ಸಮಾಜವಾದ: ಆತ್ಮವಂಚನೆಯ ಮತ್ತೊಂದು ಮುಖ (ಓಷೋ ರಜನೀಶರ ಚಿಂತನೆಗಳು)

ಸಮಾಜವಾದ: ಆತ್ಮವಂಚನೆಯ ಮತ್ತೊಂದು ಮುಖ (ಓಷೋ ರಜನೀಶರ ಚಿಂತನೆಗಳು)


“..the logical conclusion of the tyranny of the least and dumbest”


-      Nietzsche (Will to Power)

ಸತ್ಯವನ್ನು ಮೊದಲ ಬಾರಿಗೆ ಹೇಳಿದಾಗ ಯಾರಿಗೂ ಅದು ಸತ್ಯ ಎನಿಸುವುದಿಲ್ಲ. ಸಮಾಜವಾದದ ವಿರುದ್ಧ ಮಾತನಾಡುವವರು ಇಲ್ಲಿ ದೇಶದ್ರೋಹಿಗಳಂತೆ ಕಾಣಿಸುತ್ತಾರೆ. ಒಂದೇ ಸುಳ್ಳನ್ನು ಮತ್ತೆ ಮತ್ತೆ ಹೇಳುತ್ತಿದ್ದರೆ ಅದೇ ಸತ್ಯದಂತೆ ಭಾಸವಾಗುತ್ತದೆಯಂತೆ. ’ಸಮಾಜವಾದ’ದ ವಿಷಯದಲ್ಲಿ ಹೀಗೆಯೇ ಆಗಿರುವುದು. ಸಮಾಜವಾದವು ತನಗೆ ಜನ್ಮ ನೀಡಿದ ಬಂಡವಾಳವಾದವನ್ನೇ ಶತ್ರುವೆಂದು ಭಾವಿಸಿದೆ. ಹಿಂದೆ ಇತಿಹಾಸದಲ್ಲಿ ಬಂಡವಾಳವಾದವು ಊಳಿಗಮಾನ್ಯ ಪದ್ಧತಿಯಿಂದ ಹುಟ್ಟಿಕೊಂಡಿತ್ತು. ತರುವಾಯ ಬಂಡವಾಳವಾದವೇ ಪೂರ್ತಿಯಾಗಿ ಬೆಳೆದು ಸಮಾಜವಾದವಾಗುತ್ತದೆ ಹಾಗು ಸಮಾಜವಾದವೇ ಕೊನೆಗೆ ಕಮ್ಯುನಿಸಮ್‌ಗೆ ಜನ್ಮನೀಡುತ್ತದೆ. ಮುಂದೆ ಸಾಮ್ಯವಾದವು ಅರಾಜಕವಾದಕ್ಕೆ ಜನ್ಮ ನೀಡಬಹುದು. ಆದರೆ ಇದೆಲ್ಲ ಸಾಧ್ಯವಾಗುವುದು ನಮ್ಮ ಸಮಾಜ ಪ್ರತಿಯೊಂದು ಅವಸ್ಥೆಯನ್ನೂ ಹಂತ ಹಂತವಾಗಿ ದಾಟಿದಾಗ. ತಾಯಿಯು ಒಂಬತ್ತು ತಿಂಗಳಿಗೆ ಮುನ್ನವೇ ಮಗುವನ್ನು ಹಡೆದರೆ ಅದು ಜನ್ಮ ನೀಡಿದಂತಾಗುವುದಿಲ್ಲ, ಗರ್ಭಪಾತ ಎನಿಸಿಕೊಳ್ಳುತ್ತದೆ.

ಕಮ್ಯುನಿಸಂ ರಷ್ಯಾದಂತಹ ಬಡದೇಶದಲ್ಲಿ ಹೀಗೆ ಪ್ರಸವ ಸಮಯಕ್ಕೆ ಮುನ್ನವೇ ಹುಟ್ಟಿದ ಮಗು. ಆಗಿನ್ನೂ ರಷ್ಯಾ ಒಂದು ಬಂಡವಾಳಶಾಹೀ ದೇಶವಾಗಿರಲೇ ಇಲ್ಲ. ಆದರೆ ಅಲ್ಲಿ ಹತ್ತು ಲಕ್ಷ ಜನ ಅಮಾಯಕರನ್ನು ನಿರ್ದಯವಾಗಿ ಹತ್ಯೆ ಮಾಡಿ ಸಮಾಜವಾದವನ್ನು ಹೇರಲಾಯಿತು. ಆ ಕಾಲಕ್ಕೆ ರಷ್ಯಾದಲ್ಲೇನೂ ಹತ್ತು ಲಕ್ಷಜನ ಬಂಡವಾಳಗಾರರು ಖಂಡಿತ ಇರಲಿಲ್ಲ. ಎಣಿಸುತ್ತ ಹೋದರೆ ಅಮೆರಿಕಾದಲ್ಲೂ ಇಂದು ಹತ್ತು ಲಕ್ಷ ಜನ ಬಂಡವಾಳಗಾರರು ಸಿಗಲಾರರು. ’ಜನಹಿತಕ್ಕಾಗಿ’ ಮಾಡಲಾದ ಕೊಲೆಗಳಿಂದ ರಷ್ಯಾದಲ್ಲಿ ಸಮಾಜವಾದ ರೋಗಗ್ರಸ್ತವಾಯಿತು. ಐವತ್ತು ವರ್ಷಗಳ ತರುವಾಯ ಅದಕ್ಕೆ ಈಗ ಅರ್ಥವಾಗಿದೆ. ಈಗ ಅದು ಬಂಡವಾಳಶಾಹಿಯತ್ತ ಆಸಕ್ತಿ ತೋರಿಸುತ್ತಿದೆ. ರಷ್ಯಾದ ದುರಂತದಿಂದ ಎಲ್ಲ ಸಮಾಜವಾದಿಗಳೂ ಪಾಠ ಕಲಿಯಬೇಕಾಗಿದೆ. ಮಾವೋ ನೇತೃತ್ವದ ಚೀನಾ ರಷ್ಯಾವನ್ನು ಕಂಡೂ ಬುದ್ಧಿ ಕಲಿತಂತಿಲ್ಲ. ಕಾಲ ಪಕ್ವವಾಗುವ ಮುನ್ನ ಕೊಲೆಗಳನ್ನು ಮಾಡಿ ಏನನ್ನೂ ಸಾಧಿಸಲಾಗದು.

ಬಂಡವಾಳವಾದ ಎಂದೊಡನೆ ನಮ್ಮ ಪೂರ್ವಗ್ರಹ ಪೀಡಿತ ಸಮಾಜವಾದಿಗಳು ಕಿಡಿಕಾರುತ್ತಾರೆ. ಆದರೆ ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸಬೇಕೆಂದರೆ ಅದು ಬಂಡವಾಳವಾದದಿಂದ ಮಾತ್ರ ಸಾಧ್ಯ. ಬಂಡವಾಳವಾದವನ್ನು ಮೊದಲೇ ಸ್ಪಷ್ಟಪಡಿಸದೆ ಮುಂದುವರೆದರೆ ಆಭಾಸವಾದೀತು. ಬಂಡವಾಳವಾದವೆಂದರೆ ಸಂಪತ್ತನ್ನು ಸೃಷ್ಟಿಸುವ ಒಂದು ವ್ಯವಸ್ಥೆ. ಆಧುನಿಕ ಪೂರ್ವ ಯುಗದಲ್ಲಿ ಬಂಡವಾಳವನ್ನು ಸೃಷ್ಟಿಸುವ ಪರಿಕಲ್ಪನೆಯೇ ಇರಲಿಲ್ಲ. ಬಂಡವಾಳವೆಂದರೆ ಮನುಷ್ಯ ಪ್ರಯತ್ನದಿಂದಲೇ ಹುಟ್ಟುವ ಸಂಪತ್ತು, ಆರ್ಥಿಕ ವ್ಯವಹಾರಗಳಲ್ಲಿ ಹೂಡಿಕೆಗೆ ಬಳಸಲಾಗುವ ಹಣ ಎಂದರ್ಥ. ನಿಸರ್ಗದ ಸಂಪನ್ಮೂಲಗಳನ್ನು ಲೂಟಿ ಮಾಡಿದರೆ ಅದು ಬಂಡವಾಳ ಎನಿಸಿಕೊಳ್ಳುವುದಿಲ್ಲ. ಆಧುನಿಕ ಪೂರ್ವಯುಗದಲ್ಲಿ ಸಂಪತ್ತು ಲೂಟಿಯಿಂದ, ಶೋಷಣೆಯಿಂದ ಮಾತ್ರ ಸಂಗ್ರಹವಾಗುತ್ತಿತ್ತು. ಆದರೆ ಆಧುನಿಕ ಯುಗವು ಲೂಟಿಯಿಲ್ಲದೆ, ಶೋಷಣೆಯಿಲ್ಲದೆ ಸಂಪತ್ತಿನ ಸೃಷ್ಟಿಯನ್ನು ಸಾಧ್ಯ ಮಾಡಿದೆ. ಕಮ್ಯುನಿಸಂ ಹುಟ್ಟಿದ್ದೇ ಹೀಗೆ ಅಗಾಧ ಪ್ರಮಾಣದಲ್ಲಿ ಉತ್ಪಾದನೆಯಾದ ಸಂಪತ್ತನ್ನು ಸಮನಾಗಿ ಹಂಚುವ ಉದ್ದೇಶದಿಂದ. ಸಮಾಜವಾದಿಗಳು ಎನಿಸಿಕೊಂಡವರಿಗೆ ಇಷ್ಟೂ ಅರ್ಥವಾಗದೆ ಬಂಡವಾಳವಾದ ಎಂಬ ಹೆಸರು ಕೇಳಿದರೆ ಹಾವು ಮುಟ್ಟಿದಂತಾಡುತ್ತಾರೆ. ಮೊದಲು ಬಂಡವಾಳವನ್ನು ಸೃಷ್ಟಿಸದೇ ಸಮಾಜವಾದವನ್ನು ಮಾತನಾಡುವುದು ನಿಜಕ್ಕೂ ಬಾಲಿಶತನ. ಈ ದಿನ ಇಂದಿರಾ ಗಾಂಧೀ ಹಾಗು ಅವರ ಮೂರ್ಖ ಸಂಗಡಿಗರು ದೇಶದಲ್ಲಿ ಸಮಾಜವಾದವನ್ನು ತಂದರೆ ಬಡತನವನ್ನು ತೊಲಗಿಸಬಹುದು ಎಂದು ಸಾರುತ್ತಿದ್ದಾರೆ. ಆದರೆ ಸಂಪತ್ತೇ ಇಲ್ಲದ ಮೇಲೆ ಹಂಚುವುದಾದರೂ ಏನನ್ನು? ಇಂದು ದೇಶದಲ್ಲಿ ಬಡತನ ಸಮೃದ್ಧವಾಗಿದೆ, ಅದನ್ನೇ ಹಂಚಿಕೆ ಮಾಡಬೇಕು ಅಷ್ಟೇ.

ಸಮಾಜವಾದಿಗಳ ಮತ್ತೊಂದು ಪೂರ್ವಗ್ರಹವೆಂದರೆ ಅವರು “ಕಾರ್ಮಿಕರು ಸಂಪತ್ತನ್ನು ಸೃಷ್ಟಿಸುತ್ತಾರೆ” ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಸಂಪತ್ತಿನ ಸೃಷ್ಟಿಯೂ ಒಂದು ಕಲೆ, ಆ ಕಲೆ ಕೆಲವರಿಗೆ ಮಾತ್ರ ಕರಗತವಾಗಿದೆ. ಕಾರ್ಮಿಕರ ಬೆವರಿನಿಂದ ಸಂಪತ್ತು ಖಂಡಿತ ಸೃಷ್ಟಿಯಾಗುವುದಿಲ್ಲ. ಇಂದು ಅಮೆರಿಕಾ ಶ್ರೀಮಂತ ರಾಷ್ಟ್ರವಾಗಿರುವುದು ಬೆರಳೆಣಿಕೆಯ ಕೆಲವು ಬಂಡವಾಳಗಾರರಿಂದ. ಅಲ್ಲಿ ಸಂಪತ್ತು ಕಾರ್ಮಿಕರ ಸೃಷ್ಟಿಯಲ್ಲ. ಆಫ್ರಿಕಾದ ಬುಡಕಟ್ಟು ಜನಾಂಗಗಳು ಇಪ್ಪತ್ತ ನಾಲ್ಕು ಗಂಟೆ ಶ್ರಮಪಟ್ಟು ದುಡಿಯುತ್ತವೆ. ಆದರೆ ಶ್ರಮದಿಂದ ಏನು ಲಾಭ? ಸಂಪತ್ತು ಉದ್ಯಮಶೀಲತೆಯಿಂದ ಕೈಗೂಡುತ್ತದೆ, ಬೆವರು ಸುರಿಸುವುದರಿಂದಲ್ಲ. ಮನುಷ್ಯನ ಶ್ರಮವನ್ನು ಯಂತ್ರಗಳಿಗೆ ವರ್ಗಾಯಿಸಿದ್ದು ಬಂಡವಾಳಶಾಹಿಯ ಬಹುದೊಡ್ಡ ಕೊಡುಗೆ. ಕೈಗಾರಿಕೀಕರಣದ ನಂತರ ಅಗಾಧ ಶಕ್ತಿಯ ಯಂತ್ರಗಳು ಅಪಾರ ಪ್ರಮಾಣದ ಸಂಪತ್ತನ್ನು ಗುಡ್ಡೆ ಹಾಕಿದವು. ಯಂತ್ರಗಳು ಬರುತ್ತಲೇ ಮನುಷ್ಯ ಗುಲಾಮತನದಿಂದ ಮುಕ್ತನಾದ, ಇದು ಬಂಡವಾಳಶಾಹಿಯ ಎರಡನೆಯ ಅತಿದೊಡ್ಡ ಕೊಡುಗೆ. ಇಂದು ಗುಲಾಮತನವಿಲ್ಲದೇ ಸಮಾಜ ಸಮೃದ್ಧವಾಗಿ ಬೆಳೆಯುವ ದಾರಿಗಳು ತೆರೆದುಕೊಂಡಿವೆ. ಇನ್ನು ಕೆಲವೇ ವರ್ಷಗಳಲ್ಲಿ ಕಾರ್ಮಿಕ ಎಂಬ ವರ್ಗವೇ ಮನುಷ್ಯಜಾತಿಯಿಂದ ಕಣ್ಮರೆಯಾಗಲಿದೆ, ಆಗಲೇ ಬೇಕು. ಯಂತ್ರಗಳಿಂದಾಗುವ ಕೆಲಸಗಳನ್ನು ಮನುಷ್ಯರ ಕೈಲಿ ಮಾಡಿಸುವುದು ನಿಜಕ್ಕೂ ಅಮಾನವೀಯತೆ. ದುಡಿಯುವ ಕೈಗಳೇ ಸಂಪತ್ತನ್ನು ಸೃಷ್ಟಿಸುವುದು ಎಂಬ ಸಮಾಜವಾದಿಗಳ ಸುಳ್ಳು ಪ್ರಚಾರವನ್ನೇ ನಿಜವೆಂದು ನಂಬಿದರೆ ಮನುಷ್ಯನ ದೈಹಿಕ ಶ್ರಮ ಹಾಗು ಶಕ್ತಿಗಳು ಅವನ ಸೃಜನಶೀಲತೆ ಹಾಗು ಬುದ್ಧಿಗಳ ಮೇಲೆ ಸವಾರಿ ಮಾಡಿ ನಾವು ಮತ್ತೆ ಶಿಲಾಯುಗದತ್ತ ಪಯಣಿಸಬೇಕಾಗುತ್ತದೆ.

ಸಂಪತ್ತು ಎಂಬ ಕಲ್ಪನೆಯೇ ಮನಸ್ಸಿನ ಸೃಷ್ಟಿ. ಒಬ್ಬ ಐನ್‌ಸ್ಟೀನ್, ಒಬ್ಬ ಫೋರ್ಡ್, ಒಬ್ಬ ಟಾಟಾ ಅಥವ ಬಿರ್ಲಾನ ಪ್ರತಿಭೆ ಸಂಪತ್ತನ್ನು ಸೃಷ್ಟಿಸುತ್ತದೆ. ಅದರ ಲಾಭವನ್ನು ಸಮಾಜ ಪಡೆದುಕೊಳ್ಳುತ್ತದೆ. ಆದರೆ ಬಂಡವಾಳಶಾಹಿಗಳು ಸಮಾಜದ ರಕ್ತ ಹೀರಿ ಶ್ರೀಮಂತರಾಗುತ್ತಾರೆ ಎಂದು ಸಮಾಜವಾದಿಗಳು ಪ್ರಚಾರ ಮಾಡುತ್ತಿರುವುದು ನಿಜಕ್ಕೂ ದುರಂತ. ಇದು ಅವರ ಮೂರನೆಯ ಭ್ರಮೆ. ಕೈಗಾರಿಕೀಕರಣಕ್ಕೂ ಮುನ್ನ ಸಮಾಜದಲ್ಲಿ ಸಂಪತ್ತು ಎಲ್ಲಿತ್ತು? ಬಂಡವಾಳಶಾಹಿಗಳು ಇಲ್ಲದ ಸಂಪತ್ತನ್ನು ಲೂಟಿ ಮಾಡಿದರು ಎಂಬ ಮಾತಿಗೆ ಏನರ್ಥ? ಬಂಡವಾಳಶಾಹಿಯು ಸಂಪತ್ತನ್ನು ಸೃಷ್ಟಿಸಿದ ಮೇಲೆ ಅದು ಸಮಾಜದ ಕಣ್ಣು ಕುಕ್ಕುತ್ತದೆ, ಈರ್ಷ್ಯೆ ಹುಟ್ಟಿಸುತ್ತದೆ. ನಿಜವಾಗಿಯೂ ಸಮಾಜವಾದಿಗಳ ಸಿದ್ಧಾಂತದ ಮೂಲದಲ್ಲಿರುವುದು ಕೇವಲ ಅಸೂಯೆ, ಸಮಾನತೆಯಲ್ಲ. ಸರಿಯಾಗಿ ಯೋಚಿಸಿ ನೋಡಿದರೆ ಸಮಾನತೆಯನ್ನು ಒಪ್ಪುವುದು ಮನುಷ್ಯ ಸಹಜ ಪ್ರವೃತ್ತಿಯೇ ಅಲ್ಲ ಎಂದು ತಿಳಿಯುತ್ತದೆ. ಸಂಪತ್ತು ಅಲ್ಪಸಂಖ್ಯಾತರ ಪ್ರತಿಭೆಯ ಫಲ. ಅದು ಬಹುಸಂಖ್ಯಾತರ ಅಸಹನೆ, ಅಸೂಯೆಗಳನ್ನು ಜಾಗೃತಗೊಳಿಸುತ್ತದೆ. ರಷ್ಯಾ ಹಾಗು ಚೀನಾದ ಕ್ರಾಂತಿಗಳ ಮೂಲದಲ್ಲಿ ಇದ್ದುದು ಇದೇ ಅಸಹನೆ ಹಾಗು ಅಸೂಯೆಗಳು. ಅಲ್ಲಿ ನಡೆದ ಕ್ರಾಂತಿಯೇ ಈಗಲೂ ಇಲ್ಲಿನ ಸಮಾಜವಾದಿಗಳನ್ನು ಪ್ರೇರೇಪಿಸುತ್ತಿವೆ. ವಿನಾಶಕಾರೀ ಪ್ರವೃತ್ತಿಗಳಿಗೆ ಉದಾತ್ತ ಮೌಲ್ಯಗಳನ್ನು ಆರೋಪಿಸಿ ಸಮೃದ್ಧಿಯನ್ನು ತರುವ ಪ್ರಯತ್ನಗಳು ಎಂದಿಗೂ ಫಲ ನೀಡುವುದಿಲ್ಲ. ಏಕೆಂದರೆ ಬಂಡವಾಳಶಾಹಿ ಸೃಷ್ಟಿಸುವ ಸಂಪತ್ತು ಒಂದಲ್ಲ ಒಂದು ದಿನ ಬಡವನ ಕೈ ಸೇರಲೇ ಬೇಕು, ಅದಕ್ಕೆ ಬೇರೆ ದಾರಿಯಿಲ್ಲ. ಮತ್ತು ಅದನ್ನು ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ಆದರೆ ಅಸೂಯಾಪರತೆಯಿಂದ ಬಂಡವಾಳಶಾಹಿಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಮಾಡುವುದರಿಂದ ಬಡವನ ಬದುಕು ಇನ್ನೂ ದುರ್ಗತಿಗೆ ಇಳಿಯುತ್ತದೆ. ಬಂಡವಾಳಶಾಹಿಗೆ ಏನೂ ನಷ್ಟವಿಲ್ಲ, ಅವನಿಗೆ ಒಂದಲ್ಲದಿದ್ದರೆ ಹತ್ತು ದಾರಿಗಳಿರುತ್ತವೆ.

ಒಮ್ಮೆ ನಾನು ರೈಲಿನಲ್ಲಿ ಪ್ರಯಾಣಿಸುವಾಗ ನನ್ನ ಸಹಪ್ರಯಾಣಿಕನು (ಆತ ಒಬ್ಬ ಸಮಾಜವಾದಿ) ಕೊಳಚೆ ಪ್ರದೇಶಗಳನ್ನು ತೋರಿಸಿ “ನೋಡಿ ಆ ಎತ್ತರದ ಕಟ್ಟಡಗಳು ಈ ಗುಡಿಸಲುಗಳನ್ನು ಶೋಷಣೆ ಮಾಡಿ ಎದ್ದುನಿಂತಿವೆ” ಎಂದ. ಆಗ ನಾನು “ಆ ಎತ್ತರದ ಕಟ್ಟಡಗಳನ್ನು ಅಲ್ಲಿಂದ ಎತ್ತಿಬಿಡಿ, ಆಮೇಲೆ ನೋಡಿ ಏನಾಗುತ್ತದೆ. ಆಗ ಗುಡಿಸಲುಗಳೇನೂ ದೊಡ್ಡ ಕಟ್ಟಡಗಳಾಗುವುದಿಲ್ಲ, ಬದಲಿಗೆ ಗುಡಿಸಲುಗಳೂ ಅಲ್ಲಿಂದ ಖಾಲಿಯಾಗುತ್ತವೆ. ಈ ಗುಡಿಸಲುಗಳ ಜೀವನ ನಡೆಯುತ್ತಿರುವುದೇ ಆ ಕಟ್ಟಡಗಳ ಅವಲಂಬನೆಯಿಂದ” ಎಂದು ಹೇಳಿದೆ. ನಾನು ಗುಡಿಸಲುಗಳ ಬಗ್ಗೆ ಕಾಳಜಿ ಇಲ್ಲದೆ ಹೇಳಿದ ಮಾತುಗಳಲ್ಲ ಅವು. ಕಟ್ಟಡಗಳನ್ನು ನಿರ್ನಾಮ ಮಾಡುವುದು ಬಡತನದ ನಿರ್ಮೂಲನೆಗೆ ಪರಿಹಾರವಲ್ಲ. ಇಂತಹ ದೊಡ್ಡ ಕಟ್ಟಡಗಳನ್ನೇ ಇನ್ನೂ ಹೆಚ್ಚಿಸುತ್ತಾ ಹೋದಂತೆ ಗುಡಿಸಲುಗಳು ನಿರ್ನಾಮವಾಗಬಹುದು. ಆದರೆ ಚೀನಾದಂತಹ ದೇಶಗಳಿಗೆ ಇದು ಅರ್ಥವಾಗುವುದಿಲ್ಲ. ಕಮ್ಯುನಿಸ್ಟ್ ರಷ್ಯಾದಲ್ಲಿ ಸ್ಟಾಲಿನ್‌ನ ನಂತರ ಅಧಿಕಾರಕ್ಕೆ ಬಂದ ಕ್ರುಶೇವ್‌ಗೆ ಎದುರಾದ ಬಹುದೊಡ್ಡ ಸಮಸ್ಯೆ ಇದೇ. ಸ್ಟಾಲಿನ್ ಇದ್ದಾಗ ಸೊಂಟ ಬಗ್ಗಿಸಿ ದುಡಿಯುತ್ತಿದ್ದ ಆ ಸಮಾಜವಾದೀ ದೇಶದ ಯುವಕರಿಗೆ ಅನಂತರ ಕೆಲಸ ಮಾಡುವ ಉತ್ಸಾಹವೇ ಇರಲಿಲ್ಲ. ಬಂಡವಾಳಶಾಹೀ ವ್ಯವಸ್ಥೆಯಾದರೂ ದುಡಿಮೆಗೆ ಫಲ ನೀಡುತ್ತದೆ, ಪ್ರೋತ್ಸಾಹ ಧನ ನೀಡುತ್ತದೆ. ಬಂಡವಾಳಶಾಹಿ ಹೋದರೆ ಈ ದುಡಿಯುವ ಉತ್ಸಾಹವೂ ಹೋಗಿಬಿಡುತ್ತದೆ. ರಷ್ಯಾದಲ್ಲಿ ಇದೇ ಆದದ್ದು. ಮುಂದೊಂದು ದಿನ ಬಂಡವಾಳಶಾಹಿಯು ಸಮಾಜವಾದಕ್ಕೆ ಜನ್ಮ ನೀಡಿದ ಮೇಲೆ ಬಂಡವಾಳಶಾಹಿಯು ತಿರೋಧಾನವಾಗಿ ಈ ಪ್ರೋತ್ಸಾಹ ಧನ ಮಾತ್ರ ಹಾಗೆಯೇ ಮುಂದುವರೆಯುತ್ತದೆ ಎಂದು ನನ್ನ ಅನಿಸಿಕೆ. ಏಕೆಂದರೆ ಈಗಾಗಲೇ ಅಮೆರಿಕಾದಲ್ಲಿ ಇದು ಸಂಭವಿಸಿದೆ. ಇನ್ನು ಕೆಲವೇ ದಶಕಗಳಲ್ಲಿ ಅಮೆರಿಕಾ ರಕ್ತಕ್ರಾಂತಿಯೇ ಇಲ್ಲದೆ ಒಂದು ಸಮಾಜವಾದೀ ರಾಷ್ಟ್ರವಾಗಿ ಬೆಳೆಯಲಿದೆ ಹಾಗು ರಷ್ಯಾ ಕ್ರಮೇಣ ಬಂಡವಾಳಶಾಹಿಯಾಗಲಿದೆ, ಇದು ನನ್ನ ಭವಿಷ್ಯವಾಣಿ. ಒಂದು ದೇಶ ಸಂಪತ್ತಿನಿಂದ ತುಂಬಿ ತುಳುಕುವಂತಾದರೆ ಖಾಸಗೀ ಆಸ್ತಿ ಎಂಬ ಕಲ್ಪನೆಗೆ ಅರ್ಥವೇ ಇರುವುದಿಲ್ಲ. ಸಂಪತ್ತು ನೀರಿನಂತೆ, ಗಾಳಿಯಂತೆ, ಎಲ್ಲರಿಗೂ ಸಿಗುವಂತಾದರೆ ಖಾಸಗೀ ಆಸ್ತಿಗೆ ಅವಕಾಶವೆಲ್ಲಿ? ಖಾಸಗೀ ಒಡೆತನವನ್ನು ನಿರ್ಮೂಲನೆ ಮಾಡಲು ಬಂಡವಾಳಶಾಹಿಯನ್ನು ಬೆಳೆಸುವುದೊಂದೇ ಸಹಜ ಹಾಗು ವೈಜ್ಞಾನಿಕ ವಿಧಾನ. ಇದು ಸಾಧ್ಯವೆಂದು ಅಮೆರಿಕಾ ಈಗಾಗಲೇ ರುಜುವಾತು ಮಾಡಿದೆ. ಸಮಾಜವಾದದಿಂದ ಹುಟ್ಟಿದ ಸೋಗಲಾಡಿತನದಿಂದಾಗಿ ಇಂದು ರಷ್ಯಾ ಆಹಾರ ಪದಾರ್ಥಗಳನ್ನೂ ಆಮದು ಮಾಡಿಕೊಳ್ಳುವಂತಾಗಿದೆ. ಬಂಡವಾಳಶಾಹಿಗಳ ಆಹಾರದಿಂದ ಸಮಾಜವಾದಿಗಳ ಹೊಟ್ಟೆಗಳು ತುಂಬುತ್ತಿರುವುದು ನಿಜಕ್ಕೂ ವಿಪರ್ಯಾಸ.

ಮನುಷ್ಯ ಯೋಚಿಸುವುದೇ ಸೀಮಿತವಾಗಿ. ಏಕೆಂದರೆ ಅವನು ಸೃಷ್ಟಿಸಿಕೊಂಡ ಬದುಕೇ ಸೀಮಿತವಾದುದು. ಅವನು ತನ್ನ ಹೆಂಡತಿ ಮಕ್ಕಳನ್ನು ಸಾಕಲು ದುಡಿಯುತ್ತಾನೆ, ಅದು ಸಹಜ ಕೂಡ. “ಸಮಾಜವನ್ನು ಸಾಕಲು ದುಡಿ” ಎಂದು ಹೇಳಿದರೆ ಅವನು ಹೇಗೆ ತಾನೇ ಶ್ರಮವಹಿಸಿ ದುಡಿಯಬಲ್ಲ? ಈ ಮನುಷ್ಯ ಸಹಜ ಪ್ರವೃತ್ತಿ ಬಂಡವಾಳಶಾಹಿಗೆ ಅರ್ಥವಾಗಿದೆ. ಹಾಗಾಗಿ ಈ ನೂರೈವತ್ತು ವರ್ಷಗಳಲ್ಲಿ ಅದು ಅಪಾರ ಸಂಪತ್ತನ್ನಲ್ಲದೆ ಅಪಾರ ಜ್ಞಾನವನ್ನೂ ಸೃಷ್ಟಿ ಮಾಡಿತು. ಯೇಸುಕ್ರಿಸ್ತನ ಕಾಲದಿಂದ ಈತನಕ ಎಷ್ಟು ಪ್ರಮಾಣದ ಜ್ಞಾನ ಉತ್ಪತ್ತಿಯಾಯಿತೋ ಅದನ್ನು ಬಂಡವಾಳಶಾಹಿ ವ್ಯವಸ್ಥೆಯು ನೂರೈವತ್ತು ವರ್ಷಗಳಲ್ಲೇ ಉತ್ಪತ್ತಿ ಮಾಡಿತು. ಹದಿನೆಂಟು ಶತಮಾನಗಳಲ್ಲಿ ಸಾಧಿಸಿದ್ದನ್ನು ಬರೀ ನೂರೈವತ್ತು ವರ್ಷಗಳಲ್ಲಿ ಸಾಧಿಸುವುದು ಪವಾಡವಲ್ಲವೇ? ಬಂಡವಾಳಶಾಹಿಯು ಪ್ರತಿಯೊಬ್ಬನಿಗೂ ದುಡಿಯುವ ಅವಕಾಶವನ್ನು, ಸಂಪತ್ತಿನ ಪ್ರವಾಹವೇ ಹರಿದು ಬರುವ ಅವಕಾಶವನ್ನು ನೀಡುತ್ತದೆ. ಆಮೇಲೆ ಅದರ ಶಿಶು ಸಮಾಜವಾದದ ಜನನವಾಗುತ್ತದೆ. ಸಮಾಜವಾದದಿಂದ ದೂರವಿರಿ ಎಂದು ನಾನು ಹೇಳಿದರೆ ಈ ಗರ್ಭಾವಸ್ಥೆ ಪೂರ್ತಿ ವಿಕಾಸವಾಗಲು ಅವಕಾಶ ನೀಡಿ ಎಂದರ್ಥ.

ತನ್ನ ಕಲ್ಪನೆಯ ಕಮ್ಯುನಿಸಮ್ ರಷ್ಯಾ ಚೀನಾದಂತಹ ದೇಶಗಳಲ್ಲಿ ಸಾಕಾರಗೊಳ್ಳಲಿದೆ ಎಂದು ಕಾರ್ಲ್‌ಮಾರ್ಕ್ಸ್ ಸಹ ಊಹಿಸಿರಲಿಲ್ಲ. ಕಮ್ಯುನಿಸಮ್ ಅಮೆರಿಕಾ ಅಥವ ಜರ್ಮನಿಯಲ್ಲಿ ಮೊಳಕೆಯೊಡೆಯಲಿದೆ ಎಂದು ಭಾವಿಸಿದ್ದ. ಮಾರ್ಕ್ಸ್‌ನ ಚಿಂತನೆ ತುಂಬ ವೈಜ್ಞಾನಿಕವಾದುದು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಕಣ್ಮರೆಯಾಗಲಿದೆ ಎಂದು ಸರಿಯಾಗಿಯೇ ಹೇಳಿದ್ದ. ಮುಂದೊಂದು ದಿನ ಬಂಡವಾಳಶಾಹೀ ಸಂಪತ್ತಿನ ಅಭಿವೃದ್ಧಿ ಹಾಗು ಸಮೃದ್ಧಿಗಳನ್ನು ಕಡೆಗಣಿಸಿ ಮನುಷ್ಯನ ಅವಕಾಶವಾದ ಹಾಗು ಅಸೂಯೆಗಳು ತನ್ನ ರಾಜಕೀಯ ಕಲ್ಪನೆಗಳಿಗೆ ಸಾಕಾರ ನೀಡಲಿವೆ ಎಂದು ಅವನು ಸಹ ಊಹಿಸಿರಲಿಲ್ಲ. ಕಮ್ಯುನಿಸಮ್ ರಷ್ಯಾ, ಚೀನಾದಂತಹ ಬಡದೇಶಗಳಲ್ಲಿ ದೊಡ್ಡದಾಗಿ ಡಂಗೂರ ಸಾರುತ್ತ ಸ್ಥಾಪನೆಯಾದವು. ಆದರೆ ಈಗ ಅಮೆರಿಕಾದಲ್ಲಿ ಸಮಾಜವಾದ ಸದ್ದಿಲ್ಲದೆ ಕಾಲಿಡುತ್ತಿದೆ. ಸಹಜವಾದ ವಿಕಾಸ ಎಂದಿಗೂ ಸದ್ದಿಲ್ಲದೆ ಸಂಭವಿಸುವುದು. ಬಂಡವಾಳಶಾಹಿಯು ಪೂರ್ತಿ ವಿಕಾಸವಾಗದೇ ಸಮಾಜವಾದ ಹುಟ್ಟದು ಎಂಬ ಪ್ರಾಥಮಿಕ ತಿಳುವಳಿಕೆಯೂ ಇಲ್ಲದ ಈ ಜನ ತಮಟೆ ತುತ್ತೂರಿಗಳನ್ನು ಬಾರಿಸುತ್ತ ಸಮಾಜವಾದವನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಬಡವನ ಹೊಟ್ಟೆಯ ಕಿಚ್ಚು ತಣಿವುದಲ್ಲದೆ ಅವನ ತುತ್ತಿನ ಚೀಲ ತುಂಬದು.