ಸಮಸ್ಯೆ ಒಂದು - ಪರಿಹಾರದ ರೀತಿ ಹಲವು!

ಸಮಸ್ಯೆ ಒಂದು - ಪರಿಹಾರದ ರೀತಿ ಹಲವು!

 ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ ಮುಂದಿನ ರಸ್ತೆಯಲ್ಲಿ ದೊಡ್ಡ ಗುಂಡಿಯಿದ್ದು ವಾಹನಗಳು ಓಡಾಡುವುದು ದುಸ್ತರವಾಗಿತ್ತು. ಒಮ್ಮೆ ಅವನ ಸ್ನೇಹಿತ ಅವನನ್ನು ಕಾಣಲು ಬರುವಾಗ ಗುಂಡಿಯ ಕಾರಣದಿಂದ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾಗಿನಿಂದ ರಸ್ತೆ ಸರಿಪಡಿಸಲು ನಗರಸಭೆಯ ಅಧಿಕಾರಿಗಳನ್ನು ಹಲವಾರು ಸಲ ಭೇಟಿ ಮಾಡಿ ಅರ್ಜಿ ಕೊಟ್ಟು ವಿಚಾರಿಸಿದರೂ ಏನೂ ಪ್ರಯೋಜನವಾಗಿರಲಿಲ್ಲ. ಆ ಭಾಗದ ಕೌನ್ಸಿಲರರನ್ನು ಕಂಡು ಬರುವುದು ಒಳ್ಳೆಯದೆಂದುಕೊಂಡು ಅವರ ಮನೆಗೆ ಹೋದ. ಮನೆಯ ಮುಂದೆ ಜನಗಳ ಗುಂಪೇ ಇತ್ತು, ಕೆಲಸ ಮಾಡಿಸಿಕೊಳ್ಳಲು ಬಂದವರು, ಹಿಂಬಾಲಕರು, ಮುಂಬಾಲಕರು, ಇತ್ಯಾದಿ. ರಾಜಣ್ಣ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರೂ ಅವರು ಅವನನ್ನು ಗಮನಿಸಿಯೂ ಗಮನಿಸದಂತೆ ಇತರರೊಂದಿಗೆ ಮಾತುಕತೆಯಲ್ಲೇ ತೊಡಗಿದ್ದರು. ಮಧ್ಯೆ ಮಧ್ಯೆ ಆಪ್ತ/ಗುಪ್ತ ಸಮಾಲೋಚನೆಗಾಗಿ ಪಕ್ಕದ ಕೊಠಡಿಗೆ ಹೋಗಿಬರುತ್ತಿದ್ದರು. ರಾಜಣ್ಣ ಇನ್ನೂ ಅಲ್ಲೇ ಇದ್ದುದನ್ನು ಕಂಡ ಆ ಜನಪ್ರತಿನಿಧಿ ಅಸಹನೆಯಿಂದ  "ಏನ್ರೀ, ನಿಮ್ಮದು?" ಎಂದಾಗ 'ರಸ್ತೆ ದುರಸ್ತಿ ಮಾಡಿಸಿಕೊಡಬೇಕೆಂದೂ, ನಗರಸಭೆಯ ಅಧಿಕಾರಿಗಳು ಎಷ್ಟು ಹೇಳಿದರೂ ಕೇಳುತ್ತಿಲ್ಲ'ವೆಂದು ಹೇಳಿಕೊಂಡ. ಅವರು "ನಮಗೆ ಇದೇ ಕೆಲಸವೇನ್ರೀ? ಆ ರಸ್ತೆ ಮಾಡಿಸಿ, ಈ ಚರಂಡಿ ಕ್ಲೀನ್ ಮಾಡಿಸಿ, ಬರೀ ಇದೇ ಆಯಿತು" ಎಂದು ಹೇಳಿ, ಅಲ್ಲೇ ಇದ್ದ ನಗರಸಭೆ ಇಂಜನಿಯರರಿಗೆ "ಅದೇನು ನೋಡ್ರೀ" ಎಂದು ಹೇಳಿ ಆಗ ಬಂದ ವ್ಯಕ್ತಿಯೊಬ್ಬರನ್ನು ಆತ್ಮೀಯವಾಗಿ ಆಹ್ವಾನಿಸಿ ಪಕ್ಕದ ಕೊಠಡಿಗೆ ಕರೆದುಕೊಂಡು ಹೋದರು. ಇಂಜನಿಯರ್ ಉದಾಸೀನದಿಂದ "ಆಯ್ತು ನೋಡೋಣ, ಹೋಗಿ" ಎಂದು ಹೇಳಿದ. ರಾಜಣ್ಣ ವಾಪಸು ಬಂದ.

     ನಾಗಣ್ಣ ನಿವೃತ್ತನಾಗಿದ್ದ ಒಬ್ಬ ಹಿರಿಯ ಅಧಿಕಾರಿ. ರಸ್ತೆ ರಿಪೇರಿ ಮಾಡಿಸಲು ದೂರವಾಣಿ ಮೂಲಕ ನಗರಸಭೆ ಕಮಿಷನರರೊಂದಿಗೆ ಮಾತನಾಡಿದ್ದರು. ಹಾಗೆಯೇ ಕೌನ್ಸಿಲರರಿಗೆ ಒಂದು ಮಾತು ಹೇಳೋಣವೆಂದು ಕಾರಿನಲ್ಲಿ ಬಂದಿಳಿದ ಅವರನ್ನು ಕಂಡು ಮನೆಯ ಮುಂದಿದ್ದವರು ಅವರು ಒಳಗೆ ಬರಲು ಜಾಗ ಮಾಡಿಕೊಟ್ಟು ಸರಿದು ನಿಂತರು. ಒಳಗೆ ಹೋದ ನಾಗಣ್ಣ ಜನಪ್ರತಿನಿಧಿಗೆ ವಿಷಯ ತಿಳಿಸಿದರು. 'ಆಯ್ತು ಬಿಡಿ, ಮಾಡಿಸೋಣ' ಎಂದವರು, ಇಂಜನಿಯರರಿಗೆ "ಇಂಥ ಸಣ್ಣ ಕೆಲಸ ಮಾಡಕ್ಕೆ ಆಗಲ್ಲವೇನ್ರೀ, ಬೇಗ ಮಾಡಿಸಿರಿ" ಎಂದರು. ನಮಸ್ಕಾರ ಮಾಡಿ ನಾಗಣ್ಣ ಹೊರಗೆ ಹೋದಾಗ 'ನನಗೆ ಮಾಡಕ್ಕೆ ಬೇರೆ ಕೆಲಸ ಇಲ್ಲ ಅಂದುಕೊಂಡಿದಾನೆ' ಎಂದು ಗೊಣಗುಟ್ಟಿದರು. ಇಂಜನಿಯರರಿಗೆ ಆ ಕೆಲಸಕ್ಕೆ ಅರ್ಜೆಂಟ್ ಇಲ್ಲವೆಂದು ಅರ್ಥವಾಯಿತು.

     ಗುಂಡಣ್ಣ ವಿದ್ಯಾವಂತನೇನಲ್ಲ, ಪಿಯುಸಿ ಫೇಲಾದ ಮೇಲೆ ಅವನ ವಿದ್ಯಾಭ್ಯಾಸ ಮೊಟಕಾಗಿತ್ತು. ಅಪ್ಪ ಕೊಟ್ಟ ದುಡ್ಡಿನಲ್ಲಿ ಕೆಲವು ಟ್ಯಾಕ್ಸಿಗಳನ್ನು ಇಟ್ಟುಕೊಂಡು ಡ್ರೈವರರನ್ನು ನೇಮಿಸಿಕೊಂಡು ಟ್ರಾವೆಲ್ ಏಜೆನ್ಸಿ ನಡೆಸಿ ಪ್ರವರ್ಧಮಾನಕ್ಕೆ ಬರುತ್ತಿದ್ದ. ಕಟ್ಟುಮಸ್ತಾಗಿದ್ದ ಅವನ ಜೊತೆ ಗೆಳೆಯರ ಗುಂಪೇ ಇರುತ್ತಿತ್ತು. ಏನಾದರೂ ಕೆಲಸ ಆಗಬೇಕಿದ್ದರೆ ಅವನಿಗೆ ಹೇಳಿದರೆ ಆಗುತ್ತಿತ್ತು. ಅದನ್ನು ಮಾಡಬೇಕೆಂದು ಅವನಿಗೆ ಅನ್ನಿಸಿದರೆ ಅವನು ಅದನ್ನು ಆಗುವವರೆಗೂ ಬಿಡುವ ಜಾಯಮಾನ ಅವನದಾಗಿರಲಿಲ್ಲ. ಅಂದು ಅವನು ತನ್ನ ಗೆಳೆಯರ ಗುಂಪಿನೊಂದಿಗೆ ತನ್ನ ಗಡಸು ದ್ವನಿಯಲ್ಲಿ 'ಇದಾರೇನ್ರೀ' ಎಂದುಕೊಂಡು ಕೌನ್ಸಿಲರರ ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಎದ್ದುಬಂದ ಆ ಜನಪ್ರತಿನಿಧಿ "ಏನ್ ಗುಂಡಣ್ಣಾ, ಏನ್ಸಮಾಚಾರ?" ಎಂದು ಕೇಳಿದ. 'ಬರೀ ಕಮಿಷನ್, ಕಂಟ್ರಾಕ್ಟು ಅಂತ ಇರ್ತೀರೋ ಅಥವಾ ಜನಗಳ ಕೆಲಸಾನೂ ಮಾಡ್ತೀರೋ?' ಎಂದ ಅವನನ್ನು ಸಮಾಧಾನಿಸಿ 'ಈಗ ಏನಾಗಬೇಕು ಹೇಳು ಗುಂಡಣ್ಣ' ಎಂದು ವಿಚಾರಿಸಿದ. ರಸ್ತೆ ರಿಪೇರಿ ವಿಷಯವೆಂದು ತಿಳಿದಾಗ ಅಲ್ಲಿದ್ದ ಇಂಜನಿಯರರಿಗೆ "ನೀವೇನು ಕತ್ತೆ ಕಾಯ್ತಾ ಇರ‍್ತೀರಾ? ಆ ರಸ್ತೆ ಗುಂಡಿ ಮುಚ್ಚಿ ಸರಿ ಮಾಡಿ ಅಂತ ನಿಮಗೆ ಎಷ್ಟು ಸಲ ಹೇಳಬೇಕ್ರೀ? ಅದೆಲ್ಲಾ ಗೊತ್ತಿಲ್ಲ, ನಾಳೆ ಒಳಗೆ ಆ ಕೆಲಸ ಮಾಡಿ ನನಗೆ ಮುಖ ತೋರಿಸಬೇಕು" ಎಂದು ಗದರಿಸಿದರು. ಇಂಜನಿಯರ್, "ಇವತ್ತೇ ಮಾಡಿಸುತ್ತಿದ್ದೆ ಸಾರ್, ಜನ ಸಿಗಲಿಲ್ಲ, ನಾಳೆ ಖಂಡಿತಾ ಆಗುತ್ತೆ ಸಾರ್" ಎಂದ. ಇಂಜನಿಯರ್ ತರಿಸಿದ ಕಾಫಿ ಕುಡಿದು ಗುಂಡಣ್ಣ ಮತ್ತು ಅವನ ಗೆಳೆಯರು ಅಲ್ಲಿಂದ ಹೊರಟರು. ಆ ನಾಳೆ ಹಲವು ದಿನಗಳಾದರೂ ಬರಲೇ ಇಲ್ಲ.

     ಹೀಗಿರುವಾಗ ಒಂದು ದಿನ ಬೆಳ್ಳಂಬೆಳಗ್ಗೆ ರಸ್ತೆ ದುರಸ್ತಿ ತರಾತುರಿಯಿಂದ ನಡೆದಿತ್ತು. ಕೆಲಸಗಾರರ, ಕೆಲಸದ ಉಸ್ತುವಾರಿ ನೋಡಿಕೊಳ್ಳುವವರ ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು. ನಾಗಣ್ಣ, ರಾಜಣ್ಣ, ಗುಂಡಣ್ಣರು ತಮ್ಮ ಪ್ರಯತ್ನದಿಂದ ಕೆಲಸವಾಗುತ್ತಿದೆಯೆಂದುಕೊಂಡಿದ್ದರು. ಆದರೆ, ನಿಜವಾದ ಕಾರಣವೆಂದರೆ ಜಿಲ್ಲಾ ಮಂತ್ರಿಗಳು ಅಂದು ಆ ರಸ್ತೆಯ ಮೂಲಕ ಹಾದು ಹೋಗುತ್ತಿದ್ದರು!

-ಕ.ವೆಂ.ನಾಗರಾಜ್.