ಸಮಸ್ಯೆ ಸೃಷ್ಟಿಸುವ ಅಧಿಕಾರಷಾಹಿ

ಸಮಸ್ಯೆ ಸೃಷ್ಟಿಸುವ ಅಧಿಕಾರಷಾಹಿ

ನಮ್ಮ ದೇಶದ ಅಧಿಕಾರಷಾಹಿಯ ದಕ್ಷತೆಯ ಬಗ್ಗೆ ಬೆಳಕು ಚೆಲ್ಲುವ ಪ್ರಸಂಗವೊಂದು ಹೀಗಿದೆ:
ಪ್ರಸಿದ್ಧ ಅಂಕಣಕಾರ ಬಿಕ್ರಂ ವೊಹ್ರಾ ಅವರ ಸೋದರಿಗೆ ಆಕೆಯ ಪೆನ್ಷನ್ ಪಾವತಿ ಬಗ್ಗೆ ಒಂದು ಪತ್ರ ಬರುತ್ತದೆ. ಪೆನ್ಷನ್ ಪ್ರತಿ ತಿಂಗಳು ಪಾವತಿಯಾಗಲಿಕ್ಕಾಗಿ ಆರು ತಿಂಗಳಿಗೊಮ್ಮೆ ಆಕೆ ಒಂದು ಸರ್ಟಿಫಿಕೇಟನ್ನು ಸಲ್ಲಿಸಬೇಕಾಗಿತ್ತು. ಆ ಸರ್ಟಿಫಿಕೇಟಿಗೆ ಸ್ಥಳೀಯ ಬ್ಯಾಂಕ್ ಮೆನೇಜರ್ ಮತ್ತು ಒಬ್ಬ ಗೆಜೆಟೆಡ್ ಅಧಿಕಾರಿ ಸಹಿ ಮಾಡಬೇಕಾಗಿತ್ತು. ೨೦೧೩ರಲ್ಲಿ ಆರು ತಿಂಗಳ ಅವಧಿಯ ಒಂದು ಸರ್ಟಿಫಿಕೇಟನ್ನು ಸಲ್ಲಿಸಲು ಅವರಿಗೆ ಮರೆತು ಹೋಯಿತು. ಹನ್ನೆರಡು ತಿಂಗಳು ದಾಟಿದಾಗ, ಅದರ ನಂತರದ ಆರು ತಿಂಗಳ ಅವಧಿಯ ಸರ್ಟಿಫಿಕೇಟನ್ನು ಸಲ್ಲಿಸಿದರು.
ಅದಾದ ಬಳಿಕ ಅಧಿಕಾರಿಯಿಂದ ಆಕೆಗೆ ಬಂದ ಆ ಪತ್ರದ ಒಕ್ಕಣೆ ಹೀಗಿದೆ: ಇತ್ತೀಚೆಗಿನ “ಜೀವಂತವಾಗಿರುವುದನ್ನು ಖಾತರಿ ಪಡಿಸುವ ಸರ್ಟಿಫಿಕೇಟು” ಸಲ್ಲಿಸಿದ್ದಕ್ಕಾಗಿ ನಿಮಗೆ ವಂದನೆಗಳು. ಆದರೆ, ದಾಖಲೆಗಳು ಪೂರ್ಣ ಆಗಬೇಕಾದರೆ, ಮುಂಚಿನ ಆರು ತಿಂಗಳ ಅವಧಿಗೂ ಪ್ರತ್ಯೇಕ ಸರ್ಟಿಫಿಕೇಟನ್ನು ಸಲ್ಲಿಸತಕ್ಕದ್ದು.
ಆಕೆ ಈಗ ಜೀವಂತವಾಗಿದ್ದಾರೆ ಎಂದಾದರೆ, ಮುಂಚಿನ ಆರು ತಿಂಗಳ ಅವಧಿಯಲ್ಲಿಯೂ ಜೀವಂತವಾಗಿದ್ದರು ಎಂದು ಪರಿಗಣಿಸುವುದು ಸೂಕ್ತ ಎಂದು ವಿವರಿಸಿದರೂ ಅದನ್ನು ಕೇಳಲು ಆ ಅಧಿಕಾರಿ ತಯಾರಿಲ್ಲ.
ಆಕೆಯ ಪೆನ್ಷನ್ ಪಾವತಿಗೆ ಸಂಬಂಧಿಸಿದ ದಾಖಲೆಗಳು ಪೂರ್ಣವಾಗಿಲ್ಲ; “ಪವಿತ್ರ” ನಿಯಮಗಳನ್ನು ಆಕೆ ಅನುಸರಿಸಿಲ್ಲ. ಮುಂಚಿನ ಆರು ತಿಂಗಳಿಗೆ ಸಂಬಂಧಿಸಿದಂತೆ ಅಧಿಕೃತ ಸರ್ಟಿಫಿಕೇಟ್ ಕಳಿಸುವ ತನಕ ಆಕೆಯ ಬ್ಯಾಂಕ್ ಖಾತೆಗೆ ಪೆನ್ಷನ್ ಜಮೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು ಆ ಅಧಿಕಾರಿ!
ಇಂತಹದೇ ಇನ್ನೊಂದು ಪ್ರಸಂಗ ಹೀಗಿದೆ: ದೆಹಲಿಯ ವ್ಯಕ್ತಿಯೊಬ್ಬರ ತಂದೆ ಅವರ ಊರಿನಲ್ಲಿ ತೀರಿಕೊಂಡರು. ತಂದೆಯ ಅಂತ್ಯಕ್ರಿಯೆಗಾಗಿ ತನ್ನೂರಿಗೆ ತುರ್ತಾಗಿ ಹೋಗಲಿಕ್ಕಾಗಿ ಅವರು ರೈಲು ಟಿಕೇಟು ಖರೀದಿಸಿದರು. ಆದರೆ, ಅವರ ಹೆಸರು “ವೇಯ್ಟಿಂಗ್ ಲಿಸ್ಟ್”ನಲ್ಲಿ ಇತ್ತು. ಅವರು ತನ್ನ ಪರಿಸ್ಥಿತಿಯನ್ನು ರೈಲ್ವೇ ಅಧಿಕಾರಿಗೆ ವಿವರಿಸಿದರು. ಆ ಅಧಿಕಾರಿ ಅವರು ಟಿಕೇಟನ್ನು ಖಚಿತ ಪಡಿಸಿ ಸಹಕರಿಸಿದರು. ತನ್ನ ಕೃತಜ್ನತೆ ದಾಖಲಿಸಲಿಕ್ಕಾಗಿ ರಿಜಿಸ್ಟರ್ ಕೊಡಬೇಕೆಂದು ಸ್ಟೇಷನ್ ಮಾಸ್ಟರನ್ನು ವಿನಂತಿಸಿದರು. ಅಂತಹ ರಿಜಿಸ್ಟರ್ ಇಲ್ಲವೆಂಬುದು ಸ್ಟೇಷನ್ ಮಾಸ್ಟರರ ಉತ್ತರ.
ಇನ್ನೊಂದು ರಿಜಿಸ್ಟರ್ ಇದೆ; ಅದು ದೂರುಗಳ ರಿಜಿಸ್ಟರ್ ಎಂದು ತಿಳಿಸಿದರು ಸ್ಟೇಷನ ಮಾಸ್ಟರ್. ಆ ವ್ಯಕ್ತಿ ಆ ದಪ್ಪದ ರಿಜಿಸ್ಟರ್ ಪಡೆದು, ಅದರ ಒಂದು ಪುಟವನ್ನು ಪ್ರತ್ಯೇಕವಾಗಿ ಗುರುತಿಸಿ, “ನಾನು ದೂರು ನೀಡುತ್ತಿಲ್ಲ” ಎಂದು ಅದರಲ್ಲಿ ಸ್ಪಷ್ಟವಾಗಿ ಬರೆದರು. ಅದಲ್ಲದೆ, ತನಗೆ ಸಹಾಯ ಮಾಡಿದ ರೈಲ್ವೇ ಸಿಬ್ಬಂದಿಗೆ ತನ್ನ ಹೃದಯತುಂಬಿದ ಕೃತಜ್ನತೆಗಳನ್ನು ಆ ಪುಟದಲ್ಲಿ ಬರೆದರು.
ರೈಲ್ವೇ ಇಲಾಖೆಯ ಪ್ರಧಾನ ಕಚೇರಿಯಿಂದ ಮೂರು ವಾರಗಳ ನಂತರ ಅವರಿಗೆ ಬಂದ ಮುದ್ರಿತ ಪತ್ರದ ಒಕ್ಕಣೆ ಹೀಗಿತ್ತು: ಮಾನ್ಯರೇ, ನಿಮ್ಮ ಪ್ರಯಾಣದ ಸಂದರ್ಭದಲ್ಲಿ ನಿಮಗೆ ಅನಾನುಕೂಲ ಆಯಿತೆಂದು ತಿಳಿದು ಬೇಸರವಾಯಿತು. ನಿಮ್ಮ ದೂರು ಸಂಖ್ಯೆ ೩೨/ಎನ್ ಆರ್ ಡಬ್ಲ್ಯು ಇಎಫ್ ಎ ಎಫ್ ಅನ್ನು ಸ್ವೀಕರಿಸಿ, ಪ್ರಾದೇಶಿಕ ಮೆನೇಜರರ ಕಚೇರಿಯಿಂದ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಅಂತಿಮ ಕ್ರಮ ಕೈಗೊಂಡ ಬಗ್ಗೆ ನಿಮಗೆ ಮುಂದೆ ತಿಳಿಸಲಿದ್ದೇವೆ.
ಅಧಿಕಾರಷಾಹಿ ನಮ್ಮ ದೇಶದಲ್ಲಿ ಹೇಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಈ ಎರಡೂ ಪ್ರಕರಣಗಳು ಉದಾಹರಣೆಗಳು. ವಾಸ್ತವವನ್ನು ಒಪ್ಪದಿರುವ, ಪ್ರಕರಣ ಏನೆಂದು ಅರ್ಥ ಮಾಡಿಕೊಳ್ಳದ ಅಧಿಕಾರಿಗಳು ಉತ್ತಮ  ಆಡಳಿತ ನೀಡಲು ಸಾಧ್ಯವೇ? ಸರಕಾರ ಐದು ವರುಷಕ್ಕೊಮ್ಮೆ ಬದಲಾದೀತು. ಆದರೆ ಇಂತಹ ಅಧಿಕಾರಿಗಳು ಸುಮಾರು ನಲುವತ್ತು ವರುಷ ಆಡಳಿತ ನಡೆಸುತ್ತಾರೆ. ಮಾತ್ರವಲ್ಲ, ಭಡ್ತಿ ಪಡೆಯುತ್ತಾ ವ್ಯವಸ್ಥೆಯನ್ನು ಹೆಚ್ಚೆಚ್ಚು ಅದಕ್ಷಗೊಳಿಸುತ್ತಾರೆ, ಅಲ್ಲವೇ?