ಸನ್ನಾ ಮರಿನ್ ಎಂಬ ‘ಸಂತೋಷ ದೇಶ’ದ ಪ್ರಧಾನಿ

ಸನ್ನಾ ಮರಿನ್ ಎಂಬ ‘ಸಂತೋಷ ದೇಶ’ದ ಪ್ರಧಾನಿ

ನಿಮಗೆ ಗೊತ್ತೇ? ಪ್ರತೀ ವರ್ಷ ಮಾರ್ಚ್ ೨೦ನ್ನು ' ವಿಶ್ವ ಸಂತೋಷ ದಿನ' ಎಂದು ಆಚರಿಸಲಾಗುತ್ತದೆ. ಆ ಸಮಯ ವಿಶ್ವದ ನಾಗರಿಕರ ಸಂತೋಷದ ದೇಶಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡ ದೇಶ ಯಾವುದು ಗೊತ್ತಾ? ಫಿನ್ ಲ್ಯಾಂಡ್ ಎಂಬ ಪುಟ್ಟ ದೇಶ. ಸಂತೋಷದ ಸೂಚ್ಯಂಕದಲ್ಲಿ ಇದು ಮೊದಲ ಸ್ಥಾನದಲ್ಲಿರುವ ದೇಶ. ಯುರೋಪಿಯನ್ ದೇಶಗಳೇ ಮೊದಲ ಹತ್ತು (ನ್ಯೂಜಿಲ್ಯಾಂಡ್ ಹೊರತು ಪಡಿಸಿ) ಸ್ಥಾನಗಳಲ್ಲಿ ಪ್ರಾಬಲ್ಯ ಸ್ಥಾಪಿಸಿಕೊಂಡಿವೆ. ಫಿನ್ ಲ್ಯಾಂಡ್ ಬಳಿಕ ಡೆನ್ಮಾರ್ಕ್, ಸ್ವಿಡ್ಜರ್ ಲ್ಯಾಂಡ್, ಐಸ್ ಲ್ಯಾಂಡ್, ನೆದರ್ ಲ್ಯಾಂಡ್ ನಂತರದ ಸ್ಥಾನಗಳಲ್ಲಿವೆ. ಭಾರತಕ್ಕೆ ಈ ಸಂತೋಷದ ಪಟ್ಟಿಯಲ್ಲಿ ಸಿಕ್ಕಿದ್ದು ೧೩೯ನೇ ಸ್ಥಾನ. ಅದೂ ೧೪೯ ದೇಶಗಳ ಪಟ್ಟಿಯಲ್ಲಿ. ಪಾಕಿಸ್ತಾನ, ಬಾಂಗ್ಲಾದೇಶ, ಚೀನಾಗಳು ನಮಗಿಂತ ಮೇಲಿನ ಸ್ಥಾನದಲ್ಲಿವೆ.

ಇರಲಿ, ನಮ್ಮ ನಾಗರಿಕರ ಸಂತೋಷವನ್ನು ಪಟ್ಟಿ ಮಾಡುವವರು ಸರಿಯಾಗಿ ಅರ್ಥ ಮಾಡಿಕೊಂಡಿರಲಿಕ್ಕಿಲ್ಲ ಅಥವಾ ಅವರು ಭಾರತದ ರಾಜಕಾರಣಿಗಳನ್ನು ಈ ಪಟ್ಟಿ ಮಾಡುವಾಗ ಪರಿಗಣಿಸಿಲ್ಲವೇನೋ? ನಾನಿಲ್ಲಿ ಹೇಳಹೊರಟಿರುವುದು ಫಿನ್ ಲ್ಯಾಂಡ್ ಎಂಬ ಪುಟ್ಟ ದೇಶದ ಪ್ರಧಾನಿಯಾದ ಸನ್ನಾ ಮರಿನ್ ಬಗ್ಗೆ. ೨೦೧೯ರಲ್ಲಿ ಪ್ರಧಾನಿ ಹುದ್ದೆ ಅಲಂಕರಿಸುವಾಗ ಇವರ ವಯಸ್ಸು ಕೇವಲ ೩೪. ಬರೆದದ್ದು ತಪ್ಪಾಗಿದೆ ಅಂತೀರಾ? ನಮ್ಮ ದೇಶದಲ್ಲಿ ಈ ವಯಸ್ಸಿನಲ್ಲಿ ಕೆಲವರು ರಾಜಕೀಯಕ್ಕೇ ಬಂದಿರುವುದಿಲ್ಲ. ಆ ವಯಸ್ಸಿನಲ್ಲಿ, ಅದೂ ಮಹಿಳೆಯೊಬ್ಬರು ದೇಶದ ಚುಕ್ಕಾಣಿ ಹಿಡಿಯುವುದು ಬಹಳ ಅಪರೂಪದ ಸಂಗತಿ. 

ಸನ್ನಾ ಮಿರೆಲ್ಲಾ ಮರಿನ್ (Sanna Mirella Marin) ಹುಟ್ಟಿದ್ದು ೧೬ ನವೆಂಬರ್ ೧೯೮೫ರಲ್ಲಿ. ಸನ್ನಾಳ ತಂದೆ ವಿಪರೀತ ಕುಡಿಯುತ್ತಿದ್ದ ಮತ್ತು ಅವರ ತಾಯಿಯನ್ನು ಹೊಡೆದು ಬಡಿದು ಹಿಂಸೆ ಕೊಡುತ್ತಿದ್ದ. ಇದರಿಂದ ಸನ್ನಾಳ ತಾಯಿ ತನ್ನ ಗಂಡನಿಗೆ ವಿಚ್ಚೇದನ ನೀಡಿ ಬೇರೆಯಾಗುತ್ತಾರೆ. ಈ ಕಾರಣದಿಂದ ಸನ್ನಾರ ಕುಟುಂಬ ಬಹಳ ಕಷ್ಟಕ್ಕೆ ಸಿಲುಕುತ್ತಾರೆ. ಕುಟುಂಬದ ಹಸಿವನ್ನು ನೀಗಿಸಲು ಸನ್ನಾ ಬೇಕರಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಅಲ್ಲಿ ಸಿಕ್ಕ ಹಣದಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಸನ್ನಾ ವಿದ್ಯೆ ಕಲಿಯುವುದು ಅವಳ ತಾಯಿಗೆ ಇಷ್ಟವಿರಲಿಲ್ಲ. ಆದರೂ ಹಠ ಬಿಡದೇ ಕಷ್ಟಪಟ್ಟು ಓದಿ ತಮ್ಮ ೧೯ನೆಯ ವಯಸ್ಸಿನಲ್ಲಿ ಪದವಿಯನ್ನು ಪಡೆದುಕೊಂಡ ಸನ್ನಾ ನಂತರದ ದಿನಗಳಲ್ಲಿ ರಾಜಕೀಯದತ್ತ ಆಕರ್ಷಿತರಾಗುತ್ತಾರೆ. ೨೦೦೬ರಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ ಯುವ ಘಟಕಕ್ಕೆ ಸೇರ್ಪಡೆಯಾದ ಸನ್ನಾ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ಯುವ ಘಟಕದ ಉಪಾಧ್ಯಕ್ಷೆಯಾಗಿ ೨೦೧೦ ರಿಂದ ೨೦೧೨ರವರೆಗೆ ಕಾರ್ಯನಿರ್ವಹಿಸುತ್ತಾರೆ. 

೨೦೧೨ರಲ್ಲಿ ಫಿನ್ ಲ್ಯಾಂಡ್ ನ ಹೆಲ್ಸಂಕಿ ನಗರ ಪಾಲಿಕಾ (ಮುನ್ಸಿಪಲ್) ಚುನಾವಣೆಯಲ್ಲಿ ಆಯ್ಕೆಯಾಗುತ್ತಾರೆ. ಅಲ್ಲಿಯ ಮುನ್ಸಿಪಲ್ ಅಧ್ಯಕ್ಷರಾಗಿಯೂ ಆಯ್ಕೆಯಾಗುತ್ತಾರೆ. ವಯಸ್ಸು ಸಣ್ಣದಾದರೂ ಸನ್ನಾರಿಗೆ ದೂರದೃಷ್ಟಿ ವ್ಯಕ್ತಿತ್ವ ಇತ್ತು. ತಮ್ಮ ದೇಶ, ಊರಿನ ಬಗ್ಗೆ ಕಳಕಳಿಯಿತ್ತು. ಇವರ ಮೂರು ವರ್ಷದ ಮುನ್ಸಿಪಲ್ ಅಧ್ಯಕ್ಷಗಿರಿಯ ಸಮಯದಲ್ಲಿ ಹೆಲ್ಸಂಕಿ ನಗರವನ್ನು ಅತ್ಯಂತ ಸ್ವಚ್ಚ ಮತ್ತು ಸುಂದರವನ್ನಾಗಿಸುತ್ತಾರೆ. ಉತ್ತಮ ರಸ್ತೆ, ವಿದ್ಯುತ್, ನೀರು ಮುಂತಾದ ಎಲ್ಲಾ ಪ್ರಾಥಮಿಕ ಬೇಡಿಕೆಗಳನ್ನು ಪೂರೈಸುತ್ತಾರೆ. ಇದರಿಂದ ಸನ್ನಾಳ ಸಾಮರ್ಥ್ಯದ ಮೇಲೆ ಜನರಿಗೆ ನಂಬಿಕೆ ಮೂಡುತ್ತದೆ. ತಮ್ಮ ಬಾಲ್ಯದಲ್ಲಿ ತಾವು ಶಿಕ್ಷಣ ಪಡೆಯಲು ಪಟ್ಟ ಕಷ್ಟ ಬೇರೆ ಯಾರಿಗೂ ಬರಬಾರದು ಎಂದು ಶಾಲೆಗಳನ್ನು ಉನ್ನತೀಕರಣಗೊಳಿಸುತ್ತಾರೆ. ಹಲವಾರು ಶಾಲೆ, ಕಾಲೇಜುಗಳನ್ನು ಪ್ರಾರಂಭಿಸುತ್ತಾರೆ. ಸನ್ನಾಳ ಅತೀ ದೊಡ್ದ ಹೆಗ್ಗಳಿಕೆಯೆಂದರೆ ಇವರು ಜನರ ಜೊತೆ ಬೆರೆಯುತ್ತಾರೆ. ತಾವು ಪ್ರಾರಂಭಿಸಿದ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡುತ್ತಾರೆ, ಮಕ್ಕಳಿಗಾಗಿ ಹಾಡುಗಳನ್ನು ಹಾಡುತ್ತಾರೆ. ಉತ್ತಮ ವಿದ್ಯಾಭ್ಯಾಸ ಪಡೆದು, ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಬೇಕೆಂದು ಪ್ರೇರೇಪಿಸುತ್ತಾರೆ. ಜನರೂ ಇವರ ವ್ಯಕ್ತಿತ್ವವನ್ನು ಗೌರವಿಸಲಾರಂಭಿಸುತ್ತಾರೆ.

೨೦೧೫ರಲ್ಲಿ ಇವರು ಮೊದಲಬಾರಿಗೆ ಫಿನ್ ಲ್ಯಾಂಡ್ ಸಂಸತ್ತಿಗೆ ಸದಸ್ಯರಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಆಯ್ಕೆಯಾಗುತ್ತಾರೆ. ೨೦೧೯ರಲ್ಲಿ ಇವರು ಸಾರಿಗೆ ಮತ್ತು ಸಂಪರ್ಕ ಖಾತೆಯ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಅದೇ ವರ್ಷ ನಡೆದ ಮುಷ್ಕರವೊಂದರ ಕಾರಣದಿಂದ ಅಂದಿನ ಪ್ರಧಾನಿ ಆಂಟಿ ರಿನ್ನಿ (Antti Rinne) ತಮ್ಮ ಪದವಿಗೆ ರಾಜೀನಾಮೆ ಕೊಟ್ಟಾಗ ಅವರ ಪಕ್ಷ ನಂಬಿಕೆ ಇಟ್ಟದ್ದು ಸನ್ನಾ ಮರಿನ್ ಮೇಲೆ. ೨೦೧೯ ಡಿಸೆಂಬರ್ ೧೦ರಂದು ಫಿನ್ ಲ್ಯಾಂಡ್ ಎಂಬ ದೇಶದ ಕಿರಿಯ ಪ್ರಧಾನಿ (೩೪ ವರ್ಷ) ಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ಸಮಯದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆ ‘ತೀರಾ ಚಿಕ್ಕ ವಯಸ್ಸಿಗೆ ಪ್ರಧಾನಿಯಾಗಿ ಆಯ್ಕೆಯಾದ ನೀವು ದೇಶವನ್ನು ಸರಿಯಾದ ದಾರಿಯಲ್ಲಿ ನಡೆಸುವಿರೆಂದು ನಂಬಿಕೆ ನಿಮಗಿದೆಯೇ?’ ಇದಕ್ಕೆ ಸನ್ನಾ ಉತ್ತರಿಸಿದ್ದು ಹೀಗೆ ‘ನಾನು ನನ್ನ ವಯಸ್ಸು ಮತ್ತು ಲಿಂಗದ ಬಗ್ಗೆ ಯಾವತ್ತೂ ಯೋಚಿಸುವುದಿಲ್ಲ. ಸಾಮರ್ಥ್ಯ, ವಿವೇಚನೆ ಮತ್ತು ಶೃದ್ಧೆಯಿಂದ ಕೆಲಸ ಮಾಡುವುದಷ್ಟೇ ನನ್ನ ಕೆಲಸ’ ಇದು ಸನ್ನಾ ಮಾತು. ಅವರ ಸಚಿವ ಸಂಪುಟದಲ್ಲಿ ಮಹಿಳೆಯರದ್ದೇ ಪ್ರಾಬಲ್ಯ. ೧೪ ಸಚಿವರ ಪೈಕಿ ೯ ಮಂದಿ ಮಹಿಳೆಯರು. ನಮ್ಮಲ್ಲಿ ಹೆಸರಿಗಷ್ಟೇ ಮಹಿಳಾ ಮೀಸಲಾತಿ, ಸಂಪುಟದಲ್ಲಿ ಗಮನಿಸಿದರೆ ಬೆರಳೆಣಿಕೆಯಷ್ಟೇ ಮಹಿಳೆಯರು ಕಾಣಸಿಗುತ್ತಾರೆ. 

ಮಾರ್ಕಸ್ ರಾಯೋಸನ್ ಎಂಬವರನ್ನು ಮದುವೆಯಾದ ಇವರಿಗೆ ಎರಡು ವರ್ಷದ ಪುಟ್ಟ ಮಗಳಿದ್ದಾಳೆ. ಫಿನ್ ಲ್ಯಾಂಡ್ ನಾಗರಿಕರು ಸಂತೋಷದ ಜೀವನ ಮತ್ತು ಆರೋಗ್ಯದ ಕಡೆಗೆ ಬಹಳ ಮಹತ್ವ ನೀಡುತ್ತಾರೆ. ಜನರ ಸಂತೋಷಕ್ಕಾಗಿ ಸನ್ನಾ ವಾರದ ೬ ದಿನಗಳ ಕೆಲಸದ ಸಮಯವನ್ನು ೫ ದಿನಕ್ಕಿಳಿಸಿದ್ದಾರೆ. ವಾರಾಂತ್ಯದಲ್ಲಿ ಎರಡು ದಿನಗಳ ರಜೆ ನಾಗರಿಕರನ್ನು ಇನ್ನಷ್ಟು ಉತ್ಸಾಹದಿಂದ ಕೆಲಸಕ್ಕೆ ಮರಳುವಂತೆ ಮಾಡುತ್ತದೆ ಎನ್ನುವುದು ಸನ್ನಾರ ಧೃಢ ಮಾತು. ಕುಟುಂಬದ ಸದಸ್ಯರ ಜೊತೆ ಹೆಚ್ಚು ಹೆಚ್ಚು ಸಮಯ ಕಳೆಯುವುದರಿಂದ ಜನರ ಮಾನಸಿಕ ನೆಮ್ಮದಿ ಹೆಚ್ಚಲಿದೆ ಎಂಬುವುದು ಸನ್ನಾರ ಅಭಿಮತ. ತಮ್ಮ ಆಡಳಿತದ ಸಮಯದಲ್ಲಿ ಇವರು ಬಹಳಷ್ಟು ಸುಧಾರಣೆಗಳನ್ನು ಮಾಡುತ್ತಾ ಬರುತ್ತಿದ್ದಾರೆ. 

ಉತ್ತರ ಯುರೋಪಿನಲ್ಲಿರುವ ಫಿನ್ ಲ್ಯಾಂಡ್ ಎಂಬ ಪುಟ್ಟ ದೇಶ ಅತ್ಯಂತ ಸುರಕ್ಷಿತ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂತೋಷ ನಾಗರಿಕರ ಕ್ರಮಾಂಕದಲ್ಲಿ ನಿರಂತರ ನಾಲ್ಕು ವರ್ಷ ಮೊದಲ ಸ್ಥಾನದಲ್ಲೇ ಫಿನ್ ಲ್ಯಾಂಡ್ ಮುಂದುವರೆಯಲು ಸನ್ನಾ ಮರಿನ್ ಅವರ ಕಾರ್ಯ ವೈಖರಿಯೂ ಒಂದು ಕಾರಣವಾಗಿರಬಹುದು. ತಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳನ್ನು ಸನ್ನಾ ಮರೆತಿಲ್ಲ. ಆ ಕಾರಣದಿಂದಲೇ ತಮ್ಮ ನಾಗರಿಕರ ಉತ್ತಮ ಜೀವನ ಹಾಗೂ ಭವಿಷ್ಯಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಇದ್ದಾರೆ. ೨೦೧೯ರಲ್ಲಿ ಇವರಿಗೆ ಫಿನ್ ಲ್ಯಾಂಡ್ ದೇಶದ ನಾಗರಿಕ ವೇದಿಕೆ ‘ವಿಶ್ವದ ಮಹಿಳೆ' ಪುರಸ್ಕಾರ ನೀಡಿ ಗೌರವಿಸಿತ್ತು. ೨೦೨೦ರಲ್ಲಿ ಬಿಬಿಸಿ ಆರಿಸಿದ ವಿಶ್ವದ ೧೦೦ ಖ್ಯಾತ ಮಹಿಳೆಯರಲ್ಲಿ ಸನ್ನಾ ಮರಿನ್ ಅವರ ಹೆಸರೂ ಸೇರಿದೆ. ಫೋರ್ಬ್ಸ್ ಪತ್ರಿಕೆ ೨೦೨೦ರಲ್ಲಿ ಆರಿಸಿದ 'ವಿಶ್ವದ ೧೦೦ ಬಲಿಷ್ಟ ಮಹಿಳೆ' ಪಟ್ಟಿಯಲ್ಲೂ ಇವರು ಸ್ಥಾನ ಪಡೆದಿದ್ದಾರೆ. 

ವಯಸ್ಸು ಕೇವಲ ನೆಪ ಮಾತ್ರ ಎನ್ನುವ ಸನ್ನಾಳ ಸಾಧನೆ ಗಮನಾರ್ಹ. ವಿಶ್ವದ ಎಲ್ಲ ಮಹಿಳೆಯರ ಪಾಲಿನ ರೋಲ್ ಮಾಡೆಲ್ ಆಗಿರುವ ಸನ್ನಾಳಿಂದ ನಾವು ಕಲಿಯಬೇಕಾದದ್ದು ಬಹಳ ಇದೆ. ನಿರಂತರ ಪರಿಶ್ರಮ, ಧೈರ್ಯ ಮತ್ತು ಬದ್ಧತೆಗಳು ಇದ್ದಲ್ಲಿ ನಾವೂ ಒಂದು ದಿನ ಸಾಧಕರ ಸಾಲಿನಲ್ಲಿ ನಿಲ್ಲಬಹುದು.  

ಚಿತ್ರ ಕೃಪೆ: ಅಂತರ್ಜಾಲ ತಾಣ