ಸಮಾಜವಾದಿ ಆಂದೋಲನದ ಪುನರುಜ್ಜೀವನ ಏಕೆ ಮತ್ತು ಹೇಗೆ

ಸಮಾಜವಾದಿ ಆಂದೋಲನದ ಪುನರುಜ್ಜೀವನ ಏಕೆ ಮತ್ತು ಹೇಗೆ

ಬರಹ

ಸಮಾಜವಾದಿ ಆಂದೋಲನದ ಪುನರುಜ್ಜೀವನ ಏಕೆ ಮತ್ತು ಹೇಗೆ

ಭೂಮಿ ಬಿಟ್ಟು ಮೇಲೇರಿದ್ದೆಲ್ಲ ಮತ್ತೆ ಭೂಮಿಯ ವಾಸ್ತವಕ್ಕೆ ಇಳಿದು ಬರಲೇಬೇಕು! ಮುಕ್ತ ಮಾರುಕಟ್ಟೆಯ ಹೆಸರಿನಲ್ಲಿ ಎಲ್ಲರ ಅಗತ್ಯಗಳನ್ನು ನಿರ್ಲಕ್ಷಿಸಿ ಕೆಲವರ ಚಪಲಗಳನ್ನು ಪೂರೈಸುವ ಅಡ್ಡದಾರಿ ಹಿಡಿದ ವಿಶ್ವ ಆರ್ಥಿಕತೆ ತನ್ನ ವಾಸ್ತವ ಪ್ರಜ್ಞೆಯನ್ನು ಮರಳಿ ಪಡೆದುಕೊಳ್ಳುವಂತಹ ಆಘಾತವನ್ನು ಈಗ ಅನುಭವಿಸಿರುವುದು ಒಳ್ಳೆಯದಕ್ಕೇ ಎಂದು ನಾವು ಭಾವಿಸಬೇಕು. ಇಂದು ಅಮೆರಿಕಾ ನುಚ್ಚು ನೂರಾಗಿರುವ ತನ್ನ ಆರ್ಥಿಕತೆಯನ್ನು ಪುನಾರಚಿಸಿಕೊಳ್ಳಲು 700 ದಶಲಕ್ಷ ಡಾಲರ್ ಸರ್ಕಾರಿ ಹಣವನ್ನು ಸಾರ್ವಜನಿಕ ಹೂಡಿಕೆಗೆ ಬಿಡುಗಡೆ ಮಾಡುವ ಪ್ರಯತ್ನದಲ್ಲಿದೆ. 250 ದಶಲಕ್ಷ ಡಾಲರ್ಗಳನ್ನು ತನ್ನ ಕುಸಿದಿರುವ ಬ್ಯಾಂಕುಗಳ ಪುನಶ್ಚೇತನಕ್ಕಾಗಿ ನೀಡಲು ನಿರ್ಧರಿಸಿದೆ. ಬ್ರಿಟನ್ ಎಲ್ಲರಿಗಿಂತ ಮುಂಚೆಯೇ ತನ್ನ ಬ್ಯಾಂಕುಗಳ ಸುರಕ್ಷತೆಗಾಗಿ ನಗದು ಪೂರೈಕೆಯ ದೊಡ್ಡ ಯೋಜನೆಯನ್ನೇ ಪ್ರಕಟಿಸಿದೆ. ರಷ್ಯಾ ತನ್ನ ದೇಶದ ಬ್ಯಾಂಕುಗಳ ಠೇವಣಿದಾರರಿಗೆ ವಿಮಾ ಸೌಲಭ್ಯ ಒದಗಿಸಲು ಮುಂದೆ ಬಂದಿದೆ. ಐರೋಪ್ಯ ರಾಷ್ಟ್ರಗಳಂತೂ ತಮ್ಮ ದೇಶದ ಬ್ಯಾಂಕುಗಳಿಗೆ ಠೇವಣಿ ಸೆಳೆಯಲು ವೈವಿಧ್ಯಮಯ ಉಡುಗೊರೆಗಳ ಆಕರ್ಷಣೆ ಒಡ್ಡಿವೆ! ಅಂತೂ ಈಗ ಜಗತ್ತಿನಾದ್ಯಂತ ಸರ್ಕಾರಗಳು ಮುಕ್ತ ಮಾರುಕಟ್ಟೆಯ ಅನಾಹುತಗಳಿಗೆ ಎಚ್ಚೆತ್ತುಕೊಂಡು, ದೇಶದ ಆರ್ಥಿಕತೆಯಲ್ಲಿ ಸರ್ಕಾರದ ಹಸ್ತಕ್ಷೇಪ ಮತ್ತು ನಿಯಂತ್ರಣಗಳ ಅಗತ್ಯಗಳನ್ನು ಮನಗಂಡಿವೆ. ಸಮಾಜವಾದದ ಕಾಲ ಮುಗಿಯಿತೆಂದು ಅವಸರದಲ್ಲಿ ಅಂದವರೀಗ ನಾಲಿಗೆ ಕಚ್ಚಿಕೊಳ್ಳತೊಡಗಿದ್ದಾರೆ!

('ಮುಕ್ತ ಮಾರುಕಟ್ಟೆ ಎಂಬ ಮಹಾಮೋಸ' ಎಂಬ ಇದೇ ಲೇಖಕರ ಲೇಖನದಿಂದ)

ಜಾಗತೀಕರಣದ ಈ ದಿನಗಳಲ್ಲಿ ಸಮಾಜವಾದದ ಬಗ್ಗೆ ಮಾತಾಡುವುದೇ ಕೆಲವರಿಗೆ ತಮಾಷೆಯಾಗಿ ಕಾಣುವುದು. ಏಕೆಂದರೆ ಸಮಾಜವಾದದ ಸಾವಿನಲ್ಲೇ ಜಾಗತೀಕರಣ ಚಿಗುರೊಡೆದಿರುವುದು ಎಂದು ಇವರು ನಂಬಿದ್ದಾರೆ. ಅರ್ಥಾತ್, ಕಳೆದ ಶತಮಾನದ ಮಹಾ ರಾಜಕೀಯ ಪ್ರಯೋಗವಾದ ಸಮಾಜವಾದ, ಈಗ ತನ್ನೆಲ್ಲ ವಿಶ್ವಾಸಾರ್ಹತೆ ಕಳೆದುಕೊಂಡು ಜಾಗತೀಕರಣಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದು ಇವರ ವಾದ. ಇವರ ಪ್ರಕಾರ ಜಾಗತೀಕರಣವೆಂಬುದು ಮತ್ತೇನೂ ಆಗಿರದೆ, ಯಾವ ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆಯ ಮೂಲಗಳನ್ನು ಗುರುತಿಸಿ ಅದಕ್ಕೆ ಪರಿಹಾರ ರೂಪವಾಗಿ ಮೂಡಿನಿಂತಿತೋ, ಆ ಸಮಾಜವಾದದ ವಿರುದ್ಧ ಬಂಡವಾಳಶಾಹಿಯೂ ಸಾಧಿಸಿರುವ ಆತ್ಯಂತಿಕ ವಿಜಯವೇ ಆಗಿದೆ. ಇದು ಒಂದು ರೀತಿಯಲ್ಲಿ ನಿಜವೂ ಹೌದು. ಏಕೆಂದರೆ ಕಳೆದ ಶತಮಾನದ ಮಧ್ಯೆ ಭಾಗದಲ್ಲಿ ಹೊಸ ನೈತಿಕತೆಯ ಮಾತ್ರವಲ್ಲ, ಹೊಸ ಮಾನವತೆಯ ಪ್ರತೀಕವಾಗಿ ಜಗತ್ತಿನ ಎಲ್ಲ ಭಾಗಗಳ ಚಿಂತಕರ ರಾಜಕೀಯ ಆಕರ್ಷಣೆಯಾಗಿದ್ದ ಸಮಾಜವಾದ; ಆ ಶತಮಾನದ ಕೊನೆಯ ಹೊತ್ತಿಗೆ ಚಲಾವಣೆ ಕಳೆದುಕೊಂಡ ನಾಣ್ಯದಂತೆ ಇತಿಹಾಸದ ಜೇಬು ಸೇರುವ ಸ್ಥಿತಿ ತಲುಪಿದ್ದನ್ನು ಕಣ್ಣಾರೆ ಕಂಡವರು, ಇನ್ನೇನು ಭಾವಿಸಿಯಾರು?

ಆದರೆ ಈ ಸತ್ಯಕ್ಕೆ ಇನ್ನೊಂದು ಮುಖವೂ ಇದೆ. ಜಗತ್ತಿನ ಇತಿಹಾಸದುದ್ದಕ್ಕೂ ಅನೇಕ ರೀತಿಯ ಐತಿಹಾಸಿಕ ಕಾರಣಗಳಿಂದಾಗಿ ಪ್ರಬಲರಾದವರ ಮತ್ತು ದುರ್ಬಲರಾದವರ ನಡುವೆ ಘರ್ಷಣೆ ನಡೆದೇ ಇದೆ. ಈ ನಿರಂತರ ಘರ್ಷಣೆಯ ಒಂದು ಭಾಗವಾಗಿ ಕಳೆದ ಶತಮಾನದ ರಾಜಕೀಯ ಇತಿಹಾಸ ನೋಡಿದಾಗ, ಯಾರಾದರೂ ಅಂತಿಮವಾಗಿ ಗೆದ್ದಿದ್ದಾರೆ ಎಂದು ಹೇಳುವುದು ಇತಿಹಾಸದ ದೃಷ್ಟಿ ಯಿಂದ ಕಷ್ಟವಾಗುತ್ತದೆ. ಏಕೆಂದರೆ ಕಳೆದ ಶತಮಾನದ ಯಾವ ಸಮಾಜವಾದೀ ಚಿಂತನೆಯ ಒಂದು ಭಾಗವಾಗಿ ಮಾರ್‍ಕ್ಸ ವಾದ ಮೂಡಿಬಂತೋ ಆ ಮಾರ್ಕ್ಸ್ವಾದ, ಈ ನಿರಂತರ ಘರ್ಷಣೆಗೆ ಕಾರಣವಾದ ಐತಿಹಾಸಿಕ ಶಕ್ತಿಗಳ ಮರ್ಮವನ್ನು ತಾನು ಅರಿತಿ ದ್ದೇನೆಂದು ಘೋಷಿಸಿಕೊಂಡು; ಅದರ ಶಾಶ್ವತ ನಿವಾರಣೆಯ 'ವೈಜ್ಞಾನಿಕ' ಮದ್ದನ್ನೂ 'ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ' ರೂಪದಲ್ಲಿ ಪ್ರಚಾರಮಾಡಿ ಹುಟ್ಟಿಸಿದ ನಂಬಿಕೆಯ ಹಿನ್ನೆಲೆಯಲ್ಲಿ ಮಾತ್ರ, ಇವೊತ್ತಿನ ಸೋಲು - ಗೆಲುವುಗಳ ಮಾತುಗಳು ಅರ್ಥ ಪಡೆಯುತ್ತವೆ. ಸಮಾಜವಾದವನ್ನು ಅಥವಾ ಮಾಕ್ಸ್ರ್ಸವಾದವನ್ನು ಜಗತ್ತಿನ ಇತಿಹಾಸದುದ್ದಕ್ಕೂ ಪಟ್ಟಭದ್ರರ ಹಾಗೂ ವಂಚಿತರ ನಡುವೆ ಪದೇ ಪದೇ ನಡೆಯುತ್ತ ಬಂದಿರುವ ಘರ್ಷಣೆಯ ಇತ್ತೀಚಿನ ರಾಜಕೀಯ ಚಿಂತನಾ ರೂಪಗಳಷ್ಟೇ ಎಂದು ನೋಡಿದಾಗ, ಸೋತಿರುವುದು ಈ ರಾಜಕೀಯ ರೂಪಗಳೇ ಹೊರತು, ಸಮಾಜವಾದ ಪ್ರತಿನಿಧಿಸುವ ಮನುಷ್ಯನ ಸಮಾನತೆಯ ಆಶಯವಲ್ಲ್ಲ ಎಂಬುದು ಸ್ಪಷ್ಟವಾಗುತ್ತದೆ. ಜಾಗತೀಕರಣ ಎಂದರೆ - ಹಳೆಯ ಮಾರ್‌ಕ್ಸ್ವಾದಿಗಳೂ ತಮ್ಮ ಸಿದ್ಧಾಂತದ (ಕುರುಡು)ನಂಬಿಕೆಯ ಆಧಾರದ ಮೇಲೆ ಹೇಳುತ್ತಿದ್ದಂತೆ - 'ಇತಿಹಾಸದ ಅಂತ್ಯ' ಎಂದು ಇಂದಿನ ಜಾಗತೀಕರಣವಾದಿಗಳೂ ಹೇಳುತ್ತಿದ್ದಾರೆ. ಅವರಿಗೆ ಇತಿಹಾಸ ನಿರ್ಮಾಣವಾಗುವುದು ಮನುಷ್ಯನ ಅದಮ್ಯ ಚೇತನ ಶಕ್ತಿಯಿಂದಲೇ ಹೊರತು, ಮಾರುಕಟ್ಟೆಯ ಜಡ ಶಕ್ತಿಗಳಿಂದಲ್ಲ ಎಂಬ ಆಧ್ಯಾತ್ಮಿಕ ಸತ್ಯದ ಅರಿವಿಲ್ಲದಿರುವುದೇ ಕಾರಣವಾಗಿದೆ. ಮಾರುಕಟ್ಟೆಗೆ ಅಥವಾ ಅದು ಸೃಷ್ಟಿಸುವ ಭೌತಿಕ ದಾಹಕ್ಕೆ ಒಂದು ಮಿತಿಯಿದೆ - ಒಂದು ಸ್ಥಗಿತತೆಯ, ಒಂದು ಕೊಳೆಯುವಿಕೆಯ ಬಿಂದು ಇದೆ. ಆ ಸ್ಥಿತಿ ಮುಟ್ಟಿದೊಡನೆ ಮನುಷ್ಯ ಚೇತನ, ಮಾರುಕಟ್ಟೆ ಶಕ್ತಿಗಳು ಹೊಟ್ಟೆಯಿಂದಲೇ ಒಡೆದೆದ್ದು ನಿಲ್ಲುತ್ತದೆ.

ಈ ಒಡೆದೆದ್ದು ನಿಲ್ಲುವುದು ಎಂಬುದು ಭವಿಷ್ಯದ ಮಾತಲ್ಲ. ಇಂದೇ ಅದು ಒಡೆದೆದ್ದು ಬರುತ್ತಿದೆ... ಮಾರುಕಟ್ಟೆಯ ಗಜಿಬಿಜಿ ಗಲಾಟೆಯಲ್ಲಿ ಅದರ ಬಿರಿಯುವಿಕೆಯ ಸದ್ದು ಕೇಳಿಸುತ್ತಿಲ್ಲವಷ್ಟೇ! ಬಂಡವಾಳಶಾಹಿ ಆರ್ಥಿಕತೆಯ ನಿಜ ಬಣ್ಣ ಬಯಲಾಗುತ್ತಿರುವ ಜಾಗತಿಕ ಮಹಾ ಹಿಂಜರಿತದ ಈ ದಿನಗಳಲ್ಲಂತೂ ಸಮಾಜವಾದಿ ಆರ್ಥಿತಕೆಯಲ್ಲದೆ, ಸಮಾಜವಾದಿ ರಾಜಕಾರಣದ ಬಗೆಗೂ ಮರುಚಿಂತನೆ ಮಾಡುವ ಕಾಲ ಬಂದಿದೆ ಎಂದು ಪಶ್ಚಿಮದ (ಉದಾ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರರಾದ ಜೋಸೆಫ್ ಸ್ಟಿಗ್ಲಿಟ್ಜ್ ಮತ್ತು ಪಾಲ್ ಕ್ರುಗ್ಮನ್) ಅರ್ಥಶಾಸ್ತ್ರಜ್ಞರು ಹೇಳತೊಡಗಿದ್ದಾರೆ! 'ಒಂದೇ ಜಗತ್ತು' ಎನ್ನುವ ಜಾಗತೀಕರಣದ ವಿರುದ್ಧ ಹಳೆಯ ಸಮಾಜವಾದಿಗಳ, ಮಾರ್‌ಕ್ಸ್‌ವಾದಿಗಳ ಹುಯ್ಲು ಒಂದು ಕಡೆ ಇದ್ದರೆ, 'ಇನ್ನೊಂದು ಜಗತ್ತು ಸಾಧ್ಯ' ಎಂಬ ಪರ್ಯಾಯ ಕಲ್ಪನೆಯೊಂದನ್ನು ಮಂಡಿಸುತ್ತಿರುವ ಹೊಸ ಮುಖದ ಚಿಂತಕರ ಘೋಷಣೆ ಇನ್ನೊಂದೆಡೆ ಗಂಭೀರ ಚರ್ಚೆಗೆ ಒಳಗಾಗಿದೆ. ಸಮಾಜವಾದ ತನ್ನ ಆರಂಭಿಕ ದಿನಗಳಲ್ಲಿ ಬಡ - ಶ್ರೀಮಂತ ದೇಶಗಳೆಂಬ ಭೇದ ಭಾವಗಳಿಲ್ಲದೆ ಹೇಗೆ ಎಲ್ಲ ಜನರ ಗಮನ - ಆಸಕ್ತಿಗಳನ್ನು ಸೆಳೆದಿತ್ತೋ (ಐವತ್ತು - ಅರವತ್ತರ ದಶಕದಲ್ಲಿ ಅಮೇರಿಕಾದಲ್ಲೂ ಒಂದು ಸಮಾಜವಾದಿ ಪಕ್ಷ ಕ್ರಿಯಾಶೀಲವಾಗಿತ್ತು!) ಈ 'ಇನ್ನೊಂದು ಜಗತ್ತು ಸಾಧ್ಯ' ರೂಪದ ಹೊಸ ಸಮಾಜವಾದ ಜಗತ್ತಿನ ಎಲ್ಲ ದೇಶಗಳ - ಜಿ8 ದೇಶಗಳೂ ಸೇರಿದಂತೆ - ಗಮನ - ಆಸಕ್ತಿ ಸೆಳೆದಿದೆ. ಇದು ಕಳೆದ ಶತಮಾನದ ಸಮಾಜವಾದವೂ ಸೇರಿದಂತೆ ಎಲ್ಲ ಎಡ ಪಂಥೀಯ ರಾಜಕೀಯ ಪ್ರಯೋಗಗಳ ಅನುಭವ - ಪಾಠಗಳ ಆಧಾರದ ಮೇಲೆ ತನ್ನ ತಾತ್ವಿಕತೆಯನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದೆ. ನಾನು ಇದನ್ನು ಪ್ರಸ್ತಾಪಿಸುತ್ತಿರುವುದು, ಇದೇ ಹೊಸ ಶತಮಾನದ ಸಮಾಜವಾದ ಎಂದು ಸೂಚಿಸಲಿಲ್ಲ. ಜಾಗತೀಕರಣವೆಂಬುದು ಇತಿಹಾಸದ ಅಂತಿಮ ಘಟ್ಟವಲ್ಲ. ಇತಿಹಾಸದ ಶಕ್ತಿಗಳು ಇನ್ನೂ ಜೀವಂತವಿದ್ದು, ಹೊಸ (ರಾಜಕೀಯ) ಸತ್ಯದ ಅನ್ವೇಷಣೆಯಲ್ಲಿ ತೊಡಗಿದೆ ಎಂದು ಸೂಚಿಸಲು. ಇದು ನಾವು ನಂಬಿದ್ದ ಸಮಾಜವಾದ ಸೋತಿದೆಯೋ ಎಂದು ಕೇಳಿಕೊಂಡು, ಸೂಕ್ತ ಉತ್ತರ ಕಂಡುಕೊಳ್ಳಲು ಆತ್ಮವಿಶ್ವಾಸವನ್ನು ಒದಗಿಸುತ್ತದೆ.

ಜಗತ್ತಿನ ಮಾತು ಒತ್ತಟ್ಟಿಗಿರಲಿ, ಭಾರತದಲ್ಲಿ ಸಮಾಜವಾದ ಸೋತಿದೆ ಎನ್ನುವವರಿಗೆ ಕಳೆದ 50 ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತ್ಯಂತರಗಳ ನೆಲೆಗಳ ಪರಿಚ ಯವೇ ಇಲ್ಲ ಎಂದು ಹೇಳಬೇಕಾಗುತ್ತದೆ. ಇತಿಹಾಸದ ಸಮಾಜ ವಾದಿ ಅರಿವಿನಿಂದಾಗಿಯೇ ಶಿಕ್ಷಣ, ಸಾರ್ವಜನಿಕ ಉದ್ಯೋಗ ಹಾಗೂ ರಾಜಕೀಯ ಅಧಿಕಾರಕ್ಕೆ 'ತೆರೆದುಕೊಂಡ' ಸಮಾನ ಅವಕಾಶಗಳು - ಇದನ್ನು ಮುಕ್ತ ಸ್ಪರ್ಧೆಯ ಜೊತೆಗೆ ಗೊಂದಲ ಮಾಡಿಕೊಳ್ಳಬಾರದು - ಎಷ್ಟು ವಂಚಿತ ಜನವರ್ಗಗಳನ್ನು ಜಾಗೃತಗೊಳಿಸಿಲ್ಲ? ಎಂತೆಂತಹ ಸಾಮಾಜಿಕ - ಆರ್ಥಿಕ - ರಾಜಕೀಯ ಅಂರ್ತಚಲನೆಗಳಿಗೆ ಹಾಗೂ ಸಂಚಲನಗಳಿಗೆ ಕಾರಣವಾಗಿಲ್ಲ? ದುರಾದೃಷ್ಟದ ಸಂಗತಿ ಎಂದರೆ, ಭಾರತದ ಸಮಾಜವಾದಿ ಚಳವಳಿ, ಆಗಿರುವುದರ ಅರಿವೇ ಇಲ್ಲದೇ; ಆಗದಿರುವುದರ ಬಗ್ಗೆಯೇ ಕೂಗಾಡುತ್ತಾ, ತನ್ನ ಸ್ಥಿಮಿತವನ್ನು ಕಳೆದುಕೊಂಡಿತು. ಹಾಗೆ ನೋಡಿದರೆ ಭಾರತದ ಸಮಾಜವಾದಿ ಚಳವಳಿ ಎಂದರೆ ಅಧಿಕೃತ ಸಮಾಜವಾದಿ ಪಕ್ಷಗಳ ನಿಲುವು - ಧೋರಣೆ - ಸಾಧನೆಗಳು ಮಾತ್ರವಾಗಿರದೆ, ಸರಿಸುಮಾರು ಎಲ್ಲ ರಾಜಕೀಯ ಪಕ್ಷಗಳ ನೀತಿ ವಿಕಾಸದ ಪರಿಣಾಮಗಳೂ ಸೇರಿದ ಒಂದು ರಾಜಕೀಯ ವಿದ್ಯಮಾನ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಂದು ಬಿಜೆಪಿಯಂತಹ ಬಲಪಂಥೀಯ ಸಂಪ್ರದಾಯವಾದಿ ಪಕ್ಷವೂ ಮಂಡಲ್ ಆಯೋಗದ ಶಿಫಾರಸ್ಸುಗಳನ್ನೂ, ಪಂಚಾಯತ್ರಾಜ್ ಕಾಯಿದೆಯ ಬಲವರ್ಧನೆಯನ್ನೂ ಬೆಂಬಲಿಸುವ ರಾಜಕೀಯ ಅನಿವಾರ್ಯತೆ ಉಂಟಾಗಿರುವುದೇ, ಕಳೆದ ಐವತ್ತು ವರ್ಷಗಳ ಭಾರತದ ಸಮಾಜವಾದಿ ಚಳವಳಿಯ ಯಶಸ್ಸು ಎಂದು ಏಕೆ ನಾವು ಭಾವಿಸಬಾರದು ? ಈ ಯಶಸ್ಸನ್ನು ಅರ್ಥಮಾಡಿಕೊಂಡಾಗಲೋ ಅಥವಾ ಅರ್ಥಮಾಡಿಕೊಳ್ಳುವ ನೆಲೆಗಳಲ್ಲೇ, ಸಮಾಜವಾದಿ ಚಳವಳಿಯ ವೈಫಲ್ಯಗಳ ನೆಲೆಗಳೂ ನಮ್ಮ ಅರಿವಿಗೆ ಬರ ತೊಡಗುವುದು.

ಸಮಾಜವಾದಿ ಪಕ್ಷ (ಸದ್ಯದ ಮುಲಾಯಂಸಿಂಗ್ - ಬಂಗಾರಪ್ಪನವರ ಪಕ್ಷವಲ್ಲ) ಎಂದೂ ಕೇಂದ್ರದಲ್ಲಿಯಾಗಲೀ, ಯಾವುದೇ ರಾಜ್ಯದಲ್ಲಿಯಾಗಲ್ಲೀ ಏಕಾಂಗಿಯಾಗಿ ಯಾವುದೇ ಅವಧಿಯ ಆಡಳಿತ ನಡೆಸಿದ ಸಂದರ್ಭವಿಲ್ಲವಾದ್ದರಿಂದ, ನಾವಿಂದು ಸಮಾಜವಾದಿ ಚಳವಳಿಯ ಪರಿಣಾಮಗಳ ಬಗ್ಗೆ ಮಾತಾಡುವಾಗಲೆಲ್ಲ ಅದರ ಅಪ್ರತ್ಯಕ್ಷ ಪರಿಣಾಮಗಳ ಬಗ್ಗೆಯೇ ಮಾತಾಡುತ್ತಿರುತ್ತೇವೆ ಎಂಬುದೂ ನೆನಪಿರಬೇಕು. ಅಂದರೆ ಸಮಾಜವಾದಿ ಪಕ್ಷಗಳ (ಏಕೆಂದರೆ ಭಾರತದ ಸಮಾಜವಾದದ ಚರಿತ್ರೆ ಎಂದರೆ ವಿಭಜನೆ ಹಾಗೂ ವಿಲೀನಗಳ ಚರಿತ್ರೆಯೇ ಆಗಿದೆ!) ಹೊರಗಿನ ಒತ್ತಡ ಹಾಗೂ ಆಡಳಿತ ಪಕ್ಷದೊಳಗಿನ ಸಮಾಜವಾದಿ ಒಲವುಳ್ಳ ಶಕ್ತಿಗಳ ಒಳಗಿನ ಒತ್ತಡಗಳೂ ಸೇರಿ ಭಾರತದ ಸಮಾಜವಾದಿ ರಾಜಕಾರಣವನ್ನು ಕಟ್ಟಿವೆ ಎಂಬುದನ್ನು ಗಮನಿಸಿಯೇ ನಾವು ಭಾರತದ ಸಮಾಜವಾದಿ ಚಳವಳಿಯ ಮೌಲ್ಯಮಾಪನ ಮಾಡಬೇಕು. ಏಕೆಂದರೆ, ಸಮಾಜವಾದಿ ಚಳವಳಿಯ ಈ ಯಶಸ್ಸಿನ ನೆಲೆಯಲ್ಲಿಯೇ ಅದರ ವೈಫಲ್ಯಗಳ ಸುಳಿವುಗಳೂ ನಮಗೆ ದೊರೆಯುವುದು.

ಹೀಗಾಗಿ ಮೊದಲ ಪ್ರಶ್ನೆ : ಭಾರತದಲ್ಲಿ ಸಮಾಜವಾದಿ ಚಳವಳಿ ಏಕೆ ಸುಸ್ಥಿರವಾಗಿ ಬೆಳೆಯಲಾಗಲಿಲ್ಲ? ಏಕೆ ಒಡೆಯುತ್ತ, ಕೂಡುತ್ತ, ಚದುರುತ್ತ: ತನ್ನ ತತ್ವವನ್ನೂ, ಅದರ ಪರಿಣಾಮಶೀಲತೆಯನ್ನೂ ಕಳೆದುಕೊಳ್ಳುತ್ತಾ ಹೋಯಿತು? ಅನೇಕ ಶಕ್ತಿಗಳ 'ಆಡೊಂಬಲ'ವಾಗಿದ್ದ ಕಾಂಗ್ರೆಸ್ಸಿನ ಗರ್ಭದಲ್ಲಿ ಜನಿಸಿದ ಭಾರತೀಯ ಸಮಾಜವಾದಿ ಚಳವಳಿ ಬಹಳ ಕಾಲ ತನ್ನ ಸ್ವಂತ ಅಸ್ತಿತ್ವವನ್ನೂ, ಅಸ್ಮಿತೆಯನ್ನೂ ಸ್ಥಾಪಿಸಿಕೊಳ್ಳಲಾಗದೆ ಕಾಂಗ್ರೆಸ್ ಎಂಬ ಮಹಾಸಮಾಜದ 'ವಂಚಿತ'ರ ಗುಂಪಿನಂತೆಯೇ ಬೆಳೆದು, ಆ ಕಹಿ ಮನೋಭಾವದೊಂದಿಗೇ ಕಾಂಗ್ರೆಸ್ಸಿನಿಂದ ಹೊರ ಬಂತು. ಬಂದನಂತರ ಅಲ್ಲಿಂದ ಹೊತ್ತುಕೊಂಡು ಬಂದಿದ್ದ ಅನೇಕ ವೈಯುಕ್ತಿಕ ಹಾಗೂ ತಾತ್ವಿಕ ಸಂದಿಗ್ಧಗಳನ್ನೂ ತಮ್ಮದೇ ಸ್ವತಂತ್ರ ರಾಜಕಾರಣದ ಸ್ಥಾಪನೆಯ ಕುಲುಮೆಯಲ್ಲಿ ಕರಗಿಸಿಕೊಳ್ಳುವ ಮುನ್ನವೇ ಭಾರಿ ಚುನಾವಣಾ ಸೋಲನ್ನು ಅನುಭವಿಸಿ, ಆ ಹತಾಶೆ - ಗೊಂದಲದಲ್ಲಿ ಪಕ್ಷದ ಮೊದಲ ವಿಭಜನೆಯಾದದ್ದು. ಉದಾಹರಣೆಗೆ ನೆಹರೂ ಕುರಿತ ಲೋಹಿಯಾ ಹಾಗೂ ಜೆ.ಪಿ.ಯವರ ವೈಯಕ್ತಿಕ ನಿಲುವುಗಳು ರಾಜಕೀಯ ಸ್ವರೂಪ ಪಡೆದು, ಸಮಾಜವಾದಿ ಚಳವಳಿಯಲ್ಲಿ ಅನೇಕ ಅನಾಹುತಗಳಿಗೆ ಕಾರಣವಾಯಿತು.

ಹಾಗೇ ಕಾಂಗೆಸ್ನೊಳಗೇ ಹುಟ್ಟಿಕೊಂಡ ಸಮಾಜವಾದಿ ಬೀಜಗುಂಪು ರೂಪಿಸಿಕೊಂಡ ಮೂಲತಃ ಮಾರ್ಕ್‌ಸವಾದಿ ತಾತ್ವಿಕ ವಿನ್ಯಾಸದೊಳಕ್ಕೆ ಗಾಂಧಿಯನ್ನು ಅನುಸಂಧಾನಿಸುವ ಪ್ರಯತ್ನ ಅನೇಕ ಅಸಾಧ್ಯ ತಾತ್ವಿಕ ರೂಪಕಗಳನ್ನು ಹುಟ್ಟುಹಾಕಿ, ಸಂಘಟನೆಯನ್ನು ಅಸಾಧ್ಯಗೊಳಿಸಿತು. ಸಮಾಜವಾದಿ ಕಾರ್ಯಕರ್ತನ ಒಂದು ಕಣ್ಣಲ್ಲಿ ಅನ್ಯಾಯದ ವಿರುದ್ಧ ಕ್ರೋಧದ ಕಣ್ಣೀರು ಮತ್ತು ಇನ್ನೊಂದು ಕಣ್ಣಲ್ಲಿ ಅನ್ಯಾಯಕ್ಕೊಳಗಾದವರ ಬಗೆಗಿನ ಕರುಣೆಯ ಕಣ್ಣೀರು ಇರಬೇಕೆಂಬ ಲೋಹಿಯಾರ ಪ್ರಸಿದ್ಧ ಘೋಷವಾಕ್ಯ, ವೈಯಕ್ತಿಕ ನೆಲೆಯಲ್ಲಿ ಸಾಕ್ಷಾತ್ಕಾರವಾಗಬೇಕಾದ ಹೋರಾಟ ತತ್ವ. ಸಾಮಾಜಿಕ ನೆಲೆಯಲ್ಲಿ ಅದನ್ನು ರೂಢಿಸಲು, ಕಷ್ಟಸಾಧ್ಯವಾದ ನಿರಂತರ ತರಬೇತಿ ಕಾರ್ಯಕ್ರಮಗಳು ಅಗತ್ಯ. ಆದರೆ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸುವ ತಾಕತ್ತನ್ನೇ ಗಳಿಸಿಕೊಳ್ಳದ ಲೋಹಿಯಾ ಸಮಾಜವಾದಿ ಚಳವಳಿ, ಬರೀ ಕಾಂಗ್ರೆಸ್ಸ್ ವಿರೋಧಿ ಕ್ರೋಧದ ಬೆಂಕಿಯಾಗಿ ಉರಿದು ಆರಿ ಹೋಗಿದ್ದು ಸಹಜವೇ ಆಗಿದೆ. ನಗರ ಪ್ರದೇಶಗಳ ಕಾರ್ಯಕರ್ತರ ಬೌದ್ಧಿಕಪ್ರಜ್ಞೆ ಹಾಗೂ ಗ್ರಾಮಾಂತರ ಪ್ರದೇಶದ ಕಾರ್ಯಕರ್ತರ ನಡುವಣ ವಾಸ್ತವ ಪ್ರಜ್ಞೆಗಳ ನಡುವೆ ಪಕ್ಷ ಕಳೆದುಹೋದ ಸಾಧ್ಯತೆಯನ್ನು ನಾವು ಅಲ್ಲ ಗಳೆಯುವಂತಿಲ್ಲ.

ಕಾಗೋಡು ಹಾಗೂ ಸೊಂಡೂರು ಭೂ ಸತ್ಯಾಗ್ರಹಗಳನ್ನು ಸಮಾಜವಾದಿ ಹೋರಾಟಗಳೆಂದು ಕರೆಯಲಾಗುವುದಾದರೂ, ಈ ಹೋರಾಟಗಳನ್ನು ನಿಜವಾಗಿ ಆರಂಭಿಸಿದ್ದು ಸ್ಥಳೀಯ ರೈತ ಸಂಘಗಳು ಎಂಬುದನ್ನು ನಾವು ಮರೆಯಬಾರದು. ಅವು ತಮ್ಮ ಹೋರಾಟಗಳನ್ನು ತಾರ್ಕಿಕ ಅಂತ್ಯಗಳಿಗೆ ಒಯ್ಯಲಾಗದೆ, ಆಗ ಪ್ರಭುತ್ವ ವಿರೋಧಿ ಪಕ್ಷವಾಗಿ ಪ್ರಸಿದ್ಧವಾಗಿದ್ದ ಸಮಾಜವಾದಿ ಪಕ್ಷಕ್ಕೆ ನೇತೃತ್ವ ವಹಿಸಿಕೊಟ್ಟವಷ್ಟೇ. ಆದರೆ ದತ್ತಾಗಿ ಬಂದ ಈ ಹೋರಾಟಗಳ ಮೂಲಕ ಪಕ್ಷ, ಸಮಾಜವಾದಿ ಚಳವಳಿಯನ್ನು ಬೆಳೆಸಲು ವ್ಯವಸ್ಥಿತ ಪ್ರಯತ್ನಗಳನ್ನು ಮಾಡಿದ ಸೂಚನೆಗಳೇನೂ ನಮಗೆ ಸಿಗುವುದಿಲ್ಲ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಸಮಾಜವಾದಿ ಚಳವಳಿಯ ತವರು ಎನಿಸಿದ್ದ ಶಿವಮೊಗ್ಗ ಜಿಲ್ಲೆ ಇಂದು ಈ ಹಿಂದೆ ಇಲ್ಲಿ ಹೆಸರೇ ಇರದಿದ್ದ ಸಂಘ ಪರಿವಾರದ ಭದ್ರಕೋಟೆ ಯಾಗಿರುವುದನ್ನು ವಿವರಿಸುವುದಾದರೂ ಹೇಗೆ? ಈ ಜಿಲ್ಲೆಯ ಇಬ್ಬರು ಪ್ರಮುಖ ಸಮಾಜವಾದಿ ನಾಯಕರು, ಸಮಾಜವಾದಿ ಪಕ್ಷ ವಿಸರ್ಜನೆಯಾಗುವ ಬಹು ಮುನ್ನವೇ ಬೇರೆ ಪಕ್ಷಗಳಲ್ಲಿ ತಮ್ಮ 'ಸೌಖ್ಯ'ವನ್ನು ಕಂಡುಕೊಂಡಿದ್ದಾದರೂ ಏಕೆ? ಸೊಂಡೂರು ಭೂ ಸತ್ಯಾಗ್ರಹದ ನೇತೃತ್ವವನ್ನು ರೈತ ಸಂಘದಿಂದ ಪಡೆದ ಸಮಾಜವಾದಿ ಪಕ್ಷ, ರೈತರಿಗೆ ಭೂಮಿ ಹಂಚಿಕೆಯಾಗುವ ವಿಧಿ ವಿಧಾನಗಳು ಆರಂಭವಾಗುವ ಹೊತ್ತಿಗೆ ಅಲ್ಲಿಂದ ಕಾಲ್ಕಿತ್ತಿತ್ತು. (ಚಳವಳಿ ನಡೆದಿದ್ದೂ ಬೆಂಗಳೂರು - ಶಿವಮೊಗ್ಗಗಳಿಂದ ಬಂದಿದ್ದ ಕಾರ್ಯಕರ್ತರ ಬಲದೊಡನೆ!) ಎಂದರೆ ಏನು ಹೇಳುವುದು? ಸದಾ ವಿರೋಧಾನಂದಿಗಳಾಗಿದ್ದ ಸಮಾಜವಾದಿಗಳು ಗುದ್ದಲಿ, ವೋಟು, ಸೆರೆಮನೆ (ರಚನಾತ್ಮಕ ಕೆಲಸ, ಚುನಾವಣಾ ರಾಜಕೀಯ, ಪ್ರತಿಭಟನೆ) ತಮ್ಮ ಪಕ್ಷದ ತ್ರಿರೂಪಿ ಕಾರ್ಯಕ್ರಮವೆಂದು ಹೇಳಿಕೊಂಡರೂ, ಪ್ರತಿಭಟನೆಗೆ ಪೂರಕವಾಗಿ ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿಯನ್ನೇ ವಹಿಸದೇ ಅಂತಿಮವಾಗಿ ವೋಟುಗಳಿಂದಲೂ ವಂಚಿತರಾದರು.

ಸಿದ್ಧಾಂತ ಏನೇ ಇದ್ದರೂ, ಕಾಂಗ್ರೆಸ್ನೊಡನೆಯ ದಾಯಾದಿ ಮತ್ಸರವನ್ನು ತನ್ನ ಅಸ್ತಿತ್ವಕ್ಕೆ ಆಧಾರ ಮಾಡಿಕೊಂಡಂತೆ ಬೆಳೆದ ಸಮಾಜವಾದಿ ಚಳವಳಿ, ಕೊನೆಗೆ ತಾನುಳಿಯಲು 'ಕಾಂಗ್ರೆಸ್ಸೇತರವಾದ'ವನ್ನೂ ಸೃಷ್ಟಿಸಿಕೊಳ್ಳಬೇಕಾಯಿತು ಎಂಬುದನ್ನು ಸಮಾಜವಾದಿ ಚಳವಳಿಯ ಇತಿಹಾಸದ ಅಧ್ಯಯನದ ದೃಷ್ಟಿಯಿಂದ ವಿಶೇಷವಾಗಿ ಗಮನಿಸಬೇಕು. ಹಾಗೇ, ಲೋಹಿಯಾ ಬದುಕಿದ್ದಾಗಲೇ ಈ ಕಾಂಗ್ರೆಸ್ಸೇತರವಾದದ ಮೊದಲ ಬಲಿ ಅವರ ಕಣ್ಣೆದುರಲ್ಲೇ ಬಿಹಾರದಲ್ಲಿನ ಸಂಯುಕ್ತ ಸಮಾಜವಾದಿ ಪಕ್ಷದ ನೇತೃತ್ವದ ಸಮ್ಮಿಶ್ರ ಸರ್ಕಾರವೇ ಆಗಿತ್ತು. ಬಿ.ಪಿ.ಮಂಡಲ್ ಎಂಬ ಸಮಾಜವಾದಿ ಸಂಸತ್ ಸದಸ್ಯ ರಾಜ್ಯದ ಮುಖ್ಯಮಂತ್ರಿ ಆಗುವ ಆಸೆಯಿಂದ ಪಕ್ಷದ ನೀತಿ ಸಂಹಿತೆಯನ್ನೇ ಉಲ್ಲಂಘಿಸಿ, ವಿಧಾನ ಪರಿಷತ್ ಸದಸ್ಯನಾಗಲು ಹವಣಿಸುವ ಮೂಲಕ ಅಂತಿಮವಾಗಿ ಪಕ್ಷವನ್ನು ಒಡೆದು ಸರ್ಕಾರದ ಪತನಕ್ಕೆ ಕಾರಣನಾದ. ಅಷ್ಟು ಸುಲಭವಾಗಿ ಶಿಥಿಲಗೊಳಿಸಿತ್ತು ಸಮಾಜವಾದದ ನೈತಿಕತೆಯನ್ನು, ಈ ಕಾಂಗ್ರೆಸ್ಸೇತರವಾದವೆಂಬ ಪಕ್ಷ ಉಳಸಿಕೊಳ್ಳುವ ಹತಾಶ ಯತ್ನ! ಇನ್ನು ಕಾಂಗ್ರೆಸ್ಸೇತರವಾದವನ್ನು ತಾತ್ವಿಕವಾಗಿ ವಿರೋಧಿಸಿದ ಸಮಾಜವಾದಿಗಳ ಒಂದು ಗುಂಪು (ಕೆಲವರ ಹೊರತಾಗಿ) ಅನತಿಕಾಲದಲ್ಲೇ ಕಾಂಗ್ರೆಸ್ಸಿನಲ್ಲಿ ವಿಲೀನವಾದದ್ದು ಸಮಾಜವಾದಿ ಚಳವಳಿಯ ಇನ್ನೊಂದು ವಿಪರ್ಯಾಸ!

ಇನ್ನು ಇದಾದ ಹತ್ತು ವರ್ಷಗಳ ನಂತರ ಮಾಜಿ ಸಮಾಜವಾದಿ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಜನತೆಯೇ ಕಟ್ಟಿದ್ದೆಂದು ಹೇಳಬಹುದಾದ ಜನತಾ ಪಕ್ಷ ಗಾಂಧಿ ಸಮಾಜವಾದದ ದೀಕ್ಷೆ ಪಡೆದೂ, ಮೂರೇ ವರ್ಷಗಳಲ್ಲಿ ವಿಘಟನೆಗೊಂಡು, ಭಾರತದ ರಾಜಕಾರಣದ ಅತಿದೊಡ್ಡ ಛಿದ್ರೀಕರಣಕ್ಕೆ ಮತ್ತು ಅದಕ್ಕಿಂತ ಮುಖ್ಯವಾಗಿ ಕೋಮುವಾದಿ ರಾಜಕಾರಣದ ಬಲವರ್ಧನೆಗೆ ಕಾರಣವಾಯಿತು. ಇದು, ನಾನು ನನ್ನ ಇನ್ನೊಂದು ಲೇಖನದಲ್ಲಿ ಹೇಳಿದಂತೆ, ಕೆಲವು ಸಮಾಜವಾದಿಗಳಲ್ಲಿ ಹೊಸ 'ಎಚ್ಚರ'ಮೂಡಿಸಿ; ಕಾಂಗ್ರೆಸ್ಸೇತರವಾದವನ್ನು ಅರ್ಧಕ್ಕೆ ಕೈ ಬಿಟ್ಟು, ಕಾಂಗ್ರೆಸ್ಸವಾದವನ್ನು ಪ್ರತಿಪಾದಿಸಲು ಪ್ರೇರೆಪಿಸಿತು! ಮುಖ್ಯವಾಗಿ ಲೋಹಿಯಾರ ಆಪ್ತ ಶಿಷ್ಯರಾದ ಮತ್ತು ಸಮಾಜವಾದಿ ಆಂದೋಲನದ ಕಾಂಗ್ರೆಸ್ ವಿರೋಧಿ ಹೋರಾಟಗಳಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದ ಮಧುಲಿಮೆಯೆ ಅವರೇ, ಬಲಪಂಥೀಯ ಕೋಮುವಾದಿ ರಾಜಕಾರಣದೆದುರು ಕಾಂಗ್ರೆಸ್ಸನ್ನು ಬೆಳೆಸುವ ಅಗತ್ಯ ಮತ್ತು ಮಹತ್ವದ ಮಾತುಗಳನ್ನಾಡಲಾರಂಭಿಸಿದರು... ಆ ಮೂಲಕ ಅವರು ಸಮಾಜವಾದಿ ಸಂಘಟನೆಯ ಆತ್ಯಂತಿಕ ವೈಫಲ್ಯವನ್ನೂ ಒಪ್ಪಿಕೊಳ್ಳಲಾರಂಭಿಸಿದರು. ಸಮಾಜವಾದಿ ಆಂದೋಲನದ ಸರಿ ಸುಮಾರು ಆರಂಭದಿಂದಲೂ ಇದ್ದ ಮತ್ತು ಸಮಾಜವಾದಿ ಚಳವಳಿಯ ಇತಿಹಾಸವನ್ನು ಒಬ್ಬ ಸಾಕ್ಷಿದಾರನಾಗಿಯೂ ಬರೆದಿರುವ ಲಿಮೆಯೆ, ತಮ್ಮ ಬದುಕಿನ ಕೊನೇ ದಿನಗಳಲ್ಲಿ ಸಮಾಜವಾದಿ ಪಕ್ಷದ ಅನಿವಾರ್ಯ ಅಂತ್ಯವನ್ನೂ ಮನಗಂಡಿದ್ದರು..

ಆದರೆ, ಹಾಗೆ ಮನಗಾಣದ ಎರಡನೇ ಸಾಲಿನ ನಾಯಕರು ತಮ್ಮ ರಾಜಕೀಯ ಅನುಕೂಲಗಳಿಗೆ ತಕ್ಕಂತೆ ವಿವಿಧ ಪಕ್ಷಗಳಲ್ಲಿ ಹಂಚಿ ಹೋದರು. ನಂತರದ ಗೊಂದಲಗಳಲ್ಲಿ ಜಾತಿ ಬಲಗಳಿದ್ದ ಕೆಲವು ನಾಯಕರು - ಉದಾ : ಲಾಲೂ ಮತ್ತು ಮುಲಾಯಂರಂತಹವರು - ತಮ್ಮದೇ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಕೊಂಡರು. ಈ ಪಕ್ಷಗಳಲ್ಲಿನ ಗೌಡಿಕೆಯನ್ನು ಸಹಿಸಲಾರದೆ ಕೆಲವರು ಪಕ್ಷ ಬಿಟ್ಟು ಇನ್ನೆಲ್ಲಿಗೂ ಹೋಗಲಾರದ ಸ್ಥಿತಿ ತಲುಪಿ, ಕೊನೆಗೆ ಬಿಜೆಪಿ ಮೈತ್ರಿಕೂಟ ಸೇರಿದರು! ಹೀಗೆ ಭಾರತ ದಲ್ಲಿ ಸಮಾಜವಾದಿ ಆಂದೋಲನ ಭಾರತದ ಸರ್ವ ಪಕ್ಷಗಳಿಗೂ ತನ್ನ ಕೊಡುಗೆಯನ್ನು ನೀಡಿದೆ... ಆ ಮೂಲಕ ಭಾರತದ ಸಮಾಜವಾದವೆಂದರೆ, ಹಾಕಿಕೊಂಡವರ ತಲೆಯ ಆಕಾರ ಕಾಂಗ್ರೆಸ್ಸ್ ಟೊಪ್ಪಿಗೆ ಇದ್ದಂತೆ ಎಂದು ಈ ಆಂದೋಲನದ ಇತಿಹಾಸ ಬರೆದಿರುವ ಹ್ಯಾರಿಸ್ ವೊಫಡರ್ ಎಂಬ ರಾಜಕೀಯ ಟೀಕಾಕಾರನ ಮಾತುಗಳನ್ನು ನಿಜಗೊಳಿಸಿದೆ!

ಭಾರತದ ಸಮಾಜವಾದಿ ಆಂದೋಲನವನ್ನು ಹತ್ತಿರದಿಂದ ಮತ್ತು ವಸ್ತುನಿಷ್ಠವಾಗಿ ಅಭ್ಯಾಸ ಮಾಡಿದವರಿಗೆ ಇದೇನೂ ಅಸಹಜ ವೆನಿಸುವುದಿಲ್ಲ. ಸಮಾಜವಾದಿ ಪಕ್ಷವೆಂಬುದೇ ಈ ಹಿಂದೆ ಸೂಚಿಸಿದಂತೆ ಮೂಲತಃ ಕಾಂಗ್ರೆಸ್ ಪಕ್ಷದ ಉಪ ಪಕ್ಷವಾಗಿ ಆರಂಭವಾದದ್ದು. ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ಸಿನೊಳಗೇ ಎದ್ದ ಯುವ ಜನರ ತಾತ್ವಿಕ ಬಂಡಾಯದ ಫಲವದು. ಅದು ಕೂಡಾ ಬಹಳ ಕಾಲ ಒಂದು ತಾತ್ವಿಕ ಸ್ಪಷ್ಟತೆ ಪಡೆದುಕೊಂಡಿರಲಿಲ್ಲ. ಆಗ ಇನ್ನೂ ಹಸಿ ಹಸಿ ನೆನಪಾಗಿದ್ದ ರಷ್ಯಾದ ಕ್ರಾಂತಿಯ ಸ್ಪೂರ್ತಿಯಿಂದಾಗಿ ಮೂಲತಃ ಮಾಕ್ರ್ಸವಾದಿಗಳಾಗಿದ್ದ ಇವರು, ಕಾರ್ಯಾಚರಣೆಯಲ್ಲಿ ಅಂದಿನ ಭಾರತದ ಕಮ್ಯೂನಿಷ್ಟ ಪಕ್ಷದ ವರಸೆಗಳನ್ನೊಪ್ಪದೆ ಕಾಂಗ್ರೆಸ್ನೊಳಗೇ ತಮ್ಮ ಕ್ರಾಂತಿಕಾರಿ ವಿಚಾರಗಳನ್ನು ಬಿತ್ತಲಾರಂಭಿಸಿದವರು. ಇವರ ನಾಯಕ ಜಯಪ್ರಕಾಶ ನಾರಾಯಣ. ಗಾಂಧೀಜಿಯ ಕಾಲು ಮುಟ್ಟಿ ನಮಸ್ಕರಿಸುವಷ್ಟು ಗಾಂಧಿ ವ್ಯಕ್ತಿತ್ವದ ಬಗ್ಗೆ ಗೌರವವುಳ್ಳವರಾಗಿದ್ದ ಇವರು, ಗಾಂಧೀಜಿಯ ರಾಜಕೀಯ ವಿಚಾರಧಾರೆಯ ಕಟ್ಟಾ ವಿರೋಧಿಯೂ ಆಗಿದ್ದರು! ಒಮ್ಮೆ ಕಮ್ಯೂನಿಷ್ಟರು ಜೆಪಿಯವರ ಈ ದ್ವಂದ್ವ ವ್ಯಕ್ತಿತ್ವದ ಉಪಯೋಗ ಪಡೆದು ಅವರ ಉಪ ಪಕ್ಷದ ಒಳಹೊಕ್ಕು ಮಾಡಿದ ಅವಾಂತರ ಗೊತ್ತಾದ ನಂತರವಷ್ಟೇ, ಈ ಉಪ ಪಕ್ಷ ಮಾರ್ಕ್‌ಸವಾದ ಎಲ್ಲ ನೈತಿಕತೆಯನ್ನು ಮೀರಿ ನಿಂತದ್ದು ಎಂದು ಮನ ಗಂಡು, ಗಾಂಧಿವಾದದ ಕಡೆ ಸಹಾನುಭೂತಿ ಪರವಾದ ನಿಲುವು ತಳೆಯಲು ಸಾಧ್ಯವಾದದ್ದು. ಆ ಸಂದರ್ಭದಲ್ಲಿಯೇ ಜರ್ಮನಿಯಲ್ಲಿನ ತಮ್ಮ ಸಂಶೋಧನಾ ಅಧ್ಯಯನದ ಸಂದರ್ಭದಲ್ಲಿ ಫ್ಯಾಸಿಸ್ಟರು ಮತ್ತು ಕಮ್ಯೂನಿಷ್ಟರು - ಈ ಇಬ್ಬರ 'ಅನೈತಿಕ' ವರಸೆಗಳನ್ನು ಕಂಡಿದ್ದ ಡಾ. ರಾಮ ಮನೋಹರ ಲೋಹಿಯಾ, ಈ ಉಪ ಪಕ್ಷಕ್ಕೆ ತಾವು ಜರ್ಮನ್ ಸಮಾಜವಾದಿ ಅರ್ಥಶಾಸ್ತ್ರಜ್ಞರಾದ ಷೂಮೇಕರ್ ಮತ್ತು ಝೆಂಬಾಟರ್ ಅವರಿಂದ ಕಲಿತಿದ್ದ ಮಧ್ಯಮ ಮಾರ್ಗದ ಸಮಾಜವಾದದ ಸೈದ್ಧಾಂತಿಕ ನೆಲೆ ಒದಗಿಸುವ ಪ್ರಯತ್ನ ಮಾಡಿದ್ದು. ಇದಕ್ಕೆ ಪೂರಕವಾಗಿ ಒದಗಿ ಬಂದದ್ದು ಆಗಿನ್ನೂ ಜೀವಂತ ಪ್ರಯೋಗದಲ್ಲಿದ್ದ ಗಾಂಧಿವಾದ.

ಹೀಗೆ ಭಾರತೀಯ ಸಮಾಜವಾದವೆಂಬುದು ಮಾಕ್ಸರ್ವಾದ, ಐರೋಪ್ಯ ಸಮಾಜವಾದ ಮತ್ತು ಗಾಂಧಿವಾದಗಳೆಂಬ ಮೂರು ರಾಜಕೀಯ ವಿಚಾರಧಾರೆಗಳ ಮಿಶ್ರಣವಾಗಿ ಒಂದು ಪಕ್ಷವನ್ನು ಕಟ್ಟತೊಡಗಿತ್ತು. ಕಾಂಗ್ರೆಸ್ನೊಳಗಿನ ಈ 'ಕಾಂಗ್ರೆಸ್ ಸೋಷಲಿಸ್ಟ್ಟ' ಎಂಬ ಈ ಉಪ ಪಕ್ಷಕ್ಕೆ, ವಲ್ಲಭಭಾಯಿ ಪಟೇಲರ ನೇತೃತ್ವದ ಬಲ ಪಂಥೀಯ ಗುಂಪು ಕಾಂಗ್ರೆಸ್ಸ್ ಪಕ್ಷದ ಅಂಗರಚನೆಗೆ ಒಂದು ತಿದ್ದುಪಡಿ ತಂದು, ಪಕ್ಷದೊಳಗೊಂದು ಉಪ ಪಕ್ಷವಿರಲು ಸಾಧ್ಯವಿಲ್ಲದಂತೆ ಮಾಡಿ ತನ್ನ ಮಾತೃಪಕ್ಷದಿಂದ ಹೊರ ಹೋಗುವುದು ಅನಿವಾರ್ಯವೆನಿಸಿದಾಗಲೂ, ಅದು ರಾಜಕೀಯ ಪಕ್ಷವೊಂದರ ಯಾವ ಸ್ಪಷ್ಟ ಲಕ್ಷಣಗಳನ್ನು ಹೊಂದಿರಲಿಲ್ಲ! ಬಹಳಕಾಲ ಉಪ ಪಕ್ಷವಾಗಿ ಕೆಲಸ ಮಾಡಿದ್ದುದರಿಂದ ಸಡಿಲ ಸಂಘಟನೆಯನ್ನಷ್ಟೇ ಹೊಂದಿದ್ದ ಈ ಪಕ್ಷ, ಒಂದು ಸ್ಪಷ್ಟ ಸೈದ್ಧಾಂತಿಕ ಸ್ವರೂಪವನ್ನು ಹೊಂದಿರಲಿಲ್ಲ. ಈ ಎರಡೂ ಕಾರಣಗಳಿಂದಾಗಿ 1952ರ ಮೊದಲ ಮಹಾಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ಆತ್ಮ ಪರಿವೀಕ್ಷಣೆಗಾಗಿ ಪಂಚಮಢಿ ಎಂಬಲ್ಲಿ ಸಮಾವೇಶಗೊಂಡಾಗಲೇ, ಈ ಪಕ್ಷ ತನ್ನ ಈ ಎರಡೂ ದೌರ್ಬಲ್ಯಗಳ ಬಗ್ಗೆ ಗಂಭೀರವಾಗಿ ಚಿಂತಿಸಿದ್ದು! ಹಿರಿಯ ನಾಯಕ ಆಚಾರ್ಯ ನರೇಂದ್ರದೇವ ಅವರ ಅನುಪಸ್ಥಿತಿಯಲ್ಲಿ ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಡಾ. ರಾಮಮನೋಹರ ಲೋಹಿಯಾ ಪ್ರಸ್ತುತ ಪಡಿಸಿದ 'ಸಮಾಜವಾದ ತಾತ್ವಿಕ ಅಡಿಗಲ್ಲುಗಳು' (Doctrinal foundation of socialism) ಎಂಬ ಭಾಷಣವೇ ಭಾರತದ ಸಮಾಜವಾದಿ ಆಂದೋಲನಕ್ಕೆ ತನ್ನದೆನ್ನುವ ಒಂದು ಸ್ಪಷ್ಟ ವೈಚಾರಿಕ ಆಕೃತಿಯನ್ನು ನೀಡಿದ್ದು.

ಆದರೆ ಬಹುಬೇಗ ದಾಯಾದಿ ಮತ್ಸರದಲ್ಲೆಂಬಂತೆ ತನ್ನ ಕಾಂಗ್ರೆಸ್ಸ್ ವಿರೋಧಿ ರಾಜಕಾರಣದಲ್ಲೇ ಮೈಮರೆತ ಸಮಾಜವಾದಿ ಆಂದೋಲನ -ವಿಶೇಷವಾಗಿ ಲೋಹಿಯಾಧಾರೆ - ಇದರ ರಚನಾತ್ಮಕ ಅಂಶಗಳ ಕಡೆ ಗಮನಕೊಟ್ಟಿದ್ದು, ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಹೋರಾಟದಲ್ಲಿ ಆಯಾಸಗೊಂಡಾಗ ಹೋಗಿ ತಾತ್ವಿಕ ವಿವೇಚನೆಯಲ್ಲಿ ತೊಡಗಲು, ಸ್ವತಃ ಲೋಹಿಯಾ ಪ್ರತಿಪಾದಿಸಿದ್ದ 'ಸಮಾಜವಾದಿ ಆಶ್ರಮ'ಗಳ ಕಲ್ಪನೆ ಬರೀ ಕಲ್ಪನೆಯಾಗಷ್ಟೇ ಉಳಿಯಿತು. ಹಾಗಾಗಿ ಈ ಸಮಾಜವಾದಿಗಳು ತಮ್ಮ ಈ 'ಹೋರಾಟ' ಗಳಿಂದಾಗಿ ಸೇರಿದ್ದು ಆಶ್ರಮಗಳನ್ನಲ್ಲ, ಸೆರೆಮನೆಗಳನ್ನಷ್ಟೇ - ಅದೂ ಇನ್ನಾವ ಪಕ್ಷದ ಹೋರಾಟಗಾರರೂ ಸೇರದಷ್ಟು ಬಾರಿ ಮತ್ತು ಅವಧಿಗಳವರೆಗೆ! ಹಾಗೆ ನೋಡಿದರೆ, ಇಂತಹ ಹೋರಾಟಗಳಲ್ಲಿ ಹೀಗೆ ಆಯಾಸಗೊಂಡವರಲ್ಲಿ ಕೆಲವರು ಪಕ್ಷವನ್ನೇ ಬಿಟ್ಟು ಹೋದರೆ, ಇನ್ನು ಕೆಲವರು ಪಕ್ಷ ರಾಜಕಾರಣವನ್ನೇ ತೊರೆದು ಹೋದರು.. ಹಾಗೆ ಪಕ್ಷ ರಾಜಕಾರಣವನ್ನು ತೊರೆದ ಮುಖ್ಯ ನಾಯಕರಲ್ಲೊಬ್ಬರಾದ ಜಯಪ್ರಕಾಶರು ಬಿಹಾರದ ಸೆಖೋದೇವೊರಾ ಎಂಬಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು. ಆದರದು ಸರ್ವೋದಯದ ಆಶ್ರಮವಾಗಿತ್ತು. ಅದು ಸರ್ವೋದಯ ಚಳವಳಿಯಂತೆಯೇ ಕ್ರಮೇಣ ಹಾಳು ಬಿದ್ದಿತೆಂಬುದು ಬೇರೆ ಮಾತು!

ಲೋಹಿಯಾ ಅವರೇನೋ ತಮ್ಮ ಹೋರಾಟದೊಂದಿಗೆ ತಾತ್ವಿಕ ಅನ್ವೇಷಣೆಗಳಲ್ಲೂ ತೊಡಗಿಕೊಂಡರು. ಇದರಿಂದಾಗಿ ರಾಷ್ಟ್ರಾದ್ಯಂತ ಅನೇಕ ಲೇಖಕರು - ಕಲಾವಿದರು - ಬುದ್ಧಿಜೀವಿಗಳು ಅದರೆಡೆಗೆ ಆಕರ್ಷಿತರಾದರು. ಅವರ 'ಇತಿಹಾಸ ಚಕ್ರ', 'ಮಾರ್‍ಕ್ಸ, ಗಾಂಧಿ ಮತ್ತು ಸಮಾಜವಾದ' ಮತ್ತು 'ರಾಜಕೀಯದ ಮಧ್ಯೆ ಬಿಡುವು' ಇಂತಹ ತಾತ್ವಿಕ ಅನ್ವೇಷಣೆಯ ವಿವಿಧ ಸ್ತರಗಳ ಪ್ರಯತ್ನಗಳು. ಆದರೆ ಈ ವಿಷಯದಲ್ಲಿ ಲೋಹಿಯಾರದ್ದು 'ಏಕವ್ಯಕ್ತಿ ಪ್ರದರ್ಶನ'ವಾಯಿತೇ ಹೊರತು, ಸಮಾಜವಾದಿ ಪಕ್ಷವೆಂಬುದು ಕಾಂಗ್ರೆಸ್ಸಿಗೆ ಒಂದು ರಾಜಕೀಯ ಪರ್ಯಾಯ ಒದಗಿಸುವ ಜನರ ಆಂದೋಲನವಾಗಿ ಬೆಳೆಯಲಾರದಾಯಿತು. ಬದಲಿಗೆ ಅದೊಂದು 'ಪ್ರತಿಭಟನೆ'ಯ ಹೆಸರಿನ ಕೈ ಬೆರಳೆಣಿಕೆಯ 'ಗಲಭೆಕೋರರ' ಪಕ್ಷವೆಂದೇ ಜನರ ಕಣ್ಣಲ್ಲಿ ದಾಖಲಾಗುತ್ತಾ ಹೋಯಿತು. ಇದರಿಂದಾಗಿ ಪಕ್ಷ ತನ್ನ ಜನಪರ ತಾತ್ವಿಕತೆಯ ಹೊರತಾಗಿಯೂ, ಆಯ್ಕೆಯಾದ ಅದರ ಕೆಲವೇ ಶಾಸಕರ ಜನಪರ ಶಾಸನಸಭಾ 'ಪ್ರದರ್ಶನ'ಗಳ ಹೊರತಾಗಿಯೂ, ಸೋಲಿನ ಮೇಲೆ ಸೋಲನ್ನು ಅನುಭವಿಸುತ್ತಾ ಹೊಯಿತು. ಇದರ ಪರಿಣಾಮವಾಗಿ ಪಕ್ಷ, ರಾಷ್ಟ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಪದೇ ಪದೇ ಹೋಳಾಗತೊಡಗಿತು. ಈ ಮಧ್ಯೆ ಕಾಂಗ್ರೆಸ್ಸ್ ಪಕ್ಷ ಪದೇ ಪದೇ ತನ್ನ ಸಮಾಜವಾದಿ ನೀತಿ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದುದರಿಂದಲೂ, ಕಾಂಗ್ರೆಸ್ಸಿನ ಕಡೆ ವಲಸೆ ನಡೆದೇ ಇತ್ತು. 1950ರಲ್ಲಿ ಉತ್ತರಪ್ರದೇಶದ ಬುಲಂದ್ಷಹರ್ ಎಂಬಲ್ಲಿ ಸಮಾಜವಾದಿ ಕಾರ್ಯಕರ್ತರು ಮತ್ತು ರೈತರು ಸೇರಿ 'ಲೋಹಿಯಾ ಸಾಗರ' ಎಂಬ ಕಿರು ಜಲಾಶಯವೊಂದನ್ನು ನಿರ್ಮಿಸಿದ್ದರ ಹೊರತಾಗಿ, ಸಮಾಜವಾದಿಗಳು 'ರಚನಾತ್ಮಕ' ಎನ್ನಬಹುದಾದ ಯಾವ ಚಟುವಟಿಕೆಯನ್ನು ಮಾಡಿದಂತೆ ತೋರುವುದಿಲ್ಲ. ಕೊನೇ ಪಕ್ಷ ತನ್ನ ಸಂಘಟನೆಗಾಗಿ ಒಂದು ಕೇಂದ್ರ ಕಾರ್ಯಾಲಯದ ಕಟ್ಟಡವೊಂದನ್ನೂ ಅದು ಕಟ್ಟಿಕೊಳ್ಳಲಾಗಲಿಲ್ಲ. ಹಾಗಾಗಿಯೇ ಶುದ್ಧ ಅಲೆಮಾರಿಗಳ ಪಕ್ಷದಂತಿದ್ದ ಸಮಾಜವಾದಿ ಪಕ್ಷ ಇಂದು ಭಾರತದ ರಾಜಕಾರಣದಿಂದಾಗಿಯೇ ಕಾಣೆಯಾಗಿದೆ. ಹಾಗಾಗಬಾರದೆಂದು ತಮ್ಮ ಬದುಕಿನ ಕೊನೇ ದಿನಗಳಲ್ಲಿ, ನಾನು ಈ ಹಿಂದೆಯೇ ತಿಳಿಸಿದಂತೆ, ಅದರ ಇಬ್ಬರು ಮುಖ್ಯ ನಾಯಕರಾದ ಲೋಹಿಯಾ ಮತ್ತು ಜಯಪ್ರಕಾಶರು ಹತ್ತು ವರ್ಷಗಳ ಅವಧಿಯಲ್ಲಿ - 1967 ಮತ್ತು 1977ರಲ್ಲಿ - ಕಾಂಗ್ರೆಸ್ಸೇತರವಾದದ ಎರಡು ದೊಡ್ಡ ರಾಜಕೀಯ ತಂತ್ರ ಗಳನ್ನು ರೂಪಿಸಿದವರಾದರೂ!

ಇಷ್ಟಾದರೂ ಸಮಾಜವಾದದ ಸೆಳೆತ ಭಾರತೀಯ ಸಮಾಜದಲ್ಲಿ ಕಡಿಮೆಯಾದಂತಿಲ್ಲ. ಜಾಗತೀಕರಣ, ಒಂದು ಜನವರ್ಗವನ್ನು ಬಲಿ ತೆಗೆದುಕೊಂಡೇ ಇನ್ನೊಂದು ಜನವರ್ಗದ ಅಪಾರ ಸಿರಿವಂತಿಕೆಗೆ ಕಾರಣವಾಗುತ್ತಿರುವ (ಇದನ್ನೇ ನವವಸಾಹತುಶಾಹಿ ಎನ್ನುವುದು) ಕ್ರಮೇಣ ಸ್ಪಷ್ಟವಾಗುತ್ತಿದ್ದಂತೆ, ಸಮಾಜವಾದದ ಬಗ್ಗೆ ಜನರಲ್ಲಿ ಮತ್ತೆ ಕುತೂಹಲ ಹುಟ್ಟುತ್ತಿದೆ. ಆದರೆ ಈ ಸೆಳೆತ ಮತ್ತು ಕುತೂಹಲಗಳನ್ನೂ ಅರ್ಥಪೂರ್ಣಗೊಳಿಸುವಂತಹ ಒಂದು ಸಂಘಟನೆಯಲ್ಲಿಯೇ ಇಂದು ಇಲ್ಲವಾಗಿದೆ. ಹಾಗೆ ನೋಡಿದರೆ ಸಮಾಜವಾದದ ಪುನರುಜ್ಜೀವನಕ್ಕೆ ಇಂದು ಹೊಸ ಅವಕಾಶವೊಂದು ತಾನಾಗಿ ರೂಪುಗೊಂಡಿದೆ. ಕಾಂಗ್ರೆಸ್ಸ್ ಪೂರ್ವಾಶ್ರಮದ ನೆನಪುಗಳ ಭಾರಗಳಿಂದ ಮುಕ್ತರಾದ ಹೊಸ ತಲೆಮಾರಿನ ಸಮಾಜವಾದಿಗಳು, ಸಮಾಜವಾದವನ್ನು ಇಂದಿನ ಅಗತ್ಯಗಳಿಗೆ ತಕ್ಕಂತೆ ಪುನರ್ರೂಪಿಸುವ ಅವಕಾಶ ಹೊಂದಿದ್ದಾರೆ. ಅದರ ತಂತ್ರಜ್ಞಾನ, ಆಡಳಿತ, ಜಾತಿ, ಭಾಷೆ ಇನ್ನಿತರ ನೀತಿಗಳನ್ನು ಹೊಸ ಸಂದರ್ಭಕ್ಕೆ ತಕ್ಕಂತೆ ಪುನರ್ ನಿರೂಪಿಸುವ 'ಸ್ವಾತಂತ್ರ್ಯ' ಅವರಿಗಿದೆ. ಮುಖ್ಯವಾಗಿ ಸಮಾಜವಾದ ಪ್ರತಿಪಾದಿಸಿದ ಸರಳ ಸಭ್ಯ ಜೀವನ ಮಟ್ಟದ ಮಧ್ಯಮ ಮಾರ್ಗವನ್ನು ಅದು ಇಂದಿನ ಹೊಸ ಆರ್ಥಿಕ ಸಂದರ್ಭದಲ್ಲಿ ವ್ಯವಹಾರಿಕವೆನಿಸುವ ರೀತಿಯಲ್ಲಿ ನಿರ್ದಿಷ್ಟಕರೀಸಬೇಕಿದೆ. ಲೋಹಿಯಾ ಅವರು ಅರವತ್ತರ ದಶಕದ ಆರ್ಥಿಕತೆಯ ಹಿನ್ನೆಲೆಯಲ್ಲಿ, ಅಸಮಾನತೆಯ ಅಂತರ ಹತ್ತುಪಟ್ಟಿಗಿಂತ ಹೆಚ್ಚಿರಬಾರದು ಎನ್ನುವ ಗರಿಷ್ಠ ಸಾಧ್ಯ ಸಮಾನತೆಯ ಸೂತ್ರದ ಆಧಾರದ ಮೇಲೆ ಸರಳ ಸಭ್ಯ ಜೀವನ ಮಟ್ಟವನ್ನು ನಿರ್ದಿಷ್ಟೀಕರಿಸಿದ್ದರು. ಆದರೆ ಅದು ಕೂಡಾ ಬಹಳ ಜನರಿಗೆ ಅಂದು ವ್ಯವಹಾರಿಕ ಅನ್ನಿಸಲಿಲ್ಲ. ಏಕೆಂದರೆ ಅದು ಸಾಮಾನ್ಯ ಮನುಷ್ಯನೊಬ್ಬನ ಸುಖದ ಇಚ್ಚೆಯ ಎಲ್ಲೆಗಳನ್ನು ಗುರುತಿಸಿರಲಿಲ್ಲ ಮತ್ತು ಆ ಇಚ್ಚೆಯನ್ನು ನಿಯಂತ್ರಿಸಬಲ್ಲ ರಾಜಕೀಯ ಶಕ್ತಿಯನ್ನು ಸಮಾಜವಾದ ಸಂಘಟನೆ ಗಳಸಿಕೊಂಡಿರಲಿಲ್ಲ.

ಈಗಲಾದರೋ ಸಮಾನತೆಯ ಅಂತರ, ಸಾವಿರ ಪಟ್ಟನ್ನು ಮೀರಿ ಹೋಗಿದೆ! ಲೋಹಿಯಾ ಕಾಲದಲ್ಲಿ ಕೆಲವರಲ್ಲಾದರೂ ಇನ್ನೂ ವಿಶ್ವಾಸ ಉಳಿಸಿಕೊಂಡಿದ್ದ ಗಾಂಧಿವಾದದ ಸರಳ ಜೀವನದ ಆದರ್ಶ ಇಂದು ಅಪ್ರಸ್ತುತವೆನಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನದ ಸ್ಫೋಟ ಹಲವಾರು ನೆಲೆಗಳಲ್ಲಿ ಕೆಲಸ ಮಾಡುತ್ತಾ, ಸಮಾಜದ ಲೌಕಿಕ ನಿರೀಕ್ಷೆಗಳ ಮಟ್ಟವನ್ನೂ ಹಲವು ಪಟ್ಟು ಹೆಚ್ಚಿಸಿದೆ. ಇನ್ನು ಸಾಮಾಜಿಕ ನ್ಯಾಯದ ಆಂದೋಲನವೂ ಈ ವರ್ಷಗಳಲ್ಲಿ ಚೈತನ್ಯ ಶಾಲಿಯಾಗಿ ಬೆಳೆದು, ಇದರಿಂದಾಗಿ ಪರಿಶಿಷ್ಟರೂ ಸೇರಿದಂತೆ ಸಮಾಜದ ಶೂದ್ರ ಜಾತಿಗಳು ಗಣನೀಯ ಸಾಮಾಜಿಕ ಚೈತನ್ಯವನ್ನು ಪಡೆದುಕೊಂಡು, ರಾಜಕಾರಣದಲ್ಲಿ ಸಾಕಷ್ಟು ಆಕ್ರಮಣಕಾರಿ ಪಾತ್ರವನ್ನೇ ವಹಿಸುತ್ತಿವೆ. ಇಂತಹ ಹೊಸ ಸಾಮಾಜಿಕ - ಆರ್ಥಿಕ ಸಂಕೀರ್ಣತೆಗಳಲ್ಲಿ, ಸಮಾಜವಾದ ತನ್ನ ಹೊಸ ದಿಗಂತಗಳನ್ನು ಕಂಡುಕೊಳ್ಳಬೇಕಿದೆ. ಹಾಗೆ ಕಂಡುಕೊಂಡ ಹೊಸ ಎಲ್ಲೆಗಳಲ್ಲೇ ಸಮಾಜವಾದಿಗಳೆನಿಸಿಕೊಂಡವರು ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಂಡು, ಅದರ ಚೆಲುವನ್ನೇ ಒಂದು ಹೊಸ ಮೌಲ್ಯವೆಂಬಂತೆ ಪ್ರಚುರ ಪಡಿಸುವಂತಹ ಸಾಂಸ್ಕೃತಿಕ ಆಂದೋಲನವನ್ನಾಗಿ, ಹೊಸ ಸಮಾಜವಾದಿ ಆಂದೋಲನವನ್ನು ಕಟ್ಟಬೇಕಾಗಿದೆ. ಮುಖ್ಯವಾಗಿ ಕುಟುಂಬವೊಂದರ ಆಸ್ತಿ ಮತ್ತು ಆದಾಯ ಮಿತಿಗಳ ನಿರ್ಧಾರಗಳೊಂದಿಗೆ ಈ ಕೆಲಸ ಆರಂಭವಾಗಬೇಕಿದೆ. ಅದರ ಆಧಾರದ ಮೇಲೆ ಸಾಮಾಜಿಕ ನ್ಯಾಯ ಮೀಮಾಂಸೆಯನ್ನು ಪುನಾರಚಿಸಬೇಕಿದೆ. ಈ ಮೀಮಾಂಸೆ ಮುಖ್ಯವಾಗಿ ಜಾಗತೀಕರಣ ಸೃಷ್ಟಿಸಿರುವ 'ಸುಖ'ದ ಕಲ್ಪನೆಯ ನಿಜತ್ವವನ್ನು ಶೋಧಿಸಬಲ್ಲ ಪಾರಮಾರ್ಥಿಕತೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಇಲ್ಲದೇ ಹೋದಲ್ಲಿ, ಜಾತಿ, ಭಾಷೆ, ಆಡಳಿತ ಮತ್ತು ತಂತ್ರಜ್ಞಾನಗಳನ್ನು ಕುರಿತ ನಮ್ಮ ಹಳೆಯ ನೀತಿಗಳನ್ನು ಪುನರ್ ವಿಮರ್ಶಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ.

ಈ ವಿಷಯಗಳನ್ನು ಕುರಿತಂತೆ, ಸಮಾಜವಾದ ಹಿನ್ನೆಲೆಗೆ ಸರಿದ ಕಳೆದ ಇಪ್ಪತೈದು ವರ್ಷಗಳಲ್ಲಿ ನಡೆದಿರುವ ಎಲ್ಲ ಚರ್ಚೆಗಳನ್ನೂ ಸಹಾನುಭೂತಿಯಿಂದ ಪರಿಶೀಲಿಸಿ, ಸಮಾಜವಾದವನ್ನು ಹೊಸಕಾಲದ ಮಧ್ಯಮ ಮಾರ್ಗವನ್ನಾಗಿ ಹೇಗೆ ಜನರ ಕಣ್ಣಲ್ಲಿ ವ್ಯಾವಹಾರಿಕವೂ ಹೌದೆನ್ನುವ ರೀತಿಯಲ್ಲಿ ಪ್ರಸ್ತುತ ಪಡಿಸಬಹುದು ಎಂಬುದರ ರೂಪು ರೇಷೆಗಳನ್ನು ಸಿದ್ಧ ಪಡಿಸಬೇಕಿದೆ. ಅದು ಮುಖ್ಯವಾಗಿ, ಮುಕ್ತ ಮಾರುಕಟ್ಟೆಯ ಆರ್ಥಿಕತೆ ಸೃಷ್ಟಿಸುತ್ತಿರುವ ಆಸ್ಫೋಟನಕಾರಿ ಅಸಮಾನತೆಯ, ಅಪರಾಧಗಳ, ಅಶ್ಲೀಲತೆಯ ಹಾಗೂ ಅವನತಿಯ ಸಮಾಜಕ್ಕೆ ಒಂದು ನೈತಿಕ ಪರ್ಯಾಯವಾಗಿರುವಂತೆ ನೋಡಿಕೊಳ್ಳಬೇಕಿದೆ. ಉದಾಹರಣೆಗೆ, ಇಂದಿನ ಆರ್ಥಿಕತೆಯಲ್ಲಿ ತಿಂಗಳಿಗೆ ಪ್ರತಿ ಕುಟುಂಬಕ್ಕೂ ಹತ್ತು ಸಾವಿರ ರೂಪಾಯಿಗಳ ಆದಾಯವಿಲ್ಲದೆ, ಯಾರಾದರೂ ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯಗಳಿಸುವುದು ಮತ್ತು ಅಂತಹ ವ್ಯವಸ್ಥೆ ಇರುವುದು ಅನೈತಿಕ ಎಂಬ ಸಾಂಸ್ಕೃತಿಕ ಎಚ್ಚರವನ್ನು ಪ್ರಚೋದಿಸುವ ರೀತಿಯಲ್ಲಿ ಈ ಆಂದೋಲನವನ್ನು ಆರಂಭಿಸಬೇಕಿದೆ. ನೇರವಾಗಿ ಹೇಳುವದಾದರೆ, ಹೊಸ ಸಮಾಜವಾದವೆಂಬುದು ರೂಪುಗೊಳ್ಳುವುದಾದರೆ, ಅದೊಂದು ಹೊಸ ನೈತಿಕ ಆಂದೋಲನವಾಗಿಯೇ ಆರಂಭವಾಗಬೇಕಿದೆ. ಇದಕ್ಕೆ ಸದ್ಯಕ್ಕೆ ಪಕ್ಷದ ಅಗತ್ಯವಿಲ್ಲ. ಮೊದಲು ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು, ಸಹಮತ ಮೂಡಿಸಲು ಒಂದು ಅಧ್ಯಯನದ ವೇದಿಕೆಯ ಅಗತ್ಯವಿದೆ. ಸಮಾಜವಾದವನ್ನು ಗಾಂಧಿವಾದದ ಹೆಸರಲ್ಲಾಗಲಿ, ಸರ್ವೋದಯದ ಹೆಸರಲ್ಲಾಗಲಿ, ಹೊಸ ಸಮಾಜವಾದದ ಹೆಸರಲ್ಲಾಗಲಿ ಪುನರುಜ್ಜೀವನಗೊಳಿಸ ಬಯಸುವವರು, ಮೊದಲು ಇಂತಹ ವೇದಿಕೆಯೊಂದರ ಅನಿವಾರ್ಯತೆಯನ್ನು ಮನಗಂಡು, ಅದನ್ನು ರೂಪಿಸುವ ಕಡೆ ಪ್ರಯತ್ನ ಗಳನ್ನು ಆರಂಭಿಸಬೇಕಿದೆ.