ಸದಾಚಾರಕ್ಕೆ ಯಾಕೆ ಲಿಂಗಭೇಧ?

ಸದಾಚಾರಕ್ಕೆ ಯಾಕೆ ಲಿಂಗಭೇಧ?

ಬರಹ

ಸನಾತನ ಸಂಸ್ಕೃತಿಯ ತವರೂರೆಂದು ಬಣ್ಣಿಸಲ್ಪಡುವ ನಮ್ಮೀ ದೇಶದಲ್ಲಿ ಹೆಣ್ಣಿನ ಮೇಲಿನ ಶೋಷಣೆಗೂ ಕೂಡಾ ಸಂಸ್ಕೃತಿಯಷ್ಟೇ ಪುರಾತನವಾದ ಇತಿಹಾಸವಿದೆ. 'ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ !'ಎಂದು ಹೇಳಿದ ಮನುವಿನ ಮಾತನ್ನು 'ಹೆಣ್ಣಿಗೆ ಸ್ವಾತಂತ್ರ್ಯವಿಲ್ಲ' ಎಂಬುದಾಗಿ ಅರ್ಥ ಮಾಡಿಕೊಂಡಿರುವ 'ನಾವುಗಳು' ಅವಳನ್ನು ಪುರುಷ ಪ್ರಧಾನ ಸಮಾಜದಲ್ಲಿ ದೌರ್ಜನ್ಯಕ್ಕೊಳಪಡಿಸುತ್ತಾ ಬಂದಿದ್ದೇವೆ. ಸ್ತ್ರೀಗೆ ಯಾವಾಗಲೂ ಪುರುಷನು ತಂದೆಯ, ಸಹೋದರನ, ಗಂಡನ ಹಾಗೂ ಮಗನ ರೂಪದಲ್ಲಿ ರಕ್ಷಣೆ ನೀಡಬೇಕೇ ಹೊರತು ಆಕೆ ಹೆಣ್ಣೆಂಬ ಕಾರಣಕ್ಕೆ ಆಕೆಯ ಮೇಲೆ ದಬ್ಬಾಳಿಕೆ ನಡೆಸುವುದು ಯಾವ ನ್ಯಾಯ? ಸ್ತ್ರೀ ಪುರುಷರಿಬ್ಬರೂ ಒಂದೇ ನಾಣ್ಯದ ಮುಖಗಳಂತಿರುವಾಗ ಇವರಿಬ್ಬರ ನಡುವೆ ತಾರತಮ್ಯವೇಕೆ?

ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹ, ಸತೀ ಸಹಗಮನ ಪದ್ದತಿ ಮೊದಲಾದ ಪದ್ದತಿಗಳಿಗೆ ಬಲಿಪಶುವಾಗಿದ್ದ ಭಾರತೀಯ ನಾರಿಯು ಇಂದು ಸಮಾನತೆಗಾಗಿ ಹೋರಾಟ ನಡೆಸಿ ಪುರುಷನೊಂದಿಗೆ ಭುಜಕ್ಕೆ ಭುಜ ಕೊಟ್ಟು ನಿಲ್ಲುವ ತಾಕತ್ತು ಲಭ್ಯವಾಗಿಸಿಕೊಂಡಿದ್ದ್ದರೂ, ಸಂಸ್ಕೃತಿಯ ನೆಪದಲ್ಲಿ ಆಕೆಯ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಯಾಕೆಂದರೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ಪ್ರಕರಣವೇ ಇದಕ್ಕೆ ಸ್ಪಷ್ಟ ಉದಾಹರಣೆ. ಹೆಣ್ಣಿನ ಮೇಲೆ ದೌರ್ಜನ್ಯ ಶೋಷಣೆಗಳು ಇಂದು ನಿನ್ನೆಯ ಘಟನೆಗಳಲ್ಲ. ಎಳೆ ಶಿಶುವಿನಿಂದ ಹಿಡಿದು ವೃದ್ಧೆಯ ವರೆಗೆ ಹೆಣ್ಣು ಶೋಷಣೆಗೊಳಗಾಗಿದ್ದಾಳೆ, ಶೋಷಣೆಗೊಳಗಾಗುತ್ತಿರುತ್ತಾಳೆ. ಇದಕ್ಕೆಲ್ಲಾ ಕಾರಣವೇನು? ಜಗತ್ತಿನ ಬದಲಾವಣೆಗಳೊಂದಿಗೆ ಭಾರತವೂ ಬದಲಾಗುತ್ತಾ , ಅಭಿವೃದ್ಧಿ ಹೊಂದುತ್ತಾ ಬಂದರೂ ನಾವೆಲ್ಲ ಅಜ್ಜ ನೆಟ್ಟಾಲಕ್ಕೆ ಜೋತು ಬೀಳುವ ಮಂದಿಗಳಂತೆ, ಓಬೀರಾಯನ ಕಾಲದಲ್ಲಿ ನಾವೇ ಸ್ವಯಂ ಸೃಷ್ಟಿಸಿದ ಕಟ್ಟಳೆಗಳಿಗೆ ಬದ್ಧರಾಗುತ್ತಿದ್ದೇವೆ ಅಲ್ಲವೇ?

ಓರ್ವ ಹೆಣ್ಣು ಶಿಶು ಜನಿಸಿದ ಕೂಡಲೇ ಮಂಡೆ ಬಿಸಿ ಮಾಡಿಕೊಳ್ಳುವ ಮಾತಾಪಿತರು ಗಂಡು ಶಿಶು ಜನನ ಎಂದ ಕೂಡಲೇ ಬಾಯಿ ಸಿಹಿ ಮಾಡಿಕೊಳ್ಳುತ್ತಾರೆ. ಹೆಣ್ಣು ಎಂದರೆ ನಷ್ಟ, ಕುಟುಂಬಕ್ಕೆ ಭಾರ ಎನ್ನುವ ನಿಟ್ಟಿನಲ್ಲಿ ಗರ್ಭದಲ್ಲಿರುವ ಹೆಣ್ಣು ಶಿಶುವಿನ ಕತ್ತು ಹಿಚುಕಲು ನಾವು ಹಿಂದೆ ಮುಂದೆ ನೋಡುವುದಿಲ್ಲ. ಹೆಣ್ಣು ಎಂದರೆ ಖರ್ಚಿನ ಪರ್ಯಾಯ, ಗಂಡೆಂದರೆ ಆದಾಯ ಎಂಬ ನಮ್ಮ ನಿಲುವುಗಳಿಂದಾಗಿ ಎಷ್ಟೋ ಕಂದಮ್ಮಗಳು ಬೆಳಕು ಕಾಣುವ ಮುನ್ನ ಕರಟಿ ಹೋಗಿವೆ. ಭ್ರೂಣ ಹತ್ಯೆಯನ್ನು ತಡೆಗಟ್ಟುವ ಸಲುವಾಗಿ ಜನರಿಗೆ ಈ ಬಗ್ಗೆ ತಿಳುವಳಿಕೆ ನೀಡಿ ಜಾಗೃತರನ್ನಾಗಿ ಮಾಡಿದರೂ, ಕೆಲವೊಂದು ಪ್ರದೇಶಗಳಲ್ಲಿ ಇಂದಿಗೂ ಭ್ರೂಣ ಹತ್ಯೆಗಳು ನಡೆದು ಬರುತ್ತಿವೆ ಎಂಬುದು ನೈಜ ಸಂಗತಿ. ಅದೇ ವೇಳೆ ಹೆಣ್ಣು ಮಗುವಿನ ಜನನದಿಂದಾಗಿ ಕುಟುಂಬ ನಿರ್ವಹಣೆ ಕಷ್ಟಕರವೆಂದು ಕೆಲವೊಂದು ವಿದ್ಯಾವಂತರು ಕೂಡಾ ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವುದು ಖೇದಕರ. ಈ ಬಗ್ಗೆ ಸರಕಾರವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ, ಕಾನೂನಿನ ಕಣ್ಣು ತಪ್ಪಿಸಿ ಇಂತಹ ಪ್ರಕರಣಗಳು ಅದೆಷ್ಟೋ ನಡೆಯುತ್ತಿರುವುದು ಸತ್ಯ ಸಂಗತಿ.

ಇನ್ನು, ಮಗಳು ಕೌಮಾರಾವಸ್ಥೆಗೆ ಬಂದರಂತೂ ಮಾತಾಪಿತರ ತಲೆ ನೋವು ಹೇಳತೀರದು. ಅದಕ್ಕಾಗಿಯೇ ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹವನ್ನು ನೆರವೇರಿಸಿ ಆದಷ್ಟು ಬೇಗನೆ ತಮ್ಮ ಮಗಳನ್ನು ವಿವಾಹ ಬಂಧನದಲ್ಲಿ ಬಂಧಿಸುತ್ತಿದ್ದರು. ಏನೇನೂ ತಿಳಿಯದೇ ಇರುವ ಆ ಮುಗ್ಧ ವಯಸ್ಸಿನಲ್ಲಿ ಕುಟುಂಬವನ್ನು ನಿರ್ವಹಿಸಬೇಕಾದ ಹೊಣೆ ಅವಳ ಮೇಲಿರುತ್ತಿತ್ತು. ವಿವಾಹ ನಂತರ ಆಕೆ ತನ್ನ ಗಂಡನ ಮನೆಯಲ್ಲಿ ಹಲವಾರು ರೀತಿಯ ಶೋಷಣೆಗೊಳಗಾಗುವುದು ಇದ್ದೇ ಇರುತ್ತದೆ. ಬಾಲ್ಯ ವಿವಾಹವು ನಿಷಿದ್ದವಾಗಿದ್ದರೂ, ಇಂದಿಗೂ ಅದು ಚಾಲ್ತಿಯಲ್ಲಿದೆ. ('ಬಾಲಿಕಾ ವಧು' ಧಾರವಾಹಿ ಹಿಟ್ ಅನಿಸಿದ್ದು ಇದೇ ಕಾರಣವಾಗಿರಬಹುದಾ?) ಇದಕ್ಕೂ ಕಾನೂನುಗಳಿದ್ದರೂ, ಕೆಲವೊಮ್ಮೆ ವಿದ್ಯಾವಂತರ, ಸಚಿವರ ಸಮ್ಮುಖದಲ್ಲಿಯೇ ಇಂತಹಾ ವಿದ್ಯಮಾನಗಳು ನಡೆದರೂ ಒಮ್ಮೆ ಸುದ್ದಿಯಾಗಿ ಮತ್ತೆ ರದ್ದಿಯಾಗಿ ಬಿಡುತ್ತವೆ. ಈ ಬಾಲ್ಯ ವಿವಾಹವೆಂಬ ಪಿಗುಡಿನಿಂದಾಗಿ ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಮೈ ನೆರೆಯುವ ಮುನ್ನವೇ ಗಂಡನ ತೆಕ್ಕೆ ಸೇರಬೇಕಾದ ಪರಿಸ್ಥಿತಿ, ಅಡುಗೆ ಮನೆಯಿಂದ ಹಿಡಿದು ಹಾಸಿಗೆಯ ವರೆಗೆ, ಅತ್ತೆ, ನಾದಿನಿ, ಗಂಡ ಹೀಗೆ ಎಲ್ಲರೂ ಆಕೆಯನ್ನು ಕಾಲಡಿಯ ಕಸದಂತೆ ನೋಡಿಕೊಳ್ಳುವಾಗ ದುಃಖಾಗ್ನಿಯಲ್ಲಿಯೇ ಬೇಯುತ್ತಿರುವ ಆ ಬಾಲೆ ಕೆಲವೊಮ್ಮೆ ಸ್ವಯಂ ಜೀವಕಳೆದುಕೊಳ್ಳುತ್ತಾಳೆ, ಇಲ್ಲವೇ ಕೊಲೆಯಾಗುತ್ತಾಳೆ. ಇಂತಹ ಪ್ರಕರಣಗಳು ಸಾಕಷ್ಟು ನಡೆದಿವೆ ನಡೆಯುತ್ತಾ ಬರುತ್ತಿವೆ. ಇದಕ್ಕೆ ಹೊಣೆಗಾರರು ಯಾರು? ಎಲ್ಲದಕ್ಕೂ ಕಾನೂನು ಇದ್ದರೂ, ಕಾನೂನನ್ನು ಮೀರುವುದು ಹೇಗೆ ಎಂಬುದರ ಬಗ್ಗೆಯೇ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವವರಲ್ಲವೇ ನಾವು? ಕೆಲವೊಂದು ಪ್ರಕರಣಗಳು ಸುಖಾಂತ್ಯವನ್ನು ಕಂಡರೂ, ಅದೆಷ್ಟೋ ಪ್ರಕರಣಗಳಲ್ಲಿ ಕೊಲೆಯನ್ನು ಆತ್ಮಹತ್ಯೆಯಾಗಿ ಬಿಂಬಿಸಿ ಕೈ ತೊಳೆಯುವ ಘಟನೆಗಳೇ ಜಾಸ್ತಿ.

ಅಂತೂ ಇಂತು ಮದುವೆ ಆದ ಮೇಲೂ ಹೆಣ್ಣಿನ ಮೇಲಿನ ಶೋಷಣೆ ತಪ್ಪಿದ್ದಲ್ಲ. ಗಂಡನ ಮನೆಯಲ್ಲಿ ಏನೇ ಆದರೂ ಸಹಿಸಬೇಕೆಂದು ಅಮ್ಮ ಕಿವಿಯಲ್ಲಿ ಉಸುರಿದ್ದನ್ನು ನೆನೆದುಕೊಂಡೇ ಭಾರತದ ಹೆಚ್ಚಿನ ಹೆಣ್ಣು ಮಕ್ಕಳು ಸುಮ್ಮನಾಗುತ್ತಾರೆ. ಅವರ ಈ ಮೌನವೇ ಹಲವಾರು ಅನಾಹುತಕ್ಕೆ ಕಾರಣವಾಗಿ, ಮದುವೆಯಾದ ಮೇಲೆ ಅನುಭವಿಸಬೇಕಾದ ಶೋಷಣೆಗಳ ಪಟ್ಟಿ ಹೀಗೆ ಬೆಳೆಯುತ್ತಾ ಹೋಗುತ್ತದೆ. ಸತೀ ಸಹಗಮನ ಪದ್ದತಿ ಇಲ್ಲದೇ ಇದ್ದರೂ ಪತಿಯ ಮರಣಾನಂತರ ಸತಿಯಾದವಳು ಹಲವಾರು ರೀತಿಯ ಶೋಷಣೆಗೆ ಒಳಪಡಬೇಕಾದ ಪರಿಸ್ಥಿತಿ ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇರುತ್ತದೆ. ಇದು ಮಾತ್ರವಲ್ಲದೆ ಪ್ರಸ್ತುತ ಕಾಲದಲ್ಲಿ ಹೆಣ್ಣು ಗಂಡನ ಮನೆಯಲ್ಲಿ ಶೋಷಣೆಗೊಳಗಾದರೆ ವಿವಾಹ ವಿಚ್ಛೇದನ ಪಡೆದುಕೊಳ್ಳಬಹುದು. ಆದರೆ ವಿವಾಹ ವಿಚ್ಛೇದನ ಪಡೆಯದೆಯೆ ಮನೆಯ ಮರ್ಯಾದೆ ಉಳಿಸಿಕೊಳ್ಳಲು ಸಾಂಪ್ರದಾಯಿಕ ಮನೆತನದ ಮಕ್ಕಳು ಹೆಣಗಾಡುತ್ತಿರುವುದಿಲ್ಲವೇ? ಒಂದು ವೇಳೆ ಅಂತಹಾ ಶೋಷಣೆಗಳಿಂದ ಮುಕ್ತಿಗೊಳಿಸಿ ಮಗಳನ್ನು ತವರಿಗೆ ಕರೆದುಕೊಂಡು ಬಂದರೆ ಅದೂ ತಪ್ಪೇ. ಇಂತಹ ಪರಿಸ್ಥಿತಿಗಳು ಹಳ್ಳಿಗಳ ಸಂಪ್ರದಾಯಸ್ಥರ ಕುಟುಂಬಗಳಲ್ಲಿ ನಡೆದರೆ ನಗರ ನಿವಾಸಿಗಳ ಕತೆಯೇ ಬೇರೆ. ತನಗೆ ಬೇಕೆಂದಾಗ ಗಂಡನ (ಮದುವೆಯಾಗಿ ಅಥವಾ ಮದುವೆಯಾಗದೆಯೆ ಇರುವ) ಜೊತೆ ಜೀವನ ಸಾಗಿಸಬಹುದು ಇಲ್ಲವೇ ಡೈವೋರ್ಸ್ ನೀಡಿ ಇನ್ನೊಬ್ಬನನ್ನು ವರಿಸಿದರೂ ಯಾರಿಗೂ ಏನೂ ಅಭ್ಯಂತರವಿರುವುದಿಲ್ಲ. ಆದರೆ ಹಳ್ಳಿಯಲ್ಲಿರುವ ಹುಡುಗಿಯರ ಪಾಡು? ಪತಿಯೇ ದೈವವೆಂದು ಶೋಷಣೆಯನ್ನು ಸಹಿಸುತ್ತಾ ಕೂರುವಾಗ, ಶೋಷಣೆ ನಡೆಸುವ ಪುರುಷರಿಗೆ ಸಲಹೆ ನೀಡಲು ಸಂಸ್ಕೃತಿಯ ರಕ್ಷಕರೆಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳುವವರು ಮುಂದೆ ಬರುವುದಿಲ್ಲವೇಕೆ? ಬಾಲ್ಯ ವಿವಾಹ, ಸತೀ ಸಹಗಮನ ಪದ್ದತಿ, ಹೆಣ್ಣು ಭ್ರೂಣ ಹತ್ಯೆ , ದೇವದಾಸಿ ಪದ್ಧತಿ ಮೊದಲಾದ ಸಾಮಾಜಿಕ ಪಿಗುಡುಗಳ ವಿರುದ್ಧ ಹೋರಾಡಲು ಜನರು ಸಾಕ್ಷರರಾಗಿರಬೇಕು ಅಲ್ಲವೇ? ಆದರೆ ನಮ್ಮ ದೇಶದ ಜನತೆ ಸಾಕ್ಷರತೆಯನ್ನು ಗಳಿಸಿದ ನಂತರವೂ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆಗಳು ಕಡಿಮೆಯಾಗಿದೆಯೇ? ಅದು ಮಾತ್ರವಲ್ಲದೆ ಸಾಕ್ಷರತೆ ಹೊಂದಿದ ನಗರಗಳಲ್ಲಿಯೇಕೆ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತದೆ? ಹಳ್ಳಿಗಳಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದರೆ 'ನಾಯಿ ಮುಟ್ಟಿದ ಮಡಕೆಯಂತೆ' ಆಕೆಯನ್ನು ದೂರವಿರಿಸುವಾಗ ಅಥವಾ ಆಕೆಯನ್ನು ಬೆಲೆವೆಣ್ಣಾಗಿ ಚಿತ್ರಿಸುವಾಗ, ಹಲವರೊಡನೆ ಹಾಸಿಗೆ ಹಂಚಲು ಪ್ರೇರಿಪಿಸುವಾಗ ಸಂಸ್ಕೃತಿಗೆ ಧಕ್ಕೆಯಾಗುವುದಿಲ್ಲವೇ? ಸ್ತ್ರೀಯರನ್ನು ಗೌರವಿಸುತ್ತಿರುವ ನಮ್ಮ ನಾಡಿನಲ್ಲಿ ಸ್ತ್ರೀ ಅನುಭವಿಸುತ್ತಿರುವ ದೌರ್ಜನ್ಯಗಳಿಗೆ ಕೊನೆಯಿಲ್ಲ ಯಾಕೆ?

ಮತ್ತೆ ಸಮಾನತೆಯ ಪ್ರಶ್ನೆ !. ಸ್ತ್ರೀ-ಸಮಾನತೆ ಎಂದರೇನು? ಸ್ತ್ರೀಗೆ ಪುರುಷನಂತೆ ಸಮಾನ ಸ್ಥಾನ ಕಲ್ಪಿಸುವುದು ತಾನೇ? ಹಲವಾರು ಹೋರಾಟಗಳನ್ನು ನಡೆಸಿ, ವಿದ್ಯಾರ್ಜನೆಗೈದು ಇಂದು ಸ್ತ್ರೀ ಪುರುಷನಷ್ಟೇ, ಅಥವಾ ಅದಕ್ಕಿಂತಲೂ ಮೇಲಿನ ದರ್ಜೆಯನ್ನು ಗಿಟ್ಟಿಸಿಕೊಂಡಿದ್ದಾಳೆ. ಸಮಾನತೆಗೆ ವಿದ್ಯಾಭ್ಯಾಸವೊಂದೇ ದಾರಿ ಎಂದು ಸ್ತ್ರೀ ವಿದ್ಯಾಭ್ಯಾಸಕ್ಕೆ ಸರಕಾರವು ಹೆಚ್ಚು ಒತ್ತು ನೀಡಿದ್ದು, ಪರಿಣಾಮ ಇಂದು ಓರ್ವ ಹೆಣ್ಣು ಮಗಳು ಕೇವಲ ಕುಟುಂಬ ಮಾತ್ರವಲ್ಲ ದೇಶವನ್ನಾಳುವ ಅಧಿಕಾರ, ಬಾಹ್ಯಾಕಾಶದಲ್ಲಿ, ಯುದ್ಧವಿಮಾನದಲ್ಲಿ, ಜಲಾಂತರ್ಗಾಮಿಗಳಲ್ಲಿ, ಸಂಶೋಧನೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಾನು ಸೈ ಎಂದೆನಿಸಿಕೊಂಡಿದ್ದಾಳೆ. ಇಷ್ಟೆಲ್ಲಾ ಅಭಿವೃದ್ದಿ ಹೊಂದಿದರೂ ಪುರುಷರ ದಬ್ಬಾಳಿಕೆ ಕಡಿಮೆಯಾಗಿದೆಯೇ? ಇತ್ತೀಚೆಗೆ ಮಂಗಳೂರು ಪಬ್ ಮೇಲೆ ನಡೆದ ದಾಳಿಯನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ.

ಅದೇನೋ ಸಂಸ್ಕೃತಿಯ ರಕ್ಷಣೆ ಎಂಬ ನೆಪದಲ್ಲಿ ಶ್ರೀರಾಮ ಸೇನೆ ಪಬ್್ಗೆ ದಾಳಿ ನಡೆಸಿ ಅಲ್ಲಿರುವ ಮಹಿಳೆಯರ ಮೇಲೆ ಹಲ್ಲೆ ಕೂಡಾ ನಡೆಸಿತು. ಈ ಘಟನೆಗೆ ಶ್ರೀರಾಮ ಸೇನೆ ನೀಡಿದ ಸಮಜಾಯಿಷಿ-ಭಾರತೀಯ ಸಂಸ್ಕೃತಿಯ ಉಳಿಕೆ. ಭಾರತೀಯ ನಾರಿಯರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಪಬ್್ಗೆ ಹೋಗುವುದು, ಮದ್ಯ ಸೇವನೆ ನಮ್ಮ ಸಂಸ್ಕೃತಿಯಲ್ಲ. ಅದಕ್ಕಾಗಿಯೇ ಪಬ್್ನಲ್ಲಿರುವ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ. ಸರಿ, ಭಾರತೀಯ ಸಂಸ್ಕೃತಿಯನ್ನು ಕಾಯ್ದುಕೊಂಡು ಬರಬೇಕಾದುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ತಾನೇ?, ಅದಕ್ಕಾಗಿ ಈ ರೀತಿ ದಬ್ಬಾಳಿಕೆ ನಡೆಸಬೇಕೆ?. ಸ್ತ್ರೀಯರು ಪಬ್್ಗೆ ಹೋಗಿ ಮದ್ಯಪಾನ ಮಾಡುವುದು, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಾದರೆ ಪುರಾಣಗಳಲ್ಲಿ ದೇವ ದೇವತೆಗಳು ಮದಿರಾಪಾನ ಮಾಡುತ್ತಿರಲಿಲ್ಲವೇ? ಇಂದಿಗೂ ಭಾರತದ ಹಳ್ಳಿಗಳಲ್ಲಿ ಕೆಲವು ಸಾಂಪ್ರದಾಯಿಕ ಆಚರಣೆಗಳಲ್ಲಿ ಹೆಣ್ಣು ಗಂಡೆಂಬ ಬೇಧವಿಲ್ಲದೆ ಒಗ್ಗೂಡಿ ಮದ್ಯ ಸೇವಿಸುವ ಪದ್ದತಿಯೂ ಇದೆ. ಇದನ್ನೂ ಕೂಡಾ ಪಾಶ್ಚಿಮಾತ್ಯರ ಅನುಕರಣೆ ಎಂದು ಕರೆಯಬಹುದೇ? ನಗರದ ಹೆಣ್ಣು ಮಕ್ಕಳ ಉಡಿಗೆ ತೊಡಿಗೆ, ಚಲನವಲನಗಳಲ್ಲಿ ಕಣ್ಣು ನೆಟ್ಟಿರುವ ಸಂಸ್ಕೃತಿಯ ರಕ್ಷಕರಿಗೆ ಹಳ್ಳಿ ಊರುಗಳಲ್ಲಿ ಶೌಚಾಲಯಗಳಿಲ್ಲದೆ ಅತ್ತ ಇತ್ತ ನೋಡಿಕೊಂಡು ಭಯದಿಂದಲೇ ಶೌಚಕ್ಕಾಗಿ ತೆರೆದ ಮೈದಾನದಲ್ಲಿ ಕುಕ್ಕರಿಸಿಕೊಳ್ಳುವ ಮಹಿಳೆಯರ ಮೇಲೆ ಅನುಕಂಪ ಹುಟ್ಟುವುದಿಲ್ಲವೇಕೆ?

ಪಬ್್ಗೆ ಹೋಗ ಬೇಕೋ ಬೇಡವೋ ಎಂಬುದು ಅವರವರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು, ಕಳೆದ ಫೆ. 25ರಂದು ವಾರ್ತಾ ಪತ್ರಿಕೆಯೊಂದು ಸುಶ್ಮಾ ಸ್ವರಾಜ್್ರೊಂದಿಗಿನ ಸಂದರ್ಶನವನ್ನು ಪ್ರಕಟಿಸಿತ್ತು. ಅದರಲ್ಲಿ ಸುಶ್ಮಾ ಸ್ವರಾಜ್ ಅವರು ಹೇಳುವಂತೆ ತನ್ನ ಮಕ್ಕಳು ಪಬ್್ಗೆ ಹೋಗಲೋ ಬೇಡವೋ ಈ ಬಗ್ಗೆ ಹೆತ್ತವರು ತೀರ್ಮಾನ ಕೈಗೊಳ್ಳಬೇಕು. ಮಕ್ಕಳನ್ನು ನಿಯಂತ್ರಿಸುವ ಹಕ್ಕು ಕೇವಲ ಹೆತ್ತವರಿಗೆ ಇದೆ. ಅದೇ ವೇಳೆ ಸಂಸ್ಕೃತಿಯ ನೆಪ ಹೇರಿ ಪಬ್್ಗೆ ಹೋಗುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಅಷ್ಟು ಮಾತ್ರಕ್ಕೆ ಸದಾಚಾರದ ವಿಷಯವನ್ನು ಎತ್ತಿ ಹಿಡಿದು ಹೆಂಗೆಳೆಯರು ಪಬ್್ಗೆ ಹೋಗಬಾರದು, ಮದ್ಯಪಾನ ಮಾಡಬಾರದು ಎಂದು ಹೇಳುವ ಪುರುಷ ವರ್ಗ, ಪಬ್್ಗೆ ಹೋಗುವುದು ಮದ್ಯಪಾನ ಮಾಡುವುದು ಸರಿಯೇ? ಸದಾಚಾರದಲ್ಲಿಯೂ ಮಹಿಳೆ ಪುರುಷನೆಂಬ ಲಿಂಗಭೇಧವಿದೆಯೇ? ಮದ್ಯಸೇವನೆ ಹಾನಿಕರ, ಅದು ದುಷ್ಚಟ, ವಿದೇಶಿ ಅನುಕರಣೆ ಎಂದೆಲ್ಲಾ ಬಣ್ಣಿಸಿದ ಶೂರರು, ಇದು ಮಹಿಳೆಯರು ಮಾಡುತ್ತಿರುವ ಘೋರ ತಪ್ಪು ಎನ್ನುವುದಾದರೆ ಅದೇ ತಪ್ಪನ್ನು ಪುರುಷವರ್ಗ ಆವರ್ತಿಸುವುದೇಕೆ? ಪುರುಷ ಯಾ ಮಹಿಳೆ,ತಪ್ಪು ಯಾರೇ ಮಾಡಿದರೂ ಅದು ತಪ್ಪೇ ಅಲ್ಲವೇ? ಪುರುಷರ ತಪ್ಪುಗಳಿಗೇನು ರಿಯಾಯಿತಿ ಇದೆಯೇ? ಏನೇ ತಪ್ಪು ಮಾಡಿದರೂ ಅವ ಪುರುಷ ಎಂಬ ನಿಟ್ಟಿನಲ್ಲಿ ಆತನ ತಪ್ಪನ್ನು ಮನ್ನಿಸಲಾಗುತ್ತದೆ. ಎಲೆ ಮುಳ್ಳಿನ ಮೇಲೆ ಬಿದ್ದರೂ, ಮುಳ್ಳು ಎಲೆಯ ಮೇಲೆ ಬಿದ್ದರೂ ಹಾನಿಗೊಳಗಾಗವುದು ಎಲೆಯಲ್ಲವೇ? ಎಂಬಂತೆ ಎಲ್ಲದಕ್ಕೂ ಹೆಣ್ಣನ್ನು ದೂರಲಾಗುತ್ತದೆ ಇಲ್ಲವೆ ಸುಮ್ಮನೆ ಬಾಯ್ಮುಚ್ಚಿಸಿ ಕುಳ್ಳಿರಿಸಲಾಗುತ್ತದೆ.

ನಾವು ಪುರುಷ ಪ್ರಧಾನ ಸಮಾಜದಲ್ಲಿ ಜೀವಿಸುವವರು. ಅದಕ್ಕಾಗಿಯೇ ಬಹು ಹಿಂದಿನ ಕಾಲದಿಂದಲೇ ನಾವು ನಮ್ಮದಾದ ಕೆಲವು ಕಟ್ಟಳೆಗಳ 'ಲಕ್ಷ್ಮಣ ರೇಖೆ'ಗಳನ್ನು ಎಳೆದು ಸ್ತ್ರೀ ವರ್ಗವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದೇವೆ. ಪಬ್್ಗೆ ಹೋಗುವುದು ಸಂಸ್ಕೃತಿಗೆ ಧಕ್ಕೆ , ಅದು ಮಹಾ ಪಾಪ ಎಂದಾದರೆ ಗಂಡಸರಿಗೆ ಈ ಪಾಪ ಅಂಟುವುದಿಲ್ಲವೆ? ಸ್ತ್ರೀಗೆ ಸಮಾನತೆ ಇದೆ ಎಂದಾದರೆ ಆಕೆಗೆ ಪುರುಷನಂತೆ ಎಲ್ಲಾ ಸಮಾನ ಅವಕಾಶಗಳನ್ನು ನೀಡಬಾರದೇಕೆ? ಸ್ತ್ರೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಸಮಾನತೆ ಇರುವಾಗ ಕೆಲವೊಂದು ಕಟ್ಟಳೆಗಳನ್ನು ನಾವೇ ಸೃಷ್ಟಿಸಿ ಆಕೆಯನ್ನು ಬಂಧಿಯಾಗಿಸುವುದೇಕೆ? ಆಕೆಯನ್ನು ಸ್ವಚ್ಛಂದವಾಗಿ ಹಾರಾಡಲು ಬಿಡಬೇಕೆ ಹೊರತು ಕಟ್ಟಿಹಾಕಲು ಯಾರಿಗೂ ಹಕ್ಕಿಲ್ಲ.

ಅಂತೂ ಒಟ್ಟಿನಲ್ಲಿ ತಮ್ಮ ಹಕ್ಕಿಗಾಗಿ ಹೋರಾಡುವ ಮಹಿಳೆಯರ ಜೊತೆಗೆ ಪುರುಷ ತಾನೆಂಬ 'ಅಹಂ' ಅನ್ನು ಬದಿಗಿಟ್ಟು ಕೈಗೆ ಕೈ ಜೋಡಿಸಿದರೆ ಮಾತ್ರ ಸ್ವತಂತ್ರ ಭಾರತದಲ್ಲಿ ಹೆಣ್ಣು ಮಗಳು ನಿರ್ಭಯವಾಗಿ ಸಂಚರಿಸಲು ಸಾಧ್ಯ. ಮಹಿಳೆಯರಿಗೆ ರಕ್ಷಣೆ, ಸಮಾನತೆಯನ್ನು ನೀಡಿ ಆಕೆಯನ್ನು ಸ್ವಚ್ಛಂದವಾಗಿ, ನಿರ್ಭಯವಾಗಿ ದೇಶದಲ್ಲಿ ಸಂಚರಿಸುವಂತೆ, ಅವಳ ಹಕ್ಕಿಗೆ ಮಾನ್ಯತೆ ನೀಡುವ ಮೂಲಕ ಈ ವರ್ಷದ ಮಹಿಳಾ ದಿನಾಚರಣೆಯ ಧ್ಯೇಯಕ್ಕೆ ಪ್ರತಿಯೊಬ್ಬರೂ ಬದ್ಧರಾಗೋಣ ಹಾಗೂ ಈ ಮೂಲಕ ಗಾಂಧೀಜಿಯವರ ಕನಸಿನ ಭಾರತವನ್ನು ನಿರ್ಮಿಸೋಣ.