ಸತ್ಯ ಮತ್ತು ಸುಳ್ಳು

ಸತ್ಯ ಮತ್ತು ಸುಳ್ಳು

ಬೇಸಿಗೆ ರಜೆಯನ್ನು ಕಳೆಯಲು ವರುಣ್ ಅಜ್ಜಿ ಮನೆಗೆ ಹೋಗಿದ್ದ. ಮಡಿಕೇರಿಯ ಭಾಗಮಂಡಲ ಎಂಬ ಊರು ಅವನ ಅಜ್ಜಿಯ ಊರು. ಅವನೀಗ ಏಳನೇ ತರಗತಿಯಲ್ಲಿ ಕಲಿಯುವ ಹುಡುಗ. ಸಣ್ಣವನಿದ್ದಾಗ ಪ್ರತೀ ರಜೆಯಲ್ಲಿ ಅಜ್ಜಿ ಮನೆಗೆ ಬರುತ್ತಿದ್ದ ವರುಣ್, ಬರ ಬರುತ್ತಾ ಅಪರೂಪದವನಾಗಿ ಹೋಗಿದ್ದ. ಅಜ್ಜ ಬಹಳ ಹಿಂದೆಯೇ ನಿಧನ ಹೊಂದಿರುವುದರಿಂದ ಆ ಪುಟ್ಟ ಊರಿನ ಹಳೆಯ ಮನೆಯಲ್ಲಿ ಅಜ್ಜಿ ಒಬ್ಬಳೇ ಇರುತ್ತಿದ್ದಳು. ಹಗಲಲ್ಲಾದರೆ ತೋಟದ ಕೆಲಸ ಮಾಡಲು ನಾಲ್ಕೈದು ಮಂದಿ ಕೆಲಸದಾಳುಗಳು ಬರುತ್ತಿದ್ದರು. ಕಾಫಿ, ಕಾಳುಮೆಣಸು ಕೊಯ್ಲಿನ ಸಮಯದಲ್ಲಿ ಸ್ವಲ್ಪ ಹೆಚ್ಚಿನ ಕೆಲಸದಾಳುಗಳು ಬರುತ್ತಿದ್ದರು. 

ಪೇಟೆಯಿಂದ ಅಜ್ಜಿ ಮನೆಗೆ ಬರುವುದು ವರುಣ್ ಗೆ ದೊಡ್ಡ ಸಂಭ್ರಮದ ಸಂಗತಿಯೇನಲ್ಲ. ಆದರೆ ತೋಟದಲ್ಲಿರುವ ಹಣ್ಣುಗಳನ್ನು ಮರಕ್ಕೆ ಹತ್ತಿ ತಿನ್ನುವುದು ಮಾತ್ರ ಅವನಿಗೆ ಬಹಳ ಇಷ್ಟವಾಗುತ್ತಿತ್ತು. ಒಂದು ದಿನ ಅಜ್ಜಿ ಹಳೆಯ ಪುಸ್ತಕದ ಪೆಟ್ಟಿಗೆಯಲ್ಲಿ ಏನೋ ಹುಡುಕಾಡುತ್ತಿದ್ದರು. ಅವರ ಮನೆಯಲ್ಲಿ ಪುಸ್ತಕದ ಭಾರೀ ಭಂಡಾರವೇ ಇತ್ತು. ಮೊಬೈಲ್, ಟಿವಿಯ ಮೋಹಕ್ಕೆ ಸಿಲುಕಿದ್ದ ವರುಣ್ ಗೆ ಪುಸ್ತಕಗಳೆಂದರೆ ಅಷ್ಟಕಷ್ಟೇ. ಅದರಲ್ಲೂ ಇಂಗ್ಲೀಷ್ ಮೀಡಿಯಂನಲ್ಲಿ ಕಲಿಯುವವನಾದುದರಿಂದ ಕನ್ನಡ ಪುಸ್ತಕಗಳೆಂದರೆ ಅವನಿಗೆ ಇಷ್ಟವಿರಲಿಲ್ಲ. ಅಜ್ಜಿ ಪುರಾಣ ಕಥೆಗಳ ಬಗ್ಗೆ ಇದ್ದ ಯಾವುದೋ ಹಳೆಯ ಪುಸ್ತಕ ಹುಡುಕಾಡುತ್ತಿದ್ದಳು.

ಆ ಪೆಟ್ಟಿಗೆಯಲ್ಲಿ ಸುಮಾರು ೫೦ ವರ್ಷಗಳಷ್ಟು ಹಿಂದಿನ ಕಸ್ತೂರಿ, ಪ್ರಜಾಮತ, ಸುಧಾ, ಬಾಲಮಿತ್ರ, ಚಂದಮಾಮ ಮುಂತಾದ ಹಲವಾರು ಪುಸ್ತಕಗಳು ಇದ್ದವು. ಅಜ್ಜಿ ಹಳೆಯ ಕಸ್ತೂರಿಯೊಂದನ್ನು ಹೊರ ತೆಗೆದು ‘ಇಗೋ ವರುಣ್, ನೀನು ಮೊನ್ನೆ ನನ್ನ ಹತ್ತಿರ ಸತ್ಯ ಹಾಗೂ ಸುಳ್ಳಿನ ಬಗ್ಗೆ ಕೇಳುತ್ತಿದ್ದಿಯಲ್ಲ. ಈ ಪುಸ್ತಕದಲ್ಲಿ ಆ ಬಗ್ಗೆ ಒಂದು ಪುಟ್ಟ ಕಥೆಯಿದೆ. ಅದನ್ನು ನಿನಗೆ ನಾನು ಓದಿ ಹೇಳುತ್ತೇನೆ. ಆಗ ನಿನಗೆ ಸತ್ಯದ ಬೆಲೆ ಗೊತ್ತಾಗುತ್ತದೆ.’

ಕಥೆ ಕೇಳಲು ವರುಣ್ ಅಜ್ಜಿ ಬಳಿ ಕುಳಿತುಕೊಂಡ. 'ವರುಣ್, ನೋಡು ಇದು ೧೯೯೧ರ ಕಸ್ತೂರಿ ಎಂಬ ಪತ್ರಿಕೆ. ನೀನು ಆಗ ಹುಟ್ಟಿಯೇ ಇರಲಿಲ್ಲ. ಆಗ ಮುರಲೀಧರ ಕುಲಕರ್ಣಿ ಎಂಬವರು ಬರೆದ ‘ಸತ್ಯ ಮತ್ತು ಸುಳ್ಳು' ಎಂಬ ಪುಟ್ಟ ಕಥೆಯನ್ನು ನಿನಗೆ ಹೇಳುತ್ತೇನೆ ಕೇಳು’ ಎಂದರು ಅಜ್ಜಿ.

***

ಒಮ್ಮೆ ಸತ್ಯ ಮತ್ತು ಸುಳ್ಳುಗಳ ನಡುವೆ ತಾನು ಹೆಚ್ಚು, ತಾನು ಹೆಚ್ಚು ಎಂಬ ವಿವಾದ ಉಂಟಾಯಿತು. ತಮ್ಮಿಬ್ಬರಲ್ಲಿ ಯಾರು ಜನರಿಗೆ ಹೆಚ್ಚು ಉಪಯುಕ್ತ ಎಂದು ಅವು ತಿಳಿಯಬಯಸಿದವು. ಅದನ್ನು ಪರೀಕ್ಷಿಸಲು ಎರಡೂ ಒಂದು ಜನನಿಬಿಡವಾದ ಪ್ರದೇಶಕ್ಕೆ ಹೊರಟವು. ಸುಳ್ಳು ಅಲ್ಲಿ ಇಲ್ಲಿ ಇಣುಕುತ್ತಾ ಅಂಕುಡೊಂಕಾದ ಕಾಲುದಾರಿಯಲ್ಲಿ ಮುಂದೆ ಸಾಗಿದರೆ, ಸತ್ಯ ನೇರವಾದ ಹೆದ್ದಾರಿಯ ಮೇಲೆ ರಾಜಾರೋಷವಾಗಿ ಸಾಗಿತ್ತು. ಅನೇಕ ಊರುಗಳನ್ನು ದಾಟಿ ಅವು ಜನಭರಿತವಾದ ಒಂದು ನಗರಕ್ಕೆ ಬಂದು ತಲುಪಿದವು. ಅವು ಅರಸ, ಮಂತ್ರಿ, ಮಾಂಡಲೀಕ, ಕವಿ, ನ್ಯಾಯಾಧೀಶ, ವ್ಯಾಪಾರಿ, ಜ್ಯೋತಿಷಿ ಹೀಗೆ ಎಲ್ಲರ ಬಳಿಯೂ ಹೋದವು. ಎಲ್ಲೆಲ್ಲಿ ಸುಳ್ಳು ಹೋಗುತ್ತಿತ್ತೋ ಅಲ್ಲಿಯ ಜನ ನಿರಾತಂಕವಾಗಿ ಜೀವಿಸುತ್ತಿದ್ದರು. ನಗುನಗುತ್ತಲೇ ಒಬ್ಬರಿಗೊಬ್ಬರು ಮೋಸ ಮಾಡುತ್ತಿದ್ದರು. ಎಂತಹ ಅನೈತಿಕ ಕೆಲಸ ಮಾಡಲೂ ಅವರು ಸಂಕೋಚಪಟ್ಟುಕೊಳ್ಳುತ್ತಿರಲಿಲ್ಲ. ಆದರೆ ಸತ್ಯ ಅವರ ಬಳಿ ಸಾಗಿದಾಗ ಅವರಲ್ಲಿ ಆತ್ಮ ಶೋಧನೆ ಆರಂಭವಾಗುತ್ತಿತ್ತು. ಇನ್ನೊಬ್ಬರಿಗೆ ಮೋಸ ಮಾಡಲು ಅವರ ಮನಸ್ಸು ಒಪ್ಪುತ್ತಿರಲಿಲ್ಲ. ತಪ್ಪು ಮಾಡಿದಾಗ ಒಬ್ಬರ ಕಣ್ಣಲ್ಲಿ ಇನ್ನೊಬ್ಬರು ಕಣ್ಣು ಹಾಕಿ ನೋಡಲು ಸಹ ಹೆದರುತ್ತಿದ್ದರು. ಯಾವಾಗ ಅವರಿಗೆ ಸತ್ಯದ ದರ್ಶನವಾಯಿತೋ ಆಗ ಅವರು ಅನ್ಯಾಯದ ವಿರುದ್ಧ ಸಿಡಿದೇಳತೊಡಗಿದರು. ಪೀಡಿತರು ಅತ್ಯಾಚಾರಿಗಳ ವಿರುದ್ಧ, ಗೇಣಿದಾರರು ಜಮೀನುದಾರರ ವಿರುದ್ಧ, ಗ್ರಾಹಕರು ವ್ಯಾಪಾರಿಗಳ ವಿರುದ್ಧ ಮಾಂಡಲೀಕರು ಸಾಮ್ರಾಟನ ವಿರುದ್ಧ ಕತ್ತಿಯನ್ನು ಮಸಿಯತೊಡಗಿದರು. ಎಲ್ಲೆಡೆ ರಕ್ತಪಾತವಾಗತೊಡಗಿತು. ಆಗ ಜನರು ಸತ್ಯದ ಸಹವಾಸದಿಂದ ಬೇಸತ್ತರು. ಅವರು ಸುಳ್ಳಿಗೆ ಹೇಳಿದರು ‘ದಯವಿಟ್ಟು ನೀನು ನಮ್ಮನ್ನು ಬಿಟ್ಟು ಹೋಗಬೇಡ. ನೀನಿಲ್ಲದೇ ನಾವು ಜೀವಿಸಲಾರೆವು.’

ಅವರು ಸತ್ಯಕ್ಕೆ ಹೇಳಿದರು ‘ನೀನು ನಮಗೆ ಕೇವಲ ತೊಂದರೆಗಳನ್ನು ಮಾತ್ರ ತರುತ್ತೀ. ನೀನು ನಮ್ಮ ಬಳಿ ಸಾಗಿದ ಕೂಡಲೇ ನಮಗೆ ಆತ್ಮಶೋಧನೆ ಆರಂಭವಾಗಿ ಬಿಡುತ್ತದೆ. ಯಾವ ಅನೈತಿಕ ಕೆಲಸ ಮಾಡಲೂ ಮನಸ್ಸು ಒಪ್ಪುವುದಿಲ್ಲ. ನಿನ್ನ ಸಂಪರ್ಕ ಮಾತ್ರದಿಂದ ಈ ಜಗತ್ತಿನಲ್ಲಿ ಎಷ್ಟೋ ಯೋಧರು, ಕವಿಗಳು, ಕಲಾವಿದರು ನೀನು ಭೋಧಿಸುವ ಒಣ ಆದರ್ಶಗಳಿಗೆ ಬಲಿಯಾಗಿದ್ದಾರೆ. ನೀನು ಕೇವಲ ಆದರ್ಶವನ್ನು ಭೋಧಿಸುತ್ತೀ, ಬದುಕನ್ನು ಕಲಿಸುವುದಿಲ್ಲ. ನಿನ್ನ ಸಹವಾಸದಿಂದ ಯಾರಿಗೂ ಸುಖ ಸಿಕ್ಕಿಲ್ಲ. ಸಿಗುವುದೂ ಇಲ್ಲ ಆದುದರಿಂದ ನಿನ್ನ ಸಹವಾಸ ನಮಗೆ ಬೇಡ. ಇಲ್ಲಿಂದ ಹೊರಟು ಹೋಗು'

ಇಷ್ಟು ಓದಿ ಹೇಳಿ ಅಜ್ಜಿ ನೀರು ಕುಡಿಯಲು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ‘ಹಾಗಾದ್ರೆ ಜಯ ಸುಳ್ಳುಹೇಳುವವರಿಗೇ ಆಗುತ್ತಾ? ಅಜ್ಜಿ' ಎಂದ ವರುಣ್. ‘ಇರಪ್ಪಾ ಕಥೆಯನ್ನೊಮ್ಮೆ ಪೂರ್ತಿ ಓದಿ ಹೇಳುವೆ, ನಂತರ ನಿನ್ನ ಅಭಿಪ್ರಾಯ ಹೇಳುವಿಯಂತೆ' ಎಂದಳು ಅಜ್ಜಿ. ಒಂದು ಲೋಟ ನೀರು ಕುಡಿದ ಅಜ್ಜಿ ಕಥೆಯನ್ನು ಮುಂದಕ್ಕೆ ಓದ ತೊಡಗಿದಳು.

ಇದನ್ನು ಕೇಳಿದ ಸುಳ್ಳು, ಸತ್ಯವನ್ನು ಹೀಯಾಳಿಸುತ್ತಾ, ‘ನೋಡಿದೆಯಾ ಜನರಿಗೆ ನಾನೆಷ್ಟು ಪ್ರಿಯವಾಗಿರುವೆನೆಂದು. ಎಲ್ಲೆಲ್ಲಿ ನಾವು ಹೋದೆವೋ ಅಲ್ಲಲ್ಲಿ ಜನ ನಿನಗಿಂತ ಹೆಚ್ಚಾಗಿ ನನ್ನನ್ನೇ ಸ್ವಾಗತಿಸಿದರು. ಈಗಲಾದರೂ ನಾನೇ ಹೆಚ್ಚು ಎಂದು ಒಪ್ಪಿಕೊಳ್ಳುವಿಯಾ?’ ಎಂದು ಸುಳ್ಳು ಬಿಂಕದಿಂದ ಕೇಳಿತು.

‘ಒಪ್ಪಿದೆ ಗೆಳೆಯಾ, ಈವರೆಗೆ ನಾವು ಜನರಿರುವ ಸ್ಥಳಗಳನ್ನು ಸಾಕಷ್ಟು ತಿರುಗಿದ್ದಾಯಿತು. ಈಗ ನಿರ್ಜನವಾದ ಪರ್ವತದ ತುದಿಗೆ ಹೋಗೋಣ. ಅಲ್ಲಿ ಸಾವಿರಾರು ವರ್ಷಗಳ ಋಷಿಮುನಿಗಳ ತಪಸ್ಸಿನ ಪ್ರಭೆಯಿದೆ. ಅವರ ಚಿಂತನೆ ಮತ್ತು ಉಪದೇಶಗಳ ಸಾರವಿದೆ. ಪ್ರಥ್ವಿಯ ಎಲ್ಲ ಬಂಧನಗಳಿಂದ ಮುಕ್ತರಾದವರು ಮಾತ್ರ ಅಲ್ಲಿ ಜೀವಿಸಬಲ್ಲರು. ಅಲ್ಲಿರುವ ಶುಭ್ರ ಶ್ವೇತ ಹಿಮ, ಸ್ಫಟಿಕದಂತಹ ನೀರು, ಅಲ್ಲಿನ ಕಣಿವೆಗಳಲ್ಲಿ ಅರಳುವ ಹೂವುಗಳಿಗೆ ಕೇಳೋಣ ಯಾರು ಹೆಚ್ಚು ಎಂದು' ಎಂದು ಸವಾಲು ಹಾಕಿತು ಸತ್ಯ. ಅದಕ್ಕೆ ಉತ್ತರಿಸಿದ್ದು ಸುಳ್ಳು ‘ನನ್ನಿಂದ ಸಾಧ್ಯವಿಲ್ಲ. ನಾನು ಅಲ್ಲಿಗೆ ಬರಲಾರೆ. ಅಷ್ಟು ಎತ್ತರಕ್ಕೆ ಏರಲು ನನಗೆ ಉಸಿರು ಕಟ್ಟಿದಂತಾಗುತ್ತದೆ.’ ಎಂದು ಹೇಳಿತು.

‘ಏಕೆ ನಿನಗೆ ಎತ್ತರವನ್ನು ಕಂಡರೆ ಹೆದರಿಕೆಯೇ?’ ಸತ್ಯ ಕೇಳಿತು. ‘ಹೆದರಿಕೆಯೇನೂ ಇಲ್ಲ. ಆದರೆ ನಾನು ಅಲ್ಲಿಗೆ ಬಂದು ಮಾಡುವುದಾದರೂ ಏನು? ನನ್ನ ಆಟವೆಲ್ಲಾ ಜನರಿದ್ದಲ್ಲಿ ಮಾತ್ರ. ಇಡೀ ವಿಶ್ವದ ತುಂಬೆಲ್ಲ ನನ್ನ ಸಾಮ್ರಾಜ್ಯವೇ ! ಆದರ್ಶದ ಬೆನ್ನು ಹತ್ತಿದ ಕೆಲವು ಸಾಹಸಿಗಳು ಮಾತ್ರ ನನ್ನನ್ನು ವಿರೋಧಿಸಿ ನಿನ್ನ ಮಾರ್ಗದಲ್ಲಿ ಸಾಗುತ್ತಾರೆ. ಆದರೆ ಅದರಿಂದ ನನ್ನ ಸಾಮ್ರಾಜ್ಯಕ್ಕೇನೂ ಅಪಾಯವಿಲ್ಲ. ಏಕೆಂದರೆ ಇಂತಹ ಜನರು ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುತ್ತಾರೆ.’ ಸುಳ್ಳು ನುಡಿಯಿತು. ‘ನೀನು ಹೇಳುವುದು ನಿಜ ಗೆಳೆಯಾ, ಆದರೆ ಈ ಬೆರಳೆಣಿಕೆಯಷ್ಟು ಜನರೇ ಯುಗಪುರುಷರೆನಿಸಿಕೊಳ್ಳುತ್ತಾರೆ. ಅವರ ಹೆಸರುಗಳು ಅಜರಾಮರವಾಗುತ್ತವೆ. ನಿನ್ನ ಸಹವಾಸ ಮಾಡಿದವರು ಕಾಲಗರ್ಭದಲ್ಲಿ ಹೇಳಹೆಸರಿಲ್ಲದಂತೆ ಅಡಗಿ ಹೋಗುತ್ತಾರೆ ‘ ಎಂದು ಹೆಮ್ಮೆಯಿಂದ ಉತ್ತರಿಸಿತು ಸತ್ಯ.

ಹೀಗೆ ಓದಿ ಹೇಳಿ ಅಜ್ಜಿ ಕಥೆ ಮುಗಿಸಿದರು. ‘ಗೊತ್ತಾಯಿತಾ ವರುಣ್, ಸತ್ಯಕ್ಕೆ ಪ್ರಾರಂಭದಲ್ಲಿ ಜಯ ಸಿಗದೇ ಇರಬಹುದು. ಆದರೆ ಸತ್ಯ ಏರುವಷ್ಟು ಎತ್ತರಕ್ಕೆ ಸುಳ್ಳು ಏರುವುದಿಲ್ಲ. ಸತ್ಯಮೇವ ಜಯತೇ... ಈ ಮಾತು ಸದಾಕಾಲ ನೆನಪಿಡು' ಎಂದರು ಅಜ್ಜಿ. ‘ತುಂಬಾ ಉತ್ತಮ ನೀತಿ ಕಥೆ ಅಜ್ಜಿ, ಇನ್ನು ಮುಂದೆ ನಾನೂ ಸತ್ಯವನ್ನೇ ಹೇಳುತ್ತೇನೆ. ಕನ್ನಡ ಪುಸ್ತಕಗಳನ್ನೂ ಓದಲು ಪ್ರಾರಂಭ ಮಾಡುವೆ’ ಎಂದ ವರುಣ್. ಅವನನ್ನು ಪ್ರೀತಿಯಿಂದ ತಬ್ಬಿಕೊಂಡರು ಅಜ್ಜಿ.

(ಎಪ್ರಿಲ್ ೧೯೯೧ರ ಕಸ್ತೂರಿ ಪತ್ರಿಕೆಯಿಂದ ಆಯ್ದ ಬರಹ)  

ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ