ಸಪ್ತಗಿರಿ ಸಂಪದ (ಪೌರಾಣಿಕ ಕಥಾನಕ) ಸಂಚಿಕೆ-1

ಸಪ್ತಗಿರಿ ಸಂಪದ (ಪೌರಾಣಿಕ ಕಥಾನಕ) ಸಂಚಿಕೆ-1

ಬರಹ

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್ವೆಂಕಟನಾಥಾಯ ಶ್ರೀನಿವಾಸಾಯತೇನಮಃ ||
ಜಗತ್ತು ತ್ರಿಗುಣಾತ್ಮಕವಾಗಿದೆ. ಇಲ್ಲಿ ಮೂರು ಭಾಗ ಜಲಾವೃತವಾಗಿದೆ. ಒಂದು ಭಾಗ ಮಾತ್ರ ಭೂಮಿ. ಈ ಒಂದು ಭಾಗ ಭೂಮಿಯಲ್ಲಿ ಮೂರು ಭಾಗ ಪರಮ ಪಾಪಿಗಳೆ ತುಂಬಿದ್ದಾರೆ. ಹೌದು, ಪರಮ ಪಾಪಿಗಳಿಗೇ ಸುಭಿಕ್ಷ ಕಾಲವೆಂದರು ನಮ್ಮ ಹರಿದಾಸರು 15ನೇ ಶತಮಾನದಲ್ಲಿಯೆ. ಈಗ ಜನ ಸಂಖ್ಯೆ ಹೆಚ್ಚುತ್ತಲೇ ಇದೆ ಪರಮ ಪಾಪಿಗಳೂ ಹೆಚ್ಚುತ್ತಲೆ ಇದ್ದಾರೆ. ಹೌದು, ಮೂರು ಭಾಗ ಪರಮ ಪಾಪಿಗಳಾದರೆ, ಇನ್ನೊಂದು ಭಾಗದಲ್ಲಿ ಸಾತ್ವಿಕರು. ಈ ಸಾತ್ವಿಕರಿಂದಲೇ ಇಡೀ ಜಗತ್ತು ಅಸ್ತಿತ್ವದಲ್ಲಿರುವುದು; ಚಲನೆಯಲ್ಲಿರುವುದು. ಜಗತ್ತಿನಲ್ಲಿ ಸಾತ್ವಿಕ ಶಕ್ತಿಯೆ ಮೇಲು. ನಾವು ಯಾರ ಜೊತೆ ಬದುಕ ಬೇಕೆಂಬುದ ನಮ್ಮ ಆಯ್ಕೆಗಷ್ಟೇ ಎದಿರಾಗಿ ಬಿಡುವ ಸವಾಲು ಅಲ್ಲವೇ...?

ತಿರುಪತಿ ತಿರುಮಲೇಶ ಸಂಪತ್ತಿನ ಸ್ವಾಮಿ, ಬಡ್ಡಿ ಕಾಸಿನವನೆಂದೇ ಭಾವಿಸುವುದಲ್ಲ. ಅವನು ಸಾತ್ವಿಕ ಸಂಪನ್ನ. ಇಡೀ ಜಗತ್ತಿಗೆ ಸಾತ್ವಿಕ ಶಕ್ತಿ ಸಾರಲೆಂದೇ ಭೂಮಿಗಿಳಿದು ಬಂದ ಭಗವಂತನವನು ಎಂಬ ಸತ್ಯ ತಿಳಿದವರೂ ಕಡಿಮೆಯೆ . ಭಕ್ತಿ ಭಾವದಿಂದ ಅವನಿಗೆ ಹರಕೆ ಕಾಣಿಕಗಳನ್ನೊಪ್ಪಿಸಿದರೆ ಸಾಕು, ತಮ್ಮ ಇಷ್ಟಾರ್ಥಗಳು ಸಿದ್ಧಿಸುವುವೆಂದು ನಂಬಿರುವ ಸಮುದಾಯ ಬಹಳ ದೊಡ್ಡದು. ಸಾಮಾನ್ಯವಾಗಿ ರಾಮಾಯಣ ,ಮಹಾ ಭಾರತ ಈ ಎರಡು ಮಹಾ ಪುರಾಣ ಕಥೆಗಳು ಎಲ್ಲಕಾಲಕ್ಕೂ
ಸಮಕಾಲೀನ ಜೀವನ ಮೌಲ್ಯಗಳನ್ನು ಒದಗಿಸುತ್ತವೆ ಎಂಬ ಭಾವನೆಯೆ ಪ್ರಚಲಿತದಲ್ಲಿದೆ.. ಇವುಗಳನ್ನು ಹೊರತು ಪಡಿಸಿ ಬೇರೆ ಯಾವುದಾದರೂ ಪುರಾಣ ಕಥೆ ನಮ್ಮ ಬದುಕಿಗೆ ಮೌಲಿಕ ವೆನಿಸೀತೇ.... ಸಾರ್ವಕಾಲಿಕ ಸತ್ಯವನ್ನು ತೆರೆದಿಡಬಲ್ಲದೇ ಎಂಬ ಶೋಧನೆಯಲ್ಲಿ ನಾನಿದ್ದಾಗ ಮೂಡಿ ಬಂದ ಕೃತಿ “ಸಪ್ತಗಿರಿ ಸಂಪದ”. 1997ರಲ್ಲಿ ಪ್ರಕಟವಾದ ಈ ನನ್ನ ಪೌರಾಣಿಕ ಕೃತಿ ಸಾಕಷ್ಟು ಜನ ಮನ್ನಣೆ ಗಳಿಸಿತಾದರೂ , ಈ ಪ್ರಚಾರ ಪ್ರಪಂಚದಲ್ಲಿ ನನ್ನಂಥ ಸಾಮಾನ್ಯ ಲೇಖಕನಿಗೆ ಅದು ಇಷ್ಟವಿಲ್ಲದ ಹಾಗೂ ಸಾಧ್ಯವೂ ಆಗದ ಮಾತಲ್ಲವೇ... ಈ ಬರಹಗಾರನ ಬದುಕಿನಲ್ಲೊಂದು ಮಹತ್ವದ ಕೃತಿಯಾಗಿರುವ ಈ “ಸಪ್ತಗಿರಿ ಸಂಪದ” ವನ್ನು ಅದೇ ಹೆಸರಿನ ಸಂಪದ.ನೆಟ್ ವೆಬ್ ಸೈಟ್ ನಲ್ಲಿ ಪೌರಾಣಿಕ ಕಾದಂಬರಿಯಾಗಿ ಬ್ಲಾಗ್ ಮಾಡ ಬಯಸಿದ್ದೇನೆ. ದಯವಿಟ್ಟು ಇದನ್ನೊಂದು ಧಾರ್ಮಿಕ ಕೃತಿಯೆಂದು ನೀವು ಊಹಿಸಿದಿರಾದರೆ ಖಂಡಿತ ತಪ್ಪಾದೀತು!. ಮುಖ್ಯವಾಗಿ ಇಂದಿನ ಪೀಳಿಗೆಯ ಎಲ್ಲ ಧರ್ಮೀಯರೂ ಇಷ್ಟ ಪಡುವಂತಹ ಸಾಮಾಜಿಕ ಮೌಲ್ಯಗಳು ಈ ಕೃತಿಯಲ್ಲಿದೆ ಎಂದು ಘಂಟಾಘೋಷವಾಗಿ ಹೇಳಬಲ್ಲೆ. ಈ ಸಪ್ತಗಿರಿ ಸಂಪದದ ಸಾರವಿರುವುದೇ ಜಗತ್ತಿನಲ್ಲಿ ಸಭ್ಯನಾಗಿ ರುವುದು ಸಭ್ಯಗೃಹಸ್ತನಾಗಿ ಬದುಕುವುದನ್ನು ಬಿಟ್ಟರೆ ಬೇರೇನಿದೆ ಎಂದು ಹೇಳಿದರೆ ಏನೂ ಹೇಳಿದಂತಾಗದು....
ನೀವೂ ತಿರುಪತಿ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಿರಬಹುದು. ನಾನು ಮೊದಲ ಬಾರಿಗೆ ಭೇಟಿ ಕೊಟ್ಟಾಗ ಯಾಕೆ ಇಲ್ಲಿ ಜನ ತಂಡೋಪತಂಡವಾಗಿ ಬರುತ್ತಾರೆ. ತಮ್ಮ ಹರಕೆ ಕಾಣಿಕೆಗಳನ್ನೊಪ್ಸಿ ಮುಂದಿನ ಬದುಕಿಗೆ ಅದೇನನ್ನು ಕೊಂಡೊಯ್ಯುತ್ತಾರೆಂದು ತುಂಬಾ ತಲೆ ಕೆಡಿಸಿಕೊಂಡವನು. ಅಲ್ಲಿ ಸಿಗುವ ಮಗ್ಗಿ ಪುಸ್ತಕಗಳ ಮಾದರಿಯ ಸ್ಥಳ ಪುರಾಣ ಕಥೆಯಿಂದ ಬದುಕಿಗೆ ಭಕ್ತಿಯೊಂದನ್ನು ಹೊರುತು ಪಡಿಸಿ ಬೇರೇನನ್ನೂ ಕಾಣದವನಾಗಿ, ಜಗತ್ತಿನಲ್ಲಿ ಈ ದೇವರ ದರ್ಶನ ಮಾಡುತ್ತಿದ್ದಂತೆ ಪಾಮರರೂ ,ಪಾಪಿಗಳು, ಜ್ಞಾನಿಗಳೆಲ್ಲರೂ ಒಕ್ಕೊರಲಿನಿಂದ “ಗೋವಿಂದಾ” ಎಂದು ಕೈಮುಗಿಯುವುದೇಕೆಂದು ಚಿಂತಾಕ್ರಾಂತನಾದವನು. ಇಲ್ಲ, ಇಲ್ಲಿ ಸಹಸ್ರಾರು ಜನರು ಪ್ರತಿದಿನವೂ ದೇವರ ದರ್ಶನಕ್ಕಾಗಿ ಬರುತ್ತಿದ್ದಾರೆಂದರೆ, ಇಲ್ಲಿ ಅದೆಂಥ ಚುಂಬಕ ಶಕ್ತಿ ಇದ್ದೀತು! ಅದೇ ಸಾತ್ವಿಕ ಶಕ್ತಿಯೆ...? ಭೃಗು ಮಹರ್ಷಿಯಿಂದ ಪರೀಕ್ಷೆಗೊಳಗಾಗಿ ತಾನೆ ಸಾತ್ವಿಕನೆಂದು ಶೃತ ಪಡಿಸಿದ ಶ್ರೀಹರಿ, ಆ ಸಾತ್ವಿಕ ಸಂದೇಶವು ಆ ಮೂರು ಲೋಕಗಳಿಗೆ ಮಾತ್ರ ಸೀಮಿತವೆನಿಸದೇ ಇಡೀ ಜಗತ್ತಿಗೆ ಸಾರಲೆಂದು ಶ್ರೀಹರಿ ಶ್ರೀನಿವಾಸನಾಗಿ ಬಂದನೆಂಬುದನ್ನು ಸಾಮಾನ್ಯವಾಗಿ ಲಭ್ಯವಿರುವ ಸ್ಥಳಪುರಾಣ ಕಥೆ ಪುಸ್ತಕಗಳಲ್ಲಿ ಕಾಣಸಿಗಲಾರದು. ಕೇವಲ ಭಕ್ತಿ ಪ್ರಧಾನವಷ್ಟೇ ಅವುಗಳಲ್ಲಿ. ಇಂದಿನ ಯುವ ಪೀಳಿಗೆಗೆ ಏನೆಲ್ಲವನ್ನೂ ಪ್ರಾಕ್ಟಿಕಲ್ ಲೈಫ್ ಗೆಂದೇ ಹೋಲಿಸಿನೊಡುವಂತಹ ಸಂದರ್ಭದಲ್ಲಿ ಬದುಕುತ್ತಿರುವ ಹಿರಿಯರಾದ ನಾವು ಅವರ ಅನೇಕ ಪ್ರಶ್ನೆಗಳಿಗೆ ಉತ್ತರಿಸಲಾರೆವು.

-ಎಚ್.ಶಿವರಾಂ 18 ಆಗಸ್ಟ್ ,2006