ಸತ್ಯ ಹೇಳಿ, ನೀವು ಗುಬ್ಬಚ್ಚಿಗಳನ್ನು ನೋಡದೇ ಎಷ್ಟು ದಿನಗಳಾದವು?

ಸತ್ಯ ಹೇಳಿ, ನೀವು ಗುಬ್ಬಚ್ಚಿಗಳನ್ನು ನೋಡದೇ ಎಷ್ಟು ದಿನಗಳಾದವು?

ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ದಶಕದ ಹಿಂದೆ ಕಿರಾಣಿ ಅಂಗಡಿಗಳ ಮುಂದೆ ಹಾದುಹೋಗುವಾಗ ಕಾಳುಗಳನ್ನು ತಿನ್ನುತ್ತಿರುವ ಗುಬ್ಬಿಗಳ ಹಿಂಡೇ ಕಾಣಸಿಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ನಗರದಲ್ಲಿ ಗುಬ್ಬಚ್ಚಿಗಳ ಕಲರವ ಮಾಯವಾಗುತ್ತಿದೆ. ಚಿಂವ್ ಚಿಂವ್ ಎನ್ನುವ ಮಧುರ ಧ್ವನಿ ಕಡಿಮೆಯಾಗುತ್ತಿದೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಗುಬ್ಬಚ್ಚಿಗಳು ಅಳಿದು ಹೋದ ಪಕ್ಷಿ ಪ್ರಬೇಧಗಳ ಜೊತೆ ಸೇರಬಹುದೇನೋ? ನಮ್ಮ ಮುಂದಿನ ಪೀಳಿಗೆ ಈ ಗುಬ್ಬಿಗಳನ್ನು ಕೇವಲ ಚಿತ್ರಗಳಲ್ಲಿ ನೋಡಿ ಸಮಾಧಾನ ಮಾಡಿಕೊಳ್ಳಬೇಕಾದಿತೇನೋ? ದೊಡ್ಡದೊಂದು ಅಪಾಯ ನಮ್ಮ ಮುಂದಿದೆ. ಆದರೆ ಜಾಗೃತರಾಗಿರುವ ಮನಸ್ಸುಗಳು ಕೆಲವೇ ಕೆಲವು.

ಕೊರೊನಾ ಸಮಯದಲ್ಲಿ ನಾನು ಮನೆಯಲ್ಲೇ ಇದ್ದಾಗ ಹಕ್ಕಿಗಳಿಗಾಗಿ ನೀರು, ಕಾಳುಗಳನ್ನು ಇಡುವ ವ್ಯವಸ್ಥೆ ಮಾಡಿದೆ. ಹಲವಾರು ಬಗೆಯ ಹಕ್ಕಿಗಳು ಅಂದರೆ, ಇಂಡಿಯನ್ ರಾಬಿನ್, ಮುನಿಯಾ, ಬುಲ್ ಬುಲ್, ಕಾಜಾಣ, ಅಪರೂಪಕ್ಕೆ ನವಿಲು, ಕೆಂಬೂತಗಳು ಬಂದು ನೀರು ಕುಡಿದು, ನೀರಿನಲ್ಲಿ ಆಟವಾಡಿ ಹೋದರೂ ಬಹಳ ಸಮಯ ಗುಬ್ಬಚ್ಚಿಗಳ ಸುಳಿವೇ ಇರಲಿಲ್ಲ. ಆದರೆ ಎರಡು ವರ್ಷಗಳ ಹಿಂದೆ ಒಂದು ಜೋಡಿ ಗುಬ್ಬಚ್ಚಿಗಳು ಬಂದು ಚಿಂವ್ ಗುಟ್ಟಲಾರಂಭಿಸಿದವು. ಕಾಳುಗಳನ್ನು ತಿಂದು ನೀರು ಕುಡಿದು ಹೋಗಲು ಪ್ರಾರಂಭ ಮಾಡಿದವು. ಅವು ಗೂಡು ಕಟ್ಟುವುದಾದರೆ ಅನುಕೂಲವಾಗಲಿ ಎಂದು ಕೆಲವು ರಟ್ಟಿನ ಪೆಟ್ಟಿಗೆಗಳನ್ನೂ ಕಟ್ಟಿದೆ. ಹಲವಾರು ಸಮಯ ಬರುತ್ತಿದ್ದ ಗುಬ್ಬಿಗಳು ಒಂದು ದಿನ ಬರುವುದನ್ನೇ ನಿಲ್ಲಿಸಿ ಬಿಟ್ಟವು. ನನಗೆ ಬಹಳ ನೋವಾಯಿತು. 

ಆದರೆ ಕಳೆದ ವರ್ಷ ಬೇಸಿಗೆಯಲ್ಲಿ ಮತ್ತೆ ಗುಬ್ಬಚ್ಚಿಗಳು ಮರಳಿ ಬಂದವು. ಈ ಬಗ್ಗೆ ‘ಮರಳಿ ಬಂದವು ಗುಬ್ಬಚ್ಚಿಗಳು’ ಎನ್ನುವ ಲೇಖನ ಬರೆದು ಸಂಪದದಲ್ಲಿ ಪ್ರಕಟಿಸಿದೆ. (ಪ್ರಕಟ: ೨೧-೦೩-೨೦೨೪). ನಂತರದ ದಿನಗಳಲ್ಲಿ ನಿರಂತರವಾಗಿ ೫-೬ ಗುಬ್ಬಚ್ಚಿಗಳು ನಮ್ಮ ಮನೆ ಆವರಣಕ್ಕೆ ಬರುತ್ತಿವೆ. ನೀರು ಕುಡಿದು, ಕಾಳುಗಳನ್ನು ತಿಂದು ಹೋಗುತ್ತಿವೆ. ಗೂಡು ಕಟ್ಟುವ ಮನಸ್ಸು ಇನ್ನೂ ಮಾಡಿಲ್ಲ, ಆದರೆ ಮುಂದೆ ಒಂದು ದಿನ ಮಾಡಬಹುದು. ಈ ಬಗ್ಗೆ ನಿರೀಕ್ಷೆ ಇದೆ. ಇಂದು ವಿಶ್ವ ಗುಬ್ಬಚ್ಚಿಗಳ ದಿನ ಎಂದು ತನಗೂ ತಿಳಿದಿದೆ ಎಂಬಂತೆ ಬೆಳಿಗ್ಗೆ ತುಂಬಾ ಹೊತ್ತು ಚಿಂವ್ ಚಿಂವ್ ಎನ್ನುತ್ತಿತ್ತು.

ಬದಲಾಗುತ್ತಿರುವ ಪರಿಸರ, ಕಾಂಕ್ರೀಟ್ ಕಾಡುಗಳ ನಡುವೆ ಗೂಡು ಕಟ್ಟಲಾಗದ ಅನಿವಾರ್ಯತೆ ಗುಬ್ಬಚ್ಚಿಗಳಿಗೆ ಕಾಡುತ್ತಿದೆಯೇನೋ? ಮೊದಲಾದರೆ ಹಂಚಿನ, ಮುಳಿ ಹುಲ್ಲಿನ ಮನೆಗಳು. ಧಾರಾಳವಾದ ಜಾಗ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಇತ್ತು. ಆಗೆಲ್ಲಾ ಹೊಲಗದ್ದೆಗಳಲ್ಲಿ ಕಾಳು, ಸಣ್ಣ ಪುಟ್ಟ ಕೀಟಗಳು, ಹುಳ ಹುಪ್ಪಟೆಗಳು ಧಾರಾಳವಾಗಿ ಸಿಗುತ್ತಿದ್ದವು. ಗುಬ್ಬಚ್ಚಿಗಳೂ ಅವುಗಳನ್ನು ತಿಂದು ಸುಖವಾಗಿದ್ದವು. ಈಗ ಕಾಳೂ ಇಲ್ಲ, ಹುಳಗಳೂ ಇಲ್ಲ. ರಾಸಾಯನಿಕ ಸಿಂಪರಣೆಯ ಹೊಡೆತಕ್ಕೆ ಸಣ್ಣ ಪುಟ್ಟ ಹುಳ, ಕೀಟಗಳು ಸತ್ತು ಹೋಗಿವೆ. ಇದರಿಂದ ಹಕ್ಕಿಗಳಿಗೆ ಆಹಾರದ ಕೊರತೆಯಾಗಿರಲೂ ಬಹುದು. ತನ್ನ ನೈಸರ್ಗಿಕ ಆಹಾರವಲ್ಲದ ಅನ್ನವನ್ನು ಹಕ್ಕಿಗಳು ತಿನ್ನುವುದನ್ನು ನೋಡುವಾಗ ನೋವಾಗುತ್ತದೆ. ಹೊಟ್ಟೆಯ ಹಸಿವು ಮತ್ತು ಬದುಕುವ ಆಸೆ ಹಕ್ಕಿಗಳನ್ನು ಮಾನವ ಬಳಸುವ ಆಹಾರವನ್ನು ಸೇವಿಸುವ ಅನಿವಾರ್ಯತೆಗೆ ತಂದು ನಿಲ್ಲಿಸಿದೆ. ಗುಬ್ಬಚ್ಚಿಗಳಿಗೂ ಹೀಗೇ ಆಗಿರಬಹುದೇನೋ? ಮೊಬೈಲ್ ಗಳ ವಿಕಿರಣಗಳ ಕಾರಣದಿಂದಲೂ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿವೆ ಎಂಬ ವಾದವೂ ಇದೆ. 

ಭಾರತದ ನೇಚರ್ ಫಾರೆವರ್ ಸೊಸೈಟಿ ೫೦ ರಾಷ್ಟ್ರಗಳಲ್ಲಿ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುತ್ತಿದೆ. ಬದಲಾದ ಬದುಕು, ಯಾಂತ್ರಿಕ ಜಗತ್ತು, ಪ್ಯಾಕೆಟ್ ಆಹಾರ, ಕೀಟನಾಶಕಗಳ ವಿಪರೀತ ಬಳಕೆ, ಬದಲಾದ ಮಾನವ ಜೀವನ ಶೈಲಿ ಇದಕ್ಕೆ ಗುಬ್ಬಚ್ಚಿಗಳು ಹೊಂದುತ್ತಿಲ್ಲ. ಈ ಕಾರಣದಿಂದಾಗಿ ಅವುಗಳು ಅವನತಿಯತ್ತ ಸಾಗುತ್ತಿವೆ. ಮೊಹಮ್ಮದ್ ದಿಲಾವರ್ ಎಂಬ ವ್ಯಕ್ತಿಯ ನೇತೃತ್ವದಲ್ಲಿ ಆರಂಭವಾದ ನೇಚರ್ ಫಾರೆವರ್ ಸೊಸೈಟಿ ಗುಬ್ಬಚ್ಚಿಗಳ ಹೆಚ್ಚಳಕ್ಕೆ ದುಡಿಯುತ್ತಿದೆ. ಮಾನವನ ಸಣ್ಣ ಬುದ್ದಿ ಪುಟ್ಟ ಪಕ್ಷಿಯೊಂದರ ಬದುಕು ಕಸಿಯುತ್ತಿದೆ. ಭಾರತ ದೇಶದಾದ್ಯಂತ ಗುಬ್ಬಚ್ಚಿಯ ಉಳಿವಿಗಾಗಿ ಪ್ರಯತ್ನಗಳು ನಡೆಯುತ್ತಿವೆ. ಈಗ ಹೇಳಿ, ನೀವು ಗುಬ್ಬಚ್ಚಿಗಳನ್ನು ನೋಡದೇ ಎಷ್ಟು ದಿನವಾಗಿದೆ? 

ಚಿತ್ರ ಕೃಪೆ: ಅಂತರ್ಜಾಲ ತಾಣ