ಸಮಗ್ರ ಯೋಜನೆ ಬೇಕು

ಸಮಗ್ರ ಯೋಜನೆ ಬೇಕು

ಕಳೆದ ೯೦ ವರ್ಷಗಳಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಭಾನುವಾರ ಒಂದೇ ದಿನ ೧೩೧.೬ ಮಿ ಮೀ. ಮಳೆಯಾದ ಹಿನ್ನಲೆಯಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಸಮಸ್ಯೆ ಸೃಷ್ಟಿಯಾಗಿರುವುದು ಮೇಲ್ನೋಟಕ್ಕೆ ಸಹಜವೇ ಎನಿಸಿದರೂ ಈ ನೀರು ಸರಾಗವಾಗಿ ಹರಿದುಹೋಗಲು ಬೇಕಾದ ಸೂಕ್ತ ವ್ಯವಸ್ಥೆ ಇಲ್ಲದಿರುವ ವಾಸ್ತವವು ಮತ್ತೆ ಬಹಿರಂಗಕ್ಕೆ ಬರುತ್ತಿದೆ. ಅತಿವೃಷ್ಟಿಯಿಂದಾಗಿ ವಸತಿ ಪ್ರದೇಶ, ರಸ್ತೆಗಳು ಜಲಾವೃತಗೊಂಡು ಜನ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರಾಟದಲ್ಲಿ ತೊಡಗಿರುವುದು ವಿವೇಚನೆಯುಕ್ತ ವರ್ತನೆ ಎನ್ನಿಸುವುದಿಲ್ಲ. ಬೆಂಗಳೂರಿನ ಪರಿಸ್ಥಿತಿ ಹದಗೆಟ್ಟಿದ್ದರೂ ಕ್ರಮ ಕೈಗೊಂಡಿಲ್ಲ. ಬ್ರಾಂಡ್ ಬೆಂಗಳೂರನ್ನು ಹಾಳು ಮಾಡಿದ್ದಾರೆ ; ವಿಶ್ವದರ್ಜೆಯ ನಗರದಲ್ಲಿ ಕಳಪೆ ಮೂಲ ಸೌಕರ್ಯ ನಿರ್ಮಿಸಿದ್ದಾರೆ ಎಂಬ ಕಾಂಗ್ರೆಸ್ ಟೀಕೆಗೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್ ಅವಧಿಯಲ್ಲೇ ಬೆಂಗಳೂರಿನಲ್ಲಿ ರಾಜಕಾಲುವೆ ಹೆಚ್ಚು ಪ್ರಮಾಣದಲ್ಲಿ ಒತ್ತುವರಿಯಾಗಿದ್ದು, ಇದರಿಂದಾಗಿಯೇ ಮಳೆ ಬಂದಾಗ ಸಮಸ್ಯೆ ಹೆಚ್ಚಾಗುತ್ತದೆ ಎಂದು ಆರೋಪಿಸಿದ್ದಾರೆ. ಈ ವಾಗ್ವಾದಗಳು ಏನೇ ಇದ್ದರೂ ಅತಿವೃಷ್ಟಿ ನಿರ್ವಹಣೆಗೆ ಅಗತ್ಯವಿರುವ ಸೌಲಭ್ಯವನ್ನು ಸೃಷ್ಟಿಸಲು ಹಿಂದಿನ- ಇಂದಿನ ಎಲ್ಲ ಸರಕಾರಗಳು, ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ವಿಫಲವಾಗಿರುವುದು ಪರಿಸ್ಥಿತಿ ಬಿಗಡಾಯಿಸಲು ಕಾರಣ.

ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ರಾಜಕಾಲುವೆಗಳಂತೂ ಒತ್ತುವರಿಯಿಂದಾಗಿ ಕಿರಿದಾಗಿ ಹೋಗಿದೆ. ಹಲವೆಡೆ ರಾಜಕಾಲುವೆಗಳ ಮೇಲೆಯೇ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ, ಮಳೆ ನೀರು ಸರಾಗವಾಗಿ ಕೆರೆ, ನದಿಗಳಿಗೆ ಹರಿದು ಹೋಗಲು ಆಗುತ್ತಿಲ್ಲ. ಇದಲ್ಲದೆ, ಸಾಕಷ್ಟು ಕೆರೆಗಳು ಒತ್ತುವರಿಯಾಗಿವೆ. ಈ ಹಿನ್ನಲೆಯಲ್ಲಿ ರಾಜಕಾಲುವೆ, ಕೆರೆ ಒತ್ತುವರಿ ತೆರವಿಗೆ ಸರ್ಕಾರ ಇಚ್ಛಾಶಕ್ತಿ ತೋರಬೇಕಿದೆ. ರಾಜ್ಯ ಸರ್ಕಾರ, ಬಿಬಿಎಂಪಿ ಮನಸ್ಸು ಮಾಡಿದರೆ ಇದು ಕಷ್ಟಸಾಧ್ಯವೇನಲ್ಲ. ಹಾಗಂತ ಈ ಎಲ್ಲ ರೀತಿಯ ಒತ್ತುವರಿ ತೆರವುಗೊಳಿಸಿದರೂ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಲಾಗದು. ಮುಂಬೈ, ಚೆನ್ನೈ, ಹೈದರಾಬಾದ್ ಮುಂತಾದ ಮಹಾನಗರಗಳಲ್ಲೂ ಅತಿವೃಷ್ಟಿಯಾದಾಗ ಪ್ರವಾಹ ಪರಿಸ್ಥಿತಿ ತಲೆದೋರುವುದನ್ನು ಕಾಣಬಹುದಾಗಿದೆ. ಏಕೆಂದರೆ, ಪಂಜಾಬ್ ರಾಜಧಾನಿ ಚಂಡೀಗಢ ರೀತಿಯಲ್ಲಿ ಇವು ಯೋಜಿತ ನಗರಗಳಲ್ಲ. ಆದರೆ, ಇರುವ ನಗರ ಪ್ರದೇಶದಲ್ಲಿ ಸಾಧ್ಯವಾದಷ್ಟು ಯೋಜಿತವಾಗಿ ವ್ಯವಸ್ಥೆಗಳನ್ನು ರೂಪಿಸುವ ಅಗತ್ಯವಿದೆ. ಬೆಂಗಳೂರಿನ ರಸ್ತೆ ಸುಧಾರಣೆ ಹಾಗೂ ಪ್ರವಾಹ ಪರಿಸ್ಥಿತಿ ಎದುರಿಸಲು ನೀರಾವರಿ ತಜ್ಞ ಕ್ಯಾ. ರಾಜಾರಾವ್ ಸಮಿತಿ ಹಲವು ವರ್ಷಗಳ ಹಿಂದೆಯೇ ವರದಿ ನೀಡಿದೆ. ಇದನ್ನು ಸೂಕ್ತ ರೀತಿಯಲ್ಲಿ ಅನುಷ್ಟಾನಕ್ಕೆ ತರಬೇಕೆಂದು ಹೈಕೋರ್ಟ್ ಕೂಡ ಸೂಚಿಸಿದೆ. ಆದರೂ ಅನುಷ್ಟಾನಕ್ಕೆ ಬಂದಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಇಚ್ಛಾಶಕ್ತಿ ತೋರಿ ಈ ವರದಿ ಅನುಷ್ಟಾನಗೊಳಿಸಲು ಮುಂದಾಗಬೇಕು. ಒಟ್ಟಿನಲ್ಲಿ, ಪರಿಸ್ಥಿತಿ ಎದುರಿಸಲು ಮುಂದಾಲೋಚನೆಯ ಸಮಗ್ರ ಯೋಜನೆ ಇಂದಿನ ತುರ್ತು. 

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೭-೦೯-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ