ಸದ್ಗುರು ಜಗ್ಗಿ ವಾಸುದೇವ್ (ಭಾಗ 2)

ಅಲ್ಲದೆ ಅಧ್ಯಾತ್ಮ ಬಿಟ್ಟು ಸಮಾಜ ಸೇವೆ ಮತ್ತು ವ್ಯಾಪಾರದ ಮುಖವಾಡ ಧರಿಸಿದರೆ ಅಧ್ಯಾತ್ಮದ ಆಳ ಅರಿವಾಗುವುದು ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವವರು ಯಾರು. ಯಾವುದೇ ಕಾರಣದಿಂದ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಜನರಿಂದ ಹಣ ವಸೂಲಿ ಮಾಡುವುದು ಈ ದೇಶದಲ್ಲಿ ಎಷ್ಟೊಂದು ಅಪಾಯಕಾರಿ ನಿಮಗೆ ತಿಳಿದಿಲ್ಲವೇ? ಒಂದು ವೇಳೆ ನಿಮಗೆ ಸಾರ್ವಜನಿಕ ಸೇವೆ ಮಾಡಬೇಕೆಂಬ ಬಯಕೆ ಇದ್ದರೆ ನಿಮ್ಮ ಹಣಕಾಸಿನ ಮಿತಿಯಲ್ಲಿ ಅಥವಾ ನೀವು ಸರ್ಕಾರದ ಮೇಲೆ ಪ್ರಭಾವ ಬೀರಿ ಸಲಹೆ ನೀಡಿ ಅಥವಾ ಹಣಕಾಸು ರಹಿತ ಸೇವೆ ಮಾಡಿ. ಇಲ್ಲದಿದ್ದರೆ...
ಉದಾಹರಣೆಗೆ, ಪತ್ರಿಕೋದ್ಯಮಿಗಳು ಪತ್ರಿಕಾ ಧರ್ಮ ಬಿಟ್ಟು ರಿಯಾಲಿಟಿ ಎಕ್ಸ್ಪೋ, ಫರ್ನಿಚರ್ ಎಕ್ಸ್ಪೋ, ಪುಡ್ ಮೇಳ ಮುಂತಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಮೂಲ ವೃತ್ತಿಗೆ ನ್ಯಾಯ ಸಲ್ಲಿಸದೆ ಇನ್ನೇನೋ ಹಣ ಮಾಡಲು ಹೋಗಿ ಈಗಾಗಲೇ ಬೆಲೆ ಕಳೆದುಕೊಂಡಿಲ್ಲವೇ ? ಆದ್ದರಿಂದ ಅಧ್ಯಾತ್ಮ ಗುರುಗಳು ಕೇವಲ ಅಧ್ಯಾತ್ಮಿಕ ಚಿಂತನೆಗಳನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವ ಮತ್ತು ಅವರ ನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಉತ್ತಮ. ಜನರೂ ಸಹ ಯಾವುದೇ ಸದ್ಗುರುಗಳನ್ನು ಅತಿಮಾನುಷರೆಂದು ಭಾವಿಸದೆ, ಒಬ್ಬ ವ್ಯಕ್ತಿ ಎಲ್ಲಾ ಸಮಸ್ಯೆಗಳಿಗೂ ಉತ್ತರಿಸುತ್ತೇನೆ - ಪರಿಹರಿಸುತ್ತೇನೆ ಎಂಬುದನ್ನು ನಂಬದೆ ಅವರ ಮಿತಿಗಳನ್ನು ಸಹ ಅರಿಯುವ ಪ್ರಬುದ್ದತೆ ಬರಲಿ ಎಂದು ಆಶಿಸುತ್ತಾ...
ಈಗ ನಾವು ಇರುವ ಸ್ಥಾನದಿಂದಲೇ, ನಮಗೆ ಸಿಗುತ್ತಿರುವ ಮಾಹಿತಿಗಳಿಂದಲೇ, ನಮ್ಮ ಜೀವನದ ಅನುಭವದಿಂದಲೇ, ನಮ್ಮ ಗೆಳೆಯರು, ಹಿತೈಷಿಗಳ, ಪರಿಚಯದಿಂದಲೇ ವೈಚಾರಿಕ ಅಧ್ಯಾತ್ಮದ ಸಾಧನೆ ಮಾಡಬಹುದು. ಆರೋಗ್ಯವಂತ, ಪ್ರೌಢಾವಸ್ಥೆ ತಲುಪಿದ ಪ್ರತಿ ಮನುಷ್ಯನಿಗೂ ಮೆದುಳಿದೆ ಮತ್ತು ಅದು ಎಲ್ಲಾ ಆಗುಹೋಗುಗಳನ್ನು ಗ್ರಹಿಸುತ್ತದೆ. ಗ್ರಹಿಕೆಗಳು ಮನಸ್ಸಿನಲ್ಲಿ ಮೂಡಿ ಚಿಂತನೆಯನ್ನು ಹುಟ್ಟುಹಾಕುತ್ತದೆ. ಅದರ ಜೊತೆ ದೇಹವೂ ಪ್ರತಿಕ್ರಿಯಿಸುತ್ತದೆ. ಇದು ಮನುಷ್ಯ ಪ್ರಾಣಿಯ ಸಹಜ ಕ್ರಿಯೆ ಮತ್ತು ಎಲ್ಲರಲ್ಲಿಯೂ ಕಂಡುಬರುವ ಗುಣಲಕ್ಷಣ. ಆದರೆ ಗ್ರಹಿಕೆ ಮತ್ತು ಚಿಂತನೆಯಲ್ಲಿ ಮನುಷ್ಯರಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಅನುವಂಶೀಯ ಗುಣಗಳಿಂದ ಹಿಡಿದು, ಪ್ರೌಢಾವಸ್ಥೆ ತಲುಪುವವರೆಗೆ ಅನೇಕ ಅಂಶಗಳು ನಮ್ಮನ್ನು ಪ್ರಭಾವಿಸುತ್ತವೆ ಮತ್ತು ನಿಯಂತ್ರಿಸುತ್ತವೆ. ಜೊತೆಗೆ ಬದುಕಿನ ಅನಿವಾರ್ಯತೆ ನಮ್ಮ ತನವನ್ನು ಸಹಜವಾಗಿ ಬೆಳೆಯಲು ಬಿಡುವುದಿಲ್ಲ.
ಇಂತಹ ಬದುಕಿನಲ್ಲೂ ನಾವು ಅಧ್ಯಾತ್ಮದ ಸಾಧನೆ ಖಂಡಿತ ಮಾಡಬಹುದು. ಅಧ್ಯಾತ್ಮ ಎಂದರೇನು ? ಸರಳವಾಗಿ ಹೇಳುವುದಾದರೆ, ಅರಿವಿನ ಜೊತೆ ನಾವು ಸಾಧಿಸಬಹುದಾದ ಮಾನಸಿಕ ನಿಯಂತ್ರಣವೇ ಅಧ್ಯಾತ್ಮ. ಆ ಅರಿವು ಒಂದು ನಿರ್ದಿಷ್ಟ ವಿಷಯಕ್ಕಲ್ಲದೆ ನಮ್ಮ ಇಡೀ ವ್ಯಕ್ತಿತ್ವದ ಸಂಪೂರ್ಣ ಭಾಗವಾಗಿರಬೇಕು. ಅರಿವಿನಲ್ಲಿ ಅನೇಕ ಮಿತಿಗಳು ಇರುತ್ತವೆ. ಆದರೆ ಯಾವುದೇ ಪರಿಸ್ಥಿತಿಯಲ್ಲಿ ಅದಕ್ಕೆಲ್ಲ ಒಂದು ಪರಿಹಾರಾತ್ಮಕ ಉತ್ತರ ಹುಡುಕಿಕೊಂಡು ಮಾನಸಿಕ ನಿಯಂತ್ರಣ ಸಾಧಿಸುವುದು ಅಧ್ಯಾತ್ಮ ಸಾಧಕರಿಗೆ ಸಿದ್ದಿಸಿರುತ್ತದೆ. ( ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳು ಅಧ್ಯಾತ್ಮಕ್ಕೆ ಇನ್ನೂ ವಿಶಾಲ ಮತ್ತು ಅಗೋಚರ ಅರ್ಥ ಕೊಡುತ್ತಾರೆ )
ಹುಟ್ಟು ಸಾವು ಸಂಸಾರ ಅನಾರೋಗ್ಯ ಅಪಘಾತ ಆಕಸ್ಮಿಕ ವ್ಯವಹಾರ ಆಡಳಿತ ಸೋಲು ಗೆಲುವು ಎಲ್ಲವನ್ನೂ ಸಹಜ ಪರಿಸ್ಥಿತಿಯಲ್ಲಿ ಅವಲೋಕನ ಮಾಡಿ ಗ್ರಹಿಸಿ ಅದರ ಆಧಾರದ ಮೇಲೆ ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದೇ ವೈಜ್ಞಾನಿಕ ಅಧ್ಯಾತ್ಮ ಎಂದು ಕರೆಯಬಹುದು. ಇಲ್ಲಿ ಅಳುವು ಇದೆ, ನಗುವೂ ಇದೆ, ಕಷ್ಟ ಸುಖಗಳು ಇವೆ, ಮೋಸ ವಂಚನೆಗಳು ಇವೆ, ಸಾವು ನೋವುಗಳು, ಸೋಲು ವಿಫಲತೆಗಳು ಅದೃಷ್ಟ ದುರಾದೃಷ್ಟಗಳು, ತ್ಯಾಗ ಬಲಿದಾನಗಳು ಇವೆ. ಆದರೆ ಅದನ್ನು ಸಹಜವಾಗಿ ಸ್ವೀಕರಿಸುವ ಮನೋ ಭೂಮಿಕೆಯೇ ವೈಚಾರಿಕ ಅಧ್ಯಾತ್ಮ.
ನಾವೆಲ್ಲರೂ ಎಂದಿನ ದಿನನಿತ್ಯದ ಚಟುವಟಿಕೆಗಳನ್ನು ಮಾಡುತ್ತಾ ಅದರ ಅನುಭವದ ಆಧಾರದಲ್ಲಿಯೇ ನಮ್ಮ ಅರಿವಿನ ಮಿತಿಯಲ್ಲಿಯೇ ಇದನ್ನು ಸಾಧಿಸಬಹುದು ಆ ಮುಖಾಂತರ ನಮ್ಮ ಮಾನಸಿಕ ಜೀವನಮಟ್ಟವನ್ನು ಉತ್ತಮಪಡಿಕೊಳ್ಳಬಹುದು. ನಮ್ಮ ಬದುಕಿನ ಮೇಲೆ ನಿಯಂತ್ರಣ ಸಾಧಿಸಬಹುದು. ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.
ಸಾವು ಸಹಜ ಎಂಬ ಅರಿವು, ಸೋಲು ಗೆಲುವ ಸಾಮಾನ್ಯ ಎಂಬ ತಿಳಿವಳಿಕೆ, ಅಧಿಕಾರ ಹಣ ಆಸ್ತಿ ಶಾಶ್ವತವಲ್ಲ ಎಂಬ ಭಾವನೆ, ಅರಿಷಡ್ವರ್ಗಗಳು ಮಾನವನ ಸಹಜ ಸ್ವಭಾವಗಳು ಎನ್ನುವ ಅರ್ಥ, ನಗು ಬಂದಾಗ ನಗುವುದು, ಅಳು ಬಂದಾಗ ಅಳುವುದು, ರೋಗ ಬಂದಾಗ ನರಳುವುದು ಎಲ್ಲವೂ ಬದುಕಿನ ಭಾಗ ಎಂದು ಸ್ವೀಕರಿಸುವ ಮನೋಭಾವವೇ ವೈಜ್ಞಾನಿಕ ಅಧ್ಯಾತ್ಮ. ಜನ ಸಾಮಾನ್ಯರು ಸಹ ಮನೋ ನಿಯಂತ್ರಣದ ಈ ಆಧ್ಯಾತ್ಮಿಕ ಸಾಧಕರಾದಾಗ ಖಂಡಿತ ಈ ಸಮಾಜ ಈಗಿನ ಪರಿಸ್ಥಿತಿಗಿಂತ ಉತ್ತಮ ಗುಣಮಟ್ಟದ ಶಾಂತಿ ಸೌಹಾರ್ದತೆ ಸಮಾನತೆಯ ಸಮಾಜ ನಿರ್ಮಾಣ ಆಗುವ ಸಾಧ್ಯತೆ ಇದೆ. ನಿಮ್ಮ ಯೋಚಿಸುವ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುತ್ತಾ ಮತ್ತು ಗೌರವಿಸುತ್ತಾ…
ನಿಸ್ವಾರ್ಥ - ನಿಷ್ಕಲ್ಮಶ - ನಿರಪೇಕ್ಷ ಕಾರ್ಯಗಳನ್ನು ಪ್ರೋತ್ಸಾಹಿಸೋಣ. ಆಡಂಬರದ, ತೋರಿಕೆಯ, ಪ್ರದರ್ಶನದ, ಪ್ರಚಾರದ, ಆಸೆಯ ಕೆಲಸಗಳನ್ನು ತಿರಸ್ಕರಿಸೋಣ. ಯಾರೇ ಮಾಡಿದರೂ…
(ಮುಗಿಯಿತು)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ