ಸಮಾಜ ಘಾತುಕ

ಸಮಾಜ ಘಾತುಕ

ಬರಹ

ಬಹುತೇಕ ಮಂದಿ ಹಾಕಿಹರು ಮುಖವಾಡಗಳು
ಎಲ್ಲೆಲ್ಲಿ ನೋಡಲಿ ಕಾಣುವೆ ಗೋ ಮುಖಗಳು
ಒಳಗಣ್ಣ ತೆರೆದು ಬಗ್ಗಿ ನೋಡಲು ತಿಳಿವುದು
ಇವರು ಛದ್ಮ ವೇಷದಿಹ ವ್ಯಾಘ್ರಗಳು

ಅಂದು ಕಾಲೇಜಲಿ ಸೀಟು ಕೊಡಿಸುವೆನೆಂದ
ಅದಕಾಗಿ ದಕ್ಷಿಣೆಯ ತೆರಬೇಕಾಯಿತು
ಪದಕ ರ್‍ಯಾಂಕುಗಳ ಲಾಲಸೆ ತೋರಿದ ವೇಷಧಾರಿ
ಪ್ರಶ್ನೆ ಪತ್ರಿಕೆ ಕೊಡಲು ಹಾಕಿದ ದೊಡ್ಡ ಮೊತ್ತ

ಕಳೆದ ಮೊತ್ತವ ಮರುಗಳಿಸಲು ತೋರಿದ ಸುಲಭೋಪಾಯ
ಏಜೆಂಟನಿಂದ ಸರ್ಕಾರದ ಕಛೇರಿಯಲಿ ಜೀವನೋಪಾಯ
ಮೂಲಭೂತ ಸೌಕರ್ಯ ದುರಸ್ತಿಯದೇ ಇವಗೆ ಕಾಯಕ
ದುರಸ್ತಿಯ ಹೆಸರಲಿ ಕಾಸು ಮಾಡುವ ಹೊಟ್ಟೆ ಬಾಕ

ಸಣ್ಣ ಅಚಾತುರ್ಯದಿ ಸಿಕ್ಕಿ ಬಿದ್ದ ಸಾರ್ವಜನಿಕದಲಿ
ಕಳೆದು ಹೋಯಿತು ಅನ್ನ ನೀಡುವ ಕಾಯಕ ಅರ್ಧದಲಿ
ಬಿಸಿ ನೆತ್ತರ ರುಚಿ ಕಂಡವ ತಾಳಲಾರ ಹಸಿವು
ಕರಗತ ಮಾಡಿದ ಬೆವರಿರದ ಹಣ ಮಾಡುವ ತಂತ್ರ

ಸುಲಭದಿ ಸಿಗುವ ಬೀದಿ ಬದಿಯ ಚಿಣ್ಣ ಚಿಣ್ಣರಿಗೆ ಮೋಡಿ
ಕಣ್ಣು, ಕಿವಿ, ಕೈ, ಕಾಲು ಕಿತ್ತು ಭಿಕ್ಷೆಗೆ ಹಾಕಿದ ನೋಡಿ
ಅನಾಥ ಶಿಶುಗಳ ಉಳಿವಿಗೆ ಮಂದಿಯೆಲ್ಲರ ಮುಕ್ತ ಹಸ್ತ
ದಿನ ಮುಗಿಯಲು ಹದ್ದಿನಂತೆ ಕಬಳಿಸಿಹ ಈ ಜನಭಕ್ತ

ಅಮಾಯಕ ಹೆಣ್ಣುಮಕ್ಕಳ ಮೇಲೆಯೇ ವೇಷಿಗನ ಕಣ್ಣು
ಸಿದ್ಧಹಸ್ತರು ಮಾಡುವರವರ ಬೆಲೆವೆಣ್ಣು
ಆ ಮೇರುಗಿರಿಯವರೆಗೂ ಹಬ್ಬಿದೆ ಇಂತಹವರ ಜಾಲ
ರಕ್ತ ಪಿಪಾಸಿಗಳ ಬೇರು ಕೀಳಲು ಯಾರೂ ಸಿದ್ಧವಿಲ್ಲ