ಸಮರಸವೇ ಜೀವನ” ಎಂದ ಸಮನ್ವಯದ ಸಾಹಿತಿ- ವಿ.ಕೃ. ಗೋಕಾಕ್
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು 1991 ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಗೋಕಾಕರು ಹುಟ್ಟಿ ಇದೇ ಆಗಸ್ಟ್ 9, 2014 ಕ್ಕೆ ಸರಿಯಾಗಿ 105 ವರ್ಷಗಳಾಗುತ್ತವೆ. ಆ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಉದ್ದಾರಕ್ಕಾಗಿ ಪಣತೊಟ್ಟು ಬಾಳಿದ ಆ ದಿವ್ಯ ಚೇತನವನ್ನು ನೆನೆಯುತ್ತಾ ಅವರ ಬದುಕಿನ ಪಯಣವನ್ನೊಮ್ಮೆ ಅವಲೋಕಿಸೋಣ....
ವಿನಾಯಕ ಕೃಷ್ಣರಾವ್ ಗೋಕಾಕರು ಅಗಸ್ಟ್.9,1909 ರಂದು ಅವಿಭಜಿತ ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು. ವಿನಾಯಕರ ವಿದ್ಯಾಭ್ಯಾಸ ಸವಣೂರು ಹಾಗೂ ಧಾರವಾಡಗಳಲ್ಲಿ ನಡೆಯಿತು. ಹೀಗೆ ವಿದ್ಯಾಭ್ಯಾಸದ ಸಲುವಾಗಿ ಧಾರವಾಡ ದಲ್ಲಿದ್ದಾಗಲೇ ಅವರಿಗೆ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಸಂಪರ್ಕ ಒದಗಿ ಬಂದಿತು. ಗೋಕಾಕರ ಸಾಹಿತ್ಯ ಕೃಷಿ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹಗಳಿಂದ ಮುಂದುವರೆಯಿತು. ``ಬೇಂದ್ರೆ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಆಗಿದ್ದ ರು.’’ ಎಂದು ಗೋಕಾಕರೇ ಒಮ್ಮೆ ಹೇಳಿಕೊಂಡಿದ್ದರು.
ಇಂಗ್ಲೀಷ್ ವಿಷಯದ ಎಂ.ಎ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದ ಗೋಕಾಕರು, ಮುಂದೆ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು. ಗೋಕಾಕರ ಪಾಠದ ಶೈಲಿ ಅದೆಷ್ಟು ಅದ್ಭುತವಾಗಿದ್ದಿತೆಂದರೆ ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರು. ಕೆಲ ಸಮಯದ ಬಳಿಕ ಗೋಕಾಕರನ್ನು ನೇಮಿಸಿಕೊಂಡಿದ್ದ ಫರ್ಗ್ಯೂಸನ್ ಕಾಲೇಜಿನ ಆಡಳಿತ ವರ್ಗವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇವರನ್ನು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು. ಗೋಕಾಕರು ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿ, . ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ವಿನಾಯಕ ಕೃಷ್ಣ ಗೋಕಾಕ ಆಗಿದ್ದರು.
ಇಂಗ್ಲೆಂಡಿನಿಂದ ಹಿಂತಿರುಗಿದ ಬಳಿಕದಲ್ಲಿ ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನ ಪ್ರಿನ್ಸಿಪಾಲರ ಹುದ್ದೆ ಯನ್ನಲಂಕರಿಸಿದ ಗೋಕಾಕರು ಮುಂದೆ ಪುಣೆಯ ಫರ್ಗೂಸನ್ ಕಾಲೇಜು, ವೀಸನಗರದ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್ ದರಾಬಾದಿನಲ್ಲಿರುವ ಇಂಗ್ಲೀಷ್ ಮತ್ತು ವಿದೇಶೀ ಭಾಷೆಗಳ ಕೇಂದ್ರ ಸಂಸ್ಥೆ, ಸಿಮ್ಲಾದಲ್ಲಿರುವ ಉನ್ನತ ಅಧ್ಯಯನ ಸಂಸ್ಥೆ -ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು.
ಸಾಹಿತ್ಯ ಸೇವೆ
ನವೋದಯದ ನಂತರ ಬದಲಾಗಬೇಕಾಗಿದ್ದ ಕಾವ್ಯಕ್ಕೆ ಅಗತ್ಯವಾದ ಛಂದೋರೂಪವನ್ನು ‘ನವ್ಯಕಾವ್ಯ’ಪರಿಕಲ್ಪನೆಯನ್ನೂ ಹಾಗೂ ನವ್ಯತೆಯ ಕುರಿತ ಚಿಂತನೆಗಳನ್ನು ನೀಡಿದ ಗೋಕಾಕರ ಸಾಹಿತ್ಯ ಸಾಧನೆ ನಿಜಕ್ಕೂ ಶ್ಲಾಘನೀಯವಾದುದು. ವಿನಾಯಕ ಕೃಷ್ಣ ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು. ಮೊದಲ ಪ್ರಕಟಿತ ಕೃತಿ “ಕಲೋಪಾಸಕರು”. ಅವರು ಇಂಗ್ಲೆಂಡಿಗೆ ಸಮುದ್ರದ ಮೂಲಕ ಹೋಗಿ ಬಂದ ಅನುಭವಗಳನ್ನು ಆಧರಿಸಿ ರಚಿಸಿದ “ಸಮುದ್ರ ಗೀತೆಗಳು” ಮತ್ತು “ಸಮುದ್ರದಾಚೆಯಿಂದ”- ಇವು ಮಹತ್ವದ ಕೃತಿಗಳಾಗಿವೆ. . ಇದು ಗೋಕಾಕರ ಕಾವ್ಯ ಮಾರ್ಗದಲ್ಲಿ ಮೊದಲ ವಿಶಿಷ್ಟ ಮೈಲಿಗಲ್ಲು. ಸಾಹಿತ್ಯದಲ್ಲಿಯೇ ಸಮುದ್ರವನ್ನು ಕುರಿತ ಅನುಭವ ಇಷ್ಟು ಸೊಗಸಾಗಿ, ಪ್ರಮಾಣಿಕವಾಗಿ ಬಂದದ್ದು ಇದೇ ಮೊದಲು. ಈ ವಸ್ತು ವೈವಿದ್ಯ ಅದನ್ನು ಹಿಡಿದಿರಿಸಿದ ನೂತನ ಛಂದೋ ವೈವಿದ್ಯ ನಿಜವಾಗಿಯೂ ಹೊಸ ಮಾರ್ಗ ನಿರ್ಮಾಣದ ಸಂಕೇತದಂತಿದೆ.
ಸಾಹಿತ್ಯವನ್ನು ಒಂದು ಕಾಯಕದಂತೆ ಅನವರತ - ಅವಿರತವಾಗಿ ನಡೆಸಿಕೊಂಡು ಬಂದ ಗೋಕಾಕರ ಸಾಹಿತ್ಯ ನಿರ್ಮಿತಿಯ ಹರಹು ವಿಶಾಲವಾದದ್ದು. ಅವರ ಸಾಹಿತ್ಯದ ಆಳ-ಅಗಲ ಶ್ರದ್ಧೆಯಿಂದ ಮನವಿಟ್ಟು ಕೃತಿಗಳನ್ನು ಓದಿದವರಿಗಷ್ಟೇ ನಿಲುಕುವಂತಹುದು. ಗೋಕಾಕರು ತಾವು ಹಿಂದಿನ ಚಂಪೂಕಾವ್ಯದ ತಂತ್ರವನ್ನು ಹೊಸಗನ್ನಡ ಕವಿತೆಗೆ ಅಳವಡಿಸಲು ಪ್ರಯತ್ನಿಸಿದವರು. 1945 ರಲ್ಲಿ ಪ್ರಕಟವಾದ‘ ’’ತ್ರಿವಿಕ್ರಮನ ಆಕಾಶಗಂಗೆ” ಹಾಗೂ 1965 ರಲ್ಲಿ ಪ್ರಕಟವಾದ “ಇಂದಲ್ಲ ನಾಳೆ” ಕೃತಿಗಳು ಹೊಸ ಬಗೆಯ ಚಂಪೂಕಾವ್ಯಗಳೆಂದೇ ಗುರುತಿಸಲ್ಪಟ್ಟಿವೆ. ಆಧುನಿಕ ಕಾವ್ಯಕ್ಕೆ ಶೈಶವಾವಸ್ಥೆಯಲ್ಲಿ ಚೈತನ್ಯ ನೀಡಿ ಮುನ್ನಡೆಸಿ, ನಮ್ಮ ಸಂಸ್ಕೃತಿಯೊಳಗೆ ಬೀಸಿದ ಆಧುನಿಕ ವಾತಾವರಣವನ್ನು ಮನಮುಟ್ಟುವಂತೆ ತಮ್ಮ ಕೃತಿಗಳಲ್ಲಿ ವರ್ಣಿಸಿದ ಗೋಕಾಕರ ಸೃಜನಶೀಲತೆ ಎಂಥವರನ್ನೂ ಬೆರಗುಗೊಳಿಸುವಂತಹುದು.
ಗೋಕಾಕರು ನಾಟಕ, ಪ್ರಬಂಧ, ಪ್ರವಾಸ ಕಥನ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಬೃಹತ್ ಕಾದಂಬರಿಗಳಲ್ಲಿ ಒಂದಾದ "ಸಮರಸವೇ ಜೀವನ" ಗೋಕಾಕರದ್ದೇ ಕೃತಿ. ಬಹುಷಃ ಭಾರತದ ಬೇರಾವ ಭಾಷೆಗಳಲ್ಲಿ ಇಷ್ಟು ಬೃಹತ್ ಗಾತ್ರದ ಕಾದಂಬರಿ ಇರಲಿಕ್ಕಿಲ್ಲವೇನೋ?! ಕಾದಂಬರಿ ತನ್ನ ಗಾತ್ರದಲ್ಲಿ ಮಾತ್ರವಲ್ಲ ತನ್ನ ವಸ್ತು ವಿಶೇಷಗಳಿಂದಲೂ ಸಾಹಿತ್ಯಾಸಕ್ತರ ಹಾಗೂ ವಿಮರ್ಶಕ ವರ್ಗದವರ ಮನ ಗೆಲ್ಲುವಂತಿರುವುದು ಗಮನಾರ್ಹ ಸಂಗತಿ. "ಜನನಾಯಕ" ಗೋಕಾಕರ ಸುಪ್ರಸಿದ್ಧ ನಾಟಕವಾದರೆ "ಭಾರತ ಸಿಂಧು ರಶ್ಮಿ" ವಿನಾಯಕರು ರಚಿಸಿದ ಮಹಾಕಾವ್ಯ. ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು. ವಿಶ್ವಾಮಿತ್ರ ಈ ಕಾವ್ಯದ ನಾಯಕ. ಇದು ಆಧುನಿಕ ಕಾಲಘಟ್ಟದಲ್ಲಿ ಕನ್ನಡದಲ್ಲಿ ಬಂದ ಅತ್ಯಂತ ಅಪೂರ್ವ ಮಹಾಕಾವ್ಯ ಕೃತಿಯಾಗಿದೆ.
ಇದಲ್ಲದೆ ಗೋಕಾಕರು ಒಟ್ಟು ಆರು ಕವನ ಸಂಗ್ರಹಗಳು, ಮೂರು ನಾಟಕಗಳು, ನಾಲ್ಕು ವಿಮರ್ಶಾ ಸಂಕಲನಗಳು, ಎರಡು ಪ್ರವಾಸ ಕಥನಗಳನ್ನು ರಚಿಸಿದ್ದಾರೆ. “ಊರ್ಣನಾಭ”, “ಉಗಮ”, “ಬಾಳ ದೇಗುಲದಲ್ಲಿ” “ದ್ಯಾವಾ ಪೃಥಿವೀ” (ಖಂಡ ಕಾವ್ಯ), “ಅಭ್ಯುದಯ” ಗಳು ಕವನ ಸಂಗ್ರಹಗಳಾದರೆ, “ಯುಗಾಂತರ”, ವಿಮರ್ಶಕ ವೈದ್ಯ” ನಾಟಕಗಳು, “ಇಂದಿನ ಕನ್ನಡ ಕಾವ್ಯದ ಗೊತ್ತುಗುರಿ” ಯು ಗೋಕಾಕರ ಮಹತ್ವದ ವಿಮರ್ಶಾ ಕೃತಿಯಾಗಿದೆ.
ಪ್ರಶಸ್ತಿ – ಗೌರವಗಳು
ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಶೈಲಿಯಲ್ಲಿ ಹಲವು ಉಪಯುಕ್ತ ಕೊಡುಗೆ ನೀಡಿದ ಗೋಕಾಕರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, , ಪದ್ಮಶ್ರೀ ಪುರಸ್ಕಾರ (1961), ಭಾರತೀಯ ವಿದ್ಯಾಭವನದ ರಾಜಾಜಿ ಸಾಹಿತ್ಯ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. 1967 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು 1979 ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. 1958 ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಾದಿಯನ್ನೂ ಗೋಕಾಕರು ಅಲಂಕರಿಸಿದ್ದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ (1983) ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಗೋಕಾಕರು ಅಂತಹಾ ಸ್ಥಾನಗಳನ್ನಲಂಕರಿಸಿದ್ದ ಪ್ರಥಮ ಕನ್ನಡಿಗರಾಗಿದ್ದರು. ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗೆ ಜ್ಞಾನಪೀಠ ಪ್ರಶಸ್ತಿ (1991), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ. ಗೋಕಾಕರ "ದ್ಯಾವಾ ಪೃಥಿವೀ" ಕವನ ಸಂಕಲನಕ್ಕೆ 1960 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.
ಗೋಕಾಕ್ ವರದಿ
ತಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿದ್ದ ಗೋಕಾಕರಿಗೆ ಶ್ರೀಸಾಮಾನ್ಯರ, ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರಾಗುವ ಒಂದು ಸುಯೋಗ ಒದಗಿ ಬಂತು. ಕರ್ನಾಟಕ ಸರ್ಕಾರ 1980 ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ "ಗೋಕಾಕ್ ಚಳವಳಿ" ಎಂದೇ ದಾಖಲಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ. ಅಂದಿನಿಂದ ಕನ್ನಡಿಗರು ತಮ್ಮ ನಾಡು, ನುಡಿ ಹಾಗೂ ನೀರಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತರಾಗಿದ್ದಾರೆ. ಗೋಕಾಕರೇ ಸ್ವತಃ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿ ಜನರನ್ನು ಎಚ್ಚರಿಸಿದ್ದಾರೆ. ಅವರು ಅನೇಕ ಕನ್ನಡಪರ ನಿಯೋಗಗಳ ನಾಯಕತ್ವವನ್ನು ವಹಿಸಿ ಸರ್ಕಾರವನ್ನೂ ಎಚ್ಚರಿಸಿದ್ದಾರೆ. ಇದು ಗೋಕಾಕರ ಕನ್ನಡ ಪ್ರೀತಿಗೆ ನಿದರ್ಶನವಾಗಿದೆ. ಗೋಕಾಕ್ ಅವರು ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ "ಗೋಕಾಕ್ ವರದಿ"ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡೂ ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕರನ್ನು ಸದಾ ಗೌರವ, ಕೃತಜ್ಞತೆಗಳಿಂದ ನೆನೆಯುತ್ತದೆ.
ನಿಧನ
ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಕನ್ನಡದ ಕಟ್ಟಾಳು ಗೋಕಾಕರು 1992 ರ ಎಪ್ರಿಲ್.28 ರಂದು ಬೆಳಗಿನ ಜಾವ ಮುಂಬಯಿಯಲ್ಲಿ ಕೀರ್ತಿಶೇಷರಾದರು.
Comments
ಉ: ಸಮರಸವೇ ಜೀವನ” ಎಂದ ಸಮನ್ವಯದ ಸಾಹಿತಿ- ವಿ.ಕೃ. ಗೋಕಾಕ್
ಸ್ಮರಣೆಗಾಗಿ ಬರೆದ ಸ್ಮರಣೀಯ ಬರಹ. ಅಭಿನಂದನೆ.
ಉ: ಸಮರಸವೇ ಜೀವನ” ಎಂದ ಸಮನ್ವಯದ ಸಾಹಿತಿ- ವಿ.ಕೃ. ಗೋಕಾಕ್
2 ವಿಷಯಗಳಿಗೆ ವಿ.ಕೃ ಗೋಕಾಕರವರು ನನ್ನ ಸ್ಮೃತಿ ಪಟಲದಲ್ಲಿ ಸದಾ ಬಂದು ಹೊಗುತ್ತಾರೆ ಪ್ರಸಂಗ ಒಂದು ಅವರು ರಚಿಸಿದ "ಸಮುದ್ರ ಗೀತೆಗಳು" ಕವನ ಸಂಗ್ರಹ ಗೋಕಾರವರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಾಗ ಗುಲಬುರ್ಗಾ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಯಲ್ಲಿ ಪಠ್ಯವಾಗಿತ್ತು ನಾವುಗಳು ಪದವಿ ಎರಡನೇ ವರ್ಷದ ವಿದ್ಯಾರ್ಥಿಗಳು ಪ್ರಸಂಗ ಎರಡು ಅವರು ನಿಧನರಾದಗ ನಮ್ಮ ಕನ್ನಡದ ಉಪಾನ್ಯಸಕರು ವಿ.ಕೃ ಗೋಕಾಕರ ಕುರಿತು ಒಂದು ಅವಲೋಕನ ಎಂದು ಅವರ ಕುರಿತು ಮಾತನಾಡಿದ್ದು ಮರೆಯಲಾಗದು ಅವರ ಬಗ್ಗೆ ಬರೆದಿರುವದಕ್ಕೆ ಲೇಖಕರಿಗೆ ಧನ್ಯವಾದಗಳು