ಸಮಗ್ರ ಕೃಷಿಯ ಪಂಡಿತ ಈ ದಯಾನಂದ....

Submitted by khmahant@gmail.com on Sat, 12/01/2018 - 19:31

ಸಮಗ್ರ ಕೃಷಿಯ ಪಂಡಿತ ಈ ದಯಾನಂದ....
        ಅಬ್ಬಾ!.....ಇವರು ಏನೇನು ಬೆಳೆದಿದಾರಪ್ಪಾ?. ಇವರ ತೋಟದಲ್ಲಿ ಕಾಲಿಡುತ್ತಲೇ ನನ್ನ ಬಾಯಿಂದ ಬಂದ ಮೊದಲ ಮಾತುಗಳಿವು. ಹೌದು, ಇವರ ತೋಟದಲ್ಲಿ ಏನೇನಿದೆ ಗೊತ್ತಾ? ತೆಂಗು, ನುಗ್ಗೆ ಹಾಗೂ ಮೂರು ವಿಧದ ಬಾಳೆ ಗಿಡಗಳು ಅವು ಹೊಸಪೇಟೆ ಬಾಳೆ, ಮೈಸೂರು ಬಾಳೆ ಹಾಗೂ ಹೊರಟ್ಟಿ ಬಾಳೆ. ಇವುಗಳಷ್ಟೇ ಅಲ್ಲ ಚಿಕ್ಕು, ಸಪೋಟಾ, ಫ್ಯಾಶನ್ ಫ್ರೂಟ್ ಇದು ಜ್ಯೂಸ್ ಮಾಡೋದಕ್ಕೆ ಬಳಸುತ್ತಾರೆ. ಅಲ್ಲದೇ ಸೀತಾಫಲ, ರಾಂ ಫಲ ಜೊತೆಗೆ ಆಫೋಸ್, ರತ್ನಾಗಿರಿ ಹಾಗೂ ಮಲ್ಲಿಕಾ ಎಂಬ ಮೂರು ವಿಧದ ಮಾವಿನ ಗಿಡಗಳು.
        ಇವುಗಳ ಜೊತೆಗೆ ಕರಿಬೇವು ಗಿಡ, ನಿಂಬೆಯ ಗಿಡ, ದಾಸವಾಳ, ಹಸಿರು ಮನೆಯಲ್ಲಿ ಬೆಳೆದ ಹೂವುಗಳು. ಇವೆಲ್ಲದರ ಮಧ್ಯೆ ಜೇನು ಸಾಕಾಣಿಕೆಯ ಗೂಡುಗಳೂ ಸಹ ಅಲ್ಲಲ್ಲಿ ಹಾಜರಿದ್ದವು. ಹಿಂದೆಯೇ ಕೃಷಿ ಹೊಂಡ, ಅದರಲ್ಲಿ ಮೀನು ಸಾಕಾಣಿಕೆ. ಇವುಗಳಷ್ಟೇ ಅಲ್ಲದೇ ರೇಷ್ಮೆ ಸಾಕಾಣಿಕೆ ಹಾಗೂ ಹೈನುಗಾರಿಕೆಯನ್ನೂ ಇವರು ಮಾಡಿದ್ದಾರೆ.
        ಹೀಗಾಗಿಯೇ ಈ ಬಾರಿಯ ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವ ಇವರ ಹೆಸರು ದಯಾನಂದ. ಇವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹೊಸ ಕುರಗುಂದ ಗ್ರಾಮದವರು.
        ಇವರ ಕೃಷಿಯ ಮುಖ್ಯವಾದ ವಿಶೇಷತೆಯೇ ಸಮಗ್ರ ಬೇಸಾಯ. ಬೆಳಗಾವಿಯ ರೈತರ ಬೆಂಬಲ ಬೆಲೆ ಸಮಸ್ಯೆಯನ್ನು ಕಬ್ಬಿನ ಬೆಳೆಯ ಜೊತೆಗೆ ಬೇರೆ ಬೇರೆ ಬೆಳೆಯನ್ನು ಬೆಳೆಯುವ ಮೂಲಕ ನಿವಾರಿಸಿಕೊಳ್ಳಬಹುದು ಎನ್ನುವ ಕಿವಿ ಮಾತನ್ನು ಹೇಳುವ ಇವರು ಮಿಶ್ರ ಬೇಸಾಯ ಪದ್ಧತಿಯ ಮಹತ್ವವನ್ನು ಬಿಡಿಸಿಟ್ಟರು.
        ಕಾರ್ಖಾನೆಗಳಿಗೆ ಹೆಚ್ಚಿನ ಕಬ್ಬಿನ ಬೆಳೆಯನ್ನು ಸಾಗಿಸದೇ, ಅವಶ್ಯಕವಿದ್ದಷ್ಟನ್ನು ಮಾತ್ರವೇ ಸಾಗಿಸಿ ಉಳಿದ ಜಾಗದಲ್ಲಿ ಅಥವಾ ಕಬ್ಬಿನ ಜೊತೆಗೆಯೇ ಅಂತರವಿಟ್ಟು ಕಲ್ಲಂಗಡಿ, ಬಿಟ್ ರೂಟ್, ಮೆನಸಿನ ಕಾಯಿಯಂತಹ ಬೆಳೆಗಳ ಜೊತೆಗೆ ಇನ್ನೂ ಹಲವು ಬೆಳೆಗಳನ್ನು ಬೆಳೆಸುವುದರಿಂದ, ಕೇವಲ ಕಬ್ಬಿನ ಆದಾಯವನ್ನು ನಂಬಿ ಕೂರದೇ ಪರ್ಯಾಯ ಆದಾಯವನ್ನು ಕಂಡುಕೊಳ್ಳಬಹುದು ಎನ್ನುತ್ತಾರೆ.
        ಅಂತೆಯೇ ಮಿಶ್ರ ಬೆಳೆಯನ್ನು ಬೆಳೆಯುವುದರ ಮೂಲಕವಾಗಿಯೂ ಸಹ ಉತ್ತಮ ಆದಾಯವನ್ನು ಗಳಿಸಬಹುದು, ಇದು ಕೇವಲ ಆದಾಯಕ್ಕೆ ಮಾತ್ರವೇ ದಾರಿಯಲ್ಲಿ ಬದಲಾಗಿ, ಈ ಪದ್ಧತಿಯಿಂದ ನೀರನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬಹುದು ಎನ್ನುತ್ತಾರೆ.
        ಇವರು ತಮ್ಮ ಹೊಲಗಳಿಗೆ ಸ್ಪಿಂಕ್ಲರ್ ಹಾಗೂ ಡ್ರಿಪ್ ಪೈಪ್ ಮುಖಾಂತರ ನೀರನ್ನು ಉಪಯೋಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಕೃಷಿ ಹೊಂಡ ನಿರ್ಮಿಸಿ ಅದರಲ್ಲಿ ತಮ್ಮ ಹೊಲದಲ್ಲಿ ನಿಂತಿರುವ ನೀರು ಶೇಕರಣೆಗೊಳ್ಳುವಂತೆ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಈ ಕೃಷಿ ಹೊಂಡದಲ್ಲಿ ಸುಮಾರು 10,000 ಮೀನುಗಳನ್ನು ಸಾಕಿರುವ ಇವರು, ಕೃಷಿ ಹೊಂಡದ ಉಪಯೋಗದಲ್ಲಿಯೂ ವಿಶಿಷ್ಟತೆ ಮೆರೆದಿದ್ದಾರೆ.
        ಸ್ವತಃ ತಮ್ಮ ಖರ್ಚಿನಿಂದ ಊರ ಹೊರಗೆ ಜನಗಳಿಗೆ ಶೌಚಾಲಯನ್ನು ಕಟ್ಟಿಸಿಕೊಟ್ಟಿರುವ ಇವರು, ಅದನ್ನು ಬಯೋಗ್ಯಾಸ್ ಆಗಿ ಮಾರ್ಪಡಿಸಿಕೊಂಡು ಉಪಯೋಗಿಸುತ್ತಾರೆ. ಅಲ್ಲದೇ ತಮ್ಮದೇ ಆಕಳುಗಳ ಗಂಜಲು ಹಾಗೂ ಸಗಣಿಯನ್ನು ಬಳಸಿಕೊಂಡು ಎಳೆಹುಳು ಗೊಬ್ಬರ ತಯಾರಿಸುತ್ತಾರೆ. ಕಾಂಪೋಸ್ಟ್, ಎರೆಹುಳು, ಬಯೋಗ್ಯಾಸ್ ಹಾಗೂ ಮಿಥೇನ್ ಎಲ್ಲ ವಿಧದ ಗೊಬ್ಬರವನ್ನೂ ತಾವೇ ತಯಾರಿಸುತ್ತಾರೆ.
        ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ವಿಷಯದಲ್ಲಿ ಪದವಿ ಪಡೆದಿರುವ ಇವರು ಸುಮಾರು 10 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ದಯಾನಂದ ಫಾರ್ಮ್ ಫ್ರೆಶ್ ಎನ್ನುವ ಪ್ರಾಡಕ್ಟ್ ಮೂಲಕ ತಮ್ಮ ತೋಟದಲ್ಲಿ ಬೆಳೆದ ಹಣ್ಣು, ತರಕಾರಿಗಳನ್ನು ಸ್ವತಃ ಪ್ಯಾಕಿಂಗ್, ಗ್ರೇಡಿಂಗ್ ಮಾಡಿ ಮಾಲ್, ಬಿಗ್ ಬಜಾರ್, ಸೂಪರ್ ಮಾರ್ಕೆಟ್ ಗಳಿಗೆ ತಾವೇ ಕೊಂಡೊಯ್ದು ಮಾರುತ್ತಾರೆ. ಇವರ ವಾರ್ಷಿಕ ಆದಾಯ ಸರಾಸರಿ 11 ರಿಂದ 13 ಲಕ್ಷ.
        “ಸರ್ಕಾರ ಇತ್ತೀಚೆಗೆ ರೈತರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದೆ. ರೈತರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಆದರೆ ಕೆಲವು ರೈತರು ಸಂಪೂರ್ಣವಾಗಿ ಸರ್ಕಾರದ ಯೋಜನೆಗಳ ಮೇಲೆಯೇ ಅವಲಂಬಿತರಾಗದೇ ಅವುಗಳನ್ನು ಉಪಯೋಗಿಸಿಕೊಂಡು ಲಾಭದ ಮಾರ್ಗದತ್ತ ಹೆಜ್ಜೆ ಹಾಕುವುದು ತುಂಬಾ ಮುಖ್ಯವಾಗಬೇಕು” ಎನ್ನುವ ಇವರು, ಕೃಷಿ ಯೋಜನೆಯಲ್ಲಿ ಸರ್ಕಾರ ನೀಡುವ ಯೋಜನೆಗಳನ್ನು ತುಂಬಾ ಲಾಭಕರವಾಗಿ ಮಾತ್ರವಲ್ಲ, ಬದಲಾಗಿ ತುಂಬಾ ಬುದ್ಧಿವಂತಿಕೆಯಿಂದಲೂ ಬಳಸಿಕೊಂಡಿದ್ದಾರೆ. ಅನುದಾನದಲ್ಲಿ ಬರುವ ಕೃಷಿ ಯಂತ್ರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ಕೃಷಿ ಕಾರ್ಯಗಳು ತುಂಬಾ ಸರಳವಾಗಿ ಸಾಗುವಂತೆ ಮಾಡಿದ್ದಾರೆ.
        ತಾವು ಮೊದಲಿಗೆ ಕೃಷಿ ಮಾಡಬೇಕೆಂದು ಯೋಚನೆ ಮಾಡಿದಾಗ ತಾವೇ ಸ್ವತಃ ಖರ್ಚಿನಿಂದ ಕೆಲವು ರೈತರ ಹೊಲಗಳಿಗೆ ಭೇಟಿ ನೀಡಿ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅವರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾಗಿ ಹೇಳಿದ ಇವರಿಗೆ, ಆತ್ಮಾ ಯೋಜನೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಕಬ್ಬಿನ ಜೊತೆಗೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವುದರಿಂದ ರಾಜ್ಯ ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ, ಅಲ್ಲದೇ ವಿವಿಧ ಸಂಘಗಳು, ಮಠಾಧೀಶರಿಂದ ಹಲವಾರು ಪ್ರಶಸ್ತಿ ಹಾಗೂ ಗೌರವಗಳೂ ಇವರಿಗೆ ಸಂದಿವೆ. ಅಲ್ಲದೇ ಇದೇ ಬಾರಿಯ ರಾಜ್ಯ ಮಟ್ಟದಲ್ಲಿ ಕೃಷಿ ಪಂಡಿತ ಪ್ರಶಸ್ತಿಯನ್ನೂ ಇವರು ಮುಡಿಗೇರಿಸಿಕೊಂಡಿದ್ದಾರೆ.
        ಅಲ್ಲದೇ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಸರ್ಕಾರ ಹಾಗೂ ಮಾಧ್ಯಮಗಳು ಎಲ್ಲ ಜನರಿಗೆ ತಲುಪುವಂತೆ ಮಾಡುತ್ತಿರುವುದು ಖುಷಿಯ ಸಂಗತಿ ಎನ್ನುವ ಇವರು. ಈಗಾಗಲೇ ಹಲವಾರು ರೈತರಿಗೆ ಕೃಷಿಗೆ ಸಂಬಂಧ ಪಟ್ಟಂತೆ ಮಾರ್ಗದರ್ಶನ ಮಾಡಿದ್ದಾರೆ. ಇವರನ್ನು ಸಂಪರ್ಕಿಸಬೇಕಾದ ಸಂಖ್ಯೆ - 9964124176
 
- ಮಹಾಂತ ಕೆ. ಎಚ್
ಎಂ. ಎ ಸಮೂಹ ಸಂಹವನ ಮತ್ತು ಪತ್ರಿಕೋದ್ಯಮ ವಿಭಾಗ
ಕನ್ನಡ ವಿಶ್ವವಿದ್ಯಾಲಯ ಹಂಪಿ.
khmahant@gmail.com
7259788083
 

Comments

Ashwin Rao K P

Fri, 05/29/2020 - 12:29

ಮಾನ್ಯರೇ,

ಹೀಗೆಯೇ ಬಿಡುವಾಗಿದ್ದೆ. ಹಳೆಯ ಸಂಪದದ ಪುಟಗಳನ್ನು ತಿರುವಿದಾಗ ನಿಮ್ಮ ಈ ಲೇಖನ ಕಂಡಿತು. ಓದಲಾಗಿ ಸೊಗಸಾಗಿ ಕೃಷಿ ಕ್ಷೇತ್ರದ ಪರಿಚಯ ಮಾಡಿಕೊಟ್ಟಿರುವಿರಿ. ನಿಮ್ಮ ಬರಹಗಳು ಇತ್ತೀಚೆಗೆ ಯಾಕೆ ಕಾಣಿಸುತ್ತಿಲ್ಲ. ಮತ್ತೆ ಬರೆಯಿರಿ. ಕೆಲಸ ಕಾರ್ಯದಲ್ಲಿ ಬಿಡುವು ಮಾಡಿಕೊಂಡು ಅಪರೂಪಕ್ಕಾದರೂ ಬರೆಯ ಬಹುದಲ್ಲವೇ? ಯೋಚಿಸಿ

ನಿಮ್ಮ ವಿಶ್ವಾಸಿ

ಅಶ್ವಿನ್