ಸಮಾಜಮುಖಿ ವಿಜ್ಞಾನ

ಸಮಾಜಮುಖಿ ವಿಜ್ಞಾನ

ಜಗತ್ತು ಕಂಡ ಅಪ್ರತಿಮ ವಿಜ್ಞಾನ ಪ್ರತಿಭೆಗಳಲ್ಲಿ ಐನ್‍ಸ್ಟೈನ್ ಅಗ್ರಗಣ್ಯರು. ಸಾಪೇಕ್ಷತಾ ಸಿದ್ದಾಂತದ ಪ್ರವರ್ತಕ ,ಭೌತ ಶಾಸ್ತ್ರದ ಅಧ್ಯಯನ ಕ್ಷೇತ್ರಕ್ಕೆ ವೈಶಾಲ್ಯತೆಯನ್ನು ಹಾಗೂ ಮೂಲಭೂತ ಸೂತ್ರಗಳನ್ನು ರೂಪಿಸಿದ ಕೀರ್ತಿಗೆ ಐನ್ಸ್ಟೀನ್ ಭಾಜನರಾಗಿದ್ದಾರೆ. ಐನ್ ಸ್ಟೀನ್ ಒಬ್ಬ ವಿಜ್ಞಾನಿಯಾಗಿ ತನ್ನ ಸಂಶೋಧನೆಗಳಿಂದ ಜಗತ್ತೇ ತನ್ನಡೆಗೆ ನಿಬ್ಬೆರಗಾಗಿ ನೋಡುವಂತೆ ಮಾಡಿದ್ದ ಕಾಲದಲ್ಲಿಯೇ , ತಣ್ಣಗೆ ಜನಾಂಗೀಯ ದ್ವೇಷ ಹಾಗೂ ಸಂಘರ್ಷದ ಜ್ವಾಲೆ ಪಸರಿಸುತಿತ್ತು.

ಆಗತಾನೆ ಹಿಟ್ಲರ್ ಜರ್ಮನಿಯ ಆಡಳಿತ ರಂಗಸ್ಥಳಕ್ಕೆ ಪಾದಾರ್ಪಣೆ ಮಾಡಿ ಜನಾಂಗೀಯ ಶ್ರೇಷ್ಠತೆಯ ಅಮಲನ್ನು ಬಿಕರಿ ಮಾಡುತ್ತಾ , ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಸರ್ವಾಧಿಕಾರಿಯಾಗಿ ರೂಪಿತಗೊಳ್ಳುತ್ತಿದ್ದ. ಇತಿಹಾಸ ಮತ್ತೊಂದು ರಕ್ತಸಿಕ್ತ ಹಿಂಸಾತ್ಮಕ ಪುಟವನ್ನು ಸೇರಿಸಿಕೊಳ್ಳಲು ತಣ್ಣನೆ ಅದುರುತ್ತಾ ಸಿದ್ದವಾಗುತಿತ್ತು. ಅತ್ಯಂತ ಕೆಳವರ್ಗದಿಂದ‌ ಬಂದಿದ್ದ ಹಿಟ್ಲರ್ ಬೆಳೆದ ನಂತರ ವರ್ಗ ಪ್ರತಿಷ್ಠೆಯನ್ನು ಹುಚ್ಚನಂತೆ ಆವಾಹಿಸಿಕೊಂಡು, ಕಾರ್ಮಿಕರನ್ನು ಇನ್ನಿಲ್ಲದಂತೆ ದ್ವೇಷಿಸಿದ್ದು ವಿಪರ್ಯಾಸ.
ಇವನ ಆವೇಶಭರಿತ ,ವಿವೇಚನಾರಹಿತ ಭಾಷಣಗಳು ಜರ್ಮನಿಯ ಜನತೆಯನ್ನು ಸೆಳೆದುಕೊಂಡದ್ದು ಒಂದು ಐತಿಹಾಸಿಕ ದುರಂತ.

ಹಿಟ್ಲರ್ ಪ್ರಮುಖ ರಾಜಕೀಯ ದುರಂಧರನಾಗಿ ಬೆಳೆಸಿದ್ದು ಅವನ ವಿದೇಶಿಯ ವಿರೋಧಿ ನೀತಿ. ಈ ನೀತಿಯೇ ಅವನಿಗೆ ಅಪಾರ ಜನಮನ್ನಣೆಯನ್ನು ಅಗ್ಗದ ಪ್ರಚಾರವನ್ನು ತಂದುಕೊಟ್ಟವು. ಇದರೊಂದಿಗೆ ಯಹೂದ್ಯರ ಮೇಲಿನ ಅಸಹನೆ ಹಾಗೂ ತಿರಸ್ಕಾರ ಜನಾಂಗೀಯ ದ್ವೇಷ ಹಾಗೂ ಜನಾಂಗೀಯ ಶ್ರೇಷ್ಠತೆಯ ಅಪಾಯಕಾರಿ ಸಿದ್ದಾಂತಗಳ ಉಗಮಕ್ಕೆ ನಾಂದಿಯಾಗಿ ಜರ್ಮನಿಯ ಜನರನ್ನು‌ ಈ ಸಿದ್ದಾಂತಗಳು ಉನ್ಮತ್ತರನ್ನಾಗಿಸಿ ಭವಿಷ್ಯದ ವಿನಾಶದ ಭಾಷ್ಯ ಬರಹಕ್ಕೆ ಒಪ್ಪಿಗೆಯ ಮುದ್ರೆಯನ್ನೊತ್ತುವಂತೆ ಅಯಾಚಿತವಾಗೆ ಪ್ರೇರೇಪಿಸಿದ್ದವು.

ಈ ಎಲ್ಲಾ ಮನುಕುಲದ ದೌರ್ಬಲ್ಯ ದುರಂತಗಳಿಗೆ ನೇರವಾಗಿ ಒಳಗಾಗಿದ್ದು ಹಾಗೂ ಮಾನವೀಯತೆಯ ವಿರೋಧಿ 2 ನೇ ವಿಶ್ವಯುದ್ದಕ್ಕೆ ಸಾಕ್ಷಿಯಾಗಿದ್ದು ಐನ್ ಸ್ಟೀನ್ . ಅವರ ಪತ್ರ ಬರಹಗಳಲ್ಲಿ ನಾಜಿ ಸಿದ್ದಾಂತ ಹಾಗೂ ರಾಷ್ಟ್ರೀಯತೆಯ ಅಪಾಯಗಳನ್ನು ಕುರಿತು ಸಾಕಷ್ಟು ಜಿಜ್ಞಾಸೆಯಿಂದ ಉಲ್ಲೇಖಿಸುತ್ತಾರೆ. ಪ್ರಸ್ತುತ ಸಂಧರ್ಭದಲ್ಲಿ ಐನ್ ಸ್ಟೀನ್ ವಿಚಾರಗಳು ಪ್ರಸ್ತುತವಾಗಿವೆ. ಈ ಎಲ್ಲಾ ಬರಹಗಳಲ್ಲಿ ಐನ್ ಸ್ಟೀನ್ ಒಬ್ಬ ಶ್ರೇಷ್ಠ ವಿಜ್ಞಾನಿ ಮಾತ್ರವಲ್ಲದೆ ಒಬ್ಬ ಮಾನವೀಯ ಮುಖವಿರುವ ಸಮಾಜ ಚಿಂತಕನೆಂಬುದನ್ನು ಮನಗಾಣಬಹುದು.