ಸಪ್ಪೆಯಲ್ಲ ಸಿಪ್ಪೆ !
ಓಹ್! ಸಿಪ್ಪೆಯೋ? ಎಂದು ಸಿಪ್ಪೆಯನ್ನು ಸಪ್ಪೆಗೊಳಿಸಿ ಹೇಳುವುದಿದೆ, ನಿಜವಾಗಿಯೂ ಸಪ್ಪೆಯಲ್ಲ ಸಿಪ್ಪೆ. ಸಿಪ್ಪೆಯ ತಾಕತ್ತು ಅದ್ಭುತ. ಪ್ರಾಣಿಗಳ ಸಿಪ್ಪೆಯನ್ನು ಚರ್ಮ ಎನ್ನುವರು. ಹಣ್ಣು ಮತ್ತು ಬೀಜಗಳಿಗೆ ಸಿಪ್ಪೆಗಳಿವೆ. ತರಕಾರಿಗೂ ಸಿಪ್ಪೆಯಿದೆ. ಉರಗಗಳ ಸಿಪ್ಪೆಗೆ ಪೊರೆಯೆನ್ನುವರು. ಮರದ ತೊಗಟೆಗೆ ಸಿಪ್ಪೆಯೆಂದೂ ಹೇಳುವುದಿದೆ. ಮನೆಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ಬಳಕೆಯಾಗುವ ವಯರಿಗೂ skin (ಸಿಪ್ಪೆ) ಇದೆಯೆಂದು ಹಳ್ಳಿಗಳಲ್ಲಿ ಹೇಳುವುದನ್ನು ಕೇಳಿದ್ದೇವೆ. ಮನುಷ್ಯನ ಚರ್ಮವು ಯಾವುದೇ ಪ್ರಯೋಜನಕ್ಕಿಲ್ಲ. ಅದು ಸಪ್ಪೆ. ಆದರೆ ಅನೇಕ ಪ್ರಾಣಿಗಳ ಚರ್ಮ ವಿವಿಧ ರೀತಿಯಲ್ಲಿ ವಿನಿಯೋಗವಾಗುತ್ತಿದೆ.
ಯಾವುದೇ ಬೀಜವು ಮೊಳಕೆಯೊಡೆಯ ಬೇಕಾದರೆ ಅದಕ್ಕೆ ಸಿಪ್ಪೆ ಬೇಕೇ ಬೇಕು. ಭತ್ತದಲ್ಲಿ ಅಕ್ಕಿ ತಿರುಳು. ಆದರೆ ಭತ್ತದ ಸಿಪ್ಪೆ ಜಳ್ಳಲ್ಲ. ಭತ್ತದ ಸಂತತಿಯು ಮುಂದುವರಿಯಲು ಸಿಪ್ಪೆಯಿರದ ಭತ್ತದಿಂದ ಸಾಧ್ಯವಿಲ್ಲ. ತಿರುಳಿದ್ದರೂ ಸಂತತಿಯ ಮುಂದುವರಿಸುವಿಕೆಯಲ್ಲಿ ಸಿಪ್ಪೆಯ ಪಾತ್ರ ಅಮೋಘವಲ್ಲವೇ? ತೆಂಗಿನ ಕಾಯಿ ನೋಡಿದ್ದೇವೆ. ಅದಕ್ಕೆ ಎಷ್ಟು ಭದ್ರವಾದ ಸಿಪ್ಪೆ. ಮೂರು ಪದರಗಳಿರುವ ತೆಂಗಿನ ಕಾಯಿ ಬಹಳ ಎತ್ತರದಿಂದ ಕೆಳಗೆ ಬೀಳುತ್ತದೆ ಅಥವಾ ಕೊಯಿದು ಕೆಳಗೆ ಎಸೆಯುತ್ತೇವೆ. ಆದರೆ ಬೀಳುವ ರಭಸಕ್ಕೆ ಅದು ಬಂಡೆಯ ಮೇಲೇಯೇ ಬಿದ್ದರೂ ಅದರ ತಿರುಳು ಒಡೆಯದು, ನೀರು ಚೆಲ್ಲದು. ಭಗವಂತನ ಸೃಷ್ಟಿಯ ವಿಶೇಷತೆಯೇ ಸಿಪ್ಪೆಯ ಮಹತ್ವವನ್ನು ಸಾರುತ್ತದೆ.
ಹಣ್ಣುಗಳನ್ನು ತಿನ್ನುವಾಗ ಸಾಮಾನ್ಯವಾಗಿ ಸಿಪ್ಪೆಯನ್ನು ಎಸೆಯುತ್ತೇವೆ. ಬಾಳೆ ಹಣ್ಣು, ಹಲಸಿನ ಹಣ್ಣು, ಪಪ್ಪಾಯಿ ಹಣ್ಣು ಹೀಗೆ ಸಿಪ್ಪೆ ಸುಲಿದು ತಿನ್ನುವ ಹಣ್ಣುಗಳೇ ಅಧಿಕ. ಆದರೆ ದ್ರಾಕ್ಷಿ, ಚಿಕ್ಕು, ನೇರಳೆ ಮುಂತಾದುವಗಳನ್ನು ಸಿಪ್ಪೆ ಸಮೇತ ತಿನ್ನುತ್ತೇವೆ. ಕಿತ್ತಳೆ, ಮೂಸಂಬಿ, ದಾಳಿಂಬೆ ಮುಂತಾದುವುಗಳ ಸಿಪ್ಪೆ ಕಹಿ. ಆದ್ದರಿಂದ ಅವುಗಳಿಗೆ ಕೀಟ ಬಾಧೆ ಕಡಿಮೆ. ಸಿಪ್ಪೆಯೇ ಈ ಹಣ್ಣುಗಳ ರಕ್ಷಕ. ಕಾಡು ಮಾವಿನ ಹಣ್ಣನ್ನು ತಿಂದವರಿಗೆ ಗೊತ್ತು ಮಾವಿನ ಸಿಪ್ಪೆಯ ರುಚಿ. ಯಾರೂ ಕಾಡು ಮಾವಿನ ಸಿಪ್ಪೆಯನ್ನು ಎಸೆಯುವುದಿಲ್ಲ. ಅದಕ್ಕೆ ಔಷಧೀಯ ಗುಣವಿದೆ.
ಗೇರು ಹಣ್ಣಿನಲ್ಲಿರುವ ಬೀಜವೇ ವಿಶಿಷ್ಟ. ಹಣ್ಣಿನ ಹೊರಗಿರುವ ಬೀಜ. ಈ ಬೀಜದ ಸಿಪ್ಪೆಯಿಂದ ಎಣ್ಣೆ ಸಿಗುತ್ತದೆ. ಎಣ್ಣೆಯಾದರೋ ಬಲು ಉಪಕಾರಿ. ಮಣ್ಣಿನ ಹೊಸ ಮಡಕೆಗೆ ಬೀಜದೆಣ್ಣೆ ಹಚ್ಚಿ ಮಡಿಕೆಯನ್ನು ಸುಟ್ಟರೆ ಅದರ ಆಯುಷ್ಯವು ಅಧಿಕಗೊಳ್ಳುತ್ತದೆ. ಬೀಜದೆಣ್ಣೆಯ ಕಾರಣದಿಂದ ಉಪ್ಪು ಅಥವಾ ಹುಳಿಯನ್ನು ಸಹಿಸುವ ತಾಕತ್ತು ಮಣ್ಣಿನ ಮಡಕೆಗೆ ಬರುತ್ತದಂತೆ. ಉಪ್ಪಿನಲ್ಲಿ ಸೊಳೆ ಹಾಕಲು ಮಣ್ಣಿನ ಹಂಡೆಗಳನ್ನು ಬಳಸುತ್ತಿದ್ದ ಕಾಲ, ಈಗ ಅದು ಹಿಂದಿನ ಕಾಲ. ಸೊಳೆ ಮುಗಿದೊಡನೆ ಪ್ರತಿ ವರ್ಷವೂ ಆ ಹಂಡೆಗೆ ಗೇರು ತೈಲಾಭ್ಯಂಜನ. ಇದರಿಂದಾಗಿ ಆ ಹಂಡೆಗಳು ತಲೆ ತಲಾಂತರ ಕಾಲ ಉಳಿಯುತ್ತದೆಂಬ ನಂಬುಗೆ ನಮ್ಮ ಹಿರಿಯರದು. ಅದು ಕಲ್ಪನೆಯಾಗಿರದೆ ವಾಸ್ತವ ಎಂಬುದು ನನಗನುಭವ. ಗೆದ್ದಲು ಹಿಡಿಯದಂತೆ ಗೋಡೆಯಲ್ಲಿರಿಸುವ ಕಿಟಕಿ, ಬಾಗಿಲು ಮತ್ತು ದಾರಂದಗಳ ಸಂರಕ್ಷಣೆಯಲ್ಲಿ ಗೇರಿನೆಣ್ಣೆ ದಿವ್ಯೌಷಧ. ಕಟ್ಟಡದ ಪಕಾಸು, ರೀಪುಗಳ ಬಾಳುವಿಕೆ ಹೆಚ್ಚಿಸಲು ಗೇರಿನೆಣ್ಣೆ ಲೇಪಿಸುತ್ತಿದ್ದರು.
ಹಿಂದೆ ನೀರೆತ್ತಲು ಮರದ ಏತ ಮತ್ತು ಕೈದಂಬೆಗಳ ಬಳಕೆಯಿತ್ತು. ಮಳೆಗಾಲದಲ್ಲಿ ಅವುಗಳಿಗೆ ಗೇರಿನೆಣ್ಣೆ ಹಚ್ಚಿಯೇ ಅಟ್ಟದಲ್ಲಿಡುತ್ತಿದ್ದರು. ಇದರಿಂದ ಅವುಗಳಿಗೆ ಹುಳ ಹುಪ್ಪಡಿಗಳ ಬಾಧೆ ಬರುತ್ತಿರಲಿಲ್ಲ. ಮಳೆಗಾಲದಲ್ಲಿ ನಮ್ಮ ಬೆರಳಿನೆಡೆಯಲ್ಲಿ ಸವೆತವಾಗುವುದು ಸಹಜ. ಅದನ್ನು ಹುಳ ತಿನ್ನುವುದು ಎನ್ನುತ್ತಿದ್ದರು. ಆ ಭಾಗಕ್ಕೆ ಗೇರು ಎಣ್ಣೆ ಸವರಿದರೆ ಹುಳ ಮಾಯವಾಗುತ್ತಿತ್ತು. ಗೇರು ಸಿಪ್ಪೆಯ ಮಹಾತ್ಮ್ಯೆ ಅಮೋಘ.
ಎಲ್ಲ ಸಿಪ್ಪೆಗಳೂ ಗೊಬ್ಬರವಾಗಿ ಬಳಕೆಯಾಗುತ್ತವೆ. ತರಕಾರಿ, ಬೀಜಗಳು, ಹಣ್ಣುಗಳು ಹೀಗೆ ಎಲ್ಲದರ ಸಿಪ್ಪೆಯನ್ನು ಕಾಂಪೋಸ್ಟ್ ಗೊಬ್ಬರ ತಯಾರಿಯಲ್ಲಿ ಬಳಸುತ್ತಾರೆ. ಕೆಲವು ಸಿಪ್ಪೆಗಳನ್ನು ಉರುವಲಿನ ಜಾಗದಲ್ಲೂ ಬಳಸುವರು. ಭತ್ತದ ಸಿಪ್ಪೆಯಂತೂ ಅಗಾಧ ಪ್ರಮಾಣದಲ್ಲಿ ಶಕ್ತಿಯ ಉತ್ಪಾದನೆಯಲ್ಲಿ ಬಳಕೆಯಾಗುತ್ತದೆ. ಹಂಡೆಯಲ್ಲಿ ನೀರು ಬಿಸಿಯಾಗಲು ತೆಂಗು, ಅಡಿಕೆ, ಭತ್ತ ಮೊದಲಾದುವುಗಳ ಸಿಪ್ಪೇಯೇ ಪರಿಣಾಮಕಾರಿ. ಅಕ್ಕಸಾಲಿಗನು ಚಿನ್ನದ ಒಡವೆ ತಯಾರಿಯಲ್ಲಿ, ಕಮ್ಮಾರನು ಕುಲುಮೆಯಲ್ಲಿ ಕೆಂಡ ಪಡೆಯಲು ಗೆರಟೆ ಬಳಸುತ್ತಾನೆ. ಗೆರಟೆಯೂ ತೆಂಗಿನ ಕಾಯಿಯ ಸಿಪ್ಪೆಯ ಭಾಗವೇ ಅಲ್ಲವೇ? ಕಾಗದ, ವಸ್ತ್ರ, ಆಟಿಕೆಗಳು ಹೀಗೆ ನಾನಾ ವಿಭಾಗಗಳಲ್ಲಿ ಸಿಪ್ಪೆಯೇ ಕಚ್ಚಾ ವಸ್ತು ಎಂಬ ಅರಿವು ನಮಗಿದೆ. ಕಲಾವಿದನ ಕೈಯಲ್ಲಿ ಕಬ್ಬಿನ ಸಿಪ್ಪೆಯು ಬುಟ್ಟಿಯಾಗುತ್ತದೆ, ಬೊಂಬೆಯಾಗುತ್ತದೆ, ಕುಸುರಿ ವಸ್ತುಗಳಾಗುತ್ತವೆ. ಕಲಾವಿದನ ಕೌಶಲ್ಯದಿಂದ ಸಿಪ್ಪೆಯೂ ಕಬ್ಬಿನ ರಸದಂತೆ ಮನಸ್ಸಿಗೆ ಸವಿಯನ್ನುಣಿಸುತ್ತದೆ.
ಪುನರ್ಪುಳಿ (ಬಿರಿಂಡಾ) ಎಂಬ ಕಾಡು ಉತ್ಪತ್ತಿ ನಾವು ನೋಡಿದ್ದೆವೆ. ಅದರೊಳಗೆ ಸವಿಯಾದ ಬೀಜಗಳಿರುತ್ತವೆ. ಬೀಜ ತಿಂದು ಸಿಪ್ಪೆ ಉಗುಳುತ್ತೇವೆ. ಆದರೆ ಆ ಸಿಪ್ಪೆಯನ್ನೇ ಬಳಸಿ ಪೇಯ ಮಾಡುವರೆಂಬುದು ಬಹಳ ಮಂದಿಗರಿಯದು, ಹುಣಸೆ ಸಿಪ್ಪೆಯ ಸಾರು, ರುಚಿ ಮತ್ತು ಆರೋಗ್ಯ ಎರಡರಲ್ಲೂ ಮೇಲುಗೈ ಪಡೆದಿದೆ. ಆಟಿ ಅಮಾವಾಸ್ಯೆಯ ಆಚರಣೆಯಲ್ಲಿ ಹಾಲೆ ಮರದ ಕೆತ್ತೆ ಬಹು ಪ್ರಮುಖ. ಕೆತ್ತೆಯೂ ಸಿಪ್ಪೆಯೇ ಅಲ್ಲವೇ?
ಬಳ್ಳಿಗಳಾಗಲೀ, ಸಸ್ಯಗಳಾಗಲೀ, ಉರಗಗಳಾಗಲೀ, ಪಕ್ಷಿಗಳಾಗಲೀ, ಪ್ರಾಣಿಗಳಾಗಲೀ, ಬೀಜಗಳಾಗಲೀ, ನಾವೇ ಆಗಲಿ “ಸಿಪ್ಪೆ’ಯಿರದ ಸ್ಥಿತಿಯಲ್ಲಿ ಉಳಿಯಲು ಸಾದ್ಯವೇ. “ನಿನ್ನ ಸಿಪ್ಪೆ ಸುಲಿಯುತ್ತೇನೆ” ಎಂದು ಯಾರದರೂ ಹೇಳಿದರೆ ನಮ್ಮ ಸಿಟ್ಟು ನೆತ್ತಿಗೇರುತ್ತದೆ. ಸಿಪ್ಪೆಯ ಮಹತ್ವಕ್ಕೆ ಬೇರೆ ಉದಾಹರಣೆಗಳು ಇನ್ನೇಕೆ? ಸಿಪ್ಪೆಯನ್ನು ತುಚ್ಛವಾಗಿ ಸಪ್ಪೆಗೊಳಿಸುವುದು ಮೂಢತನ. ಸೃಷ್ಟಿಯ ವಿಚಿತ್ರಗಳಲ್ಲಿ ಸಿಪ್ಪೆಯೂ ಹೆಚ್ಚು ‘ಸಾರ’ವತ್ತಾಗಿದೆ
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ