ಸಮಾಜಸೇವೆಯ ಮನಸ್ಸುಳ್ಳವರಿಗಾಗಿ ಗೃಹರಕ್ಷಕ ದಳ

ಸಮಾಜಸೇವೆಯ ಮನಸ್ಸುಳ್ಳವರಿಗಾಗಿ ಗೃಹರಕ್ಷಕ ದಳ

ಹಲವಾರು ಮಂದಿಗೆ ಪೋಲೀಸ್ ಸಮವಸ್ತ್ರ ಧರಿಸಿ ಜನರ ಸೇವೆ ಮಾಡುವ ಮನಸ್ಸಿರುತ್ತದೆ. ಕೆಲವರಿಗೆ ಮಿಲಿಟರಿ ಸೇರಿ ಸೈನಿಕನ ಸಮವಸ್ತ್ರ ಧರಿಸಿ ದೇಶ ಸೇವೆ ಮಾಡುವ ಮನಸ್ಸಿರುತ್ತದೆ. ಆದರೆ ಕೌಟುಂಬಿಕ ಕಾರಣದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಅವರಿಗೆ ಈ ಅವಕಾಶ ತಪ್ಪಿ ಹೋಗಿರುತ್ತದೆ. ಅಗತ್ಯದ ತುರ್ತು ಪರಿಸ್ಥಿತಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಸೈನಿಕನೇ ಎಂಬುದೊಂದು ಮಾತಿದೆ. ಈ ಮಾತಿನಂತೆ ನೀವೂ ಖಾಕಿ ಸಮವಸ್ತ್ರ ಧರಿಸಿ ನಿಮ್ಮ ಆಶೆಯಂತೆ ಜನರ ಸೇವೆ ಮಾಡಿ ಆ ಮೂಲಕ ಕಿಂಚಿತ್ತಾದರೂ ದೇಶಸೇವೆ ಮಾಡಬಹುದು. ಹೇಗೆ ಗೊತ್ತಾ? ಗೃಹರಕ್ಷಕ ದಳ ಸೇರುವ ಮೂಲಕ.

ಗೃಹರಕ್ಷಕ ದಳ ಅಥವಾ ಹೋಂ ಗಾರ್ಡ್ ಇವರು ಪೋಲೀಸ್ ಇಲಾಖೆಗೆ ಸೇರಿದವರಲ್ಲ. ಆದರೆ ಸರಕಾರದ ಅಧೀನದಲ್ಲಿರುವ ಆದರೆ ಸ್ವತಂತ್ರ, ಶಿಸ್ತು ಬದ್ಧ ಸಮವಸ್ತ್ರಧಾರಿ ಸ್ವಯಂಸೇವಕರನ್ನು ಒಳಗೊಂಡ ಸಂಸ್ಥೆಯೇ ಗೃಹರಕ್ಷಕ ದಳ. ಬಹಳಷ್ಟು ಮಂದಿಗೆ ಸಮಾಜಸೇವೆ ಮಾಡುವ ಆಸೆ, ಆಕಾಂಕ್ಷೆಗಳು ಇರುತ್ತದೆ. ನಿಮ್ಮ ವಯಸ್ಸು ೫೦ ವರ್ಷದ ಒಳಗಡೆ ಇದ್ದರೆ ನೀವು ಯಾವುದೇ ಸಮಯ ಈ ಸಂಸ್ಥೆಗೆ ಸೇರಬಹುದು. ಕೆಲವೊಂದು ಸಣ್ಣ ನಿಯಮಗಳು ಇವೆ. ನೀವು ದೈಹಿಕವಾಗಿ ಸದೃಢರಾಗಿರುವ ಯುವಕ ಅಥವಾ ಯುವತಿಯಾಗಿರಬೇಕು. ಹತ್ತನೇ ತರಗತಿಯ ವಿದ್ಯಾರ್ಹತೆ ಹೊಂದಿರಬೇಕು. ನಿಮ್ಮ ವಯಸ್ಸು ೧೯ ರಿಂದ ೫೦ ವರ್ಷದ ಒಳಗಡೆ ಇರಬೇಕು. ಇಷ್ಟೆಲ್ಲಾ ಅರ್ಹತೆಗಳು ನಿಮ್ಮಲ್ಲಿ ಇದ್ದರೆ ನೀವು ಗೃಹರಕ್ಷಕ ದಳ ಸೇರುವ ಮನಸ್ಸು ಮಾಡಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರೂ ಈ ಸಂಸ್ಥೆಯಲ್ಲಿ ಸೇರಲು ಮುಕ್ತ ಅವಕಾಶ ಇರುತ್ತದೆ. ಈ ದಳಕ್ಕೆ ಸೇರಿದ ಬಳಿಕ ಪ್ರತೀ ಮೂರು ವರ್ಷಕ್ಕೆ ಒಮ್ಮೆ ಮರು ದಾಖಲಾತಿ ಮಾಡಿಸಿಕೊಳ್ಳಬೇಕಾಗುತ್ತದೆ. ಎಲ್ಲಾ ಸರಕಾರಿ ನೌಕರರಿಗೆ ಇರುವಂತೆ ಇಲ್ಲಿಯೂ ನಿಮ್ಮ ನಿವೃತ್ತಿ ವಯಸ್ಸು ೬೦ ವರ್ಷ. 

ಗೃಹರಕ್ಷಕ ದಳಕ್ಕೆ ಸೇರಲು ಬಯಸುವ ಅರ್ಹ ಅಭ್ಯರ್ಥಿಗಳು ದಳದ ಜಿಲ್ಲಾ ಕಚೇರಿಗಳಲ್ಲಿ ಉಚಿತವಾಗಿ ದೊರಕುವ ಅರ್ಜಿ ಫಾರಂ ಅನ್ನು ಸೂಕ್ತ ದಾಖಲೆಗಳ ಜೊತೆ ಭರ್ತಿ ಮಾಡಿ ನಿಗದಿತ ದಿನದಂದು ನೀಡಬೇಕು. ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಅಪರಾಧದ ಹಿನ್ನಲೆ ಇಲ್ಲವೆಂದು ಸಾಬೀತಾದ ಬಳಿಕ ಆಯ್ಕೆಯ ಸಂದರ್ಶನ ನಡೆಯುತ್ತದೆ. ಆಯ್ಕೆಯ ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು, ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಗೃಹರಕ್ಷಕ ಸಮಾದೇಷ್ಟರು ಇರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರು ತಿಂಗಳ ಕಾಲ ಸಾಮಾನ್ಯ ಪ್ರಾಥಮಿಕ ತರಭೇತಿಗಳು ಇರುತ್ತದೆ. ತರಭೇತಿ ಸಮಯದಲ್ಲಿ ಪ್ರಾಥಮಿಕ ಚಿಕಿತ್ಸೆ, ಪ್ರವಾಹದ ಸಮಯದಲ್ಲಿ ಜನರ ರಕ್ಷಣೆ, ಅಗ್ನಿ ಅವಗಢದ ಸಮಯದಲ್ಲಿ, ವಾಹನ ದಟ್ಟಣೆ ಸಮಯದಲ್ಲಿ ನಿಯಂತ್ರಣ ಮೊದಲಾದ ವಿಷಯಗಳನ್ನು ಕಲಿಸಲಾಗುತ್ತದೆ. ಹೆಚ್ಚು ಹೆಚ್ಚು ಜನರು ಗೃಹರಕ್ಷಕ ಪಡೆಯಲ್ಲಿ ಸೇರಲಿ ಎನ್ನುಕ ಕಾರಣದಿಂದ ಸರಕಾರ ಕಿಂಚಿತ್ತು ಗೌರವ ಧನವನ್ನೂ ಕೊಟ್ಟು ಪ್ರೋತ್ಸಾಹ ಮಾಡುತ್ತಿದೆ. ಈ ಗೃಹರಕ್ಷಕ ದಳ ಎನ್ನುವುದು ಸರಕಾರೀ ಪ್ರಾಯೋಜಿತ ಸಂಸ್ಥೆಯಾಗಿರುತ್ತದೆ. ನಿಮ್ಮಲ್ಲಿರುವ ಸಮಾಜಸೇವೆಯ ಆಕಾಂಕ್ಷೆಯನ್ನು ಈ ದಳಕ್ಕೆ ಸೇರುವ ಮೂಲಕ ನೀವು ಪೂರ್ಣಗೊಳಿಸಬಹುದು. 

ಗೃಹರಕ್ಷಕ ದಳ ಪ್ರಾರಂಭ ಹೇಗೆ? ಏಕೆ? : ಎರಡನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರನ ನಾಜಿ ಪಡೆಯನ್ನು ಹಿಮ್ಮೆಟ್ಟಿಸಲು ಪೋಲೀಸ್ ಹಾಗೂ ಸೇನೆಗೆ ಬಲ ನೀಡಲು ಪರ್ಯಾಯ ಶಕ್ತಿಯನ್ನು ಹುಟ್ಟುಹಾಕಲೆಂದು ಉದಯಿಸಿದ್ದೇ ಗೃಹರಕ್ಷಣಾ ದಳ. ಆ ಸಮಯದಲ್ಲಿ ಇದನ್ನು ನಾಗರಿಕ ಪಡೆ ಅಥವಾ ನಾಗರಿಕರ ಸೇನೆ ಎಂದು ಕರೆಯುತ್ತಿದ್ದರು. ಇದರಲ್ಲಿ ತೊಡಗಿಕೊಂಡ ಕಾರ್ಯಕರ್ತರನ್ನು ‘ಸ್ಥಳೀಯ ರಕ್ಷಣಾ ಕಾರ್ಯಕರ್ತ' ಅಥವಾ LDV (Local Defence Volunteer) ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಅಂದರೆ ೧೯೪೬ರ ಡಿಸೆಂಬರ್ ೬ ರಂದು ದೇಶದಲ್ಲಿ ಮೊದಲ ಬಾರಿಗೆ ಬಾಂಬೆ (ಇಂದಿನ ಮುಂಬಯಿ) ಪ್ರಾಂತ್ಯದಲ್ಲಿ ಮೊದಲ ಗೃಹರಕ್ಷಕ ದಳ ಅಸ್ತಿತ್ವಕ್ಕೆ ಬಂತು. ದೇಶದ ಮೂರು ಸೇನಾ ಪಡೆಗಳ ಜೊತೆ ಸಮನ್ವಯತೆಯನ್ನು ಸಾಧಿಸಿ ದೇಶಕ್ಕೆ ತುರ್ತು ಪರಿಸ್ಥಿತಿಯು ಎದುರಾದರೆ ಹೋರಾಡಲು ಗೃಹರಕ್ಷಕ ದಳ ಸಜ್ಜಾಯಿತು. ಆ ತುರ್ತು ಸಮಯದಲ್ಲಿ ಜನರ ಜೀವವನ್ನು ಕಾಪಾಡುವ ಮಹತ್ತರ ಹೊಣೆ ಗೃಹರಕ್ಷಕ ಕಾರ್ಯಕರ್ತನದ್ದಾಗಿರುತ್ತದೆ. 

೧೯೬೨ರ ಭಾರತ - ಚೀನಾ ಯುದ್ಧದ ಸಮಯದಲ್ಲಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲ ಪಡಿಸುವ ದೃಷ್ಟಿಯಿಂದ ಈ ಸ್ವಯಂ ಸೇವಕರ ತಂಡಕ್ಕೆ 'ಗೃಹರಕ್ಷಕ ದಳ' ಎಂದು ಮರುನಾಮಕರಣ ಮಾಡಲಾಯಿತು. ನಂತರದ ದಿನಗಲಲ್ಲಿ ಮೊರಾರ್ಜಿ ದೇಸಾಯಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ ಗೃಹರಕ್ಷಕ ದಳದ ಕಾಯಿದೆ ಮತ್ತು ಕಾನೂನುಗಳನ್ನು ಗೃಹ ಇಲಾಖೆಯ ಅಡಿಯಲ್ಲಿ ತರಲಾಯಿತು. ಗಲಭೆ, ಹಿಂಸಾಚಾರ ಮೊದಲಾದ ಸಂದರ್ಭದಲ್ಲೂ ಪೋಲೀಸ್ ಪಡೆಗಳ ಜೊತೆ ಸಹಕರಿಸಲು ಗೃಹರಕ್ಷಕ ಪಡೆಯನ್ನು ಬಳಸುತ್ತಾರೆ. ಇವರ ಸಹಕಾರದಿಂದ ಪೋಲೀಸ್ ಇಲಾಖೆಗೆ ಹೊಸ ಬಲ ಬಂದಂತಾಗಿದೆ. 

ಗೃಹರಕ್ಷಕ ದಳದ ಕಾರ್ಯಕರ್ತರನ್ನು ದೇಶದಲ್ಲಿ ಹಲವಾರು ಕಾರ್ಯಗಳಿಗೆ ನೇಮಿಸುತ್ತಾರೆ. ದೇಶದ ಆಂತರಿಕ ಭದ್ರತೆಯನ್ನು ಕಾಪಾಡಲು, ನೈಸರ್ಗಿಕ ವಿಕೋಪಗಳಾದ ಭೂಕಂಪ, ನೆರೆಹಾವಳಿ, ಸುನಾಮಿ, ಚಂಡಮಾರುತ, ಭೂಕುಸಿತ ಇತ್ಯಾದಿಗಳಿಂದ ಜನರನ್ನು ರಕ್ಷಿಸಲು, ಯುದ್ಧ ಅಥವಾ ಗಲಭೆಗಳಂತಹ ತುರ್ತು ಸಮಯದಲ್ಲಿ, ಕಟ್ಟಡ ಕುಸಿತ, ಅನಿಲ ದುರಂತ ಮೊದಲಾದ ಸಮಯದಲ್ಲಿ ಜನರ ಪ್ರಾಣ ಹಾನಿ, ಆಸ್ತಿ ಪಾಸ್ತಿ ನಷ್ಟ ತಪ್ಪಿಸಲು, ಚುನಾವಣೆ ಸಮಯದಲ್ಲಿ ಭದ್ರತೆಗಾಗಿ, ಜಾತ್ರೆ, ಉತ್ಸವ, ಸಭೆ-ಸಮಾರಂಭ, ಮುಷ್ಕರ, ಪ್ರತಿಭಟನೆ ಮೊದಲಾದ ಸಂದರ್ಭಗಳಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲನೆಗಾಗಿ, ಸಾರ್ವಜನಿಕ ಕಟ್ಟಡಗಳ ಕಾವಲು ಕಾಯುವಿಕೆಗಾಗಿ, ದೇಶದ ಗಡಿಯನ್ನು ಕಾಯುವ ಗಡಿ ಭದ್ರತಾ (BSF) ಪಡೆಗೆ ಸಹಕಾರ ನೀಡಲು ಹಾಗೂ ಇನ್ನೂ ಹಲವಾರು ಕಾರ್ಯಗಳಲ್ಲಿ, ದೇಶದಲ್ಲಿ ಕಾರ್ಯಾಚರಿಸುವ ಸರಕಾರಿ ಕಾರ್ಯಾಲಯದ ಕೆಲಸ ಕಾರ್ಯಗಳಿಗೆ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತದೆ.

ಹೀಗೆ ಹಲವಾರು ವರ್ಷಗಳಿಂದ ದೇಶದ ಭದ್ರತೆ, ಸಾಮಾಜಿಕ ಸಂಕಷ್ಟ ಹಾಗೂ ಸಾಂಸ್ಕೃತಿಕ ಉಳಿವು ಮೊದಲಾದುವುಗಳಿಗೆ ಸಹಕಾರ ನೀಡುವ ಗೃಹರಕ್ಷಕ ದಳದ ಸಿಬ್ಬಂದಿಯವರನ್ನು ಸ್ಮರಿಸಲು ಪ್ರತೀ ವರ್ಷ ‘ಡಿಸೆಂಬರ್ ೬’ ನ್ನು ಗೃಹರಕ್ಷಕ ದಳದ ದಿನವಾಗಿ ಆಚರಿಸಲಾಗುತ್ತಿದೆ. ‘ನಿಷ್ಕಾಮ ಸೇವೆ’ ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ಗೃಹರಕ್ಷಕ ದಳದ ಕಾರ್ಯಕರ್ತರು ಯಾವತ್ತೂ ಸಮಾಜಸೇವೆಯಲ್ಲಿ ಎತ್ತಿದ ಕೈ. ಬನ್ನಿ, ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಅಳಿಲ ಸೇವೆಯನ್ನು ಸಲ್ಲಿಸುತ್ತಿರುವ ಗೃಹರಕ್ಷಕ ದಳದ ಸೇವೆಯನ್ನು ಸ್ಮರಿಸೋಣ.     

(ಆಧಾರ)

ಚಿತ್ರ: ಅಂತರ್ಜಾಲ ತಾಣ ಕೃಪೆ