸು ಕಾಣುತ್ತಿದ್ದೇನೆ,
ನಾನೀಗ ಎಲ್ಲದರಿಂದ ಮುಕ್ತ, ಸಂತೃಪ್ತ, ನಿರ್ಲಿಪ್ತ,
ಬದುಕೇನು ಭಾರವಲ್ಲ, ಅನುಭವಿಸಿ.
ಜೀವನ ಒಂದು ಅದ್ಬುತ ಮೈದಾನ ಹೊಂದಿದ ಪಾಠಶಾಲೆ - ನೆನಪಿರಲಿ,
ಓದಿ, ಬರೆಯಿರಿ, ಪ್ರವಾಸ ಮಾಡಿ,
ಸಾಧ್ಯವಾಗದಿದ್ದರೆ ಆಟವಾಡಿ.
ಮತ್ತೆಲ್ಲವೂ ನಿಮ್ಮದಾಗುತ್ತದೆ.
ಇದು ಬಹುತೇಕ ಸತ್ಯ ಮತ್ತು ವಾಸ್ತವ.
ಇದರಲ್ಲಿ ನಿಮ್ಮೊಂದಿಗೆ ನಾನು....
- ಜ್ಞಾನ ಭಿಕ್ಷಾ ಪಾದಯಾತ್ರೆಯ 143 ನೆಯ ದಿನ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಲೇಖನ.
ಮುಂದಿನ ಜಿಲ್ಲೆ ಬಳ್ಳಾರಿ - ವಿಜಯಪುರ. ಮಾರ್ಗಸೂಚಿ ಈ ಕೆಳಗಿನಂತಿದೆ.
ಕಂಪ್ಲಿ, ಸಿರಗುಪ್ಪ, ತೆಕ್ಕಲಕೋಟೆ, ಕುರಗೋಡ, ಬಳ್ಳಾರಿ, ಕುಡತಿನಿ, ತೋರಣಗಲ್ಲು, ಸಂಡೂರು, ಹೊಸಪೇಟೆ, ಕೂಡ್ಲಿಗಿ, ಕೊಟ್ಟರು, ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ : ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ ಸಮಾನ ಮನಸ್ಕರು.