ಸನ್ಯಾಸಿ ಮತ್ತು ಇತರ ಕಥೆಗಳು

ಸನ್ಯಾಸಿ ಮತ್ತು ಇತರ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಕುವೆಂಪು
ಪ್ರಕಾಶಕರು
ಉದಯರವಿ ಪ್ರಕಾಶನ, ಮೈಸೂರು
ಪುಸ್ತಕದ ಬೆಲೆ
ರೂ. 60/-

ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾದ ಕುವೆಂಪು ಅವರು ಬರೆದ ಒಂಭತ್ತು ಕತೆಗಳು ಈ ಸಂಕಲನದಲ್ಲಿವೆ. ಗ್ರಾಮೀಣ ಬದುಕನ್ನು ಕಟ್ಟಿ ಕೊಡುವ ಇಲ್ಲಿನ ಕೆಲವು ಕತೆಗಳಲ್ಲಿ ಕುವೆಂಪು ಅವರ ಬಾಲ್ಯದ ಅನುಭವಗಳ ಪ್ರಭಾವ ಗಾಢವಾಗಿದೆ.

ಮೊದಲ ಕತೆ "ಸನ್ಯಾಸಿ". ಸಂಸಾರ ತೊರೆದು, ಸನ್ಯಾಸಿ ದೀಕ್ಷೆ ಪಡೆದು ನೆಮ್ಮದಿ ಕಂಡುಕೊಂಡ ಚೈತನ್ಯ ಅನಂತರ ಅಚಾನಕ್ ದ್ವಂದ್ವವನ್ನು ಎದುರಿಸಬೇಕಾಗುತ್ತದೆ. ತನ್ನ ಗುರುಗಳ ಆಶೀರ್ವಾದದಿಂದಲೇ ಆತನು ಆ ದ್ವಂದ್ವದಿಂದ ಹೊರಬರುವುದು ಈ ಕತೆಯ ಹಂದರ. ಅಧ್ಯಾತ್ಮದ ಹಾದಿಯಲ್ಲಿ ಸಾಗುವವರ ತುಮುಲಗಳನ್ನು ಸಶಕ್ತವಾಗಿ ಚಿತ್ರಿಸಿರುವ ಕತೆ.

“ಕ್ರಿಸ್ತನಲ್ಲ, ಪಾದ್ರಿಯ ಮಗಳು!” ಎಂಬ ಎರಡನೆಯ ಕತೆ ಆದರ್ಶವಾದಿ ವ್ಯಕ್ತಿಯೊಬ್ಬನ ಪತನವನ್ನು ತೆರೆದಿಡುತ್ತದೆ. ಕಾಲೇಜು ಶಿಕ್ಷಣ ಪಡೆಯುತ್ತಿದ್ದಾಗಲೇ ಕ್ರಿಶ್ಚಿಯನ್ ಪಾದ್ರಿಗಳಿಂದ ಆಗುತ್ತಿದ್ದ ಮತಾಂತರಗಳ ಬಗ್ಗೆ ರೋಷದಿಂದಿದ್ದ ಕಥಾನಾಯಕ, ಎಂ.ಎ. ಅಧ್ಯಯನ ಪೂರೈಸಿದ ನಂತರವೂ ಅದನ್ನು ವಿರೋಧಿಸುತ್ತಿದ್ದ. ಕೊನೆಗೆ ಪಾದ್ರಿಯೊಬ್ಬನ ಮೋಹಕ ಮಗಳ ಮೋಹ ಪಾಶದಲ್ಲಿ ಸಿಲುಕಿ ಪತನದ ಹಾದಿ ಹಿಡಿಯುತ್ತಾನೆ. ಅಕಸ್ಮಾತ್ತಾಗಿ ತನ್ನ ಕಾಲೇಜ್ ರೂಂಮೇಟಿನ ಭೇಟಿ ಆದ ನಂತರ ತನ್ನ ದಾರುಣ ಕತೆಯನ್ನು ಆತನಿಗೆ ಬಿಚ್ಚಿಡುತ್ತಾನೆ.

ಮುಂದಿನ ಕತೆ “ಈಶ್ವರನೂ ನಕ್ಕಿರಬೇಕು". ಅಂಗಊನವಿದ್ದ ವಧು ಮತ್ತು ವರ ಮದುವೆಯಾಗುವುದೇ ಈ ಕತೆಯ ಹೂರಣ. “ಆರಾಣೆ ಮೂರು ಕಾಸು" ಮಾಧವರಾಯರು ಹೇಳುವ ಕತೆ. ಇದರ ಕಥಾನಾಯಕ ಬ್ರಿಟಿಷರು ಆಡಳಿತ ವಹಿಸಿಕೊಂಡಾಗ ತನ್ನ ನವಾಬಗಿರಿ ಕಳೆದುಕೊಂಡು ಭಿಕಾರಿಯಾಗುವ ನವಾಬ. ಆತನಿಗೆ ಮನಸ್ಸಿಲ್ಲದ ಮನಸ್ಸಿನಿಂದ ಹಣದ ಸಹಾಯ ಮಾಡುವ ಮಾಧವರಾಯರಿಗೆ ಕೊನೆಗೂ ಆತ ಅದನ್ನು ಹಿಂತಿರುಗಿಸುವ ಮಾರ್ಮಿಕ ಕತೆ.

"ಯಾರೂ ಅರಿಯದ ವೀರ” ಕತೆಯ ಕಥಾವಸ್ತು ಹಳ್ಳಿಯ ಕುಟುಂಬವೊಂದರ ಸೇವಕ ಲಿಂಗನ ಸ್ವಾಮಿನಿಷ್ಠೆ. ಧಾರಾಕಾರ ಮಳೆಯಿಂದಾಗಿ ಸಂಜೆಯ ಹೊತ್ತಿಗೆ ಮನೆಯ ಪಕ್ಕದ ನದಿಯ ನೀರು ಮೆಟ್ಟಲುಮೆಟ್ಟಲಾಗಿ ಏರುತ್ತದೆ. ಕೊನೆಗೆ ಯಜಮಾನನ ಮನೆಯ ಅಂಗಳಕ್ಕೆ ನೆರೆನೀರು ನುಗ್ಗಿ ಮನೆ ಕುಸಿಯತೊಡಗುತ್ತದೆ. ಗಾಢ ಕತ್ತಲಿನಲ್ಲಿಯೇ ಮನೆಯವರೆಲ್ಲ ದೋಣಿಯೇರಿ ಜೀವ ಕೈಯಲ್ಲಿ ಹಿಡಿದು ಆ ನೆರೆ ನೀರಿನಲ್ಲಿಯೇ ಸಾಗುತ್ತಾರೆ. ಲಿಂಗ ತನ್ನ ಜೀವದ ಆಶೆ ತೊರೆದು ಅವರನ್ನೆಲ್ಲ ರಕ್ಷಿಸುತ್ತಾನೆ.

"ದೆವ್ವದ ಕಾಟ” ಕತೆ ನವಿಲೂರಿನ ಜಮೀನುದಾರ ರಂಗರಾಯರ ಸೇವಕ ಮುತ್ತಣ್ಣನ ಸ್ವಾಮಿದ್ರೋಹದ ಬಗ್ಗೆ. ರಂಗರಾಯರು ಮುತ್ತಣ್ಣನನ್ನು ನಂಬಿ, ನವಿಲೂರಿನ ಜಮೀನಿನ ಉಸ್ತುವಾರಿಯನ್ನೆಲ್ಲ ಅವನಿಗೆ ವಹಿಸಿದ್ದರು. ತೀರ್ಥಹಳ್ಳಿಯಲ್ಲಿ ವಾಸವಾಗಿದ್ದ ಅವರು ನವಿಲೂರಿನ ಮನೆಯಲ್ಲಿ ವಾಸ ಮಾಡಲು ನಿರ್ಧರಿಸಿದ ನಂತರ ಅವರ ಮನೆಗೆ ದೆವ್ವದ ಕಾಟ ಶುರು. ಐದು ಜನರು ಹಲವಾರು ದಿನ ರಾತ್ರಿಯಿಡೀ ಕಾದು ಕುಳಿತರೂ ‘ದೆವ್ವ" ಪತ್ತೆಯಾಗಲಿಲ್ಲ. ಕೊನೆಗೆ ಪೊಲೀಸ್ ಇನ್‌ಸ್ಪೆಕ್ಟರ್ ದೆವ್ವದ ನಾಟಕವಾಡುತ್ತಿದ್ದಾತನನ್ನು ಪತ್ತೆ ಮಾಡುತ್ತಾರೆ.

ಶಾಲೆಯಲ್ಲಿ ಕಲಿಯುತ್ತಿದ್ದಾಗ ಒಬ್ಬಾತ “ಇನ್ನು ಹೋಳಿಗೆ ತಿನ್ನೋದಿಲ್ಲ” ಎಂದು ಪ್ರತಿಜ್ನೆ ಮಾಡಬೇಕಾಯಿತು. ಆ ಪ್ರಸಂಗದ ಹಿನ್ನೆಲೆಯನ್ನು ತಿಳಿಸುವ ಕತೆ “ಹೋಳಿಗೆ ಪ್ರತಿಜ್ನೆ”. “ಮಾಯದ ಮನೆ" ಹಣದ ದಾಹದಿಂದ ಹುಡುಗನೊಬ್ಬನಿಗೆ ಚಿಕಿತ್ಸೆ ನಿರಾಕರಿಸಿದ ವೈದ್ಯ ಸುರೇಂದ್ರಬಾಬು ಆ ಹುಡುಗ ಸತ್ತ ನಂತರ ಪಾಪಪ್ರಜ್ನೆಯಿಂದ ಬಳಲಿದ್ದನ್ನು ಚಿತ್ರಿಸುವ ಕತೆ.

"ಶ್ರೀಮನ್ಮೂಕವಾಗಿತ್ತು" ಕತೆಯ ಆರಂಭದಲ್ಲಿಯೇ ರೈತ ರಂಗನ ಎಮ್ಮೆಯೊಂದು ಕಾಣೆಯಾಗುತ್ತದೆ. ಸುರಿಯುವ ಮಳೆಯಲ್ಲಿ  ರಾತ್ರಿಯಿಡೀ ನಿದ್ದೆಗೆಟ್ಟು ಅದನ್ನು ಹುಡುಕುವ ರಂಗ ಬೆಳಗಾದಾಗ ಅದನ್ನು ಪತ್ತೆ ಮಾಡಿ ಮನೆಗೆ ಕರೆತರುತ್ತಾನೆ - ಅದರ ಪುಟ್ಟ ಕರುವನ್ನು ಉಳಿಸಲಿಕ್ಕಾಗಿ. ಇದರೊಂದಿಗೆ ಅನಾರೋಗ್ಯದಿಂದ ಮಲಗಿದ ಬಾಲಕನೊಬ್ಬನ ಪ್ರಸಂಗ ತಳಕು ಹಾಕಿಕೊಂಡಿದೆ.

ಇದರ ಎಲ್ಲ ಕತೆಗಳೂ ಸಕಾರಾತ್ಮಕವಾದ ಜೀವನದೃಷ್ಠಿಗೆ ಒತ್ತು ನೀಡಿವೆ. ಕತೆಗಳಲ್ಲಿ ಸುಪ್ತವಾಗಿ ಹರಿಯುವ ಅಧ್ಯಾತ್ಮದ ಎಳೆಗಳನ್ನು ಗುರುತಿಸಲು ಸಾಧ್ಯವಾದರೆ, ಎಲ್ಲ ಕತೆಗಳಿಗೂ ಹೊಸ ಆಯಾಮವೊಂದು ಓದುಗನಿಗೆ ದಕ್ಕುತ್ತದೆ.