ಸದಾ ಶಾಂತಿಯ ಪರವಾಗಿ ಮಾತನಾಡೋಣ !

ಸದಾ ಶಾಂತಿಯ ಪರವಾಗಿ ಮಾತನಾಡೋಣ !

ಸ್ಪಂದಿಸುವ ಶಕ್ತಿಯನ್ನೇ ಅಥವಾ ಮನೋಭಾವವನ್ನೇ ಅಥವಾ ಸೂಕ್ಷ್ಮತೆಯನ್ನೇ ಕಳೆದುಕೊಂಡರೆ ವಿಶ್ವದ ಧಾರ್ಮಿಕ ಮತ್ತು ರಾಜಕೀಯ ನಾಯಕರು  ಎಂಬ ಅನುಮಾನ ಕಾಡುತ್ತಿದೆ. ಇಸ್ರೇಲ್ ಪ್ಯಾಲೆಸ್ಚನ್- ಯುದ್ಧದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರ ಮಾರಣಹೋಮವಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ದಿನೇ ದಿನೇ ಹೆಚ್ಚಾಗುತ್ತಿದೆ. ಸಾವು ನೋವುಗಳು ಲೆಕ್ಕಕ್ಕೂ ಸಿಗುತ್ತಿಲ್ಲ. ಒಂದು ಕ್ಷಣ ಅಲ್ಲಿನ ಜನಜೀವನ ವ್ಯವಸ್ಥೆಯನ್ನು ವೈಯಕ್ತಿಕ ಮಟ್ಟದಲ್ಲಿ ನಿಂತು ಯೋಚಿಸಿ ನೋಡಿ. ನಾವುಗಳು ಕೇವಲ ಬಸ್ಸು ಅಥವಾ ರೈಲು ಅಥವಾ ವಿಮಾನ ಪ್ರಯಾಣದಲ್ಲಿ ಒಂದಷ್ಟು ತಡವಾದರೆ, ಒಂದಷ್ಟು ಹೆಚ್ಚು ಜನಸಂಖ್ಯೆ ಹೆಚ್ಚಾದರೆ ನಾವು ಅನುಭವಿಸುವ ಮಾನಸಿಕ ಕಸಿವಿಸಿ ಎಷ್ಟಿರುತ್ತದೆ ಅಥವಾ ಆಸ್ಪತ್ರೆಗಳಲ್ಲಿ ನಾವು ಹೋದಾಗ ಅಲ್ಲಿನ ವಾತಾವರಣ, ಅಲ್ಲಿ ಕಾಯಬೇಕಾದ ಪರಿಸ್ಥಿತಿ, ಅಲ್ಲಿನ ಜನರ ನಡವಳಿಕೆ ಈ ಎಲ್ಲವನ್ನು ಗಮನಿಸಿದಾಗ ಅದನ್ನು ಸಹಿಸುವುದೇ ಸಾಕಷ್ಟು ಕಿರಿಕಿರಿ ಅಥವಾ ಹಿಂಸಾತ್ಮಕವಾಗಿರುತ್ತದೆ. ಎಲ್ಲಾ ವ್ಯವಸ್ಥೆಗಳು ಅನುಕೂಲಕರವಾಗಿ ಇದ್ದಾಗಲೇ ನಮಗೆ ಆ ಪರಿಸ್ಥಿತಿ ಉಂಟಾಗುತ್ತದೆ. ಇನ್ನು ಇಡೀ ಆಡಳಿತ ವ್ಯವಸ್ಥೆಯೇ ಕುಸಿದು ಬಿದ್ದು ಬಾಂಬು ಬಂದೂಕುಗಳ ನಡುವೆ ಬದುಕುತ್ತಿರುವ ಜನರ ಜೀವನ ಶೈಲಿ ಹೇಗಿರಬಹುದು ಒಮ್ಮೆ ಊಹಿಸಿ ನೋಡಿ.

ನಮ್ಮಂತೆ ಅಲ್ಲೂ ಕೂಡ ಕುಟುಂಬ ವ್ಯವಸ್ಥೆಗಳಿವೆ. ಗಂಡ ಹೆಂಡತಿ ಮಕ್ಕಳು ತಂದೆ ತಾಯಿ ಅಜ್ಜಿ ಅಜ್ಜ ಚಿಕ್ಕಪ್ಪ ದೊಡ್ಡಪ್ಪ ಎಲ್ಲ ಸಂಬಂಧಗಳು ಹಾಗೆ ಇದೆ. ಬದುಕುವ ಆಸೆ ಆಕಾಂಕ್ಷೆಗಳು ಅದೇ ರೀತಿ ಇದೆ. ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಕಣ್ಣ ಮುಂದೆಯೇ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಕ್ಷಣದಲ್ಲೂ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆ ಜನರಿಗಾಗಿ ಸುಮಾರು 750 ಕೋಟಿ ಅಷ್ಟು ಇರುವ ವಿಶ್ವದ ಹೃದಯಗಳು, ಮನಸುಗಳು ಎಷ್ಟು ಮಿಡಿಯಬೇಕಿತ್ತೋ ಅಷ್ಟು ತೀವ್ರವಾಗಿ ಮಿಡಿಯದೆ ತನ್ನ ಪಾಡಿಗೆ ತಾನು ಬದುಕುತ್ತಿರುವುದು ಸೋಜಿಗವೆನಿಸುತ್ತದೆ.

ಹೌದು, ಸಾಮಾನ್ಯ ಜನರಿಗೆ ಇದನ್ನು ತಡೆಯುವ ಶಕ್ತಿ ಇಲ್ಲ. ಒಂದಷ್ಟು ಮಾತು ಭಾಷಣ ಬರಹ ಪ್ರತಿಭಟನೆ ಸತ್ಯಾಗ್ರಹಗಳ ಮೂಲಕ ಸಣ್ಣ ಜಾಗೃತಿ ಮೂಡಿಸಬಹುದೇ ಹೊರತು ಯುದ್ಧವನ್ನು ನಿಲ್ಲಿಸುವ ಶಕ್ತಿ ಇಲ್ಲ. ಆದರೆ ಬಲಿಷ್ಠ ರಾಜಕೀಯ ನಾಯಕರು ಮತ್ತು ಸದಾ ಧರ್ಮದ ಬಗ್ಗೆ, ಧಾರ್ಮಿಕ ನಂಬಿಕೆಗಳ ಬಗ್ಗೆ, ದೇವರ ಬಗ್ಗೆ, ಮಾನವೀಯತೆಯ ಬಗ್ಗೆ ಮಾತನಾಡುವ ಧಾರ್ಮಿಕ ನಾಯಕರು ಮತ್ತು ಅವರ ಧರ್ಮದ ಬಹುತೇಕ ಜನರು ಗೌರವಿಸುವ ಇಂತಹವರು ಸಹ ಈ ಯುದ್ಧವನ್ನು ನಿಲ್ಲಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಎಲ್ಲೋ ಒಂದಷ್ಟು ಹೇಳಿಕೆಗಳು ಮೂಡಿ ಬರಬಹುದು. ಆದರೆ ಅದರಿಂದ ಏನು ಪ್ರಯೋಜನವಿಲ್ಲ.

ನೇರವಾಗಿ ಇಸ್ರೇಲ್ ಅಥವಾ ಪ್ಯಾಲಿಸ್ಟೇನ್ ಮತ್ತು ಉಕ್ರೇನ್ ಅಥವಾ ರಷ್ಯಾದಲ್ಲಿ ಕುಳಿತು ಅದರ ಮುಖ್ಯಸ್ಥರೊಂದಿಗೆ ನಿರಂತರ ಮಾತುಕತೆಗಳನ್ನು ಮಾಡಬೇಕಾಗುತ್ತದೆ. ಕನಿಷ್ಠ ತತ್ತಕ್ಷಣಕ್ಕೆ ಯುದ್ಧವಿರಾಮ ಘೋಷಿಸಿ ಸಂಧಾನಗಳನ್ನು ನಿರಂತರವಾಗಿ ಕೈಗೊಳ್ಳಬೇಕಾಗುತ್ತದೆ. ಕೊಟ್ಟು ತೆಗೆದುಕೊಳ್ಳುವ ಅನೇಕ ಸೂತ್ರಗಳು ಇರುತ್ತವೆ. ಅದನ್ನು ಸಮರ್ಥವಾಗಿ ಪ್ರತಿಪಾದಿಸಬೇಕಾಗುತ್ತದೆ.

ಅನಾವಶ್ಯಕವಾಗಿ ಹಠ ಮಾಡಿ ಜನರ ಜೀವಗಳನ್ನ ಬಲಿಕೊಡುವ ಎಲ್ಲಾ ಧರ್ಮಗಳು ಅಯೋಗ್ಯವೇ. ಹೀಗೆ ಯುದ್ಧಗಳು ಮತ್ತು ಸಾವುಗಳು ಸಹಜವಾಗುತ್ತಾ ಮುನ್ನಡೆದರೆ ಬದುಕು ಸಹ ಅಷ್ಟೇ ಅಸಹನೀಯ ಮತ್ತು ಅನಾಗರಿಕವಾಗುತ್ತದೆ. ಎರಡು ಮಹಾಯುದ್ಧಗಳ ನಂತರ ಮತ್ತು ಅದಕ್ಕಿಂತ ಹಿಂದೆ ಇಡೀ ವಿಶ್ವಕ್ಕೆ ಒಂದು ಕ್ರಮಬದ್ಧ ಆಡಳಿತ ವಿಧಾನ ಅಥವಾ ಜೀವನ ವ್ಯವಸ್ಥೆ, ಸ್ವಾತಂತ್ರ್ಯ ಮತ್ತು ಸಮಾನತೆ ಅಷ್ಟು ಗುಣಮಟ್ಟದ್ದಾಗಿರಲಿಲ್ಲ. ಆದರೆ  ನಂತರ ಇಡೀ ವಿಶ್ವ ಬಹುತೇಕ ಕಲ್ಯಾಣ ರಾಜ್ಯಗಳಾಗಿ ಮಾರ್ಪಟ್ಟಿತು. ಹೇಗೋ ಕೆಲವೇ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳಲ್ಲಿ ಕಾನೂನು, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳು ಉದ್ಯಮ ಸಂಗೀತ ಸಿನಿಮಾ ವಿಜ್ಞಾನ ಮನರಂಜನೆ ಮತದಾನದ ಹಕ್ಕುಗಳು ಧಾರ್ಮಿಕ ಸ್ವಾತಂತ್ರ್ಯ  ಸ್ವಲ್ಪ ಮಟ್ಟಿಗೆ ಅನುಕೂಲಕರ ವ್ಯವಸ್ಥೆಯನ್ನು ನೀಡಿತ್ತು.

ಇದನ್ನು ಅನುಭವಿಸುತ್ತಾ ಒಂದಷ್ಟು ನೆಮ್ಮದಿಯಾಗಿದ್ದ ಜೀವನ ಶೈಲಿ ಈ ಆಧುನಿಕತೆಯ ಬರದಲ್ಲಿ ಚಿತ್ರ ವಿಚಿತ್ರ ರೂಪಗಳನ್ನು ಪಡೆಯುತ್ತಾ ಒಂದು ರೀತಿ ಅತೃಪ್ತಿಯ ವಾತಾವರಣ ಸೃಷ್ಟಿಸಿದೆ. ಇನ್ನು ಮುಂದಾದರೂ ಈ ರಾಜಕೀಯ ಮತ್ತು ಧಾರ್ಮಿಕ ನಾಯಕರು ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ ಅನಾವಶ್ಯಕವಾಗಿ ಮನುಷ್ಯ ಸಾವುಗಳನ್ನು ತಡೆಯಬೇಕಾಗಿದೆ. ಇದಕ್ಕೆ ಸಾಮಾನ್ಯ ಜನ ಕೂಡ ಸ್ಪಂದಿಸಬೇಕಾಗಿದೆ. ತಮ್ಮ ದೇಶದ ಆಡಳಿತ ವ್ಯವಸ್ಥೆ ದುರಾಸೆಯಿಂದ ಅಂಕುಶಮೀರಿ ವರ್ತಿಸಿದರೆ ಅದನ್ನು ಸಾಮೂಹಿಕವಾಗಿ ಪ್ರತಿಭಟಿಸಿ ನಿಲ್ಲಿಸಬೇಕಾಗುತ್ತದೆ. ಉದಾಹರಣೆಗೆ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದಾಗ ರಷ್ಯಾದ ಜನತೆ ಅದನ್ನು ಪ್ರತಿಭಟಿಸಬೇಕಾಗಿತ್ತು. ಜೊತೆಗೆ ಉಕ್ರೇನಿನ ನಾಗರಿಕರು ಸಹ ಯುದ್ಧಕ್ಕೆ ಬದಲಾಗಿ ಶಾಂತಿಯ ಸಂದೇಶಗಳನ್ನು ಕಳಿಸಬೇಕಾಗಿತ್ತು. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಸಮಯದಲ್ಲೂ ಸಹ ಸಾಮಾನ್ಯ ಜನ ಹಿಂಸೆಗಳನ್ನು ಖಂಡಿಸುತ್ತಾ ಶಾಂತಿ, ಸೌಹಾರ್ದತೆ, ಸಹೋದರತ್ವದ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಬೇಕಾಗಿತ್ತು. ಆಗ ಮಾತ್ರ ವಿಶ್ವ ಶಾಂತಿಯಿಂದಿರಲು ಸಾಧ್ಯ.

ಚೀನಾ ಭಾರತ ಅಥವಾ ಭಾರತ ಪಾಕಿಸ್ತಾನ ಅಥವಾ ತೈವಾನ್ ಚೀನಾ ಅಥವಾ ಆಫ್ಘಾನಿಸ್ತಾನ ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಸಾಮಾನ್ಯ ಜನರು ಧ್ವನಿಯೆತ್ತದಿದ್ದಲ್ಲಿ ಅವುಗಳ ನಡುವೆ ಯುದ್ಧ ಪ್ರಾರಂಭವಾದರೆ ಆ ಭೀಕರ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದ್ದರಿಂದ ನಾವುಗಳು ಸದಾ ಶಾಂತಿಯ ಪರವಾಗಿ ಮಾತನಾಡುತ್ತಲೇ ಇರೋಣ. ಅದು ಈ ವಿಶ್ವಕ್ಕೆ ನಮ್ಮ ಅಳಿಲು ಸೇವೆ ಎಂದು ಭಾವಿಸೋಣ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ