ಸದರ ಬಜಾರ್

ಸದರ ಬಜಾರ್

ಪುಸ್ತಕದ ಲೇಖಕ/ಕವಿಯ ಹೆಸರು
ಡಿ ಎಸ್ ಚೌಗಲೆ
ಪ್ರಕಾಶಕರು
ವೀರಲೋಕ ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ : ೨೦೨೪

“ಡಿ. ಎಸ್. ಚೌಗಲೆ ಅವರ ಕಾದಂಬರಿ 'ಸದರಬಜಾರ್' ಹಲವು ವರ್ಗಗಳ ಓದುಗರಿಗೆ ಅಪರಿಚಿತವಾದ ಸಾಮಾಜಿಕ ಲೋಕವೊಂದನ್ನು ತೆರೆದಿಡುತ್ತದೆ. ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗ, ಈಚಲ್‌ಕರಂಜಿ, ಅಬ್ದುಲ್‌ ಲಾಟ್ ಇವು ಜವಳಿ ಉದ್ಯಮ, ಸಕ್ಕರೆ ಕಾರಖಾನೆಗಳು ಇವುಗಳಿಂದ ಬೆಳೆದ ವಿಶಾಲವಾದ ಕಾರ್ಮಿಕರ ಕಾಲನಿಗಳಂತೆ ಬೆಳೆದ ಊರುಗಳು. ఇಲ್ಲಿಗೆ ಕೆಲಸ ಹುಡಿಕೊಂಡು ಬಂದವರು, ಬರಗಾಲದಲ್ಲಿ ಗುಳೆ ಹೊರಟು ಬಂದವರು, ಕುಟುಂಬ ಹಾಗೂ ಸಮಾಜಗಳ ದೌರ್ಜನ್ಯಗಳಿಂದಾಗಿ ಓಡಿ ಬಂದು ಇಲ್ಲಿ ವೇಶೈಯರಾಗಿ ಬದುಕುತ್ತಿರುವವರು- ಇವರಲ್ಲಿ ಬಹುಪಾಲು ಕರ್ನಾಟಕದವರು, ಕನ್ನಡ ಭಾಷಿಕರು. ಗಡಿ ಭಾಗಗಳಲ್ಲಿ ಸಹಜವಾಗಿರುವ ಸಂಕರ ಭಾಷೆಯಲ್ಲಿ ಮಾತನಾಡುವವರು. ಕೆಲವರು ತಾಯಿನುಡಿಯನ್ನು ಮರೆತವರು. ಈ ಸಮಗ್ರ ಸಾಮಾಜಿಕ ಲೋಕವನ್ನು ಚೌಗಲೆಯವರು ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಕಥನದ ಮಾದರಿ ವಾಸ್ತವ ವಾದವನ್ನು ಮೀರಿದ naturalism ಎಂದು ಒಂದು ಕಾಲಕ್ಕೆ ಪ್ರಸಿದ್ಧವಾದ ಮಾದರಿಯಿದು. ಶಿಷ್ಟ ಸಮಾಜವು ನೋಡಲು ಬಯಸದ ಕೊಳೆಗೇರಿಗಳ, ವೇಶ್ಯಾವಾಟಿಕೆಗಳ, ಶ್ರಮಜೀವಿ ಬದುಕಿನ ಬಡತನ, ಹತಾಶೆಗಳ ಜೊತೆಗೆ ಬದುಕಬೇಕೆನ್ನುವ ಛಲ ಇವುಗಳನ್ನು ಕೆಲವೊಮ್ಮೆ ಓದುಗರಿಗೆ ಶಾಕ್ ಅಗುವಂಥ ವಿವರಗಳು ಹಾಗೂ ಭಾಷೆಯ ಮೂಲಕ ಬಿಚ್ಚಿಡುವ ಮಾದರಿ ಇದಾಗಿದೆ. ವಿಡಿಯೋ ಕ್ಯಾಸೆಟ್‌ಗಳು ಹಳ್ಳಿಗಳಿಗೂ ಪ್ರವೇಶ ಮಾಡಿ ವಿಡಿಯೋ ಪಾರ್ಲ‌ರ್ ಗಳಲ್ಲಿ ನೀಲಿ ಚಿತ್ರಗಳನ್ನು ತೋರಿಸುವುದರಿಂದ ಉಂಟಾದ ಬದಲಾವಣೆಗಳ ವರ್ಣನೆಯಿಂದ ಆರಂಭವಾಗುವ ಈ ಕೃತಿ ಮುಂದೆ ಶಿವೂನ ಪ್ರಜ್ಞೆಯ ಮೂಲಕ ಸಾಮಾಜಿಕ ವಾಸ್ತವಗಳ ದಾಖಲೆಯನ್ನು ಮಾಡುತ್ತದೆ. ಇದರಲ್ಲಿ ಲೈಂಗಿಕತೆ, ಸ್ಥಳೀಯ ರಾಜಕೀಯ, ಕಾರ್ಮಿಕರ ಸಂಘಟನೆಗಳು, ಸದರಬಜಾರ್‌ನಂಥ ಕೆಂಪು ದೀಪದ ನರಕಗಳು ಇವೆಲ್ಲವು ಕೃತಿಗೆ ಬಂದು ಸೇರುತ್ತವೆ. ಕೃತಿಯ ಪ್ರಭಾವಿಯಾದ ಕೇಂದ್ರ ರೂಪಕವೆಂದರೆ 'ಸದರಬಜಾರ್'. ಮನುಷ್ಯ ಜೀವಿಗಳನ್ನು ಮಾರುಕಟ್ಟೆಯ ವಸ್ತುಗಳನ್ನಾಗಿಸುವ ಬಂಡವಾಳದ ಮೂರ್ತ ರೂಪವಾಗಿದೆ ಇದು. ಮಮಷ್ಯ ಜೀವಿಗಳ ಸ್ವಭಾವದ ಮೂಲದಲ್ಲಿಯೇ ಇರುವ ಅದಿಮ ಪ್ರವೃತ್ತಿಗಳ ಸಂಕೇತವೂ ಆಗಿದೆ. ಇದರ ಸುತ್ತ ಹಾಗೂ ಹಲವು ಊರುಗಳ ಸುತ್ತ ಚಲಿಸುವ ಈ ಕೃತಿಯಲ್ಲಿ ತಮ್ಮ ಜೀವಂತಿಕೆಯ ಮೂಲಕ ನಮ್ಮನ್ನು ಅವರಿಸಿಕೊಳ್ಳುವ ಹತ್ತಾರು ಪಾತ್ರಗಳಿವೆ. ನಿರೂಪಕನು ಕೇಳುವ ಅನೇಕ ಪ್ರಶ್ನೆಗಳಿಗೆ ನಮ್ಮಲ್ಲಿ, ನಮ್ಮ ಸಮಾಜಗಳಲ್ಲಿ ಜವಾಬು ಇಲ್ಲ ಎನ್ನುವುದೇ ಕಟು ವಾಸ್ತವವಾಗಿದೆ.” ಇದು ರಾಜೇಂದ್ರ ಚೆನ್ನಿಯವರು ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದ ಮಾತುಗಳು.

ಕೃತಿಯ ಲೇಖಕರಾದ ಡಿ ಎಸ್ ಚೌಗಲೆ ಅವರು ತಮ್ಮ ಮಾತಿನಲ್ಲಿ “ಸದರಬಜಾರ್' ನನ್ನ ಚೊಚ್ಚಲು ಕಾದಂಬರಿ. 1999ರಲ್ಲಿ 'ನೆರಳುಗಳು' (ಮೂಲ ಮರಾಠಿ: ಜಯವಂತ ದಳವಿ) ಅನುವಾದ ಕಾದಂಬರಿ ಬಂದಿತ್ತು. ಅದು ಮೊದಲು 'ಸುಧಾ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ನಂತರ ಪುಸ್ತಕ ರೂಪ ಪಡೆಯಿತು. ನಾಲ್ಕೈದು ಕಥಾಸಂಕಲನಗಳನ್ನು ನೀಡಿದ ನನ್ನಲ್ಲಿ ಕಾದಂಬರಿ ರಚಿಸುವ ಉಮೇದು ಮೊದಲಿನಿಂದಲೂ ಇದ್ದೇ ಇತ್ತು. ನಾಟಕ, ಚಿತ್ರಕಲೆ ನನ್ನ ಮೊದಲ ಪ್ರೀತಿ ಆಗಿದ್ದರೂ ಆಗಾಗ ನನ್ನ ಒಳಗುದಿಗೆ ಸೃಜನ ರೂಪ ನೀಡಲು ಕತೆಗಳನ್ನು ಬರೆಯುವ ಆಸರೆಯನ್ನು ಬಿಟ್ಟಿರಲಿಲ್ಲ. ಅದು ಇಂದಿಗೂ ಮುಂದುವರೆದಿದೆ.

ಗಡಿಯಂಚಿನ ನನ್ನ ಗ್ರಾಮೀಣ ಅನುಭವವನ್ನು ಒಂದು ಬೃಹತ್ ಕ್ಯಾನ್‌ವಾಸ್‌ನ ಕಾದಂಬರಿಯಲ್ಲಿ ರಚಿಸುವ ಆಸೆ ಹಲವಾರು ವರ್ಷಗಳಿಂದಲೂ ನನ್ನೊಳಗೆ ಬತ್ತದೇ ಒರತೆಯಾಗಿ ಜಿನುಗುತ್ತಲೇ ಇದೆ. ಆದರೆ ನಾಟಕ ಮತ್ತು ಚಿತ್ರಕಲೆಗಳ ಒತ್ತಡದಲ್ಲಿ ಅದನ್ನು ಮುಂದೂಡುತ್ತ ಬಂದಿರುವೆ. ಪಿಯುನಲ್ಲಿ ನನಗೆ ಕನ್ನಡ ಪಾಠ ಮಾಡಿದ ವಿದ್ಯಾ ಗುರುಗಳು ಮತ್ತು ಹಿರಿಯ ಸಾಹಿತಿಗಳಾದ ಚಂದ್ರಕಾಂತ ಪೋಕಳೆಯವರು, 'ಖರೆಗೂ ನೀನು ಕಂಡುಂಡ ಅನುಭವ ಜಗತ್ತು ದೊಡ್ಡದು...ಅದು ಇನ್ನೂ ಹಂಗ ನಿನ್ನೊಳಗ ಉಳದದ... ಕನ್ನಡ ಸಾಹಿತ್ಯ ಲೋಕಕ್ಕೆ ಬರಬೇಕು... ನಿನ್ನಲ್ಲಿ ಆ ಸೃಜನಶೀಲತೆಯ ಶಕ್ತಿ ಅದ... ಬರೀ...' ಎಂದು ಹೇಳುತ್ತಲೇ ಬಂದಿದ್ದರು. ಅದರ ಮೊದಲ ಹೆಜ್ಜೆಯಾಗಿ ಈ ಕಾದಂಬರಿ ರಚನೆ ಎನ್ನಬಹುದು.

ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ್‌ ಗೂ ಮುಂಚೆ ಒಂದು ಚಿಕ್ಕ ಪ್ರಾಕ್ಟಿಸ್ ಮ್ಯಾಚ್ ಆಡಿದಂತೆ ಈ 'ಸದರಬಜಾರ್' ಕಾದಂಬರಿಯ ರಚನೆ ಎನ್ನಬಹುದು. ತದನಂತರ ಮಹಾಕಾದಂಬರಿಯ ಕನಸು ಶೀಘ್ರ ನನಸಾಗುವುದು.

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದಲ್ಲಿಯದು. ಅಂದಿನ ಗಡಿಯ ಈಚೆ ಮತ್ತು ಗಡಿಯ ಆಚೆಯ ಬದುಕು ಮತ್ತು ಸಮಾಜವು ಭಾಷೆಯ ಎಲ್ಲೆಯನ್ನು ಮೀರಿ ಜೀವಿಸಿದೆ. ಆ ಬದುಕಿನ ಹಲವು ಮಗ್ಗುಲಗಳ ಮಾನವೀ ಸಂಘರ್ಷ, ಅಸ್ಮಿತೆ, ಅಸಹಾಯಕ ಸ್ಥಿತಿಗಳು, ಹಸಿವು, ಕಾಮ, ಉದ್ಯೋಗ, ರಾಜಕಾರಣ, ಅರ್ಥ ಕಾರಣಗಳನ್ನು ಹಿಡಿದಿಡುವ ಪ್ರಾಮಾಣಿಕ ಯತ್ನವು ಕಾದಂಬರಿಯಲ್ಲಿದೆ. ಕಥಾನಾಯಕ ಒಂದು ಅಸೈನ್‌ಮೆಂಟ್‌ಗಾಗಿ ಗಡಿಯ ಆಚೆ ಸಂಚರಿಸುತ್ತಾನೆ. ಆತನು ಅನುಭವಿಸಿದ, ಅನುಭವಿಸುತ್ತ ಸಾಗುವ ಬದುಕು 'ಟ್ರಾವಲಾಗ್' ಮೂಲಕ ಕಾದಂಬರಿಯಲ್ಲಿ ತೆರೆದುಕೊಳ್ಳುತ್ತ ಸಾಗುತ್ತದೆ. ಬೆಡಗಿನಹಳ್ಳಿಯಿಂದ ಸದರಬಜಾರ್ ತನಕದ ಪಯಣವದು.

ಸದರ ಎಂದರೆ ಮುಖ್ಯ, ಪ್ರಧಾನವೆಂದರ್ಥ. ಮುಖಿಯಾ, ಪ್ರಮುಖ ಎಂತಲೂ ಆಗುತ್ತದೆ. ಉದಾಹರಣೆಗೆ ಮಸಜಿದ್ ಅಥವಾ ಅಂಜುಮನ್ ಕಾ ಸದರ, ಅಂದರೆ ಮಸೀದಿ ಅಥವಾ ಆಂಜುಮನ್ ಮುಖ್ಯಸ್ಥ ಎಂದಂತೆ. ಇದು ಪರ್ಶಿಯನ್ ಪದ. ಕಾಲಾಂತರದಲ್ಲಿ ಸದರ ಪದ ಬಜಾರ್ ಸಂಗಡ ಕೂಡಿ ಭಿನ್ನ ರೂಪಾರ್ಥಕ್ಕೆ ಹೊರಳಿರಬಹುದು. ದೇಶದ ಬಹುತೇಕ ಸದರಬಜಾರ್‌ಗಳು ವೇಶ್ಯೆಯರ ಅಡ್ಡಾಗಳಾಗಿರಲೂಬಹುದು.” ಎಂದು ಅಭಿಪ್ರಾಯ ಪಟ್ಟಿದ್ದಾರೆ.