ಸಮಯ ಹೇಗಿಹುದೋ ?

ಸಮಯ ಹೇಗಿಹುದೋ ?

ಕವನ

ಯಾರು ಇಲ್ಲಿ ಇಲ್ಲದಿರಲು

ನನ್ನ ಒಡಲ ಬೇನೆಗೆ

ಮುರುಟಿಕೊಂಡು ಮಲಗೆ ಇರಲು

ನನ್ನ ಬಾಳ ದೀವಿಗೆ

 

ಅತ್ತು ಕರೆದೆ ಸುತ್ತ ಹೊರಳಿ

ಬರದೆ ಇರಲು ನೊಂದೆನೆ

ಬದುಕಿನೊಳಗೆ ಜೀವ ಸೋತು

ಹಸಿವೆಯಿಂದ ಬೆಂದೆನೆ

 

ವೇಷ ಮರೆಸಿ ದೂರ ಸರಿದೆ

ಕೋಶದೊಳಗೆ ತಿರುಗಿದೆ

ಜಂಗಮರ ರೀತಿಯಲ್ಲೆ

ನಾಡಿನಗಲ ಸುತ್ತಿದೆ

 

ಒಂಟಿ ದೇಹದೊಳಗೆ ಭಂಟ

ಇರಲು ದುಡಿಮೆ ಕಂಡಿದೆ

ನನ್ನ ಮಾತು ನಡೆಯ ನುಡಿಗೆ 

ಪ್ರೀತಿ ಸಿಗಲು ಬಾಳಿದೆ

 

ಹೆಜ್ಜೆ ಹಾಕಿ ಬಂದಳಿಂದು

ನನ್ನವಳ ಪ್ರೀತಿ ಒಸಗೆ

ಸವಿಯ ಕಂಡು ನಲಿದೆನಿಂದು

ನನ್ನವರ ಹರುಷದೊಳಗೆ

 

ಚಿಂತೆಗಳನು ದೂರ ಮಾಡಿ

ಸ್ನೇಹ ಗಳಿಸಿ ಬೀಗಿದೆ

ಮತ್ತೆ ಲಯವ ಕಂಡು ಉಂಡು

ನೆಮ್ಮದಿಯನು ಹೊಂದಿದೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್