ಸದ್ಭಾವನೆ: ಯಶಸ್ಸಿನ ಕೀಲಿಕೈ

ಸದ್ಭಾವನೆ: ಯಶಸ್ಸಿನ ಕೀಲಿಕೈ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

ಇದರ ಮುನ್ನುಡಿಯಲ್ಲಿ ಎ. ವೆಂಕಟ ರಾವ್ ಬರೆದಿರುವ ಈ ಮಾತುಗಳು ಗಮನಾರ್ಹ: "ಸತ್ಯಂ ವದ ಧರ್ಮಂ ಚರ”, "ದಯೆಯೇ ಧರ್ಮದ ಮೂಲವಯ್ಯಾ” ….. ಎಂಬ ಸೂಕ್ತಿಗಳನ್ನು ನಾವು ಹೇಳುತ್ತಲೇ ಇರುತ್ತೇವೆ. ಆದರೆ ವಾಸ್ತವ ನ್ಯಾಯದಾನದಲ್ಲಿ - ಆತ ಎಷ್ಟೇ ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ - ಅನಿರೀಕ್ಷಿತ ಮತ್ತು ಪರಿಹಾರವಾಗಿರದ ನೂತನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. …. ಅಂಥ ಪ್ರತಿಯೊಂದು ಪ್ರಸಂಗದಲ್ಲಿಯೂ ಧರ್ಮಮಾರ್ಗದಿಂದ ನಾನು ವಿಚಲಿತನಾಗಿಲ್ಲ ಎಂಬ ತೃಪ್ತಿ ಸಮಾಧಾನಗಳು ನನಗಿವೆ”

ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)

೧೯೫೪ರಲ್ಲಿ ನ್ಯಾಯಾಂಗಸೇವೆ ಸೇರುವ ಮೊದಲು ಮಂಗಳೂರಿನಲ್ಲಿ ಜೂನಿಯರ್ ಲಾಯರಾಗಿ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. ಅಂದಿನ ದಿನಗಳಲ್ಲಿ ಬಾಡಿಗೆ ನಿಯಂತ್ರಣ ಪ್ರಕರಣಗಳನ್ನು ಸಬ್‌ಕಲೆಕ್ಟರ್‌ರವರು ಮಂಗಳೂರಿನಲ್ಲಿ ಕಲೆಕ್ಟರೇಟ್ ಆವರಣದಲ್ಲಿ ವಿಚಾರಣೆ ನಡೆಸುತ್ತಿದ್ದರು. ಅದು ಸಿವಿಲ್ ನ್ಯಾಯಾಲಯಗಳಿಂದ ಎರಡು ಮೈಲುಗಳ ದೂರದಲ್ಲಿತ್ತು; ಹಾಗಾಗಿ, ನಮ್ಮ ಸೀನಿಯರ್ ಅಡ್ವೋಕೇಟ್ ಕೆ.ಎಸ್. ಎನ್. ಅಡಿಗರವರು ಯಾವುದೇ ಬಾಡಿಗೆ ನಿಯಂತ್ರಣ ಪ್ರಕರಣಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ.
    ಸರಿಸುಮಾರು ೧೯೫೨ರಲ್ಲಿ ಒಬ್ಬ ಕೃಶವೃದ್ಧರು ನಮ್ಮ ಕಛೇರಿಗೆ ಬಂದರು ಮತ್ತು ಬಾಡಿಗೆ ನಿಯಂತ್ರಣ ವಿಚಾರವೊಂದರಲ್ಲಿ ವಕಾಲತ್ತು ವಹಿಸುವಂತೆ ನಮ್ಮ ಸೀನಿಯರ್ ಅವರನ್ನು ಕೋರಿದರು. ಪ್ರಕರಣವನ್ನು ತೆಗೆದುಕೊಳ್ಳಲು ನಾನು ತಯಾರಿರುವೆನೇ ಎಂದು ಅಡಿಗರು ನನ್ನನ್ನು ಕೇಳಿದರು. ನಾನು ಒಪ್ಪಿಕೊಂಡೆ.
    ನಮ್ಮ ಕಕ್ಷಿದಾರನಿಗೆ ೭೦ಕ್ಕೂ ಹೆಚ್ಚು ವಯಸ್ಸಾಗಿದ್ದು, ಆತ ಮರ್ಚೆಂಟ್ ನೇವಿಯ ನಿವೃತ್ತ ಬಟ್ಲರ್ ಆಗಿದ್ದವರು. ಕದ್ರಿಯಲ್ಲಿ ಸಣ್ಣಮನೆ ಆತನಿಗಿತ್ತು ಮತ್ತು ಆತ ಅವಿವಾಹಿತ ಆಗಿದ್ದ. ಎರಡು ಸಾಕು ಪ್ರಾಣಿಗಳನ್ನು – ಒಂದು ನಾಯಿ ಮತ್ತು ಒಂದು ಕೋತಿ ಇಟ್ಟುಕೊಂಡಿದ್ದ, ವಯಸ್ಸಾದ ವಿವಾಹಿತೆಗೆ ಒಂದು ರೂಮು ಬಾಡಿಗೆಗೆ ನೀಡಿದ್ದ. ಆನಂತರದಲ್ಲಿ ಮನೆಯೊಡೆಯ ಮತ್ತು ಬಾಡಿಗೆದಾರರ ನಡುವೆ ಮನಸ್ತಾಪ ಮೂಡಿತು. ಬಾಡಿಗೆದಾರರು ಬಾಡಿಗೆ ನಿಯಂತ್ರಕರ (ರೆಂಟ್ ಕಂಟ್ರೋಲರ್) ಮುಂದೆ ಅರ್ಜಿ ಸಲ್ಲಿಸಿದರು ಮತ್ತು ಆ ಕೊಠಡಿಯ ಚಾವಣಿಯ ಒಡೆದುಹೋಗಿರುವ ಹೆಂಚುಗಳನ್ನು ಬದಲಿಸುವುದರ ಮೂಲಕ ಸೌಲಭ್ಯಗಳನ್ನು ಕಲ್ಪಿಸುವಂತೆ ನಿರ್ದೇಶಿಸಿ ಆದೇಶ ಪಡೆದುಕೊಂಡರು.
    ಆ ವೃದ್ಡ ಬಟ್ಲರ್ ಮಂಗಳೂರಿನ ಸಬ್‍ಜಡ್ಜ್ ಮುಂದೆ ಮೇಲ್ಮನವಿ ಸಲ್ಲಿಸಿದರು ಮತ್ತು ಅದು ವಜಾ ಮಾಡಲ್ಪಟ್ಟಿತು. ಹಾಗಾದರೂ ಒಡೆದುಹೋದ ಹೆಂಚುಗಳನ್ನು ಬದಲಿಸಲಿಲ್ಲ. ರಿಪೇರಿಗಳನ್ನು ಪೂರೈಸುವ ವರೆಗೆ ಪ್ರತಿದಿನಕ್ಕೆ ೨೫ ರೂ.ಗಳಂತೆ ದಂಡ ವಿಧಿಸಿ ಸೌಲಭ್ಯಗಳನ್ನು ಮತ್ತೆ ಕಲ್ಪಿಸಿಕೊಡುವಂತೆ ಒತ್ತಾಯಿಸಲು ಬಾಡಿಗೆದಾರರು ಬಾಡಿಗೆ ನಿಯಂತ್ರಕರ ಮುಂದೆ ಮತ್ತೊಂದು ಅರ್ಜಿ ಸಲ್ಲಿಸಿದರು. ಈ ಹಂತದಲ್ಲಿಯೇ ಮನೆಮಾಲೀಕರು ನಮ್ಮ ಸೀನಿಯರ್‌ರವರ ಕಛೇರೆಗೆ ಬಂದಿದ್ದುದು.
    ಬಾಡಿಗೆ ನಿಯಂತ್ರಣ ನ್ಯಾಯಾಲಯಕ್ಕೆ ಹಾಜರಾದೆ. ಅಲ್ಲಿನ ಪೀಠಾಸೀನ ಅಧಿಕಾರಿ (ಸಬ್‍ಕಲೆಕ್ಟರ್) ತುಂಬ ದಯೆಯುಳ್ಳವರು ಮತ್ತು ಸಹಾನುಭೂತಿಶೀಲರೂ ಆದವರಾಗಿದ್ದು, ಸದ್ಯದಲ್ಲಿಯೇ ನಿವೃತ್ತರಾಗಲಿದ್ದವರು ಎಂಬ ಅಂಶ ನನಗೆ ಅಲ್ಲಿ ತಿಳಿಯಿತು. ಮೇಲ್ಮನವಿ (ಅಪೀಲು) ವಜಾಗೊಂಡಿದ್ದ ಕಾರಣ ಸೌಕರ್ಯ ಮತ್ತೆ ಕಲ್ಪಿಸಬೇಕೆಂಬ ಬಾಡಿಗೆ ನಿಯಂತ್ರಕರ ಆಜ್ಞೆ ಅಂತಿಮವಾಗಿದ್ದುದರಿಂದ ವಾದಿಸಲು ನನಗೆ ವಿಷಯವೇ ಇರಲಿಲ್ಲ. ಪೀಠಾಸೀನ ಅಧಿಕಾರಿಯ ಅನುಕಂಪದತ್ತ ಗಮನ ಸೆಳೆಯಲು ಮಾತ್ರ ಪ್ರಯತ್ನಿಸಬಹುದಾಗಿತ್ತು.
ಹಾಗಾಗಿ ನನ್ನ ಕಕ್ಷಿಗಾರರಿಗೆ ತಮ್ಮ ಹಳೆಯದಾದ ಬಟ್ಲರ್ ಯೂನಿಫಾರಂ ಧರಿಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದೆ. ಏಕೆಂದರೆ ಅದರಲ್ಲಿ ಆತ ಶೋಚನೀಯವಾಗಿ ಕಾಣುತ್ತಿದ್ದ. ನನ್ನ ಅರ್ಜಿದಾರರಿಗೆ ಇರುವ ಆದಾಯ ತುಂಬ ಕಡಿಮೆಯೇ, ಮತ್ತು ವಯಸ್ಸಾದ ಈ ಮಹಿಳೆಗೆ ತಿಂಗಳಿಗೆ ಕೇವಲ ನಾಲ್ಕು ರೂಪಾಯಿಗಳ ಬಾಡಿಗೆಗೆ ತನ್ನ ಮನೆಯಲ್ಲಿನ ಕೊಠಡಿಯನ್ನು ನೀಡುವ ಕೃಪೆ ತೋರಿದುದಕ್ಕೆ ಆಕೆ ಆತನಿಗೆ ಉಪದ್ರವ ನೀಡುತ್ತಿರುವರು ಮತ್ತು ಈಗ ಆತನಿಗೆ ದಂಡ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿಯನ್ನೂ ಸಲ್ಲಿಸಿರುವರು ಎಂದು ವಾದಿಸಿದೆ. ಹೆಂಚುಗಳನ್ನು ಆಕೆಯ ಮುದ್ದಿನ ಮಂಗವೇ ಒಡೆದು ಹಾಕಿದೆ ಎಂದೂ ವಾದಿಸಿದೆ.
    ಮೇಲ್ಮನವಿಯಲ್ಲಿ ಸ್ಥಿರೀಕರಿಸಲಾಗಿದ್ದರೂ, ಒಡೆದುಹೋಗಿರುವ ಹೆಂಚುಗಳನ್ನು ಬದಲಾಯಿಸಲು ಮನೆಮಾಲೀಕ ಉದ್ದೇಶಪೂರ್ವಕವಾಗಿಯೇ ವಿಫಲರಾಗಿರುವುದರಿಂದ ಆತ ಯಾವುದೇ ದಯೆ ಕೋರುವಂತಿಲ್ಲ ಎಂದು ವೃದ್ಧೆಯ ಪರವಾಗಿ ಹಾಜರಾಗುತ್ತಿದ್ದ ಲಾಯರ ವಾದಿಸಿದರು. ಒಡೆದು ಹೋಗಿರುವ ಹೆಂಚುಗಳನ್ನು ಬದಲಿಸುವುದು ಕೇವಲ “ರಿಪೇರಿ”ಯಷ್ಟೇ ಆಗುತ್ತದೆ ಮತ್ತು ಅದು ಸೌ ಕರ್ಯ ಎಂದಾಗಲು ಸಾಧ್ಯವಿಲ್ಲ; ಹಾಗಾಗಿ ವೃದ್ಧೆ “ಸೌಕರ್ಯ” ಮರುನೀಡಿಕೆಗಾಗಿ ಎಂದು ಪರಿಹಾರ ಕೇಳಿರುವುದು ಅನ್ವಯವಾಗುವುದಿಲ್ಲ; ಹಾಗಾಗಿ ಅರ್ಜಿಯನ್ನು ವಜಾ ಮಾಡಬೇಕು ಎಂದೂ ವಾದಿಸಿದೆ.
    ನನ್ನ ಸಂಪೂರ್ಣ ಅದೃಷ್ಟವೋ ಎಂಬಂತೆ ಒಡೆದುಹೋದ ಹೆಂಚುಗಳನ್ನು ಬದಲಿಸುವುದು ಕೇವಲ “ರಿಪೇರಿ”ಯಾಗುತ್ತದೆ; ಹಾಗಾಗಿ ವೃದ್ಧೆ ಸಲ್ಲಿಸಿರುವ ಅರ್ಜಿ ಊರ್ಜಿತಯೋಗ್ಯವಲ್ಲ ಎಂದು ಬಾಡಿಗೆ ನಿಯಂತ್ರಕರು ನನ್ನ ವಾದವನ್ನು ಎತ್ತಿಹಿಡಿದರು.
    ಕೆಲವು ದಿನಗಳಾದ ನಂತರ ಆ ವೃದ್ಧ ಬಟ್ಲರ್ ನಮ್ಮ ಆಫೀಸಿಗೆ ಬಂದ ಮತ್ತು ಯಾವುದೇ ಫೀಸು ಕೊಡುವ ಸ್ಥಿತಿಯಲ್ಲಿ ತಾನಿಲ್ಲವೆಂದೂ, ಆದರೆ ನನಗೆ ಯಶಸ್ಸು ಕೋರಿ ಚರ್ಚಿನಲ್ಲಿ ಎರಡು ಕ್ಯಾಂಡ್ಲ್ (ಮೇಣದಬತ್ತಿ)ಗಳನ್ನು ಹಚ್ಚಿ ಬಂದಿರುವುದಾಗಿ ತಿಳಿಸಿದ.
    ಆ ಎರಡು ಕ್ಯಾಂಡ್ಲ್ ಗಳ (ಮೇಣದಬತ್ತಿಗಳ) ಪ್ರಜ್ವಲ ಬೆಳಕೇ ಇಂದಿನ ನನ್ನ ಜೀವನದ ಯಶಸ್ಸಿನ ದಾರಿದೀಪವೆಂದು ನನ್ನ ಭಾವನೆಯಾಗಿದೆ.