ಸದ್ದಿಲ್ಲದ ಕಾಯಕದಿಂದ ಸುದ್ದಿಯಾದವರು
ಬೆಳಗಾಗುತ್ತಿದ್ದಂತೆ ಒರಿಸ್ಸಾದ ಊರ್ಮಿಳಾ ಬೆಹರ ಕೈಯಲ್ಲಿ ಹತ್ತು ಸಸಿಗಳನ್ನು ಎತ್ತಿಕೊಂಡು ಮನೆಯಿಂದ ಹೊರಡುತ್ತಾಳೆ. ದೂರದಲ್ಲಿ ಆ ಸಸಿಗಳನ್ನು ನೆಟ್ಟ ನಂತರವೇ ಉಳಿದ ಕೆಲಸಗಳತ್ತ ಅವಳ ಗಮನ.
2007ರಲ್ಲಿ ಊರ್ಮಿಳೆಯ ಈ ತಪಸ್ಸಿಗೆ 15 ವರುಷ ಪೂರೈಸಿತು. ಈ ಅವಧಿಯಲ್ಲಿ 48 ವರುಷ ವಯಸ್ಸಿನ ಊರ್ಮಿಳ ಎಷ್ಟು ಸಸಿಗಳನ್ನು ನೆಟ್ಟಿರಬಹುದು? ತನ್ನ ಹಳ್ಳಿ ಹಾಗೂ ಸುತ್ತಮುತ್ತಲಿನ 60 ಹಳ್ಳಿಗಳಲ್ಲಿ ಆಕೆ ನೆಟ್ಟ ಸಸಿಗಳ ಸಂಖ್ಯೆ ಒಂದು ಲಕ್ಷ ದಾಟಿದೆ!
ಬಲಸೋರ್ ಜಿಲ್ಲೆಯ ಕೊತಪಾಡ ಗ್ರಾಮದ ಊರ್ಮಿಳ ಸಿರಿವಂತಳು ಅಂದುಕೊಂಡಿರಾ? ಹಸುರುಮನೆ ಪರಿಣಾಮದಿಂದ ಪ್ರಭಾವಿತಳಾದ ವಿದ್ಯಾವಂತಳು ಅಂದುಕೊಂಡಿರಾ? ಅಲ್ಲವೇ ಅಲ್ಲ. ಅವಳೊಬ್ಬ ಬಡಕುಟುಂಬದ ಮಹಿಳೆ. ಹುಲ್ಲಿನ ಚಾವಣಿಯ ಗುಡಿಸಲಿನಲ್ಲಿ ಅವಳ ಕುಟುಂಬದ ವಾಸ. ಜೀವನೋಪಾಯಕ್ಕೆ ಟೈಲರ್ ವೃತ್ತಿ.
ತನ್ನ ಹಳ್ಳಿಯ ಖಾಲಿ ಜಾಗದಲ್ಲೆಲ್ಲ ಸಸಿ ನೆಟ್ಟು ಹಸಿರು ಹಬ್ಬಿಸಿದ್ದಾಳೆ ಊರ್ಮಿಳಾ. ನದಿಯ ದಡದಲ್ಲಿ, ಶಾಲೆಗಳ ವಠಾರಗಳಲ್ಲಿ, ಗುಡ್ಡಗಳಲ್ಲಿ ಸಸಿ ನೆಡುತ್ತ 15 ವರುಷ ಓಡಾಡಿದ್ದಾಳೆ ಊರ್ಮಿಳಾ. "ಕಹಿಬೇವು, ಮಾವು, ನೇರಳೆ, ತೆಂಗು, ತಾಳೆ, ಸಾಗುವಾನಿ, ಆಲ, ಸಾಲ್ ಸಸಿಗಳನ್ನೆಲ್ಲ ನೆಡುತ್ತೇನೆ” ಎನ್ನುತ್ತಾಳೆ ಊರ್ಮಿಳಾ.
“1992ರಲ್ಲಿ ಸಸಿ ನೆಡುವ ಕಾಯಕ ಶುರು ಮಾಡಿದೆ. ಅನಂತರ ಯಾವತ್ತೂ ನಿಲ್ಲಿಸಿಲ್ಲ. ಮೊದಮೊದಲು ನನ್ನದೇ ಜಮೀನಿನಲ್ಲಿ ಮತ್ತು ನಮ್ಮ ಹಳ್ಳಿಯ ರಸ್ತೆಗಳ ಬದಿಗಳಲ್ಲಿ ಸಸಿ ನೆಡುತ್ತಿದ್ದೆ. ಈಗ ದೂರದ ಹಳ್ಳಿಗಳಿಗೂ ಹೋಗಿ ಸಸಿ ನೆಟ್ಟು ಬರುತ್ತೇನೆ” ಎಂಬುದವಳ ಉತ್ಸಾಹದ ಮಾತು. ಸಸಿ ನೆಟ್ಟು ಸುಮ್ಮನಾಗುವುದಿಲ್ಲ ಊರ್ಮಿಳಾ. ನೆಟ್ಟ ಸಸಿಗಳು ಹೆಗಲೆತ್ತರ ಬೆಳೆಯುವ ತನಕ ಜೋಪಾನ ಮಾಡುತ್ತಾಳೆ.
ಈ ಕಾಯಕದಲ್ಲಿ ತೊಡಗಲು ಕಾರಣವೇನು? ಎಂಬ ಪ್ರಶ್ನೆಗೆ ಅವಳ ಮಾತುಗಳಲ್ಲೇ ಉತ್ತರ ಕೇಳಿ: “ನನಗೆ ಗಂಡುಮಕ್ಕಳಿಲ್ಲ. ನಾನು ನೆಟ್ಟ ಸಸಿಗಳನ್ನು ನನ್ನ ಮಕ್ಕಳಂತೆ ಪ್ರೀತಿಸುತ್ತೇನೆ. ನಿಜ ಹೇಳಬೇಕೆಂದರೆ, ನನಗೆ ಗಂಡುಮಕ್ಕಳಿಲ್ಲವೆಂಬ ದುಃಖ ಮರೆಯಲಿಕ್ಕಾಗಿಯೇ ಗಿಡ ನೆಡುವ ಕೆಲಸ ಶುರು ಮಾಡಿದೆ. ಅನಂತರ ಅದೊಂದು ದಿನನಿತ್ಯದ ಅಭ್ಯಾಸವೇ ಆಗಿ ಹೋಯಿತು. ಪ್ರತಿ ದಿನ ಬೆಳಗ್ಗೆ ಹತ್ತು ಸಸಿಗಳನ್ನು ನೆಟ್ಟೇ ನೆಡುತ್ತೇನೆ. ವಿಶೇಷ ಸಂದರ್ಭಗಳಲ್ಲಿ ಒಂದೇ ದಿನ ನೂರು ಸಸಿಗಳನ್ನೂ ನೆಟ್ಟದ್ದಿದೆ” ಎನ್ನುತ್ತಾ ಭಾವುಕಳಾಗುತ್ತಾಳೆ ಊರ್ಮಿಳಾ.
ಊರ್ಮಿಳಾಳ ಈ ಕಾಯಕಕ್ಕೆ ಅವಳ ಪತಿ ಪೀತಾಂಬರ ಬೆಹರನ ಪೂರ್ಣ ಬೆಂಬಲ. “ಒಬ್ಬ ಮನುಷ್ಯ ಸಮಾಜ ವಿರೋಧಿ ಆಗಬಲ್ಲ. ಆದರೆ ಒಂದು ಮರ ಹಾಗಾಗದು. ಅದು ಯಾವತ್ತೂ ಸಮಾಜಕ್ಕೆ ಉಪಕಾರಿ. ಸಮಾಜಕ್ಕಾಗಿ ಏನೂ ಮಾಡದವರು ಮನುಷ್ಯರೇ ಅಲ್ಲ. ಗಿಡನೆಡುವ ಕಾಯಕವನ್ನು ನಮ್ಮ ಕೊನೆಯುಸಿರು ಇರುವ ತನಕ ಮುಂದುವರಿಸುತ್ತೇವೆ” ಎನ್ನುತ್ತಾನೆ ಆತ.
“ಶಿಕ್ಷೆಯ ಅವಧಿ ಮುಗಿದು ಜೈಲಿನಿಂದ್ ಹೊರಬಂದಾಗ ಖಿನ್ನನಾಗಿದ್ದೆ. ನನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಊರ್ಮಿಳಾಳ ಕೆಲಸಕ್ಕೆ ಕೈಜೋಡಿಸಿದೆ" ಎನ್ನುತ್ತಾನೆ ಆಂದೋಲನದಲ್ಲಿ ಸಕ್ರಿಯನಾಗಿರುವ 68 ವರುಷಗಳ ವೃದ್ಧ ದೀನಬಂದು ಮಹಾಪಾತ್ರ. ಹಾಗಂತ ಊರ್ಮೀಳಾಳಿಗೆ ಎಲ್ಲವೂ ಸುಲಭವಾಗಿರಲಿಲ್ಲ. ಒಂದೆಡೆ ಗ್ರಾಮಸ್ಥರು ವಿರೋಧಿಸಿದಾಗ ರಾತ್ರಿಯ ಕತ್ತಲಿನಲ್ಲಿ ಸಸಿ ನೆಟ್ಟದ್ದೂ ಇದೆ.
ಇಬ್ಬರು ಹೆಣ್ಣುಮಕ್ಕಳ ತಾಯಿ ಊರ್ಮಿಳಾ ವರುಷವರುಷವೂ ಒಂದು ಮರದ ಹುಟ್ಟುಹಬ್ಬ ಆಚರಿಸುತ್ತಾಳೆ. ಪ್ರತಿದಿನ ಬೆಳಗ್ಗೆ ಮರವೊಂದಕ್ಕೆ ಅರಿಶಿನ ಮತ್ತು ಕಾಡಿಗೆ ಹಚ್ಚಿ, ನೀರೆರದ ನಂತರವೇ ಅವಳ ಇತರ ಕೆಲಸಗಳು ಶುರು. ಇವೆಲ್ಲ ಕಾರಣಗಳಿಂದಾಗಿಯೇ ಹಳ್ಳಿಯವರೆಲ್ಲರೂ ಊರ್ಮಿಳಾ ತಾಯಿಯನ್ನು “ವೃಕ್ಷಮಾತೆ" ಎಂದೇ ಗೌರವದಿಂದ ಕರೆಯುತ್ತಾರೆ.
ಅತ್ತ ಬಿಹಾರದಲ್ಲಿಯೂ ಊರಿಗೆ ಮಹಾ ಉಪಕಾರಿಯಾಗಿ ಬದುಕಿದ್ದರೊಬ್ಬ ಸರಳ ವ್ಯಕ್ತಿ. ಅವರೇ ಆಗಸ್ಟ್ 2007ರಲ್ಲಿ ನಮ್ಮನ್ನಗಲಿದ ದಶರಥ ಮಾಂಜಿ. ಅವರಿಗೆ ಗೌರವದಿಂದ ಜನರಿತ್ತ ಹೆಸರು "ಬೆಟ್ಟದ ಮನುಷ್ಯ.”
ಗಯಾ ಜಿಲ್ಲೆಯ ಮೂಲೆಯ ಹಳ್ಳಿಯಲ್ಲಿ ಅವರ ವಾಸ. ಬೇಸಗೆಯಲ್ಲಿ ಅಲ್ಲಿ ಕುಡಿಯುವ ನೀರಿಗೂ ತತ್ವಾರ. ಬೆಟ್ಟ ಏರಿ ಹೋಗಿ ನೀರು ಹೊತ್ತು ತರುತ್ತಿದ್ದ ಅವರ ಪತ್ನಿ ಒಮ್ಮೆ ಜಾರಿ ಬಿದ್ದು ಗಾಯವಾಯಿತು. ಅವಳ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆ ತಲಪಲು ಬೆಟ್ಟ ದಾಟಿ 50 ಕಿಮೀ ಸುತ್ತುಬಳಸಿನ ದಾರಿಯಲ್ಲಿ ಸಾಗಿ ಪಾಡು ಪಟ್ಟ ದಶರಥ ಮಾಂಜಿ. ಬೇರಾವ ಹೆಣ್ಣುಮಗಳಿಗೂ ಈ ಪಾಡು ಬೇಡವೇ ಬೇಡ ಎಂದು ಯೋಚಿಸಿದ. ಸುರಂಗ ಮಾರ್ಗ ತೋಡಿ ದೂರದೂರಿನ ಅಂತರ ಕಡಿಮೆ ಮಾಡುತ್ತೇನೆಂದು ಪಣ ತೊಟ್ಟ. ಗುದ್ದಲಿ ಹಿಡಿದು 1967ರಲ್ಲಿ ಬೆಟ್ಟದ ಗರ್ಭದಲ್ಲಿ ಸುರಂಗ ತೋಡುವ ಕಾಯಕ ಶುರು ಮಾಡಿದ.
ಸುತ್ತಮುತ್ತಲಿನ ಹಳ್ಳಿಯವರು “ಇದು ಒಬ್ಬನಿಂದಾಗದ ಕೆಲಸ. ಅವನಿಗೆ ಹುಚ್ಚು” ಎಂದು ಗೇಲಿ ಮಾಡಿದರು. ಆದರೆ ಮಾಂಜಿ ತನ್ನ ತಪಸ್ಸು ನಿಲ್ಲಿಸಲಿಲ್ಲ. ಆತ ಬೆಟ್ಟ ಕೊರೆಯುತ್ತಲೇ ಸಾಗಿದ. ಒಂದೆರಡಲ್ಲ, ಸತತ 22 ವರುಷ ಮಣ್ಣು ಅಗೆದು ತೆಗೆದ!
ಕೊನೆಗೊಮ್ಮೆ, 1989ರಲ್ಲಿ ಬೆಟ್ಟದ ಆ ಬದಿಯಿಂದ ಮಾಂಜಿ ಕೊರೆದ ಸುರಂಗದೊಳಗೆ ಬೆಳಕು ತೂರಿ ಬಂತು! ಏಕಾಂಗಿಯಾಗಿ ಮಾಂಜಿ ನಿರ್ಮಿಸಿದ್ದ ಆ ಸುರಂಗರಸ್ತೆಯ ಉದ್ದ 360 ಅಡಿ ಮತ್ತು ಅಗಲ 30 ಅಡಿ! ಅದರಿಂದಾಗಿ ಅತ್ರಿಯಿಂದ ವಜೀರ್ ಗಂಜ್ ತಲಪಲು ಕ್ರಮಿಸಬೇಕಾಗಿದ್ದ 50 ಕಿಮೀ ಅಂತರ ಕೇವಲ 10 ಕಿಮೀ.ಗೆ ಇಳಿದಿತ್ತು. ಈಗ ಜನರೆಲ್ಲ ಮಾಂಜಿಗೆ ತಲೆಬಾಗಿದರು.
ಸರಕಾರದ ಸಹಾಯ ಕೇಳದೆ, ತನ್ನ ರಟ್ಟೆ ಬಲದಿಂದಲೇ ಬೆಟ್ಟ ಅಗೆದು ಜನರಿಗಾಗಿ ರಸ್ತೆ ಮಾಡಿದ ದಶರಥ ಮಾಂಜಿಯ ಸಾಹಸವನ್ನು ಬಿಹಾರ ಸರಕಾರವೂ ಗೌರವಿಸಿತು.
ವರುಷಗಳು ಸರಿದವು. ಜುಲಾಯಿ 2007ರಲ್ಲಿ ದಶರಥ ಮಾಂಜಿಗೆ ತೀವ್ರ ಅನಾರೋಗ್ಯ. ಆಗ ಅವರಿಗೆ 77 ವರುಷ ವಯಸ್ಸು. ಬಿಹಾರ ಸರಕಾರ ಅವರನ್ನು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿತು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ನವದೆಹಲಿಯ ಆಸ್ಪತ್ರೆಗೆ ಹೋಗಿ ದಶರಥ ಮಾಂಜಿಯ ಆರೋಗ್ಯ ವಿಚಾರಿಸಿದರು. ವೃದ್ಧ ಮಾಂಜಿಯ ಆರೋಗ್ಯ ಸುಧಾರಿಸಲಿಲ್ಲ. ಕೊನೆಗೆ 17 ಆಗಸ್ಟ್ 2007ರಂದು ಅಲ್ಲೇ ಕೊನೆಯುಸಿರೆಳೆದರು. ಸರಕಾರಿ ಗೌರವಗಳೊಂದಿಗೆ ದಶರಥ ಮಾಂಜಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮರಣಾ ನಂತರ, ದಶರಥ ಮಾಂಜಿ ಅವರ ಜೀವನಕತೆ 2015ರಲ್ಲಿ ಚಲನಚಿತ್ರವಾಗಿ ಮೂಡಿಬಂತು.
ಒಂದು ಹಳ್ಳಿಯ ಜನರ ಬದುಕಿನಲ್ಲಿ ಪರಿವರ್ತನೆ ತರಬೇಕಾದರೆ, ಸದ್ದಿಲ್ಲದೆ ಕಾಯಕ ಮಾಡುವ ಇಂತಹ ಒಬ್ಬಾತ ಅಥವಾ ಒಬ್ಬಾಕೆ ಸಾಕು, ಅಲ್ಲವೇ?
ಫೋಟೋ 1 ಮತ್ತು 2: ದಶರಥ ಮಾಂಜಿ ….. ಕೃಪೆ: ಹಿಂದುಸ್ಥಾನ್ ಟೈಮ್ಸ್ ಮತ್ತು ಡೈಲಿ ಮೇಯ್ಲ್ ಜಾಲತಾಣ