ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ)

ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ)

ಪುಸ್ತಕದ ಲೇಖಕ/ಕವಿಯ ಹೆಸರು
ಬಿ. ಎಸ್. ಶೈಲಜಾ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೭೦/-

ಬಾಹ್ಯಾಕಾಶ, ಗ್ರಹಣಗಳು ಮತ್ತು ಆಕಾಶಕಾಯಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿರುವ ಬಿ. ಎಸ್. ಶೈಲಜಾ ಅವರ ಪ್ರವಾಸ ಕಥನ ಇದು. ಡಿಸೆಂಬರ ತಿಂಗಳಿನಲ್ಲಿ ಘಟಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎರಡು ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಲು ಹೋಗಿದ್ದಾಗಿನ ಅನುಭವಗಳನ್ನು ಇದರಲ್ಲಿ ನಿರೂಪಿಸಿದ್ದಾರೆ.

ಆಫ್ರಿಕಾದ ನ್ಯಾಷನಲ್ ಪಾರ್ಕುಗಳಲ್ಲಿ ಸಫಾರಿ ಹೋದಾಗ ಕಂಡ ಆನೆಗಳು, ಸಿಂಹಗಳು, ಚಿರತೆಗಳು, ಜಿರಾಫೆಗಳು, ಜೀಬ್ರಾಗಳು, ಕತ್ತೆಕಿರುಬಗಳು ಇತ್ಯಾದಿ ಹತ್ತು ಹಲವು ಪ್ರಾಣಿಗಳ ವೀಕ್ಷಣೆಯ ವಿವರಗಳು ಚೇತೋಹಾರಿಯಾಗಿವೆ. ಅಲ್ಲಿಯ ವರೆಗೆ ತಾನು ಮಾಡಿದ್ದ ಏಕಮಾತ್ರ ಸಫಾರಿ ಎಂದರೆ ಬನ್ನೇರುಘಟ್ಟದ್ದು; ಕಿಟಕಿ ಬಾಗಿಲು ಭದ್ರವಾಗಿ ಮುಚ್ಚಿದ್ದ ಸಣ್ಣ ಬಸ್ಸಿನಲ್ಲಿ. ಆದರೆ ದಕ್ಷಿಣ ಆಫ್ರಿಕಾದ ಸಫಾರಿ ತೆರೆದ ಜೀಪಿನಲ್ಲಿ ಎಂದು ಹೋಲಿಸುತ್ತಾರೆ ಲೇಖಕಿ.

ಪ್ರಿಟೋರಿಯಾ ಯಾತ್ರೆ ಎಂಬ ಅಧ್ಯಾಯದಲ್ಲಿ “ಪ್ರಿಟೋರಿಯ ಮತ್ತು ಕೇಫ್ ಟೌನ್‌ಗಳೆರಡೂ ದಕ್ಷಿಣ ಆಫ್ರಿಕಾದ ರಾಜಧಾನಿಗಳು. ಎರಡೂ ನಗರಗಳಲ್ಲಿ ಪಾರ್ಲಿಮೆಂಟ್ ಭವನ ಮತ್ತು ರಾಷ್ಟ್ರಪತಿ ಭವನಗಳಿವೆ. ಈ ರಾಷ್ಟ್ರಪತಿ ಭವನ ದೆಹಲಿಯ ಭವನದಂತೆಯೇ ಇದೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ, ಎರಡೂ ಭವನಗಳ ಆರ್ಕಿಟೆಕ್ಟ್ ಒಬ್ಬನೇ, ಸರ್ ಎಡ್ವರ್ಡ್ ಲೈಟನ್ಸ್” ಎಂಬಂತಹ ಹಲವು ಕುತೂಹಲಕರ ಮಾಹಿತಿಗಳನ್ನು ದಾಖಲಿಸಿದ್ದಾರೆ.

“ಆಮೆಯಿಂದ ಆರಂಭವಾದ ಆಮೆ ಓಟ" ಅಧ್ಯಾಯದಲ್ಲಿ ತಿಳಿಸಿರುವ ಒಂದು ಅನುಭವ ಹೀಗಿದೆ: “ನದಿಯ ಸೇತುವೆ ದಾಟಿ ಮುನ್ನಡೆದಂತೆ ರಸ್ತೆಗಡ್ಡವಾಗಿ ಸಲಗವೊಂದು ಓಡಿ ಹೋಯಿತು…. ಪುನಃ ಆಮೆಯಂತೆ ಸಾಗಿದ ನಮ್ಮ ಗಾಡಿ ನಿಂತೇ ಬಿಟ್ಟಿತು, ರಸ್ತೆ ದಾಟುತ್ತಿದ್ದ ಆಮೆಗೋಸ್ಕರ. ಅದು ದಾಟುವ ವರೆಗೂ ಮುನ್ನಡೆಯಬಾರದೆಂದು ಡ್ರೈವರ್ ವಿಲ್‌ಹೆಲ್ಮ್ ನಿರ್ಧರಿಸಿದ. ನಿಧಾನವಾಗಿ ಗುಡುಗುತ್ತಾ ಆಮೆಯ ಬಳಿಗೇ ಬಂದಿತು ನಮ್ಮ ಗಾಡಿ. ತನ್ನ ಪಾಡಿಗೆ ತಾನು ಸಾಗುತ್ತಿತ್ತು ಆ ಆಮೆ. ಹಿಂದಿನಿಂದ ಇನ್ನೊಂದು ಬಸ್ ಬಂದಿತು. ನಮ್ಮ ಗಾಡಿ ಅಡ್ಡವಿದ್ದುದರಿಂದ ಆ ಡ್ರೈವರಿಗೆ ಆಮೆಯ ಇರವು ತಿಳಿಯಲಿಲ್ಲ. ಭುರ್ರೆಂದು ನಮ್ಮನ್ನು ಓವರ್-ಟೇಕ್ ಮಾಡಿಕೊಂಡು ಹೋದಾಗ ಆ ಶಬ್ದಕ್ಕೆ ಹೆದರಿದ ಆಮೆ ತಲೆ-ಕೈ-ಕಾಲುಗಳನ್ನು ಚಿಪ್ಪಿನೊಳಗೆ ಅಡಗಿಸಿಟ್ಟುಕೊಂಡಿತು. ಅದಿನ್ನು ಸದ್ಯಕ್ಕೆ ತಲೆ ಎತ್ತುವುದಿಲ್ಲ ಎಂದ ವಿಲ್‌ಹೆಲ್ಮ್ ಗಾಡಿಯನ್ನು ಹೊರಡಿಸಿದ.” ಮುಂದಿನ ಅಧ್ಯಾಯ "ಬೇಟೆಯದೊಂದು ಸ್ಯಾಂಪಲ್”. ಜಿಂಕೆಯಂತಿರುವ ಪ್ರಾಣಿಗಳು ಇಂಪಾಲಾಗಳು. ಅವನ್ನು ಬೇಟೆಯಾಡಲು ಹೈನಾಗಳ ಹಿಂಡು ನಡೆಸಿದ ತಯಾರಿಯನ್ನು ಸೊಗಸಾಗಿ ವರ್ಣಿಸಿದ್ದಾರೆ.

“ಸತ್ಯಾಗ್ರಹದ ಜನ್ಮಭೂಮಿಯಲ್ಲಿ” ಅಧ್ಯಾಯ ಜೋಹಾನ್ಸ್-ಬರ್ಗಿನ ಮ್ಯೂಸಿಯಂನ “ಗಾಂಧಿ ವಿಭಾಗ”ದ ಬಗ್ಗೆ. ಅಲ್ಲಿ ರಕ್ಷಿಸಿಟ್ಟಿರುವ ಮಹಾತ್ಮಾ ಗಾಂಧಿಯ ಪ್ರತಿಭಟನೆ ಹಾಗೂ ಹೋರಾಟಗಳ ಆರಂಭದ ಹೆಜ್ಜೆ ಗುರುತುಗಳನ್ನು ಲೇಖಕಿ ವಿವರಿಸಿದ್ದಾರೆ: “ಸತ್ಯಾಗ್ರಹದ ಹುಟ್ಟು ಎಂದೇ ಆ ವಿಭಾಗದ ಶೀರ್ಷಿಕೆ. ಸತ್ಯಶೋಧನೆಯ ಅಧ್ಯಾಯಗಳು ಇಲ್ಲಿ ಚಿತ್ರಗಳಾಗಿವೆ. ಸುಮಾರು ೧೯೦೪ರ ವರೆಗೂ ಗಾಂಧಿ ಅತಿ ವಿಧೇಯ ಬ್ರಿಟಿಷ್ ಪ್ರಜೆಯಾಗಿದ್ದುದನ್ನು ಓದಿ ಆಶ್ಚರ್ಯವೆನಿಸಿತು. ಕ್ರೂಗರ್ ನಡೆಸಿದ ಬೋಯರ್-ಆಂಗ್ಲೋ ಯುದ್ಧದಲ್ಲಿ ಗಾಂಧಿ ಬ್ರಿಟಿಷ್ ಗಾಯಾಳುಗಳ ಶುಶ್ರೂಷೆ ನಡೆಸಿದ್ದರು. ಸುಮಾರು ಏಳು ಸಾವಿರ (ಭಾರತೀಯರ) ತಂಡವನ್ನು ಕಟ್ಟಿಕೊಂಡು ಬ್ರಿಟಿಷ್ ಸೈನಿಕರಿಗೆ ಬೆಂಗಾವಲಾಗಿ ನಿಂತರು. ಈ ಅವಧಿಯಲ್ಲಿ ನಾಲ್ವರು ಭಾರತೀಯರು ಯುದ್ಧದಲ್ಲಿ ಸತ್ತರು.

೧೯೦೩ರ ವರೆಗೂ ಪ್ರಿಟೋರಿಯಾದಲ್ಲಿದ್ದ ಗಾಂಧಿ ಆ ಮುಂದೆ ಜೋಹಾನ್ಸ್‌-ಬರ್ಗ್‌ನಲ್ಲಿದ್ದರು…. (ಅಲ್ಲಿಗೆ) ಡರ್ಬಾನ್‌ನಿಂದ ಕುಟುಂಬವನ್ನು ಕರೆತಂದರು…. ಮುಂದೆ ಏಷಿಯನ್ನರ ಮೇಲೆ ದಬ್ಬಾಳಿಕೆ ನಡೆಸಿದ್ದರ ವಿವರಗಳು ಸರ್ವವಿದಿತ. ಪೀಟರ್ಸ್ ಮಾರ್ಟಿಸ್‌ಬರ್ಗಿನ ರೈಲು ನಿಲ್ದಾಣದಲ್ಲಿ ಫಸ್ಟ್ ಕ್ಲಾಸ್ ಬೋಗಿಯಿಂದ ಹೊರಕ್ಕೆ ದಬ್ಬಿದ ಘಟನೆಯೇ ಈ ಹೋರಾಟದ ಚಿಂತನೆ ಸತ್ಯಾಗ್ರಹವಾಗಿ ಮಾರ್ಪಡಲು ಮುಖ್ಯ ಕಾರಣವಾಯಿತು. ಚೀನೀಯರು ಮತ್ತು ಭಾರತೀಯರು ಬೆರಳಚ್ಚು ಮಾಡಿಸಬೇಕು ಎಂಬ ಸರಕಾರದ ಆದೇಶದ ಜೊತೆಗೆ ವಿವಾಹದ ಕುರಿತು ಹೇರಿದ ಪ್ರತಿಬಂಧಗಳು ಒಳಗೇ ಕುದಿಯುತ್ತಿದ್ದ ಜ್ವಾಲಾಮುಖಿ ಸ್ಫೋಟಿಸುವಂತೆ ಮಾಡಿದವು. ಅಲ್ಲಿರುವ ಮಸೀದಿಯೊಂದರ ಮುಂದೆ ಸಾಂಕೇತಿಕವಾಗಿ "ಪಾಸ್"ಗಳನ್ನು ಸುಡುವುದರಿಂದ “ಸತ್ಯಾಗ್ರಹ" ಜನ್ಮವೆತ್ತಿತು. ಮೊದಲ ಬಾರಿ ವರ್ಣಭೇದದ ವಿರುದ್ಧ ಕೂಗು ಕೇಳಿತು. ಈ ಎಲ್ಲ ಘಟನೆಗಳ ಚಿತ್ರಗಳು, ಪತ್ರಿಕಾ ವರದಿಗಳು ಇಲ್ಲಿವೆ.”

“ಸಫಾರಿ ಎಂಬ ಲಕ್ಷುರಿ" ೧೯ ಅಧ್ಯಾಯಗಳಲ್ಲಿ ಲೇಖಕಿಯ ದಕ್ಷಿಣ ಆಫ್ರಿಕಾ ಪ್ರವಾಸದ ಅನುಭಗಳನ್ನು ಕಟ್ಟಿಕೊಡುತ್ತದೆ. ಹೆಚ್ಚುಕಡಿಮೆ ಪ್ರತಿಯೊಂದು ಪುಟದಲ್ಲಿಯೂ ಇರುವ ಒಂದೆರಡು ಫೋಟೋಗಳು ಲೇಖಕಿಯ ವಿವರಣೆಗಳು ಕಣ್ಣಿಗೆ ಕಟ್ಟಿದಂತಾಗಲು ಸಹಕರಿಸುತ್ತವೆ.