ಸಮಾಜದ ಎರಡು ವಿಭಿನ್ನ ಮುಖಗಳು...

ಸಮಾಜದ ಎರಡು ವಿಭಿನ್ನ ಮುಖಗಳು...

ನಡೆಯಲರಿಯದೆ ನುಡಿಯಲರಿಯದೆ 

ಲಿಂಗವ ಪೂಜಿಸಿ ಫಲವೇನು ? - ಬಸವಣ್ಣ

ನಮ್ಮ ಆತ್ಮಾವಲೋಕನಕ್ಕಾಗಿ‌ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ. ಈಗ ಅತ್ಯಂತ ಪ್ರಸ್ತುತ ಎಂದು ಅನಿಸುತ್ತಿದೆ. ಅರ್ಥ ಕಳೆದುಕೊಂಡ ನಮ್ಮ ನಡೆ ನುಡಿಗಳ ಈ ಸಂದರ್ಭದಲ್ಲಿ ಈ ಮಾತುಗಳು ತುಂಬಾ ಕಾಡುತ್ತಿದೆ. ಅದಕ್ಕಾಗಿ...

ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ. ನೀವು ಯಾವಾಗಲೂ ಸಮಾಜದಲ್ಲಿರುವ ಕೆಟ್ಟ  ಅಂಶಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತೀರಿ ಮತ್ತು ಬರೆಯುತ್ತೀರಿ. ಏಕೆ? ಇಲ್ಲಿನ ಒಳ್ಳೆಯ ಅಂಶಗಳು ನಿಮಗೆ ಕಾಣುವುದಿಲ್ಲವೆ?  ಸಮಾಜದಲ್ಲಿನ ಶಾಂತಿ, ಸಾಮರಸ್ಯ, ಅಭಿವೃದ್ಧಿ ನಿಮಗೆ ಗೋಚರಿಸುವುದಿಲ್ಲವೆ? ಧರ್ಮ, ದೇವರು, ಜಾತಿಗಳಿಂದ ನಮ್ಮ ಮೇಲಾಗಿರುವ ಒಳ್ಳೆಯ ಪರಿಣಾಮಗಳು ನಿಮಗೆ ತಿಳಿಯುವುದಿಲ್ಲವೆ?  ಭಕ್ತಿ, ನಂಬಿಕೆ, ಭಾವನೆಗಳು ವ್ಯೆಚಾರಿಕತೆಗಿಂತ ಬಲಿಷ್ಟವಾಗಿಲ್ಲವೆ? ನೀವು ನೋಡುವ ದೃಷ್ಟಿ ಸರಿ ಇಲ್ಲ, ನಿಮ್ಮ ಮನಸ್ಸು ಶುಧ್ದವಿಲ್ಲ, ನೀವು ಒಂದು ರೀತಿಯ ಕೊಳಕರು. ಆದ್ದರಿಂದಲೇ ಇಡೀ ವ್ಯವಸ್ಥೆ ನಿಮಗೆ ಕೆಟ್ಟದಾಗಿ ಕಾಣುತ್ತದೆ. ಇದು ಸಮಾಜದ ಸಮಸ್ಯೆಯಲ್ಲ ನಿಮ್ಮ ಮನಸ್ಸಿನ ವೈಯಕ್ತಿಕ ಸಮಸ್ಯೆ. ನಿಮ್ಮದು ನಕಾರಾತ್ಮಕ ಚಿಂತನೆ.

ಹೌದು, ನಮ್ಮನ್ನು ನಾವು ಈ ರೀತಿಯ ನೇರ ಪ್ರಶ್ನೆಗೆ ಮುಕ್ತವಾಗಿ‌ ತೆರೆದುಕೊಂಡಾಗಲೇ ನಮ್ಮ ಬಗ್ಗೆ ನಮಗೆ ಅರಿವು ಉಂಟಾಗುವುದು. ನಿಜ, ಮೇಲಿನ ಎಲ್ಲಾ ಅಂಶಗಳು ಇವೆ ಮತ್ತು ಬಹುತೇಕರು ಈ ವ್ಯವಸ್ಥೆಯ ಭಾಗವಾಗಿ ಅದನ್ನು ಪ್ರಶ್ನಿಸದೆ  ಸ್ವೀಕರಿಸಿ  ಜೀವನ ಸಾಗಿಸುತ್ತಿದ್ದಾರೆ ಮತ್ತು ಅದಕ್ಕೆ ಒಗ್ಗಿ ಹೋಗಿದ್ದಾರೆ. ಹಾಗಾಗಿ ಅವರು ಹೇಳುವುದು, ಕೋಟ್ಯಂತರ ಜನ ರೈತರಲ್ಲಿ ವರ್ಷಕ್ಕೆ ಒಂದಷ್ಟು ಜನ ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಏನು ಮಹಾ! 

ಕೋಟ್ಯಂತರ ದಲಿತರು ಶೋಷಿತರಲ್ಲಿ ಕೆಲವರ ಕೊಲೆ ದೌರ್ಜನ್ಯ ನಡೆದರೆ ಏನು ಮಹಾ!  ಇಷ್ಟೊಂದು ವಿಭಿನ್ನತೆ ಇರುವ ದೇಶದಲ್ಲಿ ಒಂದಷ್ಟು ಕೋಮು ಹತ್ಯೆಗಳಾದರೆ ಏನು ಮಹಾ! ಬೃಹತ್ ಜನಸಂಖ್ಯೆಯ ಇಲ್ಲಿ ಕೆಲವರು ಹಸಿವಿನಿಂದ ಸತ್ತರೆ ಏನು ಮಹಾ! ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರಲ್ಲಿ ಕೆಲವರು ಅತ್ಯಾಚಾರ, ವರದಕ್ಷಿಣೆ ಕಿರುಕುಳ ಇತ್ಯಾದಿಗಳಿಗೆ ಬಲಿಯಾದರೆ ಏನು ಮಹಾ! ಕೋಟ್ಯಂತರ ಹಣದ ವ್ಯವಹಾರದಲ್ಲಿ ಒಂದಷ್ಟು ಭ್ರಷ್ಟಾಚಾರ ನಡೆದರೆ ಏನು ಮಹಾ!  ಎಲ್ಲೋ ಅಲ್ಲಿ ಇಲ್ಲಿ ಒಂದಷ್ಟು ಕೊಲೆ ಸುಲಿಗೆ ವಂಚನೆ ನಡೆದರೆ ಏನು ಮಹಾ ! ಯಾರೋ ಒಂದಷ್ಟು ಭಿಕ್ಷುಕರು, ವೇಶ್ಯೆಯರು , ರೋಗಿಗಳು ರಸ್ತೆಯಲ್ಲಿ ಅನಾಥರಂತೆ ಸತ್ತರೆ ಏನು ಮಹಾ! ಇಂತಹ ಬೃಹತ್ ಸಮಾಜದಲ್ಲಿ ದೇವರು, ಧರ್ಮ, ಜಾತಿ, ಮೌಢ್ಯಗಳಿಂದ ಒಂದಷ್ಟು ಜನ ಶೋಷಣೆಗೆ ಬಲಿಯಾದರೆ ಏನು ಮಹಾ!. 

ಇದು ಸಮಾಜದ ಎರಡು ವಿಭಿನ್ನ ಮುಖ. ಮೊದಲನೆಯದು, ದೊಡ್ಡ ಮತ್ತು ಅತಿಹೆಚ್ಚು ಜನ ಒಪ್ಪಿ ವಾಸಿಸುತ್ತಿರುವ ಸಾಂಪ್ರದಾಯಿಕ ವ್ಯವಸ್ಥೆಯ ಮುಖವಾದರೆ, ಇನ್ನೊಂದು ಚಿಕ್ಕ ಮತ್ತು ಸದಾ ಈ ವ್ಯವಸ್ಥೆಯ ಬಗ್ಗೆ ಅತೃಪ್ತಿಯನ್ನು ಹೊಂದಿ ಪ್ರಶ್ನಿಸುವ ಮುಖ. ಈ ಚಿಕ್ಕ ಮುಖವೇ ಸಮಾಜದ ನಿಜವಾದ ಕ್ರಿಯಾಶೀಲ ಚೆಂತನೆಯ, ಹೊಸ ಹೊಸ ಮಾರ್ಗಗಳನ್ನು ಹುಡುಕುವ ಮತ್ತು ಆ ನಿಟ್ಟಿನಲ್ಲಿ ಒಂದಷ್ಟು ಘರ್ಷಣೆಗೆ ಕಾರಣವಾಗುವುದು ಎಂದು ಕೆಲವರು ಭಾವಿಸಿದರೆ, ಆ ದೊಡ್ಡ ಮುಖ ಕೇವಲ ಸೋಗಿನ ಮುಖವಾಡ. ಆ ಮುಖವಾಡ ಬದಲಾಗದೆ ಸಮಾಜ‌ ಪರಿಪೂರ್ಣ ಆಗುವುದಿಲ್ಲ, ದೇವರು, ಧರ್ಮ, ಜಾತಿ, ನಂಬಿಕೆ, ಮೌಲ್ಯ ಎಲ್ಲಾ ತಮ್ಮ ಅನುಕೂಲಕ್ಕೆ ತಕ್ಕಂತೆ ರಚಿಸಿಕೊಂಡು ನೀರ ಮೇಲಿನ ಗುಳ್ಳೆಯಂತೆ ಭ್ರಮೆಗಳಲ್ಲಿ ಬದುಕುತ್ತಿದ್ದಾರೆ. ಅದು ಅವರಿಗೆ ಸಕಾರಾತ್ಮಕ ಎಂದು ಕೆಲವರು ಭಾವಿಸುತ್ತಾರೆ.

ಈಗ ಎರಡೂ ಮುಖಗಳನ್ನು ಮುಖಾಮುಖಿಯಾಗಿಸೋಣ. ನಾನು ಹೇಳುವುದೇ ನಿಜ ಎಂಬ ಭ್ರಮೆ ನನಗಿಲ್ಲ. ಆದರೆ ಈ ಬಗ್ಗೆ ಗಮನಹರಿಸುವ ಒಂದು ಸಣ್ಣ ಪ್ರಯತ್ನ. ಇಡೀ ವ್ಯವಸ್ಥೆಯನ್ನು ತನಗೆ ಅನುಕೂಲ ಆಗುವಂತೆ ಸೃಷ್ಟಿಸಿಕೊಂಡು ಅಥವಾ ಇದ್ದ ಅನುಕೂಲಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು comfort zone or luxury zone (ಆರಾಮದಾಯಕ ಸ್ಥಿತಿ)  ಯಲ್ಲಿ ಇರುವವರು. ಇವರು ಯಥಾಸ್ಥಿತಿ ಇಚ್ಚಿಸುವವರು. ಸಣ್ಣ‌ ಬದಲಾವಣೆ ಕೂಡ ಇವರಿಗೆ ಕಿರಿಕಿರಿ ಆಗುತ್ತದೆ. ಸಮಾಜದ ಎಲ್ಲಾ ವಿಭಾಗಗಳ ಮೇಲೆ ಇವರು ನಿಯಂತ್ರಣ ಹೊಂದಿದ್ದಾರೆ.

ಇನ್ನು ಕೆಲವರು ಎಡಬಿಡಂಗಿಗಳು. ಇವರು ಯಾವ ನಿರ್ಧಾರ ತೆಗೆದುಕೊಳ್ಳಲು ‌ಹಿಂಜರಿಯುವವರು, ರಿಸ್ಕ್ ಇಲ್ಲದೆ ಹೆಚ್ಚು ಯೋಚಿಸಲು ಹೋಗದೆ ತಮ್ಮ ಜೀವನಾವಶ್ಯಕ‌ ವಸ್ತುಗಳನ್ನು ಹೊಂದಿಸಲು ಬದುಕಿನ ಕೊನೆಯವರೆಗೂ ಪ್ರಯತ್ನಿಸುತ್ತಲೇ ಇರುತ್ತಾರೆ. Comfort zone ಗೆ ಹೋಗುವ ಆಸೆ ಮತ್ತು ಬಡತನದ ಸ್ಥಿತಿಗೆ ಬೀಳಬಹುದು ಎಂಬ  ಭಯದೊಂದಿಗೆ ಜೀವನ ಮುಗಿಸುತ್ತಾರೆ. ವ್ಯವಸ್ಥೆಯ ಭರವಸೆಗಳೇ ಇವರ ಜೀವನಾಧಾರ. ಈಗ ನಾವು ಸದಾ ಮಾತನಾಡುವ ವರ್ಗದ ಬಗ್ಗೆ ಗಮನಿಸೋಣ. ಈ ಬಡತನದ ಸ್ಥಿತಿಯ, ಅಸಹಾಯಕ ಮನಸ್ಥಿತಿಯ, ಆಟಕ್ಕುಂಟು ಲೆಕ್ಕಕ್ಕಿಲ್ಲದ ಜನರ ಬಗ್ಗೆ ಮೇಲಿನ ಎರಡೂ ವರ್ಗದವರು ಅತ್ಯಂತ ನಿಕೃಷ್ಟ ಭಾವನೆ ಹೊಂದಿದ್ದಾರೆ. 

ಯಾರಿಗೂ ಉಪಯೋಗಕ್ಕೆ ಬಾರದ ಭಿಕ್ಷುಕರು,  ವೇಶ್ಯೆಯರು, ಅಸಹಾಯಕ ರೋಗಿಗಳು, ಊಟಕ್ಕೂ ಗತಿ ಇಲ್ಲದ ಕಾರ್ಮಿಕರು, ಹಸಿವಿನಿಂದ ಸಾಯುವ ರೈತರು,  ರಸ್ತೆ ಬದಿ ಇಡೀ ಜೀವನ ಸಾಗಿಸುವ ನತದೃಷ್ಟರು, ಬಾಲ ಕಾರ್ಮಿಕರು ಇತ್ಯಾದಿಗಳು. 

ಮೇಲಿನ ಎರಡೂ ವರ್ಗದವರ ಹಿತ ಕಾಯಲು ಕನಿಷ್ಠ ತೋರಿಕೆಗಾದರೂ ರಾಜಕಾರಣಿಗಳು, ಪತ್ರಕರ್ತರು, ಸಿನಿಮಾ ನಟರು, ವಾಣಿಜ್ಯೋದ್ಯಮಿಗಳು, ಮಠಾಧೀಶರು ಹೀಗೆ ಅನೇಕ ಪ್ರಸಿದ್ಧರು ಮುಂದೆ ಬರುತ್ತಾರೆ ಮತ್ತು ವ್ಯವಸ್ಥೆ ಅವರಿಗೆ ಅನೇಕ ಅನುಕೂಲಗಳನ್ನು ಒದಗಿಸಿದೆ. ಆದರೆ ಈ ಮೂರನೆಯ ಅಸಹಾಯಕ ವರ್ಗದ ಬಗ್ಗೆ ಸಮಾಜ ಕುರುಡಾಗಿದೆ. ಯಾವುದೇ ಲಾಭವೇನು ಇರದ ಇವರ ಬಗ್ಗೆ ವ್ಯವಸ್ಥೆಯು ಗಮನ ಹರಿಸಬೇಕಿದೆ. ಅದಕ್ಕಿಂತ ಮುಖ್ಯವಾಗಿ ಈ ಜನರು ಕೂಡ ನಮ್ಮ ರಕ್ತಸಂಬಂಧಿಗಳೇ ಎಂದು ಭಾವಿಸಬೇಕಿದೆ. ಒಬ್ಬ ವೇಶ್ಯೆ ನನ್ನ ಅಕ್ಕ, ತಂಗಿ, ತಾಯಿ ಆಗಿರಬಹುದು, ಒಬ್ಬ ಭಿಕ್ಷುಕ ನನ್ನ ಚಿಕ್ಕಪ್ಪ ಆಗಿರಬಹುದು, ಆತ್ಮಹತ್ಯೆ ಮಾಡಿಕೊಂಡ ರೈತ ನನ್ನ ಮಾವ ಆಗಿರಬಹುದು, ಅಸ್ಪೃಶ್ಯತೆಗೆ ಬಲಿಯಾದ ವ್ಯಕ್ತಿ ನನ್ನ ಅಣ್ಣನಾಗಿರಬಹುದು, ಹಸಿವಿನಿಂದ ಸತ್ತ ಕುಟುಂಬ ನನ್ನ ಸಂಬಂಧಿಗಳೇ ಆಗಿರಬಹುದು,

ಬಾಲ ಕಾರ್ಮಿಕ ನನ್ನ ಮಗನೇ ಆಗಿರಬಹುದು ಎಂದು ಭಾವಿಸಿ ನಾವು ಇವರನ್ನು ವ್ಯವಸ್ಥೆಯ ಭಾಗವಾಗಿಸಬೇಕಿದೆ.  ರಸ್ತೆಗಳಲ್ಲಿ, ಹೊಲಗದ್ದೆಗಳಲ್ಲಿ, ಗುಡಿಸಲಿನಲ್ಲಿ, ಕತ್ತಲೆ ಕೂಪಗಳಲ್ಲಿ ಸಾಯುವ ಈ ಜನರು ನಮ್ಮನ್ನು ಸದಾ ಕಾಡುತ್ತಾರೆ. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವವರೆಗೂ ಮೇರಾ ಭಾರತ್ ಮಹಾನ್  ಎಂದು ಹೇಳಲು ಇಷ್ಟ ಪಡದ ಕೊಳಕ ಮನಸ್ಥಿತಿಯವನು ಎಂದು ಒಪ್ಪುತ್ತೇನೆ.

ನಮಗೆ ಮೇಲಿನ ಎರಡೂ ವ್ಯವಸ್ಥೆಯ ಬಗ್ಗೆ ಖಂಡಿತ ದ್ವೇಷವಿಲ್ಲ. ಆದರೆ ಕೆಳಗಿನ ವ್ಯವಸ್ಥೆಯ ಬಗ್ಗೆ ಪ್ರೀತಿ ಇದೆ. ಈ ಮೂರೂ ವರ್ಗಗಳು ಯಾವುದೋ ಒಂದು ಹಂತದಲ್ಲಿ ಒಂದಾಗಿ ಸಮಾನತೆ ಸಾಧಿಸಲಿ socially smart society ನಿರ್ಮಾಣವಾಗಲಿ ಎಂಬುದು ನಮ್ಮ ಹಗಲು ಕನಸು. ಅಲ್ಲಿಯವರೆಗೂ ಯಾರನ್ನೂ ಮಹಾನ್ ವ್ಯಕ್ತಿಗಳು, ಚಿಂತಕರು, ಬುದ್ಧಿಜೀವಿಗಳು, ಪಂಡಿತರು, ಬಲಾಢ್ಯರು, ಚಾಣಕ್ಯರು, ಹೆಬ್ಬುಲಿ, ದೇವಮಾನವರು, ಸಂತರು ಎಂದು ಕರೆಯುವುದಿಲ್ಲ. 

ಎಲ್ಲರೂ ನಮ್ಮಂತೆ ಅಸಹಾಯಕರೆ. ಆ ಕಾರಣಕ್ಕಾಗಿಯೇ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವುದು. ಇದು ವ್ಯವಸ್ಥೆಯ ಬದಲಾವಣೆಯವರೆಗೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೊನೆಯ ಉಸಿರಿನವರೆಗೂ ನಿರಂತರವಾಗಿರುತ್ತದೆ. ಇದಕ್ಕೆ ನಿಮ್ಮ ಸಹಕಾರದ ನಿರೀಕ್ಷೆಯೊಂದಿಗೆ… ನಮ್ಮ ಅವಶ್ಯಕತೆ ಇರುವುದು ಮೂರನೇ ವರ್ಗಕ್ಕೆ. ಉಳಿದ ಬಹುಸಂಖ್ಯಾತ ಎರಡು ವರ್ಗಗಳು ಹೇಗೋ ತಮ್ಮ ಜೀವನ ಸಾಗಿಸುತ್ತಾರೆ. ಅವರಿಗೆ ಒಳ್ಳೆಯದಾಗಲಿ...

-ವಿವೇಕಾನಂದ. ಹೆಚ್‌.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ