ಸಮಸ್ಯೆ - ಒಂದು ಸಣ್ಣ ಕತೆ

ಸಮಸ್ಯೆ - ಒಂದು ಸಣ್ಣ ಕತೆ

ವಿವಾಹ ಸಮಾರಂಭ ನಡೆಯುತ್ತಿತ್ತು.  ಪುರೋಹಿತರು ವೇದಿಕೆಯ ಮೇಲೆ ನಿಂತು ಹೇಳಿದರು “ಈ ಮದುವೆಗೆ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ತಕ್ಷಣ ಮುಂದೆ ಬನ್ನಿ.  ಆಮೇಲೆ ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಜಗಳ ಬೇಡ.. ಈಗಿನ ಆಧುನಿಕ ಕಾಲದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಡೈವೋರ್ಸ್ ಆಗುತ್ತವೆ. ಆಗ ಇಬ್ಬರ  ಜೀವನವೂ  ಹಾಳು. ಯಾರಾದರೂ ಏನಾದರು ಹೇಳುವುದಿದ್ದರೆ ಮುಂದೆ ಬಂದು, ಈ ಮದುವೆಗೆ ಏನಾದರೂ ತಕಾರಾರು ಇದ್ದರೆ ಹೇಳಿ." ಎಂದು ಹೇಳಿ ಸುಮ್ಮನಾದರು.

ಆಗ ಕಿಕ್ಕಿರಿದು ತುಂಬಿದ್ದ ಮದುವೆ ಮಂಟಪದಲ್ಲಿ ಹಿಂದೆ ನಿಂತಿದ್ದ ಸುಂದರ ಯುವತಿಯೊರ್ವಳು ತನ್ನ ಮಡಿಲಲ್ಲಿ ಒಂದು ಮಗುವಿನೊಂದಿಗೆ ಮುಂದೆ ಬಂದಳು.!! 

ಆಗ ಎಲ್ಲರೂ ಒಬ್ಬರನ್ನೊಬ್ಬರು ಮುಖ ಮುಖ ನೋಡಿಕೊಂಡರು, ಗುಸುಗುಸು ಪಿಸುಪಿಸು ಶುರುವಾಯ್ತು. ಎಲ್ಲರ ಸಂಶಯ ನೋಟ ವರನ ಮೇಲೆ ಬಿತ್ತು. ಗುಂಪಿನಲ್ಲಿ ಕೆಲವರು ನಗಲು ಪ್ರಾರಂಭಿಸಿದರು. ವೇದಿಕೆಯ ಮೇಲೆ ನಿಂತಿದ್ದ ವಧು ವರನಿಗೆ ಸಿಟ್ಟಿನಿಂದ ಕಪಾಳಮೋಕ್ಷ ಮಾಡಿದಳು. ವಧುವಿನ ತಂದೆ ಪೋಲೀಸ್ ಗೆ ಫೋನ ಮಾಡಲು ಮೊಬೈಲ್ ತರಲು ಓಡಿಹೋದರು. ವಧುವಿನ ಸಹೋದರರು ವರನನ್ನು ಹಿಡಿದು ಹಿಗ್ಗಾಮುಗ್ಗ ತದುಕಿದರು. ಇವೆಲ್ಲವನ್ನೂ ನೋಡಿ ವಧುವಿನ ತಾಯಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು..!! ಏಟು ತಿಂದ ವರ ಏನಾಗುತ್ತದೆ ಎಂದು ತಿಳಿಯದೇ ಬೆಪ್ಪನಂತೆ ನಿಂತುಕೊಂಡಿದ್ದ. ಮಗನಿಂದ ತಮ್ಮ ಮಾನ ಹೋಯಿತು ಎಂದು ವರನ ಹೆತ್ತವರು ಕಣ್ಣೀರು ಹಾಕುತ್ತಾ ನಿಂತಿದ್ದರು.  

ಇಡೀ ಮದುವೆ ಮಂಟಪದಲ್ಲಿ ಭೀಕರ ಮೌನ, ಭಯ, ಆತಂಕ ಮೂಡಿತು....

ಆ ಸಮಯದಲ್ಲಿ ಪುರೋಹಿತರು ಆ ಯುವತಿಯನ್ನು  ಕೇಳಿದರು "ಹೇಳು ತಾಯಿ, ಈ ಮದುವೆಯಿಂದ ನಿನಗೆ ಏನು ಸಮಸ್ಯೆ ಇದೆ..?"

ಆಗ ಆ ಯುವತಿ ಹೇಳಿದಳು  “ಪುರೋಹಿತರೇ.... ನಿಮ್ಮ ಮಾತು ಹಿಂದೆ ನಿಂತಿದ್ದ ನನಗೆ ಸರಿಯಾಗಿ ಕೇಳುತ್ತಿರಲಿಲ್ಲ .. ಅದಕ್ಕಾಗಿಯೇ ನಾನು ಮುಂದೆ ಬಂದಿದ್ದೇನೆ!!"”

“ಸುಲಗ್ನಾ ಸಾವಧಾನ!!”

(ವಾಟ್ಸಾಪ್ ಸಂಗ್ರಹ)