ಸಮಯೋಚಿತ ಕ್ರಮಕ್ಕೆ ಕ್ಯಾತೆ ಏಕೆ?

ಸಮಯೋಚಿತ ಕ್ರಮಕ್ಕೆ ಕ್ಯಾತೆ ಏಕೆ?

ಭಯೋತ್ಪಾದಕರಿಂದ ಪಹಲ್ಗಾಮ್ ನಲ್ಲಿ ನಡೆದ ಕ್ರೂರ ದಾಳಿ, ಅದರ ಹಿಂದೆ ಇರುವ ಪಾಕಿಸ್ತಾನದ ಕೈವಾಡ, ಪ್ರತೀಕಾರವಾಗಿ ಭಾರತವು ಕೈಗೊಂಡ ಅಪರೇಷನ್ ಸಿಂದೂರ್ ಮತ್ತು ಪಾಕಿಸ್ತಾನವು ಕಳೆದ ೪೦ ವರ್ಷಗಳಿಂದ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ರೀತಿ ಮೊದಲಾದವುಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸಲು ಕೇಂದ್ರ ಸರಕಾರವು ಸರ್ವಪಕ್ಷಗಳ ಸಂಸತ್ ಸದಸ್ಯರನ್ನು ಒಳಗೊಂಡ ನಿಯೋಗಗಳನ್ನು ರಚಿಸಿ ಅವುಗಳನ್ನು ವಿದೇಶಗಳಿಗೆ ಕಳಿಸಿಕೊಡುತ್ತಿರುವುದು ಸಮಯೋಚಿತ ಉಪಕ್ರಮವಾಗಿದೆ. ಇದು ಕೇವಲ ಒಂದು ರಾಜತಾಂತ್ರಿಕ ಪ್ರಕ್ರಿಯೆಯಲ್ಲ. ಅದಕ್ಕಿಂತ ಹೆಚ್ಚಿನ ಸಾಂಕೇತಿಕ ಮಹತ್ವ ಮತ್ತು ಸಂದೇಶ ಇದರ ಹಿಂದಿದೆ. ವಿವಿಧ ರಾಜಕೀಯ ಪಕ್ಷಗಳ ಮತ್ತು ವಿವಿಧ ವಿಚಾರಗಳಲ್ಲಿ ಪರಿಣತರಾದವರನ್ನು ಈ ನಿಯೋಗಗಳಲ್ಲಿ ಸೇರಿಸಿಕೊಳ್ಳುವ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ಎದುರಿಸುವಲ್ಲಿ ಭಾರತವು ಒಗ್ಗಟ್ಟಿನಿಂದಿದೆ. ಈ ವಿಚಾರದಲ್ಲಿ ಯಾವುದೇ ಒಡಕಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ಸಾರುವ ಉದ್ದೇಶವಿದೆ. ಜತೆಗೇ ಜಾಗತಿಕ ಸಮುದಾಯಕ್ಕೆ ಭಾರತದ ಸ್ಥಾನಮಾನ, ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯಿಂದ ದೇಶವು ಅನುಭವಿಸುತ್ತಿರುವ ಸಮಸ್ಯೆಯ ಅರಿವು ಮೂಡಿಸುವ ಉದ್ದೇಶವೂ ಇದರೊಂದಿಗಿದೆ. ಇವೆಲ್ಲವೂ ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವೂ ಆಗಿದೆ.

ನೆರೆ ದೇಶದ ಕುಮ್ಮಕ್ಕಿನಿಂದ ನಡೆಯುತ್ತಿರುವ ಭಯೋತ್ಪಾದನೆಯನ್ನು ಎದುರಿಸುವಲ್ಲಿ ದೇಶವು ಏಕತೆಯನ್ನು ಪ್ರದರ್ಶಿಸುವುದು ಅಗತ್ಯ ಹಾಗೂ ಈ ಏಕತೆಯು ಜಗತ್ತಿನ ಕಣ್ಣಿಗೆ ಕಾಣುವಂತೆಯೂ ಇರಬೇಕು. ಎರಡು ದೇಶಗಳೊಳಗೆ ಸಂಘರ್ಷ ನಡೆಯುವಾಗ ಬೇರೆ ರಾಷ್ಟ್ರಗಳು ಉಪದೇಶ ಮಾಡಲು ಬರುವುದೇ ಹೆಚ್ಚು.

ಭಾರತದ ಸಂದರ್ಭದಲ್ಲಂತೂ ನಮ್ಮ ಕ್ರಮಗಳು ನ್ಯಾಯೋಚಿತವಾಗಿದ್ದರೂ ಸಂಘರ್ಷ ನಡೆಸದಂತೆ ನಮಗೇ ತಾಕೀತು ಮಾಡುವ ಪ್ರಯತ್ನಗಳನ್ನೂ ಕೆಲವು ದೇಶಗಳು ಮಾಡುವುದಿದೆ. ಈಗಿನ ಪರಿಸ್ಥಿತಿಯಲ್ಲಂತೂ ನಮ್ಮ ದೇಶದ ಪರವಾದ ನರೇಟಿವನ್ನು ಜಗತ್ತಿನ ಮುಂದಿಡುವುದು ಅತ್ಯಂತ ಅಗತ್ಯವಾಗಿದೆ. ಹಾಗೆಯೇ ಭಾರತವಷ್ಟೇ ಅಲ್ಲದೆ ಇಡೀ ಜಗತ್ತೇ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯಿಂದ ನಲುಗುತ್ತಿದೆ ಎಂಬು ಅರಿವನ್ನೂ ಮೂಡಿಸಬೇಕಾಗಿದೆ.

ಕೇಂದ್ರ ಸರಕಾರವು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಕ್ರಮಗಳನ್ನು ಕೈಗೊಂಡಿರುವ ಮಧ್ಯೆಯೇ ಕಾಂಗ್ರೆಸ್, ತೃಣಮೂಲದಂತಹ ಕೆಲವು ಪಕ್ಷಗಳು ಈ ಕುರಿತಂತೆ ಒಡಕಿನ ಮಾತನಾಡುತ್ತಿರುವುದು, ನಿಯೋಗದಲ್ಲಿರುವ ತಮ್ಮದೇ ಪಕ್ಷದ ಪ್ರತಿನಿಧಿಯ ಕುರಿತಂತೆ ಅಸಮಾಧಾನ ಸೂಚಿಸುತ್ತಿರುವುದು ಸಲ್ಲುವ ನಡೆಯಲ್ಲ. ಇಂತಹ ನಡೆಯು ಜಗತ್ತಿಗೆ ತಪ್ಪು ಸಂದೇಶ ರವಾನಿಸಬಹುದು. ದೇಶದ ಸಾರ್ವಭೌಮತೆ, ಭದ್ರತೆ, ಜಾಗತಿಕ ಸ್ಥಾನಮಾನ, ಭಯೋತ್ಪಾದನೆ ವಿರುದ್ಧದ ಹೋರಾಟದ ವಿಷಯ ಬಂದಾಗ ಎಲ್ಲಾ ಭಾರತೀಯರು ಏಕಧ್ವನಿಯಿಂದ ಮಾತನಾಡುವಂತಾಗಲಿ, ಎಲ್ಲ ಪಕ್ಷಗಳು ಇದನ್ನು ಪಾಲಿಸಲಿ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೨-೦೫-೨೦೨೫