ಸಮರ ಕಣದಲಿ ಅರ್ಜುನ
ಕವನ
ಹರಿಯೆ ತಾಳೆನು ಮನದ ವೇದನೆ
ಕರದಲಾಯುಧ ಪಿಡಿಯಲಾರೆನೆ
ಬರಿದುಗೊಳಿಸಿದೆ ನನ್ನ ಮನದಲಿ ಸಮರದುತ್ಸಾಹ
ಖರೆಯ ನುಡಿವೆನು ಚಿಂತೆ ಮುಸುಕಿದೆ
ಮರಳಿ ಹೋಗಲು ಮನವು ಬಯಸಿದೆ
ಕೊರೆವ ಚಿಂತೆಯು ಕಳೆದುಬಿಟ್ಟಿದೆ ಕದನದುನ್ಮಾದ
ಬಂದು ನಿಂತೆನು ಸಮರ ಕಣದಲಿ
ನೊಂದು ಕುಳಿತಿಹೆನೀಗ ಮನದಲಿ
ಬಂಧು ಬಾಂಧವರೊಡನೆ ಕಾದಲು ಮನದಿ ಹಿಂಜರಿಕೆ
ಕೊಂದು ದೊರಕುವ ರಾಜ್ಯವೇತಕೆ
ಮುಂದೆ ನಿಂದನೆ ನಮ್ಮ ಬಾಳಿಗೆ
ಬಂಧು ಮಾಧವ ಕಾದಲಾರೆನು ಕ್ಷಮಿಸು ನೀನೆನಗೆ
ಹಿರಿಯರಾಗಿಹ ಭೀಷ್ಮರಿರುವರು
ಗುರುಗಳಾಗಿಹ ಪೂಜ್ಯರಿರುವರು
ಮರೆತಿದೆಲ್ಲವ ತೊರೆದು ಬಂಧವ ಮಾಡೆ ಸಂಹಾರ
ಅರಿಗಳೆಂಬುದು ಮನಕೆ ಬಾರದು
ಸರಿದ ದಿನಗಳ ಬಂಧ ನೆನೆವುದು
ಸರದಿ ಸಾಲಲಿ ನೆನಪು ಕಾಡಿಹುದೇನು ಪರಿಹಾರ
ನೀನು ಕ್ಷತ್ರಿಯ ತರವಿದಲ್ಲವು
ಮಾನವಂತನೆ ಕಾದು ಸಮರದೆ
ಸಾನುರಾಗದಿ ಹರಿಯು ನುಡಿದನು ಪಾರ್ಥ ಸಲ್ಲದಿದು
ಏನು ನಡೆವುದು ವಿಧಿಯು ಬರೆದಿಹ
ನೀನು ಕೇವಲ ನೆಪವು ಕಾರ್ಯಕೆ
ನಾನು ನುಡಿವುದ ಮನನ ಮಾಡಿಕೊ ಧರ್ಮ ಯುದ್ಧವಿದು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್