ಸಮಾಜವಾದಿಗಳ ಕಾಂಗ್ರೆಸ್ಸೀಕರಣ: ಮುಂದೇನು?
ಸಮಾಜವಾದಿಗಳ ಕಾಂಗ್ರೆಸ್ಸೀಕರಣ: ಮುಂದೇನು?
ಅಂತೂ ಎಂ.ಪಿ.ಪ್ರಕಾಶರು ಮತ್ತು ಅವರ ಬೆಂಬಲಿಗರು ತಿಂಗಳುಗಟ್ಟಲೆ ಕಾಂಗ್ರೆಸ್, ಬಿಜೆಪಿ ಎರಡೂ ಮನೆಗಳ ಬಾಗಿಲು ಕಾಯ್ದು ಈಗ ಕಾಂಗ್ರೆಸ್ ಮನೆ ಹೊಗಲು ಅರ್ಜಿ ಹಾಕಿದ್ದಾರೆ. ಇದರೊಂದಿಗೆ ಕರ್ನಾಟಕದ ಮಟ್ಟಿಗಾದರೂ, ಸಮಾಜವಾದಿಗಳ ಕಾಂಗ್ರೆಸ್ಸೀಕರಣ ಸಂಪೂರ್ಣವಾದಂತಿದೆ. ಬಂಗಾರಪ್ಪನವರು ಮುಲಾಯಂ ಸಿಂಗರ ರಾಷ್ಟ್ರೀಯ ನಾಯಕತ್ವದಲ್ಲಿ ಈಗ ಕೆಂಪು ಟೋಪಿ ಹಾಕಿಕೊಂಡು ಸಮಾಜವಾದಿ ವೇಷದಲ್ಲಿ ಕಾಣಿಸಿಕೊಳ್ಳುತ್ತಿರುವರಾದರೂ, ತಮ್ಮ ರಾಜಕೀಯ ಜೀವನದಲ್ಲಿ ಅವರು ತೊಟ್ಟಿರುವ ಇಂತಹ ಹಲವಾರು ವೇಷಗಳಲ್ಲಿ ಈಗಾಗಲೇ ಕನಿಷ್ಠ ಎರಡು ಬಾರಿ ಕಾಂಗ್ರೆಸ್ ವೇಷವನ್ನೂ ತೊಟ್ಟಿದ್ದರು ಎಂಬುದನ್ನು ಮರೆಯುವಂತಿಲ್ಲ ಮತ್ತು ಅನತಿ ಕಾಲದಲ್ಲೇ ಮೂರನೇ ಬಾರಿ ಆ ವೇಷ ತೊಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅದೇನೇ ಇರಲಿ, ಇವರೆಲ್ಲರ ನಾಯಕರಾಗಿದ್ದ ಡಾ|| ರಾಮಮನೋಹರ ಲೋಹಿಯಾ ಅವರು ತಮ್ಮ ಅಂತ್ಯ ಕಾಲದಲ್ಲಿ - 1967ರ ಚುನಾವಣೆಗಳ ಹೊತ್ತಿಗೆ - ಪ್ರತಿಪಾದಿಸಿ, ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸನ್ನೂ ಕಂಡ 'ಕಾಂಗ್ರೆಸ್ಸೇತರವಾದ'ವು ನಾಲ್ಕು ದಶಕಗಳ ನಂತರ ಹೀಗೆ ತದ್ವಿರುದ್ಧ ದಿಕ್ಕಿನಲ್ಲಿ ಸಮಾಜವಾದಿಗಳ ಕಾಂಗ್ರೆಸ್ಸೀಕರಣದಲ್ಲಿ ಪರಿಸಮಾಪ್ತಿಯಾಗುತ್ತಿರುವುದು ವಿಪರ್ಯಾಸವೇ ಸರಿ!
ಸಮಾಜವಾದಿ ಚಳುವಳಿಯ ಲೋಹಿಯಾ ಧಾರೆ ರೂಢಿಸಿಕೊಂಡಿದ್ದ ಕಾಂಗ್ರೆಸ್ ವಿರೋಧಿ ಧೋರಣೆಯ ಹಿನ್ನೆಲೆಯಲ್ಲಿ ಇದು ವಿಪರ್ಯಾಸವಾಗಿ ಕಾಣುತ್ತಿದೆ, ನಿಜ. ಆದರೆ, ಸಮಾಜವಾದಿ ಚಳುವಳಿಯಲ್ಲಿ ಲೋಹಿಯಾ ಅವರ ಒಡನಾಡಿಯೂ, ಜೊತೆಗೆ ನೆಹರೂ ಅವರ ಸ್ನೇಹಿತನಾಗಿದ್ದ ಕಾರಣದಿಂದಾಗಿ 'ಸಮಸ್ಯೆ'ಯೂ ಆಗಿದ್ದ ಜಯಪ್ರಕಾಶ್ ನಾರಾಯಣರೇ 1977ರಲ್ಲಿ ಲೋಹಿಯಾ ಅವರ 'ಕಾಂಗ್ರೆಸ್ಸೇತರವಾದ'ವನ್ನು ತಮ್ಮ 'ಸಂಪೂರ್ಣ ಕ್ರಾಂತಿ' ಚಳುವಳಿಯ ಅವಸರದಲ್ಲಿ ಸಂಪೂರ್ಣವಾಗಿ ಇನ್ನೊಂದು ರೀತಿಯಲ್ಲಿ ಅನುಷ್ಠಾನಕ್ಕೆ ತಂದ ನಂತರ, ರಾಷ್ಟ್ರೀಯ ರಾಜಕಾರಣ ಅನೇಕ ಹೊಸ ತಿರುವುಗಳನ್ನು ಪಡೆಯಿತು. ಇವುಗಳ ಹಿನ್ನೆಲೆಯಲ್ಲಿ ನೋಡಿದಾಗ ಸಮಾಜವಾದಿಗಳ ಈ ಕಾಂಗ್ರೆಸ್ಸೀಕರಣ ಸಹಜವೂ ಆಗಿ ಕಾಣಬಲ್ಲುದು! ಏಕೆಂದರೆ, ಸಮಾಜವಾದಿ ಚಳುವಳಿಯ ಉಳಿವಿಗೆ ಅನಿವಾರ್ಯ ರಾಜಕೀಯ ತಂತ್ರವೆಂಬಂತೆ ಲೋಹಿಯಾ ರೂಪಿಸಿದ್ದ ಈ 'ಕಾಂಗ್ರೆಸ್ಸೇತರವಾದ', ಹತ್ತು ವರ್ಷಗಳ ನಂತರ ಜೆ.ಪಿ.ಯವರ ಹೊಸ ರಾಜಕೀಯ ಪ್ರಯೋಗದಲ್ಲಿ ಸಮಾಜವಾದಿ ಪಕ್ಷವೇ ವಿಸರ್ಜನೆಯಾಗುವುದರೊಂದಿಗೆ ತನ್ನ ಸಾರ್ಥಕ್ಯವನ್ನು ಕಂಡಿತ್ತು! ಜೆ.ಪಿ.ಯವರೇನೋ ಸಮಾಜವಾದಿ ಪಕ್ಷವೂ ಸೇರಿದಂತೆ ಎಲ್ಲ ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸಿ ರೂಪಿಸಿದ ಜನತಾ ಪಕ್ಷಕ್ಕೆ ಗಾಂಧಿ ಸಮಾಜವಾದದ ದೀಕ್ಷೆ ಕೊಟ್ಟು ಅದನ್ನು ಒಂದು ಸಮಾಜವಾದಿ ಕ್ರಾಂತಿಯ ರಾಜಕೀಯ ಸಾಧನವನ್ನಾಗಿ ಮಾಡುವ ಕನಸನ್ನು ಕಂಡಿದ್ದರು. ಆದರೆ, ತುರ್ತು ಪರಿಸ್ಥಿತಿ ಸೃಷ್ಟಿಸಿದ ರಾಜಕೀಯ ಒತ್ತಾಯಗಳ ತರಾತುರಿಯಲ್ಲ್ಲಿ ಅವರ ಲೆಕ್ಕಾಚಾರವೆಲ್ಲ ತಲೆಕೆಳಗಾಗಿತ್ತು. ಅವರು ವಿಲೀನವೆಂದು ಭಾವಿಸಿದ್ದು, ಆಯಾ ಪಕ್ಷಗಳ ಪಾಲಿಗೆ ಸಮಯಸಾಧಕ ರಾಜಕೀಯ ತಂತ್ರವಾಗಿತ್ತೇ ಹೊರತು, ಮನಃಪೂರ್ವಕ ವಿಲೀನವೇನೂ ಆಗಿರಲಿಲ್ಲ. ಅದು ಅವರಿಗೆ ಗೊತ್ತಾಗುವ ಹೊತ್ತಿಗೆ ಅವರ ಮರಣವೂ ಸಮೀಪಿಸಿತ್ತು.
ಜನತಾ ಪಕ್ಷದಲ್ಲಿ ತನ್ನನ್ನು ವಿಲೀನಗೊಳಿಸಿಕೊಂಡಿದ್ದರೂ, ತನ್ನ ಆರ್.ಎಸ್.ಎಸ್. ಬೆನ್ನೆಲುಬನ್ನು ಉಳಿಸಿಕೊಂಡಿದ್ದ ಭಾರತೀಯ ಜನಸಂಘ (ಈಗಿನ ಭಾರತೀಯ ಜನತಾ ಪಕ್ಷದ ಹಿಂದಿನ ರೂಪ) ತನ್ನ ಈ ಸಂಘಟನಾತ್ಮಕ ದಕ್ಷತೆಯಿಂದಲೇ ಜನತಾ ಪಕ್ಷವನ್ನು ಒಳಗಿಂದೊಳಗೇ ನುಂಗಿಹಾಕುವ ಅಪಾಯವಿದೆ ಎಂದು ಸಮಾಜವಾದಿ ಚಿಂತಕ ಮಧು ಲಿಮೆಯೆ ಎಚ್ಚರಿಸಿದರು. ಇದರೊಂದಿಗೆ ಆರಂಭವಾದ ಜನತಾ ಪಕ್ಷದ ವಿಘಟನೆ, ಮೂರೇ ವರ್ಷಗಳಲ್ಲಿ ಅದನ್ನು ಛಿದ್ರಮಾಡಿತು. ಈ ಹಿನ್ನೆಲೆಯಲ್ಲಿ ಲಿಮಯೆ ಆಗ ತಾನೇ ಐತಿಹಾಸಿಕ ಸೋಲಿನಿಂದಾಗಿ ಆಘಾತಗೊಂಡಿದ್ದ ಕಾಂಗೆಸ್ಸನ್ನು ಪ್ರೋತ್ಸಾಹಿಸುವ ಅಗತ್ಯದ ಮಾತುಗಳನ್ನಾಡಿದರು. ಜನತಾ ಪಕ್ಷದ ಕ್ಷಿಪ್ರ ವಿಘಟನೆ ಜೆ.ಪಿ.ಚಳುವಳಿಯ ತಾತ್ವಿಕ ವೈಫಲ್ಯವನ್ನು ಸೂಚಿಸುತ್ತಿದ್ದು, ಇದರಿಂದಾಗಿ, ಆರ್.ಎಸ್.ಎಸ್. ನಿಯಂತ್ರಣದ ಭಾರತೀಯ ಜನಸಂಘ ಎಲ್ಲ ಪ್ರಜಾತಾಂತ್ರಿಕ ಹಾಗೂ ಸಮಾಜವಾದಿ ಶಕ್ತಿಗಳಿಗೆ ಕಂಟಕಪ್ರಾಯವಾಗಿ ಬೆಳೆಯಲಿದ್ದು; ಇದಕ್ಕೆ ಪ್ರತಿಯಾಗಿ ಸದ್ಯದ ಸಂದರ್ಭದಲ್ಲಿ ಕಾಂಗ್ರೆಸ್ಸನ್ನು ಉಳಿಸಿ ಬಲಪಡಿಸುವುದೊಂದೇ ದಾರಿ ಎಂದು ಅವರು ಪ್ರತಿಪಾದಿಸಿದರು. ಲೋಹಿಯಾ ಹತ್ತು ವರ್ಷಗಳ ಹಿಂದೆ ಪ್ರತಿಪಾದಿಸಿದ್ದ ವಾದಕ್ಕೆ ತದ್ವಿರುದ್ಧ ವಾದವೊಂದನ್ನು ಈಗ ಅವರ ಆಪ್ತ ಶಿಷ್ಯ ಪ್ರತಿಪಾದಿಸತೊಡಗಿದ್ದರು! ಇದು ಪಕ್ಷ ಕಳೆದುಕೊಂಡ ಸಮಾಜವಾದಿಯೊಬ್ಬನ ಆರ್ತ ಕೂಗಾಗಿದ್ದರೂ ಆಶ್ಚರ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ ಇದು, ತಾನು ಆವರೆಗೆ ಕಟುವಾಗಿ ವಿರೋಧಿಸುತ್ತಾ ಬಂದಿದ್ದ ಕಾಂಗ್ರೆಸ್ಸಿಗೆ ಪರ್ಯಾಯವಾದ ಜನತಾಂತ್ರಿಕ ಸಮಾಜವಾದಿ ರಾಜಕೀಯ ಶಕ್ತಿಯೊಂದನ್ನು ರೂಪಿಸಲಾಗದ ಸಮಾಜವಾದಿಯ ಅಸಹಾಯಕತೆಯ ಕೂಗೂ ಆಗಿತ್ತೆಂದೇ ನನ್ನ ಭಾವನೆ.
ಅಷ್ಟೇ ಅಲ್ಲ,ಲಿಮಯೆ ಅವರ ಈ ಕೂಗು,ಇದೆಲ್ಲ ಆದ ಇಷ್ಟು ವರ್ಷಗಳ ನಂತರ ನನಗೆ ಲೋಹಿಯಾರ 'ಕಾಂಗ್ರೆಸ್ಸೇತರವಾದ'ವೆಂಬ ಕೂಗಿನ ಪ್ರತಿಧ್ವನಿಯಂತೆಯೂ ಕೇಳಿಸುತ್ತಿದೆ... ಏಕೆಂದರೆ, ಇದೇ ಅಸಹಾಯಕತೆಯಲ್ಲೇ ಲೋಹಿಯಾ ಕೂಡ ಕಾಂಗ್ರೆಸ್ಸೇತರವಾದವನ್ನು ಮಂಡಿಸಿದ್ದು ಎಂಬುದನ್ನು ನಾವು ಗಮನಿಸಬೇಕು. ಹಾಗೆ ನೋಡಿದರೆ, ಈ ಸಂಘಟನಾತ್ಮಕ ಅಸಹಾಯಕತೆ ಸಮಾಜವಾದಿ ಚಳುವಳಿಯ ಆಳದಲ್ಲೇ ಅಂತರ್ಗತವಾಗಿತ್ತು. ಏಕೆಂದರೆ ಸಮಾಜವಾದಿ ಚಳುವಳಿ ಮೂಲತಃ ಒಂದು ಸ್ವತಂತ್ರ ರಾಜಕೀಯ ಚಳುವಳಿಯಾಗಿ ಆರಂಭವಾದುದಲ್ಲ. ಅದು ಕಾಂಗೆಸ್ಸಿನ ಕೊಡೆಯ ಕೆಳಗೆ ಒಂದು ಒಳ ಗುಂಪಾಗಿ, ನಂತರ ಒಂದು ಅದರ ಒಳ ಪಕ್ಷವಾಗಿ ತನ್ನ ಅಸ್ತಿತ್ವವನ್ನು ಕಂಡುಕೊಂಡದ್ದು. ತಮ್ಮ ಸೃಜನಶೀಲ ಚಿಂತನೆ ಹಾಗೂ ನಿರ್ಭಯ ಹೋರಾಟಗಳ ಕಾರಣದಿಂದಾಗಿ ಗಳಿಸಿದ ಗಾಂಧೀಜಿಯ ಸಹಾನುಭೂತಿ ಮತ್ತು ಪ್ರೀತಿ, ಸಮಾಜವಾದಿಗಳನ್ನು ಅಲ್ಲಿಯೇ ಉಳಿಸಿತಾದರೂ; ಅವರು ಕಾಂಗ್ರೆಸ್ಸಿನ ಎಲ್ಲ ರಾಜಕೀಯ ಕ್ರಮಗಳನ್ನೂ ವಿಮರ್ಶಿಸುತ್ತಾ, ಟೀಕಿಸುತ್ತಾ, ವಿರೋಧಿಸುತ್ತಾ ಪಕ್ಷದ ಹಿರಿಯ ಹಾಗೂ ಗಣ್ಯ ನಾಯಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಾ ಬಂದ ಕಾರಣದಿಂದಾಗಿ ರಾಷ್ಟ್ರೀಯ ಸ್ವಾತಂತ್ರ್ಯ ಘೋಷಣೆಗಿಂತ ಸ್ವಲ್ಪ ಮುನ್ನ ಪಕ್ಷದಿಂದ ಹೊರ ಹೋಗಬೇಕಾದ ಅನಿವಾರ್ಯತೆ ಉಂಟಾಯಿತು. ಆ ವೇಳೆಗಾಗಲೇ ಅನೇಕ ತಾತ್ವಿಕ ಹಾಗೂ ವೈಯುಕ್ತಿಕ ಕಾರಣಗಳಿಂದಾಗಿ ನೆಹರೂ ವಿರೋಧಿಯಾಗಿದ್ದ ಲೋಹಿಯಾರಂತವರು, ಒಳಗಿದ್ದುಕೊಂಡೇ ಗಾಂಧೀಜಿಯ ಬೆಂಬಲದಿಂದ ಕಾಂಗ್ರೆಸ್ಸನ್ನು ನೆಹರೂ ಅವರ ಎಡಬಿಡಂಗಿ ರಾಜಕೀಯ ಹಿಡಿತದಿಂದ ಬಿಡುಗಡೆಗೊಳಿಸಿ ನಿಜವಾದ ಸಮಾಜವಾದಿ ಪಕ್ಷವನ್ನಾಗಿ ಮಾಡಬೇಕೆಂಬ ಆಸೆಯುಳ್ಳವರಾಗಿದ್ದರು. ಆದರೆ, ಅದು ಪಟೇಲ್ - ನೆಹರೂರ ಜೋಡಿಯ ತಂತ್ರದಿಂದಾಗಿ ಸಾಧ್ಯವಾಗದೆ ಅವರೆಲ್ಲ ಹೊರ ಬರಬೇಕಾಯಿತು.
ಈ ಸಿಟ್ಟು ಮತ್ತು ನೋವೇ ಲೋಹಿಯಾರ ರಾಜಕೀಯ ಜೀವನದುದ್ದಕ್ಕೂ ಬಾಧಿಸಿತೆಂಬುದು, ಅವರ ಪ್ರಖರ ಸಮಾಜವಾದಿ ಚಿಂತನೆಯ ಜೊತೆ ಜೊತೆಗೇ ವ್ಯಕ್ತವಾಗುತ್ತಾ; ಆದರೆ, ಅದರ ಶುಚಿ - ರುಚಿಗಳನ್ನೇ ಕೆಡಿಸುತ್ತಾ ಮತ್ತು ಆ ಮೂಲಕ ಜನಸಾಮಾನ್ಯರ ವಿಶ್ವಾಸಾರ್ಹತೆಗೆ ಎರವಾಗುತ್ತಾ ಬಂದ ಕಟುವಾದ - ಒಮ್ಮೊಮ್ಮೆ ಒರಟೊರಟೂ ಆದ - ನೆಹರೂ ವಿರೋಧಿ ಧೋರಣೆಯ ಪ್ರತಿ ವಿವರದಲ್ಲೂ ಕಂಡುಬರುತ್ತದೆ. ಹೀಗಾಗಿ ಲೋಹಿಯಾರ ಕಾಂಗ್ರೆಸ್ ದ್ವೇಷ, ಅವರ ಕಾಂಗ್ರೆಸ್ ಪ್ರೇಮದ ಇನ್ನೊಂದು - ಸುಪ್ತ - ಮುಖವಾಗಿಯೇ ನನಗೆ ಕಾಣುತ್ತದೆ. ಅವರು ಕಾಂಗ್ರೆಸ್ ಬಿಡುವಾಗ, 'ಇದು ನಾವೂ ಕೈಹಾಕಿ ಕಟ್ಟಿದ ಮನೆ. ಇದರಲ್ಲಿ ನಮ್ಮ ಪಾಲೂ ಇದೆ. ಆದರೆ ನಾವಿಂದು ಒಂದು ಅನಿವಾರ್ಯ ರಾಜಕೀಯ ಸನ್ನಿವೇಶದಲ್ಲಿ ನಮ್ಮ ಪಾಲನ್ನು ಬಿಟ್ಟುಕೊಟ್ಟು ಹೋಗುತ್ತಿದ್ದೇವೆ' ಎಂದು ವಿಷಾದದಿಂದ ವಿದಾಯ ಹೇಳಿದ್ದರು.
ತಮ್ಮ ಮೂಲ ಮನೆಯಲ್ಲಿ ಜಗಳಾಡಿಕೊಂಡು ಬಂದ ಅತಿಯಾದ ಆತ್ಮವಿಶ್ವಾಸದ ಈ ಮಕ್ಕಳು ನಂತರವೂ ತಮ್ಮ ಜಗಳಗಳನ್ನು ನಿಲ್ಲಿಸದೇ ಹೋದ ಕಾರಣದಿಂದಾಗಿ, ತಮ್ಮದೇ ಆದ ಮನೆಯೊಂದನ್ನು ಸರಿಯಾಗಿ ಕಟ್ಟಿಕೊಳ್ಳಲಾಗದೇ ಹೋದವು ಎಂಬುದು ಇತಿಹಾಸದ ವಾಸ್ತವದ ಸಂಗತಿ. ಈ ವೈಫಲ್ಯದ ಹಿನ್ನೆಲೆಯಲ್ಲಿ, ಮೂಲ ಮನೆ ಕಳೆದುಕೊಂಡ ವಿಷಾದವು ಸಿಟ್ಟಿನ ರೂಪ ತಾಳಿ ಲೋಹಿಯಾರನ್ನು 'ಕಾಂಗ್ರೆಸ್ಸೇತರವಾದ' ಎಂಬ ರಾಜಕೀಯ ಶಾಪದ ಕಲ್ಪನೆಗೆ ಪ್ರೇರೇಪಿಸಿದ್ದರೆ; ಹೆಸರಿಗಾಗಿಯಾದರೂ ಇದ್ದ ತಮ್ಮ ಹೊಸ ಮನೆಯನ್ನೂ ಕಳೆದುಕೊಂಡ ನೋವು, ಮಧು ಲಿಮೆಯೆ ಅವರನ್ನು ಮತ್ತೆ ತಮ್ಮ ಹಿರಿಯರ ಮೂಲ ಮನೆ ಎನಿಸಿದ ಕಾಂಗ್ರೆಸ್ನತ್ತ ನೋಡುವಂತೆ ಮಾಡಿದೆ! ಹಾಗೇ ಅದರ ಪುನರುದ್ಧಾರದ ಅಗತ್ಯ ಮತ್ತು ಕಾರ್ಯಕ್ರಮಕ್ಕೆ ಪ್ರೇರೇಪಿಸಿದೆ... ಈ ಹಿನ್ನೆಲೆಯಲ್ಲಿ, ಸಮಾಜವಾದಿಗಳ ಕಾಂಗ್ರೆಸ್ಸೀಕರಣವನ್ನು, ಸಮಾಜವಾದಿ ಚಳುವಳಿ ಒಂದು ಸುತ್ತು ಪೂರ್ಣಗೊಳಿಸಿದ್ದರ ಸೂಚನೆಯನ್ನಾಗಿಯೂ ನೋಡಬಹುದಾಗಿದೆಯಲ್ಲವೇ? ಆದರೆ ಈ ಒಂದು ಸುತ್ತನ್ನು ಪೂರ್ಣಗೊಳಿಸುವಲ್ಲಿ ಅವರು ಸಮಾಜವಾದದ ವಿಶ್ವಾಸಾರ್ಹತೆಗೆ ಮಾಡಿರುವ ಆಘಾತವೇನೂ ಕ್ಷಮಾರ್ಹವಾಗುವುದಿಲ್ಲ ಎಂಬುದೂ ನಿಜ.
ಅದೇನೇ ಇರಲಿ, ಇದೆಲ್ಲವೂ - ಸಮಾಜವಾದಿಗಳ ಈ ಕಾಂಗ್ರೆಸ್ಸೀಕರಣ - ಸಮಾಜವಾದಿ ಚಳುವಳಿಯ ಅಂತ್ಯವನ್ನು ಸೂಚಿಸುತ್ತಿದೆಯೆ? ಚಳುವಳಿಯ ಅಂತ್ಯವಲ್ಲದಿದ್ದರೂ, ಕಾಂಗ್ರೆಸ್ ಮುಖಾಮುಖಿಯಲ್ಲಿ ಮೂಡಿದ ಅದರ ಸಾಂಸ್ಥಿಕ ಹಾಗೂ ತಾತ್ವಿಕ ಗೊಂದಲ - ವಿರೋಧಾಭಾಸಗಳ ಘಟ್ಟದ ಅಂತ್ಯವಂತೂ ಹೌದು. ಇದು ತನ್ನ ಮುಂದಿನ ಆರೋಗ್ಯಕರ ಬೆಳವಣಿಗೆಯ ರೂಪದಲ್ಲಿ, ಕಾಂಗ್ರೆಸ್ಸನ್ನೇ ಒಂದು ಮುಖ್ಯ ವಾಹಿನಿಯ ಸಮಾಜವಾದಿ ರಾಜಕೀಯದ ದೀವಟಿಗೆಯನ್ನಾಗಿ ಮಾಡುವ ಹೊಸ ಘಟ್ಟದ ಆರಂಭವಾಗಿಯೂ ಕಾಣಿಸಿಕೊಳ್ಳಬಹುದಾದ ಸಾಧ್ಯತೆಯೇ ಇಂದಿನ ರಾಜಕಾರಣದ ಭರವಸೆಯ ಬೆಳಕೂ ಆಗಿದೆ. ಈ ಮಾತು, ಸಮಾಜವಾದವೆಂದರೆ ಒಂದು ಸ್ಥಿರವಾದ ವಿಚಾರ (fixed idea) ಎಂದುಕೊಂಡಿರುವವರಿಗೆ ತಮಾಷೆಯಾಗಿಯೂ ಕಾಣಬಹುದು. ಇಂತಹ ಜಡವಾದಿಗಳೇ ಸಮಾಜವಾದ ವಿಫಲವಾಗಿದೆ ಎಂದು ಹೇಳಿಕೊಂಡು ತಿರುಗುತ್ತಿರುವವರು ಕೂಡಾ. ಆದರೆ, ಸಮಾಜವಾದಿ ಚಳುವಳಿ ಕಳೆದ ಐವ್ವತ್ತು ವರ್ಷಗಳಲ್ಲಿ ತನ್ನ ವಿವಿಧ ರೂಪಗಳಲ್ಲಿ ಹಾಗೂ ತನ್ನ ಅನೇಕ ಏಳು ಬೀಳುಗಳ ನಡುವೆಯೂ, ಈ ದೇಶದಲ್ಲಿ ಉಂಟು ಮಾಡಿದ ರಾಜಕೀಯ ವಾತಾವರಣದಿಂದಾಗಿ ವಂಚಿತ ಸಮುದಾಯಗಳ ಕನಿಷ್ಠ ಎರಡು ತಲೆಮಾರುಗಳು ಹಲವು ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳ ಲಾಭ ಪಡೆದು ರಾಷ್ಟ್ರದ ಹೆಚ್ಚಿದ ಸಾಮಾಜಿಕ ಘನತೆಗೆ ಕಾರಣವಾಗಿದೆ ಹಾಗೂ ಒಂದು ಮಟ್ಟದ ಕ್ರಾಂತಿಕಾರಿ ಸಾಮಾಜಿಕ ಹಾಗೂ ರಾಜಕೀಯ ಪುನಾರಚನೆಗೆ ಪ್ರೇರಣೆ ಒದಗಿಸಿದೆ ಎಂಬ ವಾಸ್ತವವನ್ನು ನಾವು ಮರೆಯಬಾರದು.
ಹೀಗೆ ಲಾಭ ಪಡೆದ ತಲೆಮಾರುಗಳ ಕುಟುಂಬಗಳು ಆ ಲಾಭದ ಸಂಭ್ರಮದಲ್ಲಿ ಮೈಮರೆತು, ಈ ಸಂಸ್ಕೃತಿಯ ವಾರಸುದಾರಿಕೆಯನ್ನು ಸರಿಯಾಗಿ ನಿರ್ವಹಿಸದೇ ಹೋದದ್ದೇ ಸಮಾಜವಾದದ ವಿರೋಧಿಗಳಿಗೆ ಒಂದು ವರವಾಗಿ ಪರಿಣಮಿಸಿ, ಸಮಾಜವಾದಿ ಚಳುವಳಿಯ ಬಿಕ್ಕಟ್ಟಿಗೆ ಕಾರಣವಾಯಿತು ಎಂದು ನಾನು ಭಾವಿಸಿದ್ದೇನೆ. ಅಂದರೆ ಸಮಾಜವಾದ ತನ್ನದೇ ಆದ ಒಂದು ಸುಸ್ಥಿರವಾದ ಶೀಲ ಹಾಗೂ ದೀರ್ಘಕಾಲಿಕವಾದ ಒಂದು ದರ್ಶನವನ್ನು ಸಾಮಾನ್ಯ ಜನತೆಯ ನಡುವೆ ಕಟ್ಟಿಕೊಡುವಲ್ಲಿ ವಿಫಲವಾಗಿತ್ತು ಎಂದೇ ಇದರ ಅರ್ಥ. ಇದು ಈಗಲೂ ಸಾಧ್ಯವಾಗುವುದಾದರೆ, ಸಮಾಜವಾದಿ ಚಳುವಳಿ ಹೊಸ ರೂಪ ಪಡೆದು ಮತ್ತೆ ಚಿಗುರುವುದರಲ್ಲಿ ಸಂದೇಹವಿಲ್ಲ. ಏಕೆಂದರೆ, ಅದು ಸಮಾನತೆಯ ಕಡೆಗಿನ ಮನುಷ್ಯನ ಸಹಜ ಮತ್ತು ಅದಮ್ಯ ತುಡಿತದ ಪ್ರತೀಕವಾಗಿದ್ದು, ಸಮಾಜವಾದ ಪ್ರತಿಪಾದಿಸುವ ಸಮಾನ ಅವಕಾಶ ಹಾಗೂ ಸಮಾನ ಉತ್ಪಾದನಾ ಸಂಸ್ಕೃತಿಯ ಮೂಲಕ ಗರಿಷ್ಠ ಸಾಧ್ಯ ಸಮಾನತೆಯನ್ನು ಸಾಧಿಸುವವರೆಗೆ, ಅದು ಅಂತ್ಯ ಕಾಣಲು ಸಾಧ್ಯವಿಲ್ಲ... ಹಾಗಾಗಿಯೇ ಸಮಾಜವಾದದ ಅಂತ್ಯ ಹಾಡಲು ಹೊರಟ ಜಾಗತೀಕರಣದ ವಿರುದ್ಧ ನಮ್ಮ ದೇಶವೂ ಸೇರಿದಂತೆ ಜಗತ್ತಿನಾದ್ಯಂತ ಜನ ತಮ್ಮ ನೀರು, ನೆಲ, ಗಾಳಿಗಳನ್ನು ರಕ್ಷಿಸಿಕೊಳ್ಳುವ ಹೋರಾಟದ ರೂಪಗಳಲ್ಲಿ ಕ್ರಮೇಣ ಬಂಡಾಯವೇಳತೊಡಗಿದ್ದಾರೆ. ಇದು ಸಮಾಜವಾದಿ ಆದರ್ಶಗಳನ್ನು ಹಾಳು ಮಾಡುತ್ತಿರುವ ರಾಜಕೀಯ ಶಕ್ತಿಗಳ ವಿರುದ್ಧ ನಡೆದಿರುವ ಹೋರಾಟವೇ ಆಗಿದೆ.
ಇದರಿಂದಾಗಿ ಹಲವು ದೇಶಗಳಲ್ಲಿ ಒಂದೊಂದಾಗಿ ಮತ್ತೆ ಸಮಾಜವಾದಿ ಸರ್ಕಾರಗಳು ಸ್ಥಾಪಿತವಾಗತೊಡಗಿವೆ. ಇತ್ತೀಚಿಗೆ ತಾನೇ, ಸ್ಪೇನ್ನಲ್ಲಿ ಸಮಾಜವಾದಿಗಳು ಮತ್ತೆ ಅಧಿಕಾರ ಹಿಡಿದಿದ್ದಾರೆ. ನಮ್ಮ ದೇಶದಲ್ಲಿ ಜಾಗತೀಕರಣವನ್ನು ಪ್ರೋತ್ಸಾಹಿಸಿದ ಕಾಂಗ್ರೆಸ್ಸೇ ಈಗ ಅದರ ಆರ್ಥಿಕ ಹಾಗೂ ರಾಜಕೀಯ ಅನಾಹುತಗಳಿಂದ ಗಾಬರಿಗೊಂಡಂತೆ, ತನ್ನ ಆರ್ಥಿಕ ಉದಾರೀಕರಣದ ವಿಷಯದಲ್ಲಿ ಸಂಯಮ ತೋರುತ್ತಾ, ಆವೃತ ಬೆಳವಣಿಗೆಯ ಮಾತನಾಡತೊಡಗಿದೆ.! ಇಂತಹ ನಿರ್ಣಾಯಕ ನೀತಿ ಸ್ಥಿತ್ಯಂತರದ ಸಂದರ್ಭದಲ್ಲಿ, ಕಾಂಗ್ರೆಸ್ ಒಳ ಹೊಕ್ಕಿರುವ ಸಮಾಜವಾದಿಗಳು, ಅವರಲ್ಲಿ ಇನ್ನೂ ತಮ್ಮ ಸಮಾಜವಾದಿತ್ವದ ಬಗ್ಗೆ ಕಿಂಚಿತ್ತಾದರೂ ಹೆಮ್ಮೆ ಉಳಿದಿದ್ದಲ್ಲ್ಲಿ, ಇಂದಿನ ಸಂದರ್ಭಕ್ಕೆ ತಕ್ಕ ಸಮಾಜವಾದಿ ನೀತಿಗಳನ್ನು ಕಾಂಗ್ರೆಸ್ ಅಳವಡಿಸಿಕೊಳ್ಳುವಂತಹ ತೀವ್ರತರ ರಾಜಕಾರಣ ಮಾಡಬೇಕಾಗಿದೆ. ಇಂತಹ ಕೆಲಸವನ್ನೇ ಆಗ ಲೋಹಿಯಾ ಕಾಂಗ್ರೆಸ್ಸಿನಲ್ಲೇ ಉಳಿದು ಮಾಡಬೇಕೆಂದು ಬಯಸಿದ್ದು. ಅದನ್ನು ಅವರ ಶಿಷ್ಯರೆನಿಸಿಕೊಂಡವರು ಈಗಲಾದರೂ ಮಾಡಲು ಪ್ರಯತ್ನಿಸುವುದಾದರೆ, ಅದು ಅವರೆಲ್ಲರ ಈವೆರೆಗಿನ ರಾಜಕೀಯ ಅಡ್ಡದಾರಿಗಳನ್ನೂ ಕ್ಷಮಾರ್ಹಗೊಳಿಸಿ, ಲೋಹಿಯಾ ಅವರಿಗೆ ಈಗ ಅವರ 98ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ (ಮಾರ್ಚ್, 23) ಸಲ್ಲಿಸಬಹುದಾದ ಅತ್ಯಮೂಲ್ಯ ಶ್ರದ್ಧಾಂಜಲಿಯೂ ಆಗಬಲ್ಲುದು.
ಅಂದ ಹಾಗೆ: ಕೆಲವು ಸಮಾಜವಾದಿಗಳಿಗೆ ವಿರೋಧ ರಾಜಕಾರಣ ಮಾಡುವುದು ಇನ್ನೂ ಒಂದು ವ್ಯಸನವಾಗಿಯೇ ಉಳಿದುಬಿಟ್ಟಿದೆ. ಅವರಿಗೀಗ ಬಿಜೆಪಿಯನ್ನು ಸೋಲಿಸುವುದೇ ಒಂದು ಸಮಾಜವಾದಿ ಕಾರ್ಯಕ್ರಮವಾಗಿಬಿಟ್ಟಿದೆ! ತಮ್ಮ ರಾಜಕೀಯ ಜೀವನ ಪೂರ್ತಾ ಇಂತಹ ವಿರೋಧ ರಾಜಕಾರಣ ಮಾಡುತ್ತ ಬಂದಿದ್ದರಿಂದಲೇ ಬಿಜೆಪಿ ಬೆಳೆಯುವಂತಾದದ್ದು ಎಂಬುದರ ಅರಿವೇ ಇಲ್ಲದಂತೆ ವರ್ತಿಸುತ್ತಿರುವ ಇವರಿಗೆ, ಈಗಲಾದರೂ ಬಿಜೆಪಿಯ ರಾಜಕೀಯಕ್ಕೆ ಪರ್ಯಾಯವಾದ ಒಂದು ರಚನಾತ್ಮಕ ಕಾರ್ಯಕ್ರಮವನ್ನು ಮುಂದಿಟ್ಟರೆ ಮಾತ್ರ ಜನ ತಮ್ಮ ಮಾತು ಕೇಳುವರು ಎಂಬ ಪ್ರಜ್ಞೆ ಬಂದಂತಿಲ್ಲ... ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದುಬಿಟ್ಟರೆ ಮತ್ತೆ ಅವರನ್ನು ಅಧಿಕಾರದಿಂದ ಇಳಿಸುವುದು ಕಷ್ಟವೆಂದು ತಮ್ಮ ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವ ಇವರು, ಆ ಮೂಲಕ ತಾವು ರಾಜಕೀಯವಾಗಿ ದಿವಾಳಿಯಾಗಿ ಹೋಗಿರುವುದನ್ನೂ ಸೂಚಿಸುತ್ತಿರುವಂತಿದೆ!