ಸಮರ್ಥ ಸಂಘಟಕ, ಆವಿಷ್ಕಾರಗಳಿಗೆ ಪೇಟೆಂಟ್ ಕೇಳದ ಕೃಷಿಕ: ಮಂಚಿ ಶ್ರೀನಿವಾಸ ಆಚಾರ್

Submitted by addoor on Tue, 09/15/2020 - 08:54

(ಕೃಷಿಕರ ಪರವಾಗಿ ಮತ್ತು ಅಡಿಕೆ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ ನೂರಾರು ಕೃಷಿಕ ಸಮಾವೇಶಗಳಲ್ಲಿ ಬಲವಾಗಿ ಧ್ವನಿಯೆತ್ತುತ್ತಿದ್ದ ಸಮರ್ಥ ಸಂಘಟಕ ಮಂಚಿ ಶ್ರೀನಿವಾಸ ಆಚಾರ್ (೭೩) ಅಲ್ಪ ಕಾಲದ ಅಸೌಖ್ಯದಿಂದ ೨೯ ಆಗಸ್ಟ್  ೨೦೨೦ರಂದು ನಮ್ಮನ್ನು ಅಗಲಿದರು.  ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮತ್ತು ಕೃಷಿಕರೇ ರೂಪಿಸುವ ಅಪ್ಪಟ ಕೃಷಿಕಪರ ಮಾಸಪತ್ರಿಕೆ "ಅಡಿಕೆ ಪತ್ರಿಕೆ”ಯ ಸಂಪಾದಕ - ಪ್ರಕಾಶಕರಾಗಿ ಅವರು ಸಲ್ಲಿಸಿದ ಸೇವೆಗೆ ಬೆಲೆ ಕಟ್ಟಲಾಗದು. ಆತ್ಮೀಯ ಮಂಚಿ ಶ್ರೀನಿವಾಸ ಆಚಾರ್ ಬಗ್ಗೆ ನಾನು ಬರೆದಿದ್ದ ಬರಹವೊಂದು “ಉದಯವಾಣಿ"ಯ ನನ್ನ ಅಂಕಣ “ಬಹುಧಾನ್ಯ"ದಲ್ಲಿ ೧೫ ವರುಷಗಳ ಮುಂಚೆ, ೩ ಮೇ ೨೦೦೫ರಂದು ಪ್ರಕಟವಾಗಿತ್ತು. ಅದನ್ನೇ ಅವರಿಗೆ ನುಡಿನಮನವಾಗಿ ಪುನಃ ಪ್ರಕಟಿಸುತ್ತಿದ್ದೇನೆ.)

"ನಮ್ಮ ತೋಟದಲ್ಲಿ ಮೊದಲ ಬೋರ್-ವೆಲ್ ಮಾಡಿದ್ದು ೧೯೭೯ರಲ್ಲಿ. ಆಗ ೮೦ ಅಡಿ ಆಳದಲ್ಲಿ ನೀರು ಸಿಕ್ಕಿತ್ತು. ಈ ವರುಷ ನಮ್ಮ ಹಳ್ಳಿಯಲ್ಲಿ ಬೋರ್-ವೆಲ್ ಮಾಡಿಸಿದವರಿಗೆ ನೀರು ಸಿಕ್ಕಿದ್ದು ಮುನ್ನೂರು ಅಡಿ ಆಳದಲ್ಲಿ. ಕೆಲವರು ೩೫೦ ಅಡಿ ಆಳದ ವರೆಗೂ ಕೊರೆಸಬೇಕಾಯಿತು. ೨೫ ವರ್ಷಗಳಲ್ಲಿ ಜಲಮಟ್ಟ ಇಷ್ಟು ಕೆಳಗೆ ಹೋಗಿದೆ. ನಾವೆಲ್ಲ ಮಳೆನೀರು ಇಂಗಿಸಲೇ ಬೇಕು. ಇಲ್ಲದಿದ್ರೆ ನಮ್ಮ ಮಕ್ಕಳ ಕಾಲದಲ್ಲಿ ಅಲ್ಲ, ನಮ್ಮ ಕಾಲದಲ್ಲಿಯೇ ಕುಡಿಯಲಿಕ್ಕೆ ನೀರಿಲ್ಲ ಅಂತಾದೀತು" ಎಂದು ಹೇಳುತ್ತಾ ಗುಡ್ಡ ಏರುತ್ತಿದ್ದರು ಮಂಚಿ ಶ್ರೀನಿವಾಸ ಆಚಾರ್.

ಅವರ ಮಾತು ಕೇಳುತ್ತಿದ್ದಂತೆ ಚಿತ್ರವೊಂದು ಕಣ್ಣಿಗೆ ಕಟ್ಟುತ್ತಿತ್ತು. ಹಿಂದಿನ ತಲೆಮಾರುಗಳು ಉಳಿಸಿಟ್ಟ ಅಂತರ್ಜಲವನ್ನು ಇಂದಿನ ತಲೆಮಾರು ದೋಚುತ್ತ ದೋಚುತ್ತ ಮುಂದಿನ ತಲೆಮಾರುಗಳಿಗೆ ನೀರ ಸಂಕಟ ಉಳಿಸಿ ಹೋಗುವ ಚಿತ್ರ.

ಕೇವಲ ಮಾತನಾಡುತ್ತ ಇರುವವರಲ್ಲ ಶ್ರೀನಿವಾಸ ಆಚಾರ್. ೮ ಎಪ್ರಿಲ್ ೨೦೦೫ರಂದು ಅವರ ಮನೆಗೆ ಹೋಗಿದ್ದಾಗ, ನೀರಿಂಗಿಸಲಿಕ್ಕಾಗಿ ಅವರು ಮಾಡಿದ ಕೆಲಸ ಅಂಗಳದಲ್ಲೇ ಕಾಣುತ್ತಿತ್ತು. ಮನೆಯ ಚಾವಣಿ ನೀರನ್ನೆಲ್ಲ ಸಂಗ್ರಹಿಸಲು ಮನೆಯಿಂದ ಮೂವತ್ತು ಅಡಿಗಳ ದೂರದಲ್ಲಿ ೨೦ ಅಡಿ ಉದ್ದದ ಇಂಗುಗುಂಡಿ. ಅರ್ಧ ಎಕರೆ ವಿಶಾಲವಾದ ಅಂಗಳದ ಮೂಲೆಯಲ್ಲಿ ಇನ್ನೆರಡು ಅದೇ ಅಳತೆಯ ಇಂಗುಗುಂಡಿಗಳು.

ಅನಂತರ ಮನೆಯ ಹಿಂಬದಿಯ ಗುಡ್ಡಕ್ಕೆ ಕರೆದೊಯ್ದರು. ಅಲ್ಲಿ ಕಳೆದ ವರುಷ ಜೆಸಿಬಿಯಿಂದ ಮಾಡಿಸಿದ ೧೦೦ ಅಡಿ ಉದ್ದ, ೭೦ ಅಡಿ ಅಗಲದ ಮಳೆನೀರು ಸಂಗ್ರಹಿಸುವ ಹೊಂಡ. ಅದನ್ನು ಇನ್ನಷ್ಟು ಅಗಲ ಮಾಡಿಸುವ ಯೋಜನೆ ಅವರದು. ಆ ಗುಡ್ಡದ ತಳದಲ್ಲಿ ಅವರ ತಂದೆಯ ಕಾಲದ ದೊಡ್ಡ ಮಳೆನೀರ ಹೊಂಡ. ನಮ್ಮ ನೆಲಕ್ಕೆ ಬಿದ್ದ ಮಳೆನೀರನ್ನು ನಮ್ಮ ನೆಲದಲ್ಲೇ ಇಂಗಿಸುವ ತತ್ವದ ಪಾಲನೆ.

ಶ್ರೀನಿವಾಸ ಆಚಾರ್ ಅವರ ತಂದೆ ಮಂಚಿ ನಾರಾಯಣ ಆಚಾರ್ ಈಗಿಲ್ಲ. ಆದರೆ ಅವರು ಬೆಳೆಸಿದ ಏಳು ಎಕರೆ ಅಡಿಕೆ ತೋಟ ಹಾಗೇ ಇದೆ. ತೋಟದ ಮರಗಳಿಗೆ ವಯಸ್ಸಾಗುತ್ತಿದೆ; ಇಳುವರಿ ಕಡಿಮೆಯಾಗುತ್ತಿದೆ. ಇದಕ್ಕೇನು ಪರಿಹಾರ? ಶ್ರೀನಿವಾಸ ಆಚಾರ್ ಅಭಿಪ್ರಾಯದಲ್ಲಿ ಅಡಿಕೆ ತೋಟದಲ್ಲಿ ಹಳೆಯ ಮರಗಳಿಗೆ ೫೦ ವರುಷ ತುಂಬುತ್ತ ಬಂದಂತೆ, ಎಳೆ ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಪ್ರಯೋಜನವಿಲ್ಲ. ಅದರ ಬದಲಾಗಿ, ಐದು ವರುಷಗಳಲ್ಲಿ ಹಂತಹಂತವಾಗಿ ಹಳೆ ಮರಗಳನ್ನು ಕಿತ್ತು ಹೊಸ ಸಸಿ ನೆಡುವ ಯೋಜನೆ ಸೂಕ್ತ. ತೋಟವನ್ನು ಐದು ಭಾಗ ಮಾಡಿಕೊಳ್ಳಬೇಕು. ಒಂದೊಂದು ಭಾಗದ ಮರಗಳನ್ನು ಒಂದೊಂದು ವರುಷ ಕಡಿದು ತೆಗೆದು ಅಲ್ಲಿ ಹೊಸ ಅಡಿಕೆ ಸಸಿಗಳನ್ನು ನೆಡಬೇಕು ಎಂಬುದವರ ಸಲಹೆ.

ವೃತ್ತಿಯಿಂದ ಇಂಜಿನಿಯರ್ ಆದ ಶ್ರೀನಿವಾಸ ಆಚಾರ ಮೂರು ದಶಕಗಳ ಕಾಲ ಮಂಗಳೂರಿನಲ್ಲಿ ವರ್ಕ್‌ಷಾಪ್ ನಡೆಸಿದವರು. ಸಾಲ ಮಾಡದೆ ವರ್ಕ್‌ಷಾಪ್ ಸ್ಥಾಪಿಸಿ, ದೀರ್ಘ ಕಾಲ ನಡೆಸಿದ್ದು ಅವರ ಸಾಧನೆ. ಮಂಚಿಯಿಂದ ಹೊರಟು ಬಿ.ಸಿ. ರೋಡ್ ಹಾದು ೧೨ ವರುಷಗಳ ಕಾಲ ಸ್ಕೂಟರಿನಲ್ಲೇ ಮಂಗಳೂರಿಗೆ ದಿನದಿನವೂ ಹೋಗಿ ಬಂದವರು. ಅನಂತರ ಪ್ರತಿ ದಿನ ಬಸ್ಸಿನಲ್ಲಿ ಹೋಗಿ ಬಂದವರು.

ಅವರು ಇಂಜಿನಿಯರಿಂಗನ್ನು ಕಾಲೇಜಿನಲ್ಲಿ ಕಲಿತು ಬಿಟ್ಟವರಲ್ಲ. ತಮ್ಮ ಚಿಂತನೆಯಲ್ಲಿ ಅಳವಡಿಸಿಕೊಂಡವರು. ಇದರಿಂದಾಗಿ ಕೃಷಿಕರ ಅಗತ್ಯಗಳಿಗೆ ಹೊಂದುವ ಸಾಧನಗಳನ್ನು ರೂಪಿಸಲು ಅವರಿಗೆ ಸಾಧ್ಯವಾಗಿದೆ. ಉದಾಹರಣೆಗೆ ಒಂದಡಿ ವ್ಯಾಸದ ಎರಡು ಚಕ್ರಗಳಿರುವ ಕಬ್ಬಿಣದ ಚೌಕಟ್ಟು (ಅಳತೆ ೬ ಅಡಿ X ೪ ಅಡಿ) ಇದಕ್ಕೆ ಅಡಿಕೆ ಮರದ ೪ ಇಂಚು ಅಗಲದ ಪಟ್ಟಿಗಳನ್ನು ಕೂರಿಸಲಾಗಿದೆ. ಇದರಲ್ಲಿ ತೆಂಗಿನಕಾಯಿ, ಹಲಸಿನ ಸೊಳೆಗಳನ್ನು ಒಣಗಿಸಬಹುದು.  ಬಿಸಿಲಿರುವ ಜಾಗಕ್ಕೆ ಇದನ್ನು ಸುಲಭವಾಗಿ ಒಯ್ದು ಇರಿಸಬಹುದು.

ಹಪ್ಪಳ ಒಣಗಿಸುವ ಸ್ಟ್ಯಾಂಡ್ ಅವರು ವಿನ್ಯಾಸಗೊಳಿಸಿದ ಇನ್ನೊಂದು ಉಪಯುಕ್ತ ಸಾಧನ. ಇದು ೬ ಅಡಿ ಉದ್ದ, ೪ ಅಡಿ ಅಗಲದ ಮೇಜಿನಂತಿದೆ. ಇದಕ್ಕೆ ಒಂದಡಿ ಅಂತರದಲ್ಲಿ ಪ್ಲಾಸ್ಟಿಕ್ ಹಾಳೆಯ “ಚಾವಣಿ". ಈ ಚಾವಣಿಯ ಕೆಲಗೆ ಹಲಗೆಯಲ್ಲಿ ಹಪ್ಪಳ, ಸಂಡಿಗೆ ಒನಗಿಸಲು ಇಟ್ಟರೆ ನಾಯಿಗಳ ಮತ್ತು ಕಾಗೆಗಳ ಕಾಟವಿಲ್ಲ. ಕರಾವಳಿಯ ಜನಪ್ರಿಯ ತಿನಿಸು ಹಲಸಿನ ಕಾಯಿ ಚಿಪ್ಸ್ ಮಾಡಲು ಹಲಸಿನ ಸೊಳೆಗಳನ್ನು ಕತ್ತರಿಸಲಿಕ್ಕಾಗಿ ಹೊಸ ಸಾಧನವೂ ಇವರ ಆವಿಷ್ಕಾರ.

ಸಂಘಟನೆಯಲ್ಲಿ ನುರಿತವರು ಶ್ರೀನಿವಾಸ ಆಚಾರ್. ಈಗ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರು. ಕನ್ನಡದಲ್ಲಿ ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮದಲ್ಲಿ ಹೊಸ ಹಾದಿ ತುಳಿದ “ಅಡಿಕೆ ಪತ್ರಿಕೆ” ಈ ಸಂಘವು ಸ್ಥಾಪಿಸಿದ "ಫಾರ್ಮರ್ ಫಸ್ಟ್ ಟ್ರಸ್ಟಿ”ನ ಮಾಸ ಪತ್ರಿಕೆ ಎಂಬುದು ಗಮನಾರ್ಹ.

"ಯಂತ್ರ ತಂತ್ರ" ಆಚಾರರೇ ಸ್ಥಾಪಿಸಿದ ಸಂಘಟನೆ. ಕೃಷಿಕರ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ತಂತ್ರಜ್ನಾನದ ಅಳವಡಿಕೆ, ಸುಧಾರಣೆ ಹಾಗೂ ಪ್ರಚಾರ ಇದರ ಪ್ರಧಾನ ಉದ್ದೇಶ. "ಯಂತ್ರ ತಂತ್ರ" ಏರ್ಪಡಿಸಿದ ಸರಳ ಸಾಧನಗಳ ಮೂರು ಪ್ರದರ್ಶನಗಳಲ್ಲಿ ಮಾಹಿತಿ ಪಡೆದವರು ನೂರಾರು ಜನರು.

ದಕ್ಷಿಣ ಕನ್ನಡದ ಸಣ್ಣ ಉದ್ದಿಮೆದಾರರ ಸಂಘದ ಕಾರ್ಯದರ್ಶಿಯಾಗಿ ಹಾಗೂ ಪದಾಧಿಕಾರಿಯಾಗಿ ಹಲವು ವರುಷ ನಿಸ್ವಾರ್ಥ ಸೇವೆ ಸಲ್ಲಿಸಿದವರು ಶ್ರೀನಿವಾಸ ಆಚಾರ್. ಸಣ್ಣ ಉದ್ದಿಮೆಗಳನ್ನು ಆರಂಭಿಸುವುದು ಹೇಗೆಂದು ತಿಳಿಯುವುದು ಬಹಳ ಮುಖ್ಯ; ಅದು ನಷ್ಟಕ್ಕೆ ಬಿದ್ದಾಗ ಅದನ್ನು ಮುಚ್ಚುವುದು ಹೇಗೆಂದು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಪ್ರತಿಪಾದಿಸುವವರು.

ಹೊಸ ವಿಚಾರಗಳಿಗೆ ಇವರದು ತೆರೆದ ಮನ. ಹೊಸ ಯೋಜನೆಗಳ ಗುಂಗಿನಲ್ಲೇ ಇರುವವರು. "ಯೋಚನೆ ಮಾಡಲಿಕ್ಕೆ ನಾವೇನೂ ಹಣ ಖರ್ಚು ಮಾಡಬೇಕಾಗಿಲ್ಲ” ಎಂಬುದು ಅವರು ಆಗಾಗ್ಗೆ ಹೇಳುವ ಮಾತು. ಅಡಿಕೆ ಹಾಳೆಯಿಂದ ತಟ್ಟೆ ಮಾಡುವ ಯಂತ್ರ ತರಿಸಿ ಇಟ್ಟಿದ್ದಾರೆ; ಸದ್ಯದಲ್ಲೇ ಉತ್ಪಾದನೆ ಆರಂಭಿಸ ಬೇಕೆಂಬುದು ಅವರ ಯೋಜನೆ.

೪ ಎಪ್ರಿಲ್ ೨೦೦೫ರಂದು "ಮಂಚಿ ನಾರಾಯಣ ಆಚಾರ್ ಪುಳ್ಳಿ ಸಂಘ ವಾರ್ತೆ” ಎಂಬ ಖಾಸಗಿ ಪ್ರಸಾರದ ವಾರ್ತಾಪತ್ರ ಬಿಡುಗಡೆ ಮಾಡಿದ್ದಾರೆ ಆಚಾರ್. ಇದ್ಯಾಕೆ? ದಿವಂಗತ ನಾರಾಯಣ ಆಚಾರ್ ಅವರಿಗೆ ಹತ್ತು ಮಕ್ಕಳು. ಈ ತುಂಬು ಕುಟುಂಬದ ಮಕ್ಕಳು. ಮೊಮ್ಮಕ್ಕಳು, ಮರಿಮಕ್ಕಳು ಇಂದು ದೇಶವಿದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಇವರೆಲ್ಲರ ನಡುವಣ ಸಂವಹನದ ಸಾಧನವಾಗಿ ಪುಳ್ಳಿ ಸಂಘ ವಾರ್ತೆ ಶುರು ಮಾಡಿದ್ದಾರೆ ಶ್ರೀನಿವಾಸ ಆಚಾರ್.

ಮಂಗಳೂರಿನ ತನ್ನ ಸಣ್ಣ ಉದ್ಯಮ ಮುಚ್ಚಿ, ಈಗ ಮಂಚಿಯ ತೋಟದ ಮನೆಯಲ್ಲಿ ಪ್ರಶಾಂತ ಪರಿಸರದಲ್ಲಿ ನೆಲೆಸಿರುವ ಶ್ರೀನಿವಾಸ ಆಚಾರ್ ನುಡಿದಂತೆ ನಡೆದವರು. ಮಂಗಳೂರಿನಲ್ಲಿ ನಾಲ್ಕು ದಶಕಗಳು ದುಡಿದರೂ ಹಳ್ಳಿ ಬದುಕನ್ನೇ ನೆಚ್ಚಿದವರು. ಇಂದಿಗೂ ಪಿಕ್ಕಾಸು ಹಿಡಿದು ಕೆಲಸ ಮಾಡುವ ಶ್ರೀನಿವಾಸ ಆಚಾರ್ ವಿನ್ಯಾಸಗೊಳಿಸಿದ ಸರಳ ಸಾಧನಗಳನ್ನು ಹೆಚ್ಚೆಚ್ಚು ಕೃಷಿಕರು ಬಳಸಲಿ. ಯಾಕೆಂದರೆ ತಮ್ಮ ಯಾವುದೇ ಸಾಧನಕ್ಕೂ ಅವರು ಪೇಟೆಂಟ್ ಕೇಳೋದಿಲ್ಲ!