ಸದಾನಂದನ ‘ಅಳಿಲು ಸೇವೆ’ಯಿಂದಾಗಿ ಸತ್ತು ಬದುಕಿದ ಅಳಿಲು ಮರಿ.

ಸದಾನಂದನ ‘ಅಳಿಲು ಸೇವೆ’ಯಿಂದಾಗಿ ಸತ್ತು ಬದುಕಿದ ಅಳಿಲು ಮರಿ.

ಬರಹ

ಇತ್ತೀಚೆಗೆ ಧಾರವಾಡದಲ್ಲಿ ಲ್ಯಾರಿ ಬೇಕರ್ ಸೂಚಿತ ಮಾದರಿಯಲ್ಲಿ ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಮನೆಗಳನ್ನು ಕಟ್ಟಲು ಕೆಲವರು ಮೊದಲು ಮಾಡುತ್ತಿದ್ದಾರೆ. ಮನೆ ಕಟ್ಟುವ ಖರ್ಚು ಕಡಿಮೆ ಎನ್ನುವ ಸಮಾಧಾನ ಒಂದೆಡೆಯಾದರೆ, ನೈಸರ್ಗಿಕ ಗಾಳಿ, ಬೆಳಕು, ಗಿಡ-ಮರ ಬಳ್ಳಿಗಳಿಗೆ ಆಶ್ರಯ ನೀಡುತ್ತ, ಪ್ರಾಣಿ- ಪಕ್ಷಿ ಸಂಕುಲಕ್ಕೂ ತನ್ನ ಸೂರಿನಡಿ ನೆಮ್ಮದಿ ಕಲ್ಪಿಸಿದೆವಲ್ಲ ಎಂಬ ನೆಮ್ಮದಿ ಅವರದ್ದು.

ಬೈಫ್ ನಿರ್ದೇಶಕರು ಹಾಗು ಸದ್ಯ ದೇಶಪಾಂಡೆ ಪ್ರತಿಷ್ಠಾನದ ನಿರ್ದೇಶಕ ಡಾ. ಪ್ರಕಾಶ ಭಟ್ಟರ ಮನೆ ‘ಬಯಲು’, ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ಅವರ ಮನೆ ‘ಬದುಕು’ ಹಾಗೆಯೇ ಪ್ರೊ.ಗೋಪಾಲ ಕೃಷ್ಣ ಜೋಶಿ ಅವರ ‘ಶ್ರೀನಿವಾಸ’, ನಮ್ಮ ಡಾ.ಸಂಜೀವಣ್ಣ ಅವರ ತೆತ್ಸುಕೋ ಕೊರೋಯಾನಾಗಿ ಪ್ರೇರಿತ ತೊತ್ತೋಚಾನ್ ಮಾದರಿಯ ‘ಬಾಲ ಬಳಗ’ ಶಾಲೆ ಎಲ್ಲ ಕಡಿಮೆ ಖರ್ಚಿನ, ಪರಿಸರ ಸ್ನೇಹಿ, ಆಕರ್ಷಕ ಕಟ್ಟಡಗಳು.

ಮತ್ತೊಂದೆಡೆಗೆ ಅವಳಿ ನಗರದಲ್ಲಿ ಕಣ್ಣು ಕೋರೈಸುವ, ಲಕ್ಷಾಂತರ ರುಪಾಯಿ ಬೆಲೆ ಬಾಳುವ ಗಾಜುಗಳಿಂದ, ಪಾರದರ್ಶಕ ‘ಫೆಕೇಡ್’ ಹೊಂದಿದ ಪರಿಸರ ಅಸ್ನೇಹಿ ಕಟ್ಟಡಗಳು. ಮಾರುಕಟ್ಟೆ ತಜ್ಞರ ಪ್ರಕಾರ ಗ್ರಾಹಕರನ್ನು ಓಲೈಸಲು ಈ ಕಣ್ಣು ಕೋರೈಸುವಿಕೆ ಅನಿವಾರ್ಯವಂತೆ! ಆದರೆ, ಇದು ಶೈಕ್ಷಣಿಕ ಸಂಸ್ಥೆಗಳ ಕಟ್ಟಡಗಳಿಗೂ ಅನ್ವಯವಾಗಬೇಕೆ? ರಾಷ್ಟ್ರೀಯ ಶಿಕ್ಷಣ ನೀತಿಯ ಖಾದಿ ಶಾಲೆಗಳಲ್ಲಿ ಕಲಿತ ನನ್ನಂತಹವರಿಗೆ ಹೆಂಚಿನ ಶಾಲೆಗಳ ಮೇಲೆ ವಿಶೇಷ ಪ್ರೀತಿ. ಅಲ್ಲಿನ ಹಣ್ಣಿನ ಗಿಡಗಳು, ನೂರಾರು ಪಕ್ಷಿಗಳ ಕಲರವ, ಇಣಚಿಗಳ ಓಡಾಟ, ಅವುಗಳಿಂದ ನಮ್ಮ ಊಟದ ಡಬ್ಬಿ ಎಗರಿಸುವಿಕೆ, ಕಲ್ಲು ಛಡಿಗಳನ್ನೆತ್ತಿ ಬೆನ್ನಟ್ಟುವಿಕೆ, ರಬ್ಬರ್ ಕ್ಯಾಟಿ ಹಿಡಿದು ಗೆಳೆಯರೆಲ್ಲ ಸೇರಿ ಬೇಟೆಗೆ ಹೊರಡುತ್ತಿದ್ದ ರೀತಿ.. ನೆನಪುಗಳ ಜಾತ್ರೆಯ ಮೆರವಣಿಗೆ ನನ್ನ ಕಣ್ಣುಗಳ ಮುಂದೆ ಹರಿದಾಡುತ್ತದೆ. ರಾಮ ರಾವಣನನ್ನು ಕೊಂದು ಸೀತೆಯನ್ನು ರಕ್ಷಿಸಲು ವಾನರ ಸೇನೆಯೊಂದಿಗೆ ಹೊರಟು, (ಈಗಿನ ವಿವಾದಾತ್ಮಕ ಸೇತು ಸಮುದ್ರಂ ಯೋಜನೆ) ಶ್ರೀಲಂಕೆಗೆ ಸೇತುವೆ ಕಟ್ಟುವಾಗ ಅಳಿಲು ಮರಿ ತನ್ನ ಕೈಲಾದ ಅಳಿಲು ಸಹಾಯ ನೀಡಿತ್ತು ಎನ್ನುತ್ತದೆ ನಮ್ಮ ಪುರಾಣ. ಹಾಗಾಗಿ ಅಳಿಲಿನ ಭಕ್ತಿಗೆ ಮೆಚ್ಚಿ ಶ್ರೀ ರಾಮಚಂದ್ರ ಅಳಿಲಿನ ಬೆನ್ನಿನ ಮೇಲೆ ಮೂರು ಬೊಟ್ಟು ಕೈಯಾಡಿಸಿ ಪ್ರೀತಿ ಸ್ಫುರಿಸಿದ, ಹಾಗಾಗಿ ಅಳಿಲಿನ ಬೆನ್ನಿನ ಮೇಲೆ ಮೂರು ಬಿಳಿ ಗೆರೆಗಳಿವೆ ಎಂದು ಅಮ್ಮ ಹೇಳುತ್ತಿದ್ದ ಕಥೆಯೂ ನೆನಪಾಗುತ್ತಿತ್ತು.

ಈಗ ನಮ್ಮ ಅವಳಿ ನಗರಗಳಲ್ಲಿ ಕ್ರೀಡಾಂಗಣಗಳಿಲ್ಲದ ಶಾಲೆಗಳು ನೂರಾರಿವೆ. ಹಾಗೆಯೇ ಮಕ್ಕಳೆಲ್ಲ ಆಡುವುದನ್ನು ಬಿಟ್ಟಿದ್ದಾರೆ ಈಗ. ಕೇವಲ ಕಂಪ್ಯೂಟರ್ ಗೇಮ್ ಮಾತ್ರ ಅವರ ಪ್ರಾಧಾನ್ಯ. ಅದ್ಭುತ ಆಂತರಿಕ ಹಾಗು ಬಾಹ್ಯವಿನ್ಯಾಸದ ಕಣ್ಣುಕುಕ್ಕುವ ಕಟ್ಟಡದ ಶಾಲೆಗಳಿಗೆ ನನ್ನಲ್ಲಿ ಲೆಕ್ಕವಿಲ್ಲ. ಈ ಭೌತಿಕ ಅಭಿವೃದ್ಧಿ ನಮ್ಮ ಮಕ್ಕಳ ಆಂತರಿಕ ವ್ಯಕ್ತಿತ್ವವನ್ನು ವಿಶ್ವಮಾನವತ್ವದ ಅಭಿವೃದ್ಧಿ ಎಡೆಗೆ ಒಯ್ಯಬಲ್ಲುದೆ? ನಮ್ಮ ಮಣ್ಣಿನೊಂದಿಗೆ ಅವರ ಸಂಬಂಧ ಬಲಗೊಳ್ಳಬಲ್ಲುದೆ? ನಾನು ಹಿಂದೆ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಇಲಿ ಬಲಿಗೆ ಕೇಕ್ ಸಿಕ್ಕಿಸಿ ಗಿಡದ ಬುಡದಲ್ಲಿಟ್ಟು ಅಳಿಲಿನ ಮರಿ ಹಿಡಿದು, ಪಂಜರದಲ್ಲಿಟ್ಟು ಸಾಕುವ ಪ್ರಯತ್ನಕ್ಕೆ ಕೈ ಹಾಕಿದ್ದೆ. ಆದರೆ ಅಳಿಲು ಮರ ಇಳಿದು ಬರುವುದಕ್ಕಿಂತ ಮುಂಚೆ ನಮ್ಮ ಮನೆಯ ಬೆಕ್ಕಿನ ಮರಿ ಕೇಕ್ ರುಚಿ ನೋಡಲು ಹೋಗಿ ಮೂತಿ ಸಿಕ್ಕಿಸಿ ಕೊಂಡು ಒದ್ದಾಡಿತ್ತು. ಅಪ್ಪ ಅದನ್ನು ಬದುಕಿಸಲು ಹರ ಸಾಹಸ ಪಟ್ಟು, ಕೊನೆಗೂ ಬಲೆ ಬಿಡಿಸುತ್ತಲೇ ಅದು ಅವರನ್ನು ಕಚ್ಚಿ, ಕಿರುಚುತ್ತ ಓಡಿ ಹೋಗಿತ್ತು. ಆ ಮೇಲೆ ಅಪ್ಪ ನನ್ನ ಈ ಘನ ಕಾರ್ಯಕ್ಕೆ ಹಿಗ್ಗಾ-ಮುಗ್ಗಾ ಬಾರಿಸಿದ್ದರು. ನನ್ನ ಅಜ್ಜಿ ಬೆಕ್ಕಿಗೆ ಅರಿಷಿಣ ಎಣ್ಣಿ ಹಚ್ಚಿ ಅದರ ಗಂಟಲಿಗಾಗಿದ್ದ ದೊಡ್ಡ ಗಾಯ ಮಾಯಿಸಲು ಪಟ್ಟಿದ್ದ ಶ್ರಮ ಇಂದಿಗೂ ನನ್ನ ಕಣ್ಣ ಮುಂದಿದೆ.

ನಿನ್ನೆಯ ಕಥೆ ಕೇಳಿ: ಇಲ್ಲಿನ ಅಳಿಲಿನ ಮರಿಯೊಂದು ಗಿಡದ ಒಂದು ಟೊಂಗೆಯಿಂದ ಇನ್ನೊಂದು ಟೊಂಗೆಗೆ ಹಾರುತ್ತ, ಗಿಡದ ತುದಿಗಳಲ್ಲಿ ಕುಪ್ಪಳಿಸುತ್ತ, ಎಲೆಗಳ ಮೇಲೆ ಜೀಕುತ್ತ ಹಾರಿ ನಮ್ಮ ಕಟ್ಟಡದ ಅಲ್ಯುಮಿನಿಯಮ್ ಮತ್ತು ಗಾಜಿನ ಗೋಡೆಯನ್ನು ಹಿಡಿದುಕೊಳ್ಳಲು ನೆಗೆದಿದೆ. ಆದರೆ ಆಯ ತಪ್ಪಿ ನಾಲ್ಕನೇ ಅಂತಸ್ತಿನಿಂದ ತಲೆ ಕೆಳಗಾಗಿ ನೇರವಾಗಿ ನೆಲಕ್ಕೆ ಬಿದ್ದಿದೆ. ತಾಯಿ ಮತ್ತು ತಂದೆ ಅಳಿಲುಗಳು ಕೆಟ್ಟ ಧ್ವನಿ ತೆಗೆದು ಕಿರುಚಲು ಆರಂಭಿಸಿದವು. ಹೀಗೆ ಕಟ್ಟಡಗಳನ್ನು ಪರಿಸರ ಅಸ್ನೇಹಿಯಾಗಿ ರೂಪುಗೊಳಿಸುವ ಅಥವಾ ವಿನ್ಯಾಸಗೊಳಿಸುವ ಜರೂರತ್ತಾದರೂ ಏನು ನಮಗೆ?

ನಾನು ಹುಬ್ಬಳ್ಳಿಯಲ್ಲಿ ಕೆಲಸ ಮಾಡುವ ಮಹಾವಿದ್ಯಾಲಯದ ಎದುರು ಧೊಪ್ಪೆಂದು ಅಳಿಲಿನ ಮರಿಯೊಂದು ಆಯ ತಪ್ಪಿ ನಾಲ್ಕಾರು ಅಂತಸ್ತುಗಳ ಮೇಲಿಂದ ಟಾರ್ ರಸ್ತೆಯ ನೆಲಕ್ಕೆ ಬಿತ್ತು. ಬಿದ್ದ ರಭಸಕ್ಕೆ ಹಾಗು ಪೆಟ್ಟಿನಿಂದ ತತ್ತರಿಸಿದ್ದ ಮರಿ ಅಳಿಲು ನಡುಗುತ್ತ ದಾರಿಗಾಣದೇ ಬಿದ್ದ ಸ್ಥಳದಿಂದ ಕದಲದೇ ನಿಂತಿತು. ರಕ್ತ ಬಂತೇ ಎಂದು ಸುತ್ತಲಿದ್ದವರು ಗಮನಿಸುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ಬೀದಿ ನಾಯಿ ಅದನ್ನು ಕಬಳಿಸುವ ಹುನ್ನಾರದಲ್ಲಿ ಎಗರಿ ಬಂತು. ನಮ್ಮ ಸಿಬ್ಬಂದಿ ಸದಾನಂದ ಓಡಿ ಹೋಗಿ ಮರಿಯನ್ನು ಎತ್ತಿ ಕೊಂಡು ನಾಯಿ ಓಡಿಸಿದ. ಮಹಾವಿದ್ಯಾಲಯದ ಒಳಕ್ಕೆ ತಂದು ಇಣಚಿಯ ಮರಿಯ ಬೆನ್ನು ಸವರಿ ಉಪಚರಿಸಿದ. ನೀರು ಕುಡಿಸಿ ತುಸು ಸುಧಾರಿಸಿ ಕೊಳ್ಳುವಂತೆ ಮಾಡಿದ. ಪಾಪ ಕೃತಜ್ಞತೆ ದರ್ಶಿಸಲೋ ಏನೋ ಗಿಡದ ಬುಡದಲ್ಲಿ ಬಿಟ್ಟ ಮೇಲೂ ಅದು ಹೋಗದೇ ಸದಾನಂದನ ಬಳಿ ಓಡಿ ಬಂದು ಮತ್ತೆ ಎತ್ತಿ ಕೊಳ್ಳುವಂತೆ ಕೈ ಮುಗಿದ ಭಂಗಿಯಲ್ಲಿ ನಿಂತಿತ್ತು. ಆತ ಅದರ ತಲೆ ನೇವರಿಸಿ, ಭಾರವಾದ ಹೃದಯದೊಂದಿಗೆ ರಸ್ತೆ ದಾಟಿ ಈ ಬದಿಗೆ ಬಂದ.

ನಮ್ಮ ಅನುಕೂಲ, ಅವಶ್ಯಕತೆ ಪೂರ್ತಿಯಾದರೆ ಆಯಿತು? ನಮ ಹಕ್ಕು ಸಾಧಿಸಿದರೆ ಸಾಕಲ್ಲವೇ? ಪಾಪ ಅವುಗಳ ಪೈಕಿ ಯಾರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ನಮನ್ನು ಆಕ್ಷೇಪಿಸಬೇಕು? ಇದನ್ನೇ ‘HUMAN RIGHTS’ AS WELL AS ‘HUMAN WRONGS!’ ಎನ್ನಬಹುದಲ್ಲವೇ?

ನಾವು ಮುಟ್ಟಿದ ಮೇಲೆ ಆ ಅಳಿಲಿನ ತಂದೆ-ತಾಯಿಗಳು ಅದನ್ನು ಮುಟ್ಟಿಸಿಕೊಳ್ಳದೇ ಕಚ್ಚಿ ಕೊಂದು ಹಾಕುತ್ತವೇನೋ? ಎಂಬ ದುಗುಡ ನಮ್ಮಲ್ಲಿ ಮನೆ ಮಾಡಿತ್ತು. ಮಾನವರ ಬೆವರಿನ ವಾಸನೆ ಆ ಮರಿಯ ದೇಹದಿಂದ ಬಂದಿದ್ದೇ ಆದರೆ ಮರಿ ಅಳಿಲಿನ ಸಾವು ನಿಶ್ಚಿತ. ದೇವರ ದಯದಿಂದ ಹಾಗಾಗದಿರಲಿ ಎಂಬುದೇ ನಮ್ಮ ಹಾರೈಕೆ. ಆ ಸಂದರ್ಭದಲ್ಲಿ ಸದಾನಂದ ಗಿಡಗಳಿಗೆ ನೀರುಣಿಸುತ್ತಿದ್ದ, ಹಾಗಾಗಿ ಕೈ ಬೆವರಿನ ವಾಸನೆಯ ಬದಲು ನೀರಿತ್ತು ಎನ್ನುವುದೇ ಸಮಾಧಾನ. ಉಳಿದಿದ್ದು ಆ ಭಗವಂತನ ಇಚ್ಛೆ.

ನಮ್ಮ ಮಹಾವಿದ್ಯಾಲಯ ಇರುವ ಭೈಲಪ್ಪನವರ ನಗರದ ಮುಖ್ಯ ರಸ್ತೆಯುದ್ದಕ್ಕೂ ಅಕ್ಕ ಪಕ್ಕದಲ್ಲಿ ‘ದೇವರ ದಯೆ’ಯಿಂದ ಯಾವ ‘ದೆವ್ವದ ಕಣ್ಣಿ’ಗೂ ಬೀಳದೇ ದೊಡ್ಡ ಮರಗಳು ಇಂದಿಗೂ ಬದುಕುಳಿದಿವೆ ಎಂಬುದೇ ಸಮಾಧಾನದ ಸಂಗತಿ. ಬಾರಿ ಹಣ್ಣು, ಇಲಾಚಿ ಕಾಯಿ ಹಾಗು ಹುಣಿಸೆ ಹಣ್ಣಿನ ಗಿಡಗಳಿರುವುದರಿಂದ ಯಥೇಚ್ಛವಾಗಿ ಪಕ್ಷಿ ಹಾಗು ಅಳಿಲಿನ ಕುಟುಂಬಕ್ಕೆ ಸೇರಿದ ಪ್ರವರ್ಗದ ಪ್ರಾಣಿಗಳಿಗೆ ಈ ಗಿಡಗಳು ನೆರಳು ಹಾಗು ಆಹಾರಕ್ಕೆ ಆಸರೆಯಾಗಿವೆ. ಆದರೆ, ಕಳೆದ ಒಂದು ವಾರದಲ್ಲಿ ಹುಬ್ಬಳ್ಳಿಯಲ್ಲಿ ನೂರಾರು ಗಿಡಗಳು ಹೆಸ್ಕಾಂ, ಬಿ ಎಸ್ ಎನ್ ಎಲ್, ಪಿಡಬ್ಲೂಡಿ, ಎಚ್ ಡಿ ಎಂ ಸಿ, ಜಲ ಮಂಡಳಿ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ರಿಪೇರಿ ಕಾರ್ಯಕ್ರಮ ಅಂಗವಾಗಿ ಧರಾಶಾಯಿಯಾಗಿವೆ. ಇನ್ನೂ ನೂರಾರು ಗಿಡಗಳ ಹನನ ಆಗಲಿದೆಯಂತೆ. ಗ್ರೀನ್ ಕಮಾಂಡೋಗಳು ಈ ಬೆಳವಣಿಗೆಗಳನ್ನು ಖಂಡಿಸಿ, ಹನನ ಕಾರ್ಯ ನಿಲ್ಲಿಸುವಂತೆ ಪ್ರತಿಭಟನೆಗೂ ಸಜ್ಜಾಗಿದ್ದಾರೆ. ಈ ಮರಗಳನ್ನು ಆಶ್ರಯಿಸಿರುವ ಪ್ರಾಣಿ-ಪಕ್ಷಿಗಳ ಪರಿಸ್ಥಿತಿಯಂತೂ ಆ ಭಗವಂತನಿಗೇ ಪ್ರೀತಿ.

ಆದರೂ ಪಾಪ ನಮ್ಮ ಪುಟ್ಟ ಅಳಿಲು ಜೀವ ಕಳೆದುಕೊಳ್ಳದೇ ಬದುಕುಳಿದಿದ್ದೇ ಸಮಾಧಾನದ ವಿಷಯ. ಹಾಗೆಯೇ ತನ್ನ ಸಮಯಪ್ರಜ್ಞೆ ದರ್ಶಿಸಿ ಮರಿ ಅಳಿಲನ್ನು ಬದುಕಿಸಿ ‘ಅಳಿಲು ಸೇವೆ’ ಮಾಡಿದ ನಮ್ಮ ಸದಾನಂದನಿಗೆ ಒಂದು ಪುಟ್ಟ THANKS ನನ್ನಿಂದ ಸಂಪದಿಗರ ಪರವಾಗಿ.. ಹೀಗೆ ಅವನ ಅನನ್ಯ ಮಾನವೀಯ ಕಾಳಜಿ ಮುಂದುವರೆಯಲಿ ಎಂಬ ಹಾರೈಕೆಯೊಂದಿಗೆ.