ಸಮಸ್ಯೆಗಳು - ಸಲಹೆಗಳು - ಮನವಿ (ಭಾಗ 2)

ಸಮಸ್ಯೆಗಳು - ಸಲಹೆಗಳು - ಮನವಿ (ಭಾಗ 2)

ಪರೀಕ್ಷಾ ನೀತಿ ಬದಲು, FA 1,2,3,4,  SA, 1,2 ಬದಲಾಗಿ( LBA) ಪಾಠ ಅಧಾರಿತ ಮೌಲ್ಯಾಂಕನ ಪದ್ಧತಿ ಜಾರಿ 2025-26 ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಶಿಕ್ಷಕರ ಸಂಖ್ಯೆ ಕಡಿಮೆ ಇದ್ದ ಶಾಲೆಯಲ್ಲಿ ಒಬ್ಬೊಬ್ಬರು 8 period ನಲ್ಲಿ 10-12 ವಿಷಯಗಳನ್ನು ಬೋಧಿಸುತ್ತಾ ಪಾಠ ಮಾಡಲು ಸಮಯ ಸಾಲದಾಗಿರುವಾಗ ಪ್ರತಿ ಪಾಠಕ್ಕೂ 30 ಅಂಕಗಳ ಪರೀಕ್ಷೆ ಮಾಡುವುದರಲ್ಲೇ ಸಮಯ ಹೋಗುತ್ತದೆ ಮತ್ತು ಅದನ್ನು ತಿದ್ದಲು ಸಮಯವಾದರೂ ಎಲ್ಲಿದೆ? ತಿದ್ದುತ್ತಾ ಪರೀಕ್ಷೆ ಮಾಡುತ್ತಾ ಕುಳಿತರೆ ಪಾಠ ಮಾಡುವುದು ಯಾವಾಗ?

ಖಾಸಗಿ ಶಾಲೆಗಳಲ್ಲಿ ಇರುವಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಯೂನಿಟ್ ಟೆಸ್ಟ್ ಪದ್ಧತಿ ಜಾರಿಗೊಳಿಸಲು ಸರ್ಕಾರ ಕ್ರಮಕೈಗೊಂಡಿದೆ. ಆದರೆ ಇದರ ಜೊತೆ FA, SA ಕೂಡಾ ಕಷ್ಟ ಅಲ್ಲವೇ? ಅವುಗಳನ್ನೆಲ್ಲ ಮಾಡಿ ಎಲ್ಲವನ್ನೂ STS ನಲ್ಲಿ upload ಮಾಡುವುದೇ ಶಿಕ್ಷಕರ ಕಾರ್ಯವಾಗಿ ಬಿಡುತ್ತದೆ. ಗ್ರಾಮೀಣ ಶಾಲೆಗಳಲ್ಲಿ, 90% ಶಾಲೆಗಳಲ್ಲಿ  Wifi ಇಲ್ಲ. ಶಿಕ್ಷಕರು ತಮ್ಮ ಮೊಬೈಲ್ ಡೇಟಾ ಬಳಸಿ ಕಂಪ್ಯೂಟರ್ ಆನ್ಲೈನ್ ಕೆಲಸ ಮಾಡುತ್ತಿದ್ದಾರೆ. ನೆಟ್ವರ್ಕ್ ಸರಿಯಾಗಿ ಸಿಗದೆ ಆನ್ಲೈನ್ ನಲ್ಲೇ ಇರುವ ಪಾಡು ಅವರದ್ದಾಗಿದೆ. 

ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆ(LBA) ಅನುಷ್ಠಾನಗೊಳ್ಳಲಿದ್ದು, ವಿದ್ಯಾರ್ಥಿಗಳು ಪ್ರತಿ ಅಧ್ಯಯನ ಮುಗಿದ ನಂತರ ಕಿರು ಪರೀಕ್ಷೆ ಬರೆಯಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ಜಾರಿಯಲ್ಲಿದೆ. ವಿದ್ಯಾರ್ಥಿಗಳಿಗೆ ಪ್ರತಿ ಅಧ್ಯಯನ ಮುಗಿದ ನಂತರ ಪರೀಕ್ಷೆ ಮಾಡುವುದರಿಂದ ಅರ್ಥೈಸಿಕೊಳ್ಳುವುದು, ಕಲಿಕೆಯ ಗುಣಮಟ್ಟದ ಬಗ್ಗೆ ಖಾತ್ರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪಾಠ ಆಧಾರಿತವಾದ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬೇಕಿದೆ. ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಶಾಲೆಗಳಿಗೆ ನೀಡಲಿದೆ. ಶಾಲೆಗಳು ಇದರ ಆಧಾರದ ಮೇಲೆ ಪರೀಕ್ಷೆ, ಮೌಲ್ಯಾಂಕನ ನಡೆಸಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಅವರ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ(SATS) ಅಪ್ಲೋಡ್ ಮಾಡಬೇಕಿದೆ. ಅದೂ ಕೂಡಾ wifi ಇಲ್ಲದೆ, ತಮ್ಮ ಸ್ವಂತ ಮೊಬೈಲ್ ಡೇಟಾ ಬಳಸಿ ಮಾಡಬೇಕಿದೆ. 

ರಾಜ್ಯದಲ್ಲಿ 46, 757 ಸರ್ಕಾರಿ ಶಾಲೆಗಳಿದ್ದು, 42.92 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆರಂಭದಿಂದಲೇ ವಿದ್ಯಾರ್ಥಿಗಳ ಮೌಲ್ಯಾಂಕನ ಮಾಡಿದಲ್ಲಿ ಮುಂಬರುವ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬಹುದೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಯೋಜನೆ ರೂಪಿಸಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆ, ಗ್ರಹಿಕೆ ಮಟ್ಟವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಎಫ್‌ ಎ ಮತ್ತು ಎಸ್‌ ಎ ಜಾರಿಗೆ ತರಲಾಗಿದೆ. ಒಂದು ವರ್ಷದಲ್ಲಿ ಎಫ್‌ಎ - 4 , ಎಸ್‌ಎ - 2 ನಡೆಸಲಾಗುತ್ತಿತ್ತು. ಈಗ ಪಾಠ ಆಧಾರಿತ ಮೌಲ್ಯಾಂಕನ ಹೆಸರಲ್ಲಿ ಹಳೆ ಪದ್ಧತಿಯನ್ನು ಶಿಕ್ಷಣ ಇಲಾಖೆ ಮತ್ತೆ ಅನುಷ್ಠಾನಗೊಳಿಸುತ್ತಿದೆ ಎನ್ನುವ ಅಭಿಪ್ರಾಯ ಕೂಡ ಕೇಳಿ ಬಂದಿದೆ.

ಪ್ರತಿ ಪರೀಕ್ಷೆ 30 ಅಂಕಗಳಿಗೆ ಮೀಸಲಾಗಿದ್ದು, 25 ಪ್ರಶ್ನೆಗಳು ಇರುತ್ತವೆ. ಇವುಗಳಲ್ಲಿ ಸುಲಭ ಶೇಕಡಾ 75, ಸಾಮಾನ್ಯ ಶೇಕಡ 25, ಕಠಿಣ ಶೇಕಡ 10 ಎನ್ನುವ ಮಾದರಿಯಲ್ಲಿ ಪ್ರಶ್ನೆಗಳನ್ನು ವಿಭಜಿಸಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುವುದು. ಬಹುತೇಕ ಪ್ರಶ್ನೆಗಳು ಬಹು ಆಯ್ಕೆ ಮಾದರಿಗಳಿಂದ ಕೂಡಿರುತ್ತವೆ. ಎಸ್‌ಎಸ್‌ಎಲ್ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಕೂಡ ಬದಲಾಗಲಿದೆ. ಬಹು ಆಯ್ಕೆ ಮಾದರಿ, ಒಂದು ವಾಕ್ಯದಲ್ಲಿ ಉತ್ತರಿಸಿ, ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ, ಸಂದರ್ಭ ಮತ್ತು ಸ್ವಾರಸ್ಯ, 8 ಅಥವಾ 10 ವಾಕ್ಯಗಳಲ್ಲಿ ಉತ್ತರಿಸಿ, ಗದ್ಯಭಾಗ ಓದಿ ಉತ್ತರ ಬರೆಯುವಂತಹ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ಮೇಲಿನ ವಿಷಯಕ್ಕೆ ಪೂರಕವಾಗಿ ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಿ ಎಂದು ಹೇಳುತ್ತಾರೆ. ಅದರಂತೆ ಕೆಲವು ಶಾಲೆಯಲ್ಲಿ ಉತ್ತಮ ರೀತಿಯಲ್ಲಿ ದಾಖಲಾತಿ ಇದೆ. 350 ಮಕ್ಕಳು ಇರುವ  ಶಾಲೆಯಲ್ಲಿ ಯಾವಾಗ ಈ ಪರೀಕ್ಷೆಗಳನ್ನು ಮಾಡುವುದು ? ಯಾವಾಗ ಇವುಗಳನ್ನು ಆನ್ ಲೈನ್ ಗಳಲ್ಲಿ ನಮೂದಿಸುವುದು ? ಯಾವಾಗ ಇವುಗಳ ಬಗ್ಗೆ ರೆಕಾರ್ಡ್ಸ್ ಇಡುವುದು, ಹೀಗೆ ನಾವು ಇತರೆ ಕೆಲಸಗಳನ್ನು ಮಾಡುತ್ತಾ ಕುಳಿತರೆ ಖಂಡಿತವಾಗಿ ಮಕ್ಕಳು ಖಾಸಗಿ ಶಾಲೆಯತ್ತ ಒಲಿಯುತ್ತಾರೆ. ಆಮೇಲೆ ನಾವೆಷ್ಟೇ ಬಾಯಿ ಬಡಿದುಕೊಂಡರು ಬರುವುದಿಲ್ಲ. ಈ ರೆಕಾರ್ಡ್ ಮೈನ್ಟೈನ್ ಮಾಡ್ಲಿಕ್ಕೆ ಮತ್ತು ಆನ್ಲೈನ್ ಎಂಟ್ರಿ ಮಾಡಲಿಕ್ಕೆ ಎಲ್ಲಾ ಶಿಕ್ಷಕರು ಸೇರಿಕೊಂಡು ಒಬ್ಬರನ್ನು ಇಡಬೇಕಾಗಿದೆ. ಮೊನ್ನೆ ಒಂದು ವಿಡಿಯೋ ನೋಡಿದ ತಕ್ಷಣ ಅನೇಕ ಶಿಕ್ಷಕರಿಗೆ ಬೇರೆ ಯಾವುದೇ ಡಿಪಾರ್ಟ್ಮೆಂಟ್ ಕೆಲಸಕ್ಕೆ ಹೋಗೋದು ಉತ್ತಮ ಎನಿಸಿತು. ಶಿಕ್ಷಕರ ನೈತಿಕ ಬಲವನ್ನು ಕುಗ್ಗಿಸುವ ಕಾರ್ಯವಾಗುತ್ತಿದೆ. ಹಾಸನದಲ್ಲಿ ಹೃದಯಾಘಾತ ಹೆಚ್ಚಿದೆ ಎನ್ನುವ ನ್ಯೂಸ್ ಬರುವಂತೆ ಮುಂದೊಂದು ದಿನ ಪ್ರೌಢಶಾಲಾ ಶಿಕ್ಷಕರಲ್ಲಿ ಒತ್ತಡದಿಂದ ಹೆಚ್ಚಿದ ಹೃದಯಘಾತ. ಇದರ ಬಗ್ಗೆ ತನಿಖೆ ನಡೆಸಿ ಎಂದು ಖಂಡಿತವಾಗಿಯೂ ಬರಬಹುದು. 

ಎಲ್ಲಾ ದಿನಾಚರಣೆಗಳನ್ನು, ಸಿಕ್ಕಸಿಕ್ಕ ಮಾಹಿತಿಗಳನ್ನು ನೆಟ್ವರ್ಕ್ ಇಲ್ಲದ ಗರಗರ ತಿರುಗುವ ಆನ್ಲೈನ್ ಎಂಟ್ರಿಗಳನ್ನು, ಮೊಟ್ಟೆ, ಬಾಳೆ ಹಣ್ಣಿನ ಲೆಕ್ಕಾಚಾರವನ್ನು, ಅದರ ಮೇಲೆ ಇನ್ನಷ್ಟು ಹೊಸತನದ ಹೊರೆ. ಖಂಡಿತವಾಗಿ ಇದು ಶಿಕ್ಷಕರಿಗೆ ಬರೆ. ದಯವಿಟ್ಟು ಇದರಿಂದ ಮುಕ್ತಿ ಕೊಡಿಸುವಂತೆ ಒಮ್ಮತದಿಂದ ಬೇಡೋಣ. ಶಿಕ್ಷಕರಿಗೂ ತಮ್ಮ ಮಕ್ಕಳೊಂದಿಗೆ ಇನ್ನಷ್ಟು ಕಾಲ ಜೀವಂತವಾಗಿ ಇರಬೇಕೆನ್ನುವ ಹಂಬಲ ಇದೆ. ಯಾಕೋ ಇದು ಕೆಲವು ದಿವಸದಿಂದ ಬಹಳಷ್ಟು ಗೊಂದಲವಾಗುತ್ತಿದೆ.  ಯಾವುದೋ ಜನ್ಮದಲ್ಲಿ ಪುಣ್ಯ ಮಾಡಿದಲ್ಲಿ ಶಿಕ್ಷಕರಾಗುತ್ತೀರಿ ಎನ್ನುತ್ತಿದ್ದರು. ಆದರೆ ಈಗ ಹೇಗಿದೆ ಎಂದರೆ ಯಾವುದೋ ಜನ್ಮದಲ್ಲಿ ಪಾಪ ಮಾಡಿದ್ದಕ್ಕೆ ಶಿಕ್ಷಕರಾಗಿದ್ದೇವೆ ಎನಿಸುತ್ತಿದೆ.

ಶಿಕ್ಷಕರು ಮಾಡಿದ ತಪ್ಪು ಒಂದೇ, ಈ ವೃತ್ತಿ ಆಯ್ಕೆ ಮಾಡಿಕೊಳ್ಳುವುದರ ಬದಲು ಬೇರೆ ಯಾವುದಾದರೂ ಮಾಡಬಹುದಿತ್ತೇನೋ. ಯಾವ ಶಿಕ್ಷಕರೂ ಡಾಕ್ಟರ್ ಇಂಜಿನಿಯರ್ ಗಳ ಹಾಗೆ ತಮ್ಮ ಮಕ್ಕಳು ತಮ್ಮದೇ ಕೆಲಸ ಹಿಡಿಯಲಿ ಎಂದು ಕನಸಲ್ಲೂ ಯೋಚನೆ ಮಾಡುವುದಿಲ್ಲ. ಈ ಕೆಲಸ ಬಿಟ್ಟು ಬೇರೆ ಯಾವುದಾದರೂ ಆಗಬಹುದು ಎನ್ನುತ್ತಿದ್ದಾರೆ.

ಸಮಾಜ ವಿಜ್ಞಾನದಲ್ಲಿ  ಪ್ರತಿ ತರಗತಿಯಲ್ಲಿ ಒಟ್ಟು 32 ಪಾಠಗಳಿವೆ. ಪರಿಕಲ್ಪನೆಯನ್ನು ಬೋಧಿಸುವಾಗ ಅದೆಷ್ಟು ಪ್ರಚಲಿತ ಘಟನೆಗಳನ್ನು, ಅದಕ್ಕೆ ಪೂರಕವಾದ ಇನ್ನಿಷ್ಟು ವಿಚಾರಗಳನ್ನು ವಿವರಿಸುತ್ತಾ ಹೋಗಬೇಕಾಗುತ್ತದೆ. ಅಂತ ಸಂದರ್ಭದಲ್ಲಿ ಇತ್ತೀಚೆಗೆ ಬಂದಂತಹ ಮೌಲ್ಯಮಾಪನ ಮತ್ತು ದಾಖಲೆ ನಿರ್ವಹಣೆ ಬಹಳ ಪ್ರಯಾಸಕರವಾಗಿರುತ್ತದೆ. ಸಮಾಜಕ್ಕೆ ಕೇವಲ ಹತ್ತೇ ಪಾಠಗಳನ್ನು ನೀಡಿದಾಗ ಎಲ್ಲಾ ರೀತಿಯಾದ ದಾಖಲೆ ನಿರ್ವಹಿಸಿ ಈ ಹೊಸ ರೀತಿಯ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಬಹುದು.

ಅಂತೂ ದೊಡ್ಡದಾದ ದೈತ್ಯಾಕಾರದ ರಾಕ್ಷಸ ಇನ್ನೇನು ಬರಲಿದ್ದಾನೆ. ಶಿಕ್ಷಕರನ್ನು ಇನ್ನಷ್ಟು ಕುಗ್ಗಿಸಲು ಎಲ್ ಬಿ ಎ /ಎಲ್ ಬಿ ಎಂ ಖಂಡಿತ ಶಿಕ್ಷಕರನ್ನು ಒಣ ಕಬ್ಬಿನ ಜಲ್ಲೆಯಂತೆ ಮಾಡಿಸುವುದು ಸತ್ಯ. SATS server ಸಮಸ್ಯೆ  & OTP ವ್ಯವಸ್ಥೆಗಳನ್ನು ಸರಿಪಡಿಸದೆ ಮೇಲಿಂದ ಮೇಲೆ ದಿನಕ್ಕೊಂದು ಆದೇಶ ಹಾಕಿ ಶಿಕ್ಷಕರಿಗೆ ಕಷ್ಟ ಕೊಡಬಾರದು. Question Bank ವರ್ಷದ ಆರಂಭದಲ್ಲೇ ಕೊಡಬೇಕಿತ್ತು & ಅದರಲ್ಲಿರುವ ಪ್ರಶ್ನೆಗಳ ಸಂಖ್ಯೆ & ಗುಣಮಟ್ಟ ನಿಗದಿಯಾಗಿರಬೇಕಿತ್ತು.. August ತಿಂಗಳ ವರೆಗೆ ಬದಲಾವಣೆ ಆಗುತ್ತಿರುತ್ತದೆ ಎಂಬ ವ್ಯವಸ್ಥೆ ನಮಗೂ ಮಕ್ಕಳಿಗೂ ಗೊಂದಲವೇ! 

4 - 5 ಕಿ.ಮೀ. ದೂರದ ಕಾಡಿನ ಒಳಗಿನ ಪ್ರದೇಶಗಳಿಂದ ಬರುವ ಮಕ್ಕಳಿದ್ದಾರೆ.. ಸಂಜೆ ಒಂದೂವರೆ ಗಂಟೆ special class ಅಂತ ಹೇಳಿ ನಿಲ್ಲಿಸಿದರೆ ಅವರು ಮನೆ ತಲುಪುವ ಹೊತ್ತಿಗೆ ಹೇಗಿರಬಹುದು ? ಶಿಕ್ಷಕರನ್ನು ಶಾಲಾ ಅವಧಿಯಲ್ಲಿ ದುಡಿಸಿಕೊಂಡರೆ ಸಾಕು. ಶಿಕ್ಷಕರ ಆರೋಗ್ಯ - ( ದೈಹಿಕ ಮತ್ತು ಮಾನಸಿಕ) ಸದೃಢವಾಗಿ ಇರಬೇಕಾದರೆ ಅವರಿಗೆ ಅಗತ್ಯ ವಿಶ್ರಾಂತಿ ಹಾಗೂ ವಿರಾಮ ಬೇಕು. ನಾವು ಸಂಘಟಿತ ನೌಕರರಾಗಿ ಅಷ್ಟೂ ಅವಕಾಶ ಇಲ್ಲವೇ ? ಮಹಿಳಾ ಶಿಕ್ಷಕರಿಗೆ ಮನೆಯಲ್ಲಿ ಕೆಲಸಗಳು ಕಾಯುತ್ತಿರುತ್ತವೆ. (ಮಕ್ಕಳು ಉತ್ತಮ ಫಲಿತಾಂಶ ಪಡೆಯಲಿ ಅಂತ ಪ್ರೀತಿಯಿಂದ extra class ಮಾಡುವುದಕ್ಕೂ ಈ  ಒತ್ತಡದ ದುಡಿಮೆಗೂ ವ್ಯತ್ಯಾಸ ಇದೆ.)

ಶಾಲಾ ಮಾರ್ಗದರ್ಶಿಯಲ್ಲಿ CCE ಚಟುವಟಿಕೆ 1 - 2 ಇವೆ. ಈಗ ಅವುಗಳನ್ನೆಲ್ಲ ಏನು ಮಾಡಬೇಕು ? ಒಂದು ಮಾರ್ಗದರ್ಶಿ ಪ್ರಕಟ ಆಗುವಾಗ ಆ ಇಡೀ ವರ್ಷದ ಮುನ್ನೋಟ ಸ್ಪಷ್ಟವಾಗಿ ಅದರಲ್ಲಿ ಇರಬೇಕು ಮತ್ತು ಇದ್ದಂತೆ ನಡೆಯಬೇಕು. ಇಲ್ಲದಿದ್ದರೆ  ಅದನ್ನು ಪ್ರಕಟಿಸುವ ಉದ್ದೇಶ ಸೋತಂತೆ. ಅದರ ಹೊರತಾಗಿ ಅನಾವಶ್ಯಕ ದಿನಾಚರಣೆಗಳು, ಕಾರ್ಯಕ್ರಮಗಳು ಮತ್ತು ಇಡೀ ಪರೀಕ್ಷಾ ಪದ್ಧತಿಯ ದಿಢೀರ್ ಬದಲಾವಣೆಗಳು ಏನನ್ನೂ ಸಾಧಿಸಲು ಸಾಧ್ಯವಿಲ್ಲದ ಗೊಂದಲದ ಪರಿಸ್ಥಿತಿಗೆ ನಮ್ಮನ್ನು ದೂಡುತ್ತವೆ.

AC ಕೋಣೆಗಳಲ್ಲಿ ಕುಳಿತು order ಗೆ seal ಗುದ್ದಿ sign ಹಾಕುವವರಿಗೆ ಹಳ್ಳಿಯ ಮಕ್ಕಳ ಪರಿಸ್ಥಿತಿಯ ಅರಿವಿಲ್ಲ ಎನ್ನಿಸುತ್ತದೆ. ಇನ್ನು ಪಠ್ಯ ಪುಸ್ತಕಗಳ ಜೊತೆ ವರ್ಕ್ ಬುಕ್ ಗಳನ್ನು ಸಹ ಕೊಡಲಾಗಿದೆ. ಓದಿದರೂ, ಓದದೇ ಹೋದರೂ ಕಡ್ಡಾಯ ಪ್ರಾಥಮಿಕ ಶಿಕ್ಷಣ, ಮಕ್ಕಳ ಹಕ್ಕು ಹೀಗೆ 9 ನೆಯ ತರಗತಿಯವರೆಗೆ ಅಕ್ಷರ ಬಾರದ ಮಗುವನ್ನೂ ಕೂಡ ಪಾಸ್ ಮಾಡಿ SSLC ಗೆ ತಂದು ಕೂರಿಸಿ ಅಲ್ಲಿ 100% ರಿಸಲ್ಟ್ ತನ್ನಿ ಎಂದು ಶಿಕ್ಷಕರಿಗೆ ಸರಕಾರ ಮತ್ತು ಹಿರಿಯ ಅಧಿಕಾರಿಗಳು , ಇಲಾಖೆ, ಪೋಷಕರು ಎಲ್ಲರೂ ಸೇರಿ ಒತ್ತಡ ಹೇರುವುದು ಯಾವ ನ್ಯಾಯ ? ಇದು ಯಾವ ವೈಜ್ಞಾನಿಕ ನಿಯಮ ? ಒಂದು ಅಕ್ಷರ ಬಾರದೆ ಇದ್ದರೂ ಶಾಲೆ ಬಿಟ್ಟ ಮಕ್ಕಳು ಇರಬಾರದು ಎಂದು ಎಲ್ಲರನ್ನೂ 9ನೇ ತರಗತಿಯವರೆಗೆ ಶಾಲೆಗೆ ಬಾರದೆ ಇದ್ದರೂ ಪಾಸ್ ಮಾಡಿದ ಮಗುವಿಗೆ ಅಕ್ಷರದ ಅರಿವಿಲ್ಲ ಒಂದೆಡೆ, ಪಾಸ್ ಫೇಲ್ ಅಂದರೆ ಏನೆಂಬುದೇ ತಿಳಿಯದ ಪರಿಸ್ಥಿತಿ ಇನ್ನೊಂದೆಡೆ. ಅದು sslc ಯಲ್ಲಿ ಇನ್ಕಂಪ್ಲಿಟ್ ಎಂದು ಗೊತ್ತಾದ ಕೂಡಲೇ ಸೂಸೈಡ್ attempt ಗೆ ಮುಂದಾಗುತ್ತದೆ. ಇದು ತಪ್ಪಲ್ಲವೇ ?

ಇದು ಸಮಸ್ಯೆಗಳ ಕೆಲವು ಅಂಶಗಳು ಮಾತ್ರ. ಇದನ್ನು ಮೀರಿ ಇಲ್ಲಿ ದಾಖಲಿಸಲಾಗದ ಇನ್ನೂ ಕೆಲವರ ಅನುಭವಕ್ಕೆ ಬಂದಿರುವ ಕೆಲವು ಸಮಸ್ಯೆಗಳು ಇದೆ. ಅವುಗಳನ್ನು ಸಹ ಅಧ್ಯಯನ ತಂಡ ಪರಿಶೀಲಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ