ಸಮಾಜವಾದಿ ಪತ್ರಕರ್ತ, ‘ಸಂಗಾತಿ'ಯ ಮ.ನವೀನಚಂದ್ರ ಪಾಲ್

ಸಮಾಜವಾದಿ ಪತ್ರಕರ್ತ, ‘ಸಂಗಾತಿ'ಯ ಮ.ನವೀನಚಂದ್ರ ಪಾಲ್

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀರಾಮ ದಿವಾಣ
ಪ್ರಕಾಶಕರು
ಕನ್ನಡ ಸಂಘ ಕಾಂತಾವರ (ರಿ) ಕಾಂತಾವರ, ಕಾರ್ಕಳ
ಪುಸ್ತಕದ ಬೆಲೆ
ರೂ. ೪೫.೦೦ ಮುದ್ರಣ: ೨೦೧೮

ಮ.ನವೀನಚಂದ್ರ ಪಾಲ್ (ಮ.ನ) ಎಂಬ ಪತ್ರಕರ್ತರನ್ನು ಬಹುತೇಕರು ಮರೆತೇ ಹೋಗಿದ್ದಾರೆ. ಒಂದು ಸಮಯದ ಧೀಮಂತ ಪತ್ರಕರ್ತ ನವೀನಚಂದ್ರ ಪಾಲ್ ಬಗೆಗಿನ ಪುಸ್ತಕವು ಕನ್ನಡ ಸಂಘ ಕಾಂತಾವರ ತಮ್ಮ ‘ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ ಯೋಜನೆಯ ಅಡಿಯಲ್ಲಿ ಪ್ರಕಟಿಸಿದ ೨೪೮ನೇ ಕುಸುಮ. ಈ ಕೃತಿಯನ್ನು ಪತ್ರಕರ್ತರೇ ಆಗಿರುವ ಉಡುಪಿಯ ಶ್ರೀರಾಮ ದಿವಾಣ ಇವರು ಬರೆದಿದ್ದಾರೆ. ಪುಸ್ತಕ ಸಣ್ಣದಾಗಿದ್ದರೂ ನವೀನಚಂದ್ರ ಪಾಲ್ ಅವರ ಸಾಧನೆ ಸಣ್ಣದಲ್ಲ. 

ಪುಸ್ತಕದ ಬೆನ್ನುಡಿಯಲ್ಲಿ ಲೇಖಕ, ವಿಮರ್ಶಕ ಡಾ. ಬಿ.ಜನಾರ್ದನ ಭಟ್ ಅವರು ಬರೆಯುತ್ತಾರೆ ‘ಕಥೆ, ಕವನ , ಸಾಹಿತ್ಯದ ಸುತ್ತವೇ ಸುತ್ತುತ್ತಿದ್ದ ಕನ್ನಡ ಪತ್ರಿಕೋದ್ಯಮಕ್ಕೆ ಜನಪರ ಧ್ವನಿಯಾದ ‘ಸಂಗಾತಿ'ಯ ಮೂಲಕ ಹೊಸ ರೂಪು ನೀಡಿದ ಮ.ನವೀನಚಂದ್ರ ಪಾಲ್ ಅವರು ನಿರಂತರ ತನಿಖಾ ವರದಿಗಳನ್ನು ಪ್ರಕಟಿಸಿ ಆಡಳಿತದ ಚಳಿ ಬಿಡಿಸಿದ ಧೀಮಂತ ಪತ್ರಕರ್ತ. ರಂಗಭೂಮಿ ಕಲಾವಿದ, ಗಾಯಕ, ಮಾನವ ಪ್ರೇಮಿ, ಸಹೃದಯಿ. ನವೀನಚಂದ್ರರು ಹುಟ್ಟುಹಾಕಿದ, ರೂಪಿಸಿದ ಸಂಗಾತಿಯನ್ನು ಮೆಚ್ಚದವರೇ ಇಲ್ಲ. ಸಾಮಾನ್ಯ ಓದುಗರಿಂದ ಹಿಡಿದು ಲೇಖಕರವರೆಗೆ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಸಂಗಾತಿಯನ್ನು ಮೆಚ್ಚುವವರೇ. ನವೀನಚಂದ್ರ ಪಾಲರ ಸಾಗರದಂಥಹ ವ್ಯಕ್ತಿತ್ವವನ್ನು ಕಟ್ಟಿಕೊಡುವ ಈ ಕೃತಿಯನ್ನು ರಚಿಸಿದವರು ಪತ್ರಕರ್ತ ಶ್ರೀರಾಮ ದಿವಾಣ.’

ನವೀನಚಂದ್ರ ಪಾಲ್ ಅವರನ್ನು ಬಹುತೇಕರು ನೆನಪಿನಲ್ಲಿ ಇಟ್ಟುಕೊಂಡಿರುವುದು ಅವರು ಸಂಪಾದಿಸಿ ಹೊರತರುತ್ತಿದ್ದ ‘ಸಂಗಾತಿ' ಪತ್ರಿಕೆಯ ಮೂಲಕ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮರು ವರ್ಷದಲ್ಲಿ ಪ್ರಾರಂಭವಾದ ‘ಸಂಗಾತಿ' ಪತ್ರಿಕೆ ಸುಮಾರು ೨೦ ವರ್ಷಗಳ ಕಾಲ ಓದುಗರನ್ನು ಹಿಡಿಟ್ಟಿತ್ತು. ಸಂಗಾತಿ ಪತ್ರಿಕೆಯಲ್ಲಿ ಬರುತ್ತಿದ್ದ ವರದಿಗಳು ಹಾಗೂ ವಿವರಗಳು ನೇರ, ದಿಟ್ಟ ಮತ್ತು ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿದಿತ್ತು. ಕಥೆ, ಕವನ, ಸಾಹಿತ್ಯದ ಸುತ್ತಲೇ ಸುತ್ತುತ್ತಿದ್ದ ಕನ್ನಡ ಪತ್ರಿಕೋದ್ಯಮಕ್ಕೆ ಹೊಸದಾದ ರೂಪು ನೀಡಿದ ಖ್ಯಾತಿ ಮ.ನ.ಅವರಿಗೆ ಸಲ್ಲುತ್ತದೆ. ಇವರನ್ನು ಕರಾವಳಿಯ ಡಿವಿಜಿ ಎಂದು ಕರೆಯುತ್ತಿದ್ದರು. ತಮ್ಮ ನಿರಂತರ ತನಿಖಾ ವರದಿಗಳಿಂದ ಆಡಳಿತದ ಚಳಿ ಬಿಡಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವಾ ಮಾರ್ಕೆಟ್ ಪರಿಸರದಲ್ಲಿನ ಬಿಲ್ಲವ ಕುಟುಂಬದಲ್ಲಿ ೧೯೨೭ ಅಕ್ಟೋಬರ್ ೭ರಂದು ನವೀನಚಂದ್ರ ಇವರ ಜನ್ಮವಾಯಿತು. ತಂದೆ ಮರ್ದ್ ಸಾಲಿಯಾನ್ ಹಾಗೂ ತಾಯಿ ಶಾರದಾ ಬಾಯಿ. ತಂದೆಯವರು ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಂತರದ ದಿನಗಳಲ್ಲಿ ಫಿಶರೀಸ್ ಇನ್ಸ್ ಪೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ತಮ್ಮ ಕಲಿಕಾ ಕಾಲದಲ್ಲಿ ಮ.ನ.ಅವರು ಆದರ್ಶ ವಿದ್ಯಾರ್ಥಿ ನಾಯಕರೂ ಆಗಿದ್ದರು. ಕಲೆ, ಗಾಯನ ಇತ್ಯಾದಿಗಳಲ್ಲೂ ಆಸಕ್ತಿ ಇತ್ತು. ಆದರೆ ಇವರು ಹುಟ್ಟು ಹಾಕಿದ್ದು ಪತ್ರಿಕೆ.

ನವೆಂಬರ್ ೧, ೧೯೪೮ರಲ್ಲಿ ‘ಸಂಗಾತಿ’ಪತ್ರಿಕೆಯನ್ನು ಹೊರ ತಂದರು. ಮೊದಲಿಗೆ ಪಾಕ್ಷಿಕವಾಗಿ ಹೊರ ಬರುತ್ತಿದ್ದ ಪತ್ರಿಕೆ ನಂತರದ ದಿನಗಳಲ್ಲಿ ಸಾಪ್ತಾಹಿಕವಾಗಿ ಬದಲಾಯಿತು. ಪ್ರತೀ ಗುರುವಾರ ಹೊರಬರುತ್ತಿದ್ದ ಪತ್ರಿಕೆಯನ್ನು ಜನರು ಕಾದು ಕೊಳ್ಳುತ್ತಿದ್ದರು. ಸಂಗಾತಿ ಪತ್ರಿಕೆ ಗಡಿನಾಡು ಕಾಸರಗೋಡು ಕರ್ನಾಟಕಕ್ಕೇ ಸೇರಬೇಕೆಂದು ಪ್ರತಿಪಾದಿಸಿತ್ತು. ಈ ಕುರಿತು ಹಲವಾರು ಲೇಖನ ಹಾಗೂ ಸಂಪಾದಕೀಯ ಬರಹಗಳನ್ನೂ ಬರೆದಿದ್ದರು ಮ.ನಾ. ಇದರ ಜೊತೆಗೆ ಶಿಕ್ಷಣದ ಖಾಸಗೀಕರಣ, ಕಪಟ ನಾಟಕ ಮಾಡುತ್ತಿದ್ದವರನ್ನು ಬಯಲಿಗೆಳೆದದ್ದು, ಬಡವರ ಮನೆಯ ಸೊಡರಿಗೂ ಪ್ರಕಾಶವಿದೆಯೆಂಬ ಮಾಹಿತಿ, ಕಾರ್ಮಿಕರಿಗೆ ಬೆಂಬಲ ಹೀಗೆ ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲಿತ್ತು. 

ಮ.ನಾ. ಅವರ ಸಾಧನೆ ಹಾಗೂ ಜೀವನದ ಬಗ್ಗೆ ಬಹಳಷ್ಟು ವಿಷಯಗಳನ್ನು ಈ ಪುಸ್ತಕ ತಿಳಿಸುತ್ತದೆ. ಲೇಖಕರು ವಿಷಯ ಸಂಗ್ರಹ ಮಾಡಲು ಬಹಳ ಶ್ರಮ ವಹಿಸಿದ್ಧಾರೆಂದು ತಿಳಿದು ಬರುತ್ತದೆ. ಪುಸ್ತಕವು ೫೨ ಪುಟಗಳನ್ನಷ್ಟೇ ಹೊಂದಿದ್ದರೂ ಮ.ನಾ. ಬಗ್ಗೆ, ಅವರ ಪತ್ರಿಕೆ ಸಂಗಾತಿ ಬಗ್ಗೆ ತುಂಬಾನೇ ಸಂಗತಿಗಳನ್ನು ತಿಳಿಸುತ್ತದೆ.

ಪುಸ್ತಕದ ಕೊನೆಗೆ ಲೇಖಕರು ಪುಸ್ತಕ ಹೊರ ಬರಲು ಕಾರಣವಾದವರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ನವೀನಚಂದ್ರ ಪಾಲ್ ಅವರ ಧರ್ಮಪತ್ನಿಯಾದ ಶ್ರೀಮತಿ ಹೇಮಾವತಿ ಪಾಲ್ ಅವರಿಗೆ ಈ ಕೃತಿಯನ್ನು ಅರ್ಪಿಸಿದ್ದಾರೆ. 'ಸಂಗಾತಿ'ಯ ಆರಂಭದ ಸಂಚಿಕೆಗಳನ್ನು ಮುಂಬಯಿಯ ಎಂ. ಜೆ. ಹೆಗ್ಡೆಯವರು ತಮ್ಮ ಸಂಗ್ರಹದಿಂದ ಒದಗಿಸಿಕೊಟ್ಟಿದ್ದಾರೆ. ಸಂಗಾತಿಯಲ್ಲಿ ಪ್ರಕಟವಾದ ಆಯ್ದ ವರದಿಗಳು ಹಾಗೂ ಲೇಖನಗಳ ಮಾಹಿತಿಯನ್ನು ಲೇಖಕರು ಈ ಪುಸ್ತಕದಲ್ಲಿ ಒದಗಿಸಿದ್ದಾರೆ. ಇದೊಂದು ಸಂಗ್ರಹ ಯೋಗ್ಯ ಪುಸ್ತಕ ಎಂಬುವುದರಲ್ಲಿ ಅತಿಶಯೋಕ್ತಿ ಇಲ್ಲ.