ಸದನದ ಪರಂಪರೆಗೆ ಕಪ್ಪು ಚುಕ್ಕೆ

ಸದನದ ಪರಂಪರೆಗೆ ಕಪ್ಪು ಚುಕ್ಕೆ

ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಹಾಗೂ ಗೌರವಯುತ ಸ್ಥಾನವಿದೆ. ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ರಾಜ್ಯಗಳಲ್ಲಿನ ಸಂಸದೀಯ ವ್ಯವಸ್ಥೆಗೆ ಹೋಲಿಸಿದರೆ ಕರ್ನಾಟಕದ ಸಂಸದೀಯ ವ್ಯವಸ್ಥೆ ಮೇಲುಸ್ತರದಲ್ಲಿದೆ ಎನ್ನುವುದು ಎಲ್ಲರ ಭಾವನೆಯಾಗಿತ್ತು. ನಾಡು, ನುಡಿ, ಜನರ ವಿಷಯ ಬಂದಾಗ ಅದೆಷ್ಟೋ ಬಾರಿ ‘ಪಕ್ಷಾತೀತ’ ತೀರ್ಮಾನಗಳು, ಚರ್ಚೆಗಳು ನಡೆದಿರುವ ಇತಿಹಾಸ ಕರ್ನಾಟಕದ ವಿಧಾನಸಭೆಗಿದೆ. ಆದರೆ ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿ ನಡೆದ ಒಟ್ಟು ಕಲಾಪವನ್ನು ಪರಿಗಣಿಸಿದರೆ ಜನರ ಸಮಸ್ಯೆಗಿಂತಲೂ ಸವಾಲು - ಪ್ರತಿ ಸವಾಲು, ಗದ್ದಲಗಳಿಗೆ ಹೆಚ್ಚು ಸಮಯ ವ್ಯಯವಾಗಿದೆ. ಆರಂಭದ ಕೆಲ ದಿನ ಬಜೆಟ್ ಮೇಲಿನ ಚರ್ಚೆ ಆರಂಭಿಸಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿದ್ದ ನಾಯಕರು ಬಳಿಕ ಸವಾಲು, ರಾಜಕೀಯ ಹೋರಾಟಕ್ಕೆ ಸೀಮಿತಗೊಳಿಸಿಕೊಂಡದ್ದು ವಿಪರ್ಯಾಸ. ಈ ಬಾರಿಯ ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿಗಿದ್ದ ಹತ್ತಾರು ವಿಷಯಗಳ ‘ಪ್ರಸ್ತಾಪ’ವೂ ಆಗಲಿಲ್ಲ. ಜತೆಗೆ ಕಳೆದ ಮೂರು ದಿನಗಳಿಂದ ವಿಧಾನ ಸಭೆಯ ಕಲಾಪ ಹನಿಟ್ತ್ಯಾಪ್ ವಿಷಯದ ಸುತ್ತಲೇ ಗಿರಕಿ ಹೊಡೆದಿದೆ.

ಮೊದಲ ದಿನ ಸುನೀಲ್ ಕುಮಾರ್ ಸೇರಿ ಕೆಲ ಶಾಸಕರು ವಿಷಯ ಪ್ರಸ್ತಾಪಿಸಿ ಕೈಬಿಟ್ಟರೆ, ಎರಡನೇ ದಿನ ಸಹಕಾರಿ ಸಚಿವ ರಾಜಣ್ಣ ಅವರೇ, ತಮ್ಮ ಮೇಲಿನ ಹನಿಟ್ರ್ಯಾಪ್ ಯತ್ನಕ್ಕೆ ಸಂಬಂಧಿಸಿ ತನಿಖೆ ನಡೆಸಲು ಆಗ್ರಹಿಸಿದರು. ಇದಕ್ಕೆ ಪೂರಕವಾಗಿ, ಗೃಹ ಸಚಿವ ಪರಮೇಶ್ವರ್ ‘ಉನ್ನತ’ ಮಟ್ಟದ ತನಿಖೆಗೆ ಭರವಸೆ ನೀಡಿ, ವಿಷಯಕ್ಕೆ ತೆರೆ ಹಾಡುವ ಪ್ರಯತ್ನ ಮಾಡಿದ್ದರು. ಆದರೆ ಶುಕ್ರವಾರ ಈ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಗರು ಶುರುಮಾಡಿದ ಹೋರಾಟ- ಹಾರಾಟ ಬಳಿಕ ಬಾವಿಗಿಳಿದು ನಡೆಸಿದ ಪ್ರತಿಭಟನೆ, ಸ್ಪೀಕರ್ ಕುರ್ಚಿಯತ್ತ ಸದಸ್ಯ ನುಗ್ಗಿದ್ದು, ಆಡಳಿತ-ಪ್ರತಿಪಕ್ಷ ಶಾಸಕರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ವಿಷಯ ತೆಗೆದುಕೊಂಡು ಹೋಗಿದ್ದು, ಕೊನೆಯಲ್ಲಿ ೧೮ ಶಾಸಕರ ಅಮಾನತು ಕರ್ನಾಟಕ ಸಂಸದೀಯ ವ್ಯವಸ್ಥೆಯಲ್ಲಿಯೇ ಕಪ್ಪು ಚುಕ್ಕಿ ಎನ್ನಲಡ್ಡಿಯಿಲ್ಲ. ಆದರೆ ಈ ಎಲ್ಲದರ ನಡುವೆ ಶಾಸಕರ ವೇತನ ಹೆಚ್ಚಿಸಿಕೊಳ್ಳುವ ವಿಷಯದಲ್ಲಿ ಮಾತ್ರ ಎಲ್ಲರೂ ಮೌನ ಒಪ್ಪಿಗೆ ನೀಡಿದ್ದಾರೆ. ಒಂದೆಡೆ ಜನರ ಕಣ್ಣಿಗೆ ಮಣ್ಣೆರಚುವ ಹೊಂದಾಣಿಕೆ ರಾಜಕೀಯ, ಇನ್ನೊಂಡೆಡೆ ಆರ್ಥಿಕ ಸಂಕಷ್ಟಗಳ ನಡುವೆ ಸಂಬಳ, ಭತ್ಯೆ ದುಪ್ಪಟ್ಟು ನಿರ್ಧಾರ ಕರ್ನಾಟಕ ಮಾದರಿ ಸಂಸದೀಯ ಪರಂಪರೆಗೆ ಕಳಂಕ ತಂದಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದೊ: ೨೨-೦೩-೨೦೨೫  

ಚಿತ್ರ ಕೃಪೆ: ಅಂತರ್ಜಾಲ ತಾಣ