ಸಮಾಜಕ್ಕೊಂದು ಚಿತ್ರ - 'ರಾಮಾ ರಾಮಾ ರೇ'

ಸಮಾಜಕ್ಕೊಂದು ಚಿತ್ರ - 'ರಾಮಾ ರಾಮಾ ರೇ'

ಸಿನೆಮಾ, ನಾಟಕವೆಲ್ಲವು ಸಮಾಜದ ಕನ್ನಡಿ. ನಮ್ಮಲ್ಲಿನ ಮೌಲ್ಯ, ರೂಢಿ, ಮನಸ್ಸನ್ನು ಪ್ರತಿಬಿಂಬಿಸುವ ಸಾಧನ. ವೇಗಮಯವಾಗಿ ಸಾಗುತ್ತಿರುವ ನಮ್ಮೆಲ್ಲರ ಜೀವನಕ್ಕೆ ಒಂದು ಬ್ರೇಕ್ ಹಾಗು ಮನೋರಂಜನೆ ಕೊಡುವ ಸದುದ್ದೇಶ ಅವುಗಳಿಗಿವೆ. ಸಮಾಜವನ್ನು ರಂಜಿಸುವ ಮಹತಕಾರ್ಯದ ಪಣ ತೊಟ್ಟಿವೆ ಇವು.

ಹಲವು ದಿನದ ನಂತರ ಇಂದು ಒಂದು ಚಿತ್ರ ನೋಡುವಂತಾಯಿತು. ನೋಡಿದ ಚಿತ್ರ 'ರಾಮಾ ರಾಮಾ ರೇ'. ಚಿತ್ರ ನೋಡಿದಮೇಲೆ ನನ್ನ ಅನಿಸಿಕೆ ಬರೆಯುವ ಮನಸ್ಸು. ಅದರ ಪರಿಣಾಮವೇ ಈ ಲೇಖನ, ವಿಮರ್ಶೆ, ಅನಿಸಿಕೆ.
 
ದೊಡ್ಡ ದೊಡ್ಡ ಚಿತ್ರನಟರನ್ನು ಬಳಸಿಲ್ಲ, ಐಷಾರಾಮಿ ಜಾಗಗಳ ತೋರಿಸಿಲ್ಲ, ಕಾರುಗಳ ಉಡಾಯಿಸುವುದು, ಮಚ್ಚು, ಹೊಡೆದಾಟ ಇದರಲ್ಲಿಲ್ಲ. ಆದರೆ ಒಂದು ಸಾಮಾಜಿಕ ಕಳಕಳಿಯಿರುವ ಚಿತ್ರ ಇದಾಗಿದೆ. ಸಮಾಜಕ್ಕೊಂದು ಮೆಸೇಜ್ ಕೊಡುವ ಚಿತ್ರ. ಎಲ್ಲರ ಮನ ಮುಟ್ಟಿ, ಮನಸ್ಸಿನ ಕದ ತೆಗೆದು, ಭಾವನೆಗಳ ಬಡಿದೆಬ್ಬಿಸುವ ಚಿತ್ರ ಇದಾಗಿದೆ ಎಂದರೆ ತಪ್ಪಾಗಲಾರದು. ಪುಟ್ಟ ಮಕ್ಕಳಿಗೆ ತಪ್ಪು ಮಾಡಬಾರದೆಂದು ತಿಳಿಯುತ್ತದೆ, ಯುವಕ ಯುವತಿಯರಿಗೆ ಪ್ರೀತಿ ಕಾಣುತ್ತದೆ, ವಯಸ್ಸಾದವರಿಗೆ ಮೌಲ್ಯ ತೋರುತ್ತದೆ.
 
ದಾರವಾಹಿಗಳು ನಮ್ಮನ್ನು ಅದೆಷ್ಟು ಸೆಳೆಯುತ್ತವೆ ಎಂದು ಒಂದು ಕಡೆ ಕಂಡರೆ, ಕರ್ತವ್ಯ ಎಂಬುದು ಅದೆಷ್ಟು ಮುಖ್ಯ ಎಂದು ಇನ್ನೊಂದು ಪಾರ್ಶ್ವದಲ್ಲಿ ತೋರಲಾಗಿದೆ. ನಮ್ಮ ಕನಸುಗಳು ನಮ್ಮನ್ನು ಹೇಗೆ ಕಾಡಬಹುದು, ದುಡ್ಡುನ ಕಾಲಿಗೆ ನಾವು ಸಿಕ್ಕಮೇಲೆ ನಮ್ಮ ತಲೆ ಹೇಗೆ ತಿರುಗಬಹುದು, ಜಾತಿ ಮತ ಎಂಬ ಅಂಧತ್ವ, ತಾಯಿಯ ಮಹತ್ವ, ತಾಯಿ ಮಗುವಿನ ಅವಿನಾಭಾವ ಸಂಬಂಧ ಅತ್ಯಂತ ವರ್ಣನೀಯವಾಗಿ ಬಣ್ಣಿಸಲಾಗಿದೆ. ಮನುಷ್ಯ ಸಂಘಜೀವಿ, ಒಬ್ಬರಿಗೊಬ್ಬರು ಸಹಾಯ ಮಾಡಿದರೆ, ನಮ್ಮ ಸಮಾಜ ಜೇನುಗೂಡು ಎಂಬುದನ್ನು ಸಾಬೀತು ಮಾಡಿದ್ದಾರೆ. ಗಡಿಕಾಯುವ ಸೈನಿಕನಿಂದ ಹಿಡಿದು ಕೊಲೆ ಗೈದ ಕ್ರಿಮಿನಲ್ ವರೆಗಿನ ವಿಸ್ತಾರ ಇಲ್ಲಿ ಕಾಣಬಹುದು. ಹಳೆಯ ಜೀಪು, ವಯಸ್ಸಾದ ಹಣ್ಣು ಮುದುಕ, ಜೈಲಿನಿಂದ ಪರಾರಿಯಾದ ಕಳ್ಳ, ಇವೆಲ್ಲವು ಚಿತ್ರದ ಆಕರ್ಷಣೆಗಳು. ಹಾಸ್ಯದ ರುಚಿ, ನೋವಿನ ಕಹಿ, ಆನಂದದ ಸಿಹಿ, ಪರೋಪಕಾರದ ಧನ್ಯತೆ ಇಲ್ಲಿ ಸುಂದರವಾಗಿ ಮೂಡಿಬಂದಿದೆ. ನಾನು ಗಮನಿಸಿದ ಒಂದು ಅದ್ಭುತ ವಿಷಯ ಎಂದರೆ ಕ್ರಿಮಿನಲ್ ಎಂಬವನಿಗೆ ಕೂಡ ಮನಸ್ಸಿದೆ, ಅವನು ಕೂಡ ಕರುಳ ಕೂಗ ಆಲಿಸಬಲ್ಲ, ಅವನಲ್ಲು ಒಳ್ಳೆಯತನ ರಾರಾಜಿಸುತ್ತದೆ, ಅವನಿಗೂ ನಿಷ್ಠೆಯ ಪರಿಚಯವಿದೆ, ಅವನೂ ಸಹ ಸ್ನೇಹಜೀವಿ ಎಂಬ ಕೂಲಂಕುಶ ವಿಷಯದ ಪ್ರಸ್ತಾಪ.
 
ಕಾಲು ಭಾಗ ಸಿನೆಮಾ ನೋಡಿ ಇನ್ನುಳಿದ ಭಾಗ ಹೀಗೆ ಇರುತ್ತದೆ ಎಂದು ಊಹಿಸುವ ಯತ್ನ ಮಾಡಲಾಗದು. Trailerನಲ್ಲಿ ನಾವು ಕಂಡ ಕುತೂಹಲ, ಚಿತ್ರದ ಒಂದು ಪುಟ್ಟ ಭಾಗ ಎಂದು ಹೇಳಬಹುದು ಏಕೆಂದರೆ ಇಡೀ ಚಿತ್ರ suspense ಕಾಪಾಡಿಕೊಂಡು ಬರುತ್ತದೆ. ನಿಮ್ಮ ಊಹೆ ಸರಿಯಾಗುವುದು ಕೇವಲ ಕೊನೆಯ 5 ನಿಮಿಷಗಳು ಮಾತ್ರ. ಕಡಿಮೆ ವೆಚ್ಚದಲ್ಲಿ ಹಚ್ಚು ಪಡೆಯಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಚಿತ್ರಕ್ಕೆ ಹೊಂದುವ, ದಿನವಿಡಿ ಕಿವಿಯಲ್ಲಿ ಗುನುಗುವ ಸಂಗೀತ ಚಿತ್ರಕ್ಕೆ ಇನ್ನಷ್ಟು ಮೆರಗು ತಂದಿದೆ. ಒಟ್ಟೆನಲ್ಲಿ ಹೇಳಬೇಕೆಂದರೆ, ಇದೊಂದು ನೋಡಬೇಕಾದ ಚಿತ್ರ, ನಾವೆಲ್ಲರು ಪ್ರೋತ್ಸಾಹ ನೀಡಬೇಕಾದ ಚಿತ್ರ. ನಮ್ಮ ಸಮಾಜಕ್ಕೆ ಬೇಕಿದ್ದ ಚಿತ್ರ ಇದು. ನಾನು ಇಲ್ಲಿ ಹೇಳಿರುವುದು ಸಲ್ಪ, ನೀವೇ ನೋಡಿ ತಿಳಿಯಬೇಕಾದದ್ದು ಬಹಳ.