ಸತ್ಯ - ಮಿಥ್ಯ ಮತ್ತು ವಾಸ್ತವ ಹುಡುಕುತ್ತಾ...

ಒಳ್ಳೆಯ ಮನಸ್ಸಿನವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತಿರುತ್ತದೆ, ನಿಜವೇ ?
ನಾವು ಏನು ದಾನ ಮಾಡುತ್ತೇವೆಯೋ ಅದು ಎರಡಾಗಿ ನಮಗೆ ಬರುತ್ತದೆ, ಸತ್ಯವೆ ?
ಒಳ್ಳೆಯವರಿಗೆ ಒಳ್ಳೆಯದು ಕೆಟ್ಟವರಿಗೆ ಕೆಟ್ಟದ್ದು ಆಗುತ್ತದೆ, ವಾಸ್ತವವೇ ?
ನಾವು ಬದಲಾದರೆ ಜಗತ್ತೇ ಬದಲಾಗುತ್ತದೆ, ಇದು ಪ್ರಾಯೋಗಿಕವೇ ?
ಇಂದಿನ ಎಲ್ಲಾ ಕಷ್ಟ ಸುಖಗಳಿಗೂ ಹಿಂದಿನ ಜನ್ಮದ ಪಾಪ ಪುಣ್ಯಗಳೇ ಕಾರಣ, ನಂಬಬಹುದೇ ?,
ಗಂಡು ಹೆಣ್ಣಿನ ಸಂಬಂಧ ಪೂರ್ವ ನಿಯೋಜಿತ ಋಣಾನುಬಂಧ, ಸರಿಯೇ ?
ಗಂಡ ಹೆಂಡತಿ ಸಂಬಂಧ ಏಳು ಜನುಮಗಳ ಅನುಬಂಧ, ಹೌದೇ ?
ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ, ನಿಮಗೆ ಸ್ಪಷ್ಟವಾಗಿ ಗೊತ್ತೇ ?
ಅಪಘಾತ, ಆಕಸ್ಮಿಕ, ಆತ್ಮಹತ್ಯೆ, ಅನಾರೋಗ್ಯದ ಸಾವು ನಮ್ಮ ಹಣೆಬರಹ, ಒಪ್ಪೋಣವೇ ?,
ಬದುಕಿನ ಎಲ್ಲಾ ಘಟನೆಗಳೂ ಪೂರ್ವ ನಿರ್ಧಾರಿತ, ಪ್ರಶ್ನಿಸಬಾರದೇ ?,
ನಮ್ಮನ್ನು ಕಾಡುವ ಈ ಮನಸ್ಥಿತಿಗೆ ಉತ್ತರಬೇಕಿದೆ.
ಆದರೆ,.....,
ಹೊಟ್ಟೆ ತುಂಬಿದ ಶ್ರೀಮಂತರು,
ವೇದಾಧ್ಯಯನ ಪಂಡಿತರು,
ವಿಭೂತಿ ಮಠಾಧೀಶರು,
ಪುನರ್ಜನ್ಮ ಸೃಷ್ಟಿಕರ್ತರು,
ವಿಚಾರವಾದಿಗಳು,
ಬುದ್ದಿ ಜೀವಿಗಳ,
ಉತ್ತರಗಳು ನಮಗೆ ಬೇಡ.
ಬೀದಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯಿಂದ ಉತ್ತರ ಬೇಕಿದೆ, ಹುತಾತ್ಮ ಯೋಧನ ಹೆಂಡತಿ - ಅಪ್ಪ - ಅಮ್ಮನಿಂದ ಉತ್ತರ ಬೇಕಿದೆ, ಆತ್ಮಹತ್ಯೆ ಮಾಡಿಕೊಂಡ ರೈತನ ಮಗಳು - ಮಗನಿಂದ ಉತ್ತರ ಬೇಕಿದೆ, ಬಸ್ ಸ್ಟ್ಯಾಂಡಿನಲ್ಲಿ ದಿನ ಕಳೆಯುವ - ಬದುಕು ಸವೆಸುವ ಅನಾಥರಿಂದ ಉತ್ತರ ಬೇಕಿದೆ, ಗಂಡನಿಂದಲೇ ಏಡ್ಸ್ ಬಂದು ಈಗ ಆತನಿಂದಲೇ ಪರಿತ್ಯಕ್ತಳಾದ ಮಹಿಳೆಯಿಂದ ಉತ್ತರ ಬೇಕಿದೆ, ಮಾವೀಯತೆಯಿಂದ ವಿಧುವೆಗೆ ಬದುಕು ನೀಡಿ ಈಗ ವರದಕ್ಷಿಣೆ ಆರೋಪದಲ್ಲಿ ಜೈಲಿನಲ್ಲಿ ದಿನದೂಡುತ್ತಿರುವ ಯುವಕನ ಉತ್ತರ ಬೇಕಿದೆ, ತನ್ನದೆಲ್ಲವನ್ನೂ ಯಾವುದೋ ಸಾರ್ವಜನಿಕ ಗಲಭೆಯಲ್ಲಿ ಕಳೆದುಕೊಂಡ ವ್ಯಕ್ತಿಯ ಉತ್ತರ ಬೇಕಿದೆ, ತಮ್ಮ ಸರ್ವಸ್ವವನ್ನೂ ತಮ್ಮ ನಾಲ್ಕು ಮಕ್ಕಳಿಗಾಗಿ ತ್ಯಾಗಮಾಡಿ ಈಗ ಅವರಿಂದ ತಿರಸ್ಕೃತರಾಗಿ ವೃಧ್ಧಾಶ್ರಮದಲ್ಲಿ ಬದುಕುತ್ತಿರುವ ತಂದೆ ತಾಯಿಯ ಉತ್ತರ ಬೇಕಿದೆ, ನಿವೃತ್ತಿ ವೇತನ ಪಡೆಯಲು 5 ವರ್ಷದಿಂದ ಭ್ರಷ್ಟ ಸರ್ಕಾರಿ ವ್ಯವಸ್ಥೆಯಲ್ಲಿ ನರಳುತ್ತಿರುವ ತಬರನಂತ ವೃಧ್ಧರಿಂದ ಉತ್ತರ ಬೇಕಿದೆ, ಪ್ರಾಮಾಣಿಕರಾಗಿದ್ದುದರಿಂದಲೇ ತನ್ನ ಸಹಚರರಿಂದ ಕಿರುಕುಳಕ್ಕೊಳಗಾಗಿ ಸೇವೆಯಿಂದ ವಜಾಗೊಂಡ ಅಧಿಕಾರಿಯಿಂದ ಉತ್ತರ ಬೇಕಿದೆ. ಇವರ ಉತ್ತರಗಳು ಆಶಾದಾಯಕವಾಗಿದ್ದರೆ ಇವನ್ನೆಲ್ಲಾ ಮತ್ತೊಮ್ಮೆ ವಾಸ್ತವದ ವಿಮರ್ಶೆಗೊಳಪಡಿಸಬಹುದು.
ಇಲ್ಲದಿದ್ದರೆ ಇನ್ನೆಷ್ಟು ದಿನ ಈ ಭ್ರಮೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯುವುದು, ರಾಷ್ಟ್ರದ ಸಂಸತ್ತಿನಿಂದ ಹಿಡಿದು ಬೀದಿ ಬದಿಯ ಟೀ ಅಂಗಡಿಯವರೆಗೂ ಒಂದಲ್ಲಾ ಒಂದು ವಿಷಯದ ಬಗೆಗೆ ಚರ್ಚೆಗಳು ಸದಾ ನಡೆಯುತ್ತಲೇ ಇರುತ್ತದೆ, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ತನ್ನ ಅರಿವಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮಾಧ್ಯಮಗಳಂತೂ 24×7 ಏನೋ ಒಂದು ವಿಷಯವನ್ನು ಕುರಿತು ಚರ್ಚಿಸುತ್ತಲೇ ಇರುತ್ತವೆ. FACEBOOK, TWITTER, WATSAPP, INSTAGRAM ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿಯಂತು ಇದು ನಿಲ್ಲುವುದೇ ಇಲ್ಲ.
ಆದರೆ.... ಫಲಿತಾಂಶ ಮಾತ್ರ ಇನ್ನಷ್ಟು, ಮತ್ತಷ್ಟು ಗೊಂದಲಕಾರಿಯೇ ಆಗುತ್ತದೆ. ಯಾವ ಚರ್ಚೆಗಳಿಗೂ ಸ್ಪಷ್ಟ ಉತ್ತರ ನೀಡಲಾಗುತ್ತಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ಚರ್ಚೆಗಳ ಮೂಲ ಉದ್ದೇಶ ಸತ್ಯದ ಹುಡುಕಾಟವಾಗಿರದೆ, ಬುದ್ದಿ ಪ್ರದರ್ಶನದ, ಮಿತಿಗಳ ಅರಿವಿಲ್ಲದ ಅಜ್ಞಾನವೇ ಇರಬೇಕು ಎಂದು ಭಾವಿಸಬಹುದಾಗಿದೆ. ಒಬ್ಬ ಚಾಣಾಕ್ಷ ವ್ಯಕ್ತಿ ಯಾವ ವಿಷಯವನ್ನು ಬೇಕಾದರೂ ತನ್ನ ದೃಷ್ಟಿಕೋನಕ್ಕೆ ಒಗ್ಗಿಸಿಕೊಂಡು ಉದಾಹರಣೆಗಳ ಸಮೇತ ಅದನ್ನು ಸಮರ್ಥಿಸಬಹುದು. ಇಲ್ಲಿಯೂ ಬುದ್ದಿಯೇ ವಿಜೃಂಭಿಸುತ್ತದೆ ಸತ್ಯವಲ್ಲ.
ಇನ್ನು ಸತ್ಯ ಯಾವುದೆಂಬುದು ಕೂಡ ಗೊಂದಲಮಯವಾಗಿಯೇ ಇದೆ. ಸತ್ಯಕ್ಕೂ ಹಲವಾರು ಮುಖಗಳಿರುತ್ತವೆ. ಸಾರ್ವತ್ರಿಕ ಸತ್ಯ, ಸಾಂಧರ್ಬಿಕ ಸತ್ಯ, ಘಟನೆಯ ಸತ್ಯ, ತತ್‌ಕ್ಷಣದ ಸತ್ಯ , ಕಾಲದ ಸತ್ಯ ಹೀಗೆ ಹಲವಾರು. ಏಕೆಂದರೆ ಈ ಕ್ಣಣದಲ್ಲಿ ಸತ್ಯ ಎಂದು ಭಾವಿಸುವುದು ಕಾಲಾನಂತರದಲ್ಲಿ ಸುಳ್ಳಾಗಬಹುದು. ಇಂದಿನ ಕೆಲವು ಸರಿಗಳು ಮುಂದಿನ ತಪ್ಪುಗಳಾಗಬಹುದು. ಸತ್ಯ ಕೆಲವೊಮ್ಮೆ ಪ್ರತ್ಯಕ್ಷವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಮಗದೊಮ್ಮೆ ಅಗೋಚರವಾಗಿಯೂ ಇರುತ್ತದೆ. ಅದರ ಹುಡುಕಾಟ ನಿರಂತರ. ಆದರೆ ಕೆಲವರು ಇದನ್ನೇ ಉಪಯೋಗಿಸಿಕೊಂಡು ತಮ್ಮ ವಾಕ್ಚಾತುರ್ಯದಿಂದ ತಾವು ಹೇಳುವುದೇ ಸತ್ಯ ಎಂದು ನಂಬಿಸುತ್ತಾರೆ. ಅದಕ್ಕೆ ಬಹುದೊಡ್ಡ ಉದಾಹರಣೆ ರಾಜಕಾರಣಿಗಳು, ಧರ್ಮಾಧಿಕಾರಿಗಳು ಇತ್ತೀಚೆಗೆ ಮಾಧ್ಯಮದವರು ಇತ್ಯಾದಿಗಳು.
ಸತ್ಯಕ್ಕಿಂತ ಭ್ರಮೆ, ಭಯ, ಭಕ್ತಿ, ಅಜ್ಞಾನ ಮತ್ತು ಭಾವುಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.ಈ ಕಾರಣಕ್ಕಾಗಿಯೇ ಘರ್ಷಣೆಗಳು ನಿರಂತರವಾಗುತ್ತಿವೆ. ನಿಜವಾದ ಸತ್ಯ ಶೋಧಕರು ಇದನ್ನು ವಿರೋಧಿಸುತ್ತಾರೆ. ಆದರೆ ಬಹುಜನರ ನಂಬಿಕೆ ಭಾವನಾತ್ಮಕವಾಗಿಯೇ ಇರುತ್ತದೆ. ಅದಕ್ಕೆ ದಾರಿಹೋಕರ ಮಾತಿಗಿಂತ ಆ ವಿಷಯಗಳ ನಿಜವಾದ ಪರಿಣಿತರು ನಿರಂತರ ಮತ್ತು ದೀರ್ಘ ಅಧ್ಯಯನದಿಂದ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಆ ಕ್ಷಣದ ಸತ್ಯಗಳೆಂದು ನಾವು ಒಪ್ಪಿಕೊಳ್ಳಬಹುದು. ಅದು ವೈಧ್ಯಕೀಯ ಕ್ಷೇತ್ರವೇ ಇರಬಹುದು, ಆಧ್ಯಾತ್ಮಿಕ ಅಥವಾ ಆಡಳಿತ ವಿಚಾರಗಳೇ ಇರಬಹುದು. ತಜ್ಞರು ಸತ್ಯದ ಹಲವಾರು ಮುಖಗಳನ್ನು ಪರಿಶೀಲಿಸಿ ಹೇಳಿರುತ್ತಾರೆ.
ಆದರೂ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ, ಅರ್ಥ್ಯೆಸಿಕೊಳ್ಳುವ ಜಾಣ್ಮೆ, ನಮಗೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಈಗಿನಂತೆ ಗೊಂದಲಗಳಲ್ಲಿ, ಅಜ್ಞಾನದಲ್ಲಿಯೇ ಕಾಲ ಕಳೆಯುತ್ತಾ ಬುದ್ಧಿವಂತರೆಂಬ ಭ್ರಮೆಯಲ್ಲಿ, ಸತ್ಯವೋ ಸುಳ್ಳೋ ಒಟ್ಟಿನಲ್ಲಿ ಈ ಕ್ಷಣದ ವ್ಯಾವಹಾರಿಕ ಲಾಭವನ್ನು ಮುಖ್ಯವಾಗಿ ಇಟ್ಟುಕೊಂಡು ಬದುಕಬೇಕಾಗುತ್ತದೆ. ಹಾಗಾಗುವುದು ಬೇಡ. ವಿಷಯಗಳನ್ನು ಸೃಷ್ಟಿಯ ಸಮಗ್ರ ದೃಷ್ಟಿಕೋನದಿಂದ ಪರಿಶೀಲಿಸಿ, ನಮ್ಮಲ್ಲೇ ಪ್ರಶ್ನಿಸಿಕೊಂಡು ಪ್ರಬುದ್ಧತೆಯಿಂದ ವರ್ತಿಸೋಣ, ಯಾರೂ ಪರಿಪೂರ್ಣರಲ್ಲ.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ