ಸಬಿತಾ ಎಂಬ ಚುರುಕು ಚಕೋರಿ

ಸಬಿತಾ ಎಂಬ ಚುರುಕು ಚಕೋರಿ

ಅದು "ಸಂತ ಅಂತೋಣಿಯವರ ಹಿರಿಯ ಪ್ರಾಥಮಿಕ ಶಾಲೆ, ಗರ್ಡಾಡಿ." ಅಂದು ರಾತ್ರಿ ಶಾಲಾ ವಾರ್ಷಿಕೋತ್ಸವ. ಸ್ವಾಗತ, ವರದಿ ವಾಚನಗಳೆಲ್ಲ ಆದ ಮೇಲೆ - ಈಗ ಬಹುಮಾನ ವಿತರಣೆ. ಒಂದನೇ ಕ್ಲಾಸು. ಬಹುಮಾನ ಪಡೆಯಲಿರುವವರ ಹೆಸರನ್ನು ಮಿಸ್ಸು ಓದುತ್ತಾ ಹೋದರು - 'ಸಬಿತಾ ಮೋನಿಸ್" ಎಂದು ಕರೆದಾಗ ಎಲ್ಲರ ಕಿವಿಗಳೂ ನೆಟ್ಟಗಾದವು. ಕಣ್ಣುಗಳು ಚುರುಕುಗೊಂಡವು. ಒಮ್ಮೆಲೇ ಇಡೀ ವಾತಾವರಣ ಸ್ತಬ್ಧವಯಿತು.
ಬಣ್ಣ ಬಣ್ಣದ ಸ್ಕರ್ಟು ತೊಟ್ಟ ಗೊಂಬೆಯಂಥ ಹುಡುಗಿ ಸ್ಟೇಜಿನ ಮೆಟ್ಟಲೇರಿ ಬಂದಳು. ಮುಖದಲ್ಲಿ ಇಷ್ಟಗಲ ನಗೆ. ಕಣ್ಣಲ್ಲಿ ಮಿಂಚುವ ಲವಲವಿಕೆ. ಅತಿಥಿಗಳು ಬಹುಮಾನ ಎದುರಿಗೆ ಹಿಡಿದಾಗ ಎಲ್ಲರೂ ಉಸಿರು ಬಿಗಿಹಿಡಿದರು. ಆಕೆ ಕೈ ಚಾಚಲಿಲ್ಲ. ಕುತ್ತಿಗೆ ಹಾಗೂ ಎದೆಯ ನಡುವೆ ಬಹುಮಾನ ಸಿಕ್ಕಿಸಿಕೊಂಡಳು. ಎದುರು ಕುಳಿತ ಅಮ್ಮನ ಮಡಿಲಿಗೆ ಓಡಿಹೋಗಿ ಸೇರಿಕೊಂಡಳು. ಕಿವಿಗಡಚಿಕ್ಕುವ ಚಪ್ಪಾಳೆಯ ಮಧ್ಯೆ ಅಮ್ಮನ ಕಣ್ಣಿಂದ ಬಿಸಿ ಮುತ್ತುಗಳು ಉದುರಿದವು.
ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ಬಜಿಲ್ ಮೋನಿಸ್ ಅವರಿಗೆ ನಾಲ್ವರು ಮಕ್ಕಳು. ಮೂವರು ಹೆಣ್ಣು - ಒಬ್ಬ ಮಗ. ಅನಿತ, ಸವಿತ, ಸುನಿಲ್ ಹಾಗೂ ಕೊನೆಯವಳು ಸಬಿತಾ. ಸಬಿತಾ ಎಲ್ಲರ ಮುದ್ದು. ಚಿಕ್ಕವಳಂತ ಅಲ್ಲ. ಅದಕ್ಕಿಂತ ಮುಖ್ಯವಾಗಿ ಅವಳಿಗೆ ಎರಡು ಕಾಲ್ಗಳೇ ಕೈಗಳೂ ಕೂಡ!
ಆರು ವರ್ಷದ ಕೆಳಗೆ ಈ ಸೌಭಾಗ್ಯ ಶಿಶು ಹುಟ್ಟಿದಾಗ ತಾಯಿ ಬೆನ್ಡಿಕ್ಟಾ ಮೋನಿಸ್ ಹಗಲು-ರಾತ್ರಿ ಅತ್ತರು. "ಏಸು ತಂದೆಯೇ ಈ ಹೆಣ್ಣು ಮಗುವಿಗೇಕೆ ಈ ಶಿಕ್ಷೆ?" ಎಂದು ಕೇಳಿದರು. ಅದನ್ನು ನೆನೆದೇ ತಾಯಿಗೆ ಸಬಿತಾ ಒಂದನೇ ಕ್ಲಾಸಿನಲ್ಲಿ ಬಹುಮಾನ ಪಡೆದಾಗ ಆನಂದಬಾಷ್ಪಗಳು.
ಸಬಿತಾಳಿಗೆ ತಾನು ಇತರರಿಗಿಂತ ಭಿನ್ನವೆಂದು ಅನ್ನಿಸುವುದೇ ಇಲ್ಲ. ಎಲ್ಲರೂ ಕೈಗಳಲ್ಲಿ ಮಾಡುವುದನ್ನು ಅವಳು ಬಲಗಾಲಲ್ಲಿ ಮಾಡುತ್ತಾಳೆ. ಆ ಕಾಲು- ಕಾಲಲ್ಲ. ಹೇಗೆ ಬೇಕಾದರೂ ಚಲಿಸುವ ರಬ್ಬರಿನ ತುಂಡು. ಅಗತ್ಯಕ್ಕೆ ತಕ್ಕಂತೆ ಅಂಗಗಳು ಮಾರ್ಪಾಡಾಗುತ್ತವೆ ಎಂಬ "ವಿಕಾಸ ವಾದ"ಕ್ಕೆ ಪುರಾವೆಯನ್ನುವ ಹಾಗೆ ಸಬಿತಾಳ ಬಲಗಾಲು ಬೇಕಾದ ಹಾಗೆ ಬಳಸಲು ರೂಢಿಗೊಂಡಿದೆ.
ಈ ಪುಟಾಣಿಯ ಮನೆ ಹುಡುಕಿಹೋದದ್ದು ಭಾನುವಾರ. ಹಿಂದಿನ ರಾತ್ರಿ ಯಕ್ಷಗಾನ ನೋಡಿ ಮಲಗಿದ್ದವಳು ನಾಚುತ್ತ ನಾಚುತ್ತ ಎದ್ದಳು. ಹುಡುಗಿಗೆ ಏನೇ ಕೇಳಿ- ನಸುನಗುವಳು! ನಿನಗೆ ಬರೆಯೋಕೆ ಬರುತ್ತಂತೆ, ಎಲ್ಲಿ ನೋಡೋಣ ಎಂದೆ. ತುಂಟಿ ಒಳಗೋದಳು. ಅಷ್ಟರಲ್ಲಿ ಅವರಮ್ಮನೇ ಸ್ಲೇಟು ಬಳಪ ತಂದರು. ಬೆಂಚಿನ ಮೇಲೆ ಕೂತು ಸ್ಲೇಟು ಕೆಳಗಿಟ್ಟು ಕಾಲಿಂದ ಗುಂಡಾಗಿ ಬರೆದಳು. ಸಬಿತಾ ಮೋನಿಸ್. ನಮ್ಮೆದುರೇ ಸಬಿತಾ ಕುಳಿತು ಊಟಮಾಡಿದಳು. ಒಂದಗಳೂ ಹೊರ ಚೆಲ್ಲದ ಹಾಗೆ.
ಅಮ್ಮ ಹೇಳುತ್ತಾಳೆ : "ಸಬಿತಾ ಎಲ್ಲ ಕೆಲಸ ಮಾಡುತ್ತಾಳೆ. ತೋಡಿ (ನೀರ್ಕಾಲುವೆ) ಗೆ ಹೋಗಿ ಸ್ನಾನ ಮಾಡುತ್ತಾಳೆ. ಚಡ್ಡಿ-ಅಂಗಿ ಒಗೆದುಕೊಳ್ಳುತ್ತಾಳೆ. ಲಂಗ ಹಾಕಿಕೊಳ್ಳುತ್ತಾಳೆ. ಸ್ಕರ್ಟು ಗುಂಡಿ ಬಿಚ್ಚಲು ಮಾತ್ರ ಅವಳಿಗೆ ಕಷ್ಟ. ನಾವೇ ಬಿಚ್ಚಿಕೊಳ್ಳುತ್ತೇವೆ. ಓದು ಬರಹದಲ್ಲಿ ಹುಷಾರೆಂದು ಟೀಚರ್ ಹೇಳುತ್ತಾರೆ. ಐವತ್ತು ಮಕ್ಕಳ ಅವರ ಕ್ಲಾಸಲ್ಲಿ ಸಬಿತಾ ಎರಡನೇ ರ್ಯಾಂಕು. ಈಗೇನೋ ಅವಳಿಗೆ ಯಾವುದೂ ತೊಂದರೆಯೆನಿಸುತ್ತಿಲ್ಲ. ಮುಂದೆ ಹೇಗೋ..."
ನಿಜ. ಅಷ್ಟೇನೂ ಸ್ಥತಿವಂತರಲ್ಲದ ಈ ನಾಲ್ಕು ಮಕ್ಕಳ ಸಂಸಾರದಲ್ಲಿ "ಮುದೆ ಹೇಗೋ" ಎಂಬ ತಾಯಿಯ ಚಿಂತೆ ಸಹಜವೇ. ಕೈಗಳೇ ಇಲ್ಲದ ಹುಡುಗಿ ದೊಡ್ಡವಳಾಗಿ ಬೆಳೆದಾಗ ಸ್ನಾನ- ಶೌಚ- ಅಡುಗೆ- ಮುಂತಾಗಿ ಜೀವನದಲ್ಲಿ ಗಂಡಿಗಿಂತ ಭಿನ್ನವಾದ ಸಮಸ್ಯೆಗಳನ್ನೆದುರಿಸಬೇಕಾಗಬಹುದು ಎಂಬ ಭಯ ತಾಯಿಗೆ. ಆದರೆ ಸಬಿತಾಳನ್ನು ನೋಡಿದರೆ ಹಾಗನ್ನಿಸುವುದಿಲ್ಲ. ಎರಡೂ ಕೈ ಸರಿಯಿರುವ ಎಷ್ಟೋ ಮಕ್ಕಳಿಗಿಂತ ಆಕೆ ಚೂಟಿ. ಉತ್ಸಾಹದ ಬುಗ್ಗೆ. ಯಾವಾಗ ಬೇಕಾದರೂ ಅಣ್ಣನೊಟ್ಟಿಗೆ ಪಂಥಕಟ್ಟಿ ಓಡಲು ರೆಡಿ!
ಸಬಿತಾ ಹೀಗೆ ಇರಲಿ.
 
(ಚಿತ್ರ ಕೃಪೆ  ಗೂಗಲ್)
(ಲೇಖನ ಬರೆದ ವರ್ಷ 1992)