ಸಮಾಜ ಸುಧಾರಣೆಯ ಇತಿಹಾಸ ಮತ್ತು ವರ್ತಮಾನ, ಭವಿಷ್ಯದ ದೃಷ್ಟಿಯಿಂದ..
ಸಮಾಜ ಸೇವೆ ಅಥವಾ ಸುಧಾರಣೆ ಎಂದರೇನು ? ನಿಜವಾದ ಸಮಾಜ ಸುಧಾರಕರು ಯಾರು? ಯಾವ ರೀತಿಯಿಂದ ಸಮಾಜ ಸುಧಾರಣೆ ಸಾಧ್ಯ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗಿದಾಗ… ಹಿಂದೆ ದಾರ್ಶನಿಕರು, ಚಿಂತಕರು, ಆಧ್ಯಾತ್ಮಿಕ ಜೀವಿಗಳು, ತತ್ವಜ್ಞಾನಿಗಳು ಮುಂತಾದವರು ತಮ್ಮ ದೇಹ ಮನಸ್ಸುಗಳ ದಂಡನೆ, ಅಧ್ಯಯನ, ತಪಸ್ಸು, ಯೋಗ, ಧ್ಯಾನ, ನಿರಂತರ ಪ್ರವಾಸ, ವಾದ, ಚರ್ಚೆ, ಮಂಥನ ಮುಂತಾದ ಕ್ರಮಗಳಿಂದ ತಮ್ಮ ಅನುಭವವನ್ನು ಅನುಭಾವವಾಗಿ ಪರಿವರ್ತಿಸಿ ಅದನ್ನು ಜನರೊಂದಿಗೆ ಹಂಚಿಕೊಂಡು ಸಮಾಜದ ಮತ್ತು ಜನರ ಜೀವನ ಕ್ರಮವನ್ನು ಕ್ರಮಬದ್ಧ ಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದರು.
ಅನಂತರ ಸ್ಥಳೀಯ ಬಲಶಾಲಿ ನಾಯಕರು ತಮ್ಮ ಶಕ್ತಿಯನ್ನು ಬಳಸಿಕೊಂಡು ಜನರನ್ನು ರಕ್ಷಿಸುವ ಸಲುವಾಗಿ ತಮ್ಮ ಅನುಭವದ ಆಧಾರದ ಮೇಲೆ ಅವರ ಮೇಲೆ ಪ್ರಭಾವ ಬೀರಿ ಸಮಾಜವನ್ನು ತಿದ್ದುತ್ತಿದ್ದರು. ಮುಂದೆ ಇದು ರಾಜಪ್ರಭುತ್ವವಾಗಿ ಮಾರ್ಪಾಡಾಗಿ ಆಡಳಿತವೇ ಸಮಾಜ ಸೇವೆಯಾಯಿತು. ಇವರೊಂದಿಗೆ ಅನಧಿಕೃತವಾಗಿ ಚಿಂತಕರು, ಸಾಹಿತಿಗಳು, ಧಾರ್ಮಿಕ ಮುಖಂಡರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ತದನಂತರ ತಮಗಾದ ಅನ್ಯಾಯ, ಶೋಷಣೆ, ದೌರ್ಜನ್ಯಗಳ ವಿರುದ್ಧ ಕೆಲವು ಧೈರ್ಯಶಾಲಿ ವ್ಯಕ್ತಿಗಳು ಪ್ರಶ್ನಿಸುವ ಮೂಲಕ, ಹಾಗೆಯೇ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತ್ತು ಒಂದಷ್ಟು ಜನರನ್ನು ಸಂಘಟಿಸುವ ಮೂಲಕ ಹೋರಾಟ, ಚಳವಳಿ, ದಂಗೆ ಬಂಡಾಯ ಪ್ರಾರಂಭವಾಗಿ ಸಮಾಜ ಸುಧಾರಣೆಯ ಮಾರ್ಗದಲ್ಲಿ ಗಮನಾರ್ಹ ಬದಲಾವಣೆಗಳಾದವು.
ಹಾಗೆಯೇ ಈ ಎಲ್ಲಾ ಕಾಲಗಳಲ್ಲಿಯು ಒಂದಷ್ಟು ಉದಾತ್ತ ಗುಣಗಳ ಕೆಲವರು ತಮ್ಮೊಂದಿಗೆ ತಮ್ಮ ಆಸ್ತಿ ಹಣ ಜಮೀನುಗಳನ್ನು ಸಮಾಜಕ್ಕೆ ನಿಸ್ವಾರ್ಥವಾಗಿ ದಾನ ನೀಡುವ ಮೂಲಕ ಇಲ್ಲದವರ ಸಹಾಯಕ್ಕಾಗಿ ಮನ ಮಿಡಿಯುತ್ತಾ ಸಮಾಜ ಸೇವೆ ಮಾಡುತ್ತಿದ್ದರು. ಮುಂದೆ ಇದರ ಆಧಾರದ ಮೇಲೆ ಆಶ್ರಮಗಳು, ವಿಶ್ರಾಂತಿ ಗೃಹಗಳು, ದಾನ ಛತ್ರಗಳು ಕೊನೆಗೆ ಅನ್ನ ಅಕ್ಷರ ಆಶ್ರಯ ದಾಸೋಹದ ಮಠ ಪರಂಪರೆ ಬೆಳೆದು ಬಂದಿತು. ಸಮಾಜ ಸೇವೆಯಲ್ಲಿ ಈಗಲೂ ಈ ಸಂಸ್ಕೃತಿ ಮುಂಚೂಣಿಯಲ್ಲಿದೆ.
ಇದರ ನಡುವೆ ಭಾರತದಲ್ಲಿ ಕೆಲವು ಶತಮಾನಗಳ ಹಿಂದೆ ವಿದೇಶಿ ಆಕ್ರಮಣಕಾರರು ದೇಶದಲ್ಲಿ ದಾಳಿ ಮಾಡಿ ಆಕ್ರಮಿಸಿಕೊಂಡಾಗ ಅನೇಕರು ತಮ್ಮ ಬದುಕನ್ನೇ ತ್ಯಾಗ ಮಾಡಿ ಬಂಡಾಯದ ಮೂಲಕವೋ, ಶಸ್ತ್ರ ಹೋರಾಟದ ಮೂಲಕವೋ, ಸತ್ಯಾಗ್ರಹ - ಉಪವಾಸಗಳ ಮಾರ್ಗದ ಮೂಲಕವೋ ಒಟ್ಟಿನಲ್ಲಿ ತಮ್ಮ ಸ್ವಾತಂತ್ರ್ಯ ರಕ್ಷಣೆಗಾಗಿ ಅಪಾರ ತ್ಯಾಗ ಪರಿಶ್ರಮದ ಸಮಾಜ ಸುಧಾರಣೆ ಮಾಡಿದರು. ಇದರ ಜೊತೆಗೆ ಸಮಾಜದಲ್ಲಿದ್ದ ಮೌಡ್ಯ ಅಜ್ಞಾನ ಕಂದಾಚಾರ ಹಾನಿಕಾರಕ ಆಚರಣೆಗಳು ದುಶ್ಚಟಗಳು ಮುಂತಾದವುಗಳ ವಿರುದ್ಧ ಸಹ ಕೆಲವರು ನಿರಂತರವಾಗಿ ಹೋರಾಡುತ್ತಾ ಜನರನ್ನು ಜಾಗೃತಿಗೊಳಿಸುತ್ತಾ ಸಮಾಜ ಸುಧಾರಣೆಗೆ ತಮ್ಮ ಕೊಡುಗೆ ನೀಡಿದ್ದಾರೆ.
ಭಾರತದ ಸ್ವಾತಂತ್ರ್ಯ ನಂತರ ಸಮಾಜ ಸುಧಾರಣೆ ಕಾಲಕ್ಕೆ ತಕ್ಕಂತೆ ವಿವಿಧ ಆಯಾಮಗಳನ್ನು ಪಡೆಯಿತು. ಹಿಂದಿನ ವಿಧಾನ - ವಿಷಯಗಳ ಜೊತೆಗೆ ಬಡತನ ನಿವಾರಣೆಯ ಭೂದಾನ ಚಳವಳಿ, ಅಸ್ಪೃಶ್ಯತೆಯ ನಿವಾರಣೆಯ ಬಂಡಾಯ ಹೋರಾಟಗಳು, ಕಾರ್ಮಿಕ ಶೋಷಣೆಯ ಸಂಘಟನಾತ್ಮಕ ಪ್ರತಿಭಟನೆಗಳು, ಪೋಲೀಸ್ ದೌರ್ಜನ್ಯದ ವಿರುದ್ಧ ಬೃಹತ್ ಪ್ರದರ್ಶನಗಳು, ಸರ್ಕಾರದ ವಿರುದ್ಧ ವಿವಿಧ ಬೇಡಿಕೆಗಳ ಚಳವಳಿಗಳು ಇತ್ಯಾದಿಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಆಧುನಿಕ ಕಾಲದಲ್ಲಿ ಇದು ಬೇರೆ ಬೇರೆ ರೂಪ ಪಡೆಯುತ್ತಿದೆ. ವಿವಿಧ ಸಂಘಟನೆಗಳು ಸ್ವಯಂ ಸೇವಕ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ( ಎನ್ ಜಿ ಓ ), ಟ್ರಸ್ಟ್ ಗಳು, ರಾಜಕೀಯ ಪಕ್ಷಗಳು ಮುಂತಾದ ರೂಪದಲ್ಲಿ ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ದೌರ್ಜನ್ಯ, ಬೆಲೆ ಏರಿಕೆ, ನಿರುದ್ಯೋಗ ಮುಂತಾದ ವಿಷಯಗಳನ್ನು ಕೇಂದ್ರೀಕರಿಸಿ ಸಮಾಜ ಸೇವೆ ಮಾಡಲಾಗುತ್ತಿದೆ. ಅಲ್ಲದೇ ಅನೇಕ ಶ್ರೀಮಂತ ಉದ್ಯಮಿ - ವ್ಯಾಪಾರಿಗಳು, ಕಾರ್ಪೊರೇಟ್ ಸಂಸ್ಥೆಗಳು ತಮ್ಮಲ್ಲಿನ ಸ್ವಲ್ಪ ಭಾಗ ಹಣವನ್ನು ಸಮಾಜದ ವಿವಿಧ ಸಮಸ್ಯೆಗಳ ನಿವಾರಣೆಗೆ ವಿನಿಯೋಗಿಸಿ ಆಧುನಿಕ ದಾನಿಗಳು ಎಂದು ಹೆಸರು ಗಳಿಸಿ ಒಂದಷ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಕೆಲವರು ಇದನ್ನು ದುರುಪಯೋಗ ಪಡಿಸಿಕೊಂಡು ಸ್ವಾರ್ಥದ ರಾಜಕೀಯ ಸಹ ಮಾಡುತ್ತಿದ್ದಾರೆ. ಹೀಗೆ ಸಮಾಜ ಸೇವೆ ತನ್ನ ರೂಪವನ್ನು ಬದಲಿಸಿಕೊಳ್ಳುತ್ತಾ ವಸ್ತು, ವಿಚಾರ, ಬರಹಗಳ ರೂಪದಲ್ಲಿ ನಿರಂತರವಾಗಿ ಹರಿಯುತ್ತಿದೆ. ಆದರೆ ಈಗ ಅದು ಮತ್ತೊಂದು ದಿಕ್ಕಿನತ್ತ ಹರಿಯುವ ಅವಶ್ಯಕತೆ ಇದೆ. ಈ ಲೇಖನದ ಮೂಲ ಆಶಯವೇ ಅದು. ಅದೇನೆಂದರೆ...
ತಮ್ಮಲ್ಲಿರುವ ಸಂಪತ್ತಿನ ಹಂಚಿಕೆ ಮತ್ತು ಸಮಾಜದಲ್ಲಿನ ಒಳ್ಳೆಯದು ಹಾಗು ಒಳ್ಳೆಯವರನ್ನು ಗುರುತಿಸಿ ಹೊಗಳುವುದು, ಪ್ರೋತ್ಸಾಹಿಸುವುದು, ಪ್ರಶಸ್ತಿ ಸನ್ಮಾನ ಮಾಡುವುದು, ಭಾಷಣ, ಉಪನ್ಯಾಸ, ಪ್ರವಚನಗಳು ಮಾತ್ರ ಈ ಸಮಾಜ ಸುಧಾರಣೆಗೆ ಸಾಕಾಗುತ್ತಿಲ್ಲ. ಆದ್ದರಿಂದಲೇ ಸಮಾಜ ಯಾವುದೇ ಸುಧಾರಣೆ ಆಗದೆ ಸಮಾಜ ವಿರುದ್ಧ ದಿಕ್ಕಿನಲ್ಲಿ ನಿರಂತರವಾಗಿ ವಿನಾಶದತ್ತ ಕುಸಿಯುತ್ತಿದೆ. ಸ್ವಾರ್ಥ ಲೋಭ ಮೋಹಗಳು ಹೆಚ್ಚಾಗಿ ಗಾಳಿ ನೀರು ಆಹಾರ ಮಾತ್ರವಲ್ಲದೆ ಮಾನವೀಯ ಮೌಲ್ಯಗಳು ಸಹ ಕುಸಿಯುತ್ತಿವೆ. ಅದಕ್ಕೆ ಕಾರಣ ಸಮಾಜ ಸೇವೆ ಅಥವಾ ಸುಧಾರಣೆ ಕೇವಲ ಒಂದೇ ರೂಪದಲ್ಲಿ ಹರಿಯುತ್ತಿದೆ. ಒಳ್ಳೆಯವರನ್ನು ಮತ್ತು ಒಳ್ಳೆಯದನ್ನು ಮಾಡಿ ಮತ್ತು ಹೊಗಳಿ ಲಾಭ ಪಡೆಯುತ್ತಿರುವವರು ಹೆಚ್ಚಾಗಿ ಭಟ್ಟಂಗಿ ಅಥವಾ ಗುಲಾಮ ಸಂಸ್ಕೃತಿ ಹೆಚ್ಚಾಗಿ ಕೆಟ್ಟದ್ದು ಮತ್ತು ಕೆಟ್ಟವರನ್ನು ಧೈರ್ಯವಾಗಿ ಹೇಳುವ ಮತ್ತು ಪ್ರಶ್ನಿಸುವ ಮನೋಭಾವವೇ ಕಡಿಮೆಯಾಗಿದೆ. ಪ್ರವಾಹದ ವಿರುದ್ಧ ಈಜುವ ಗುಣಗಳು ಮಾಯವಾಗಿ ಪ್ರವಾಹದೊಂದಿಕೆ ಹೊಂದಾಣಿಕೆ ಮಾಡಿಕೊಂಡು ಹೋಗುವವರೇ ಹೆಚ್ಚಾಗಿದ್ದಾರೆ.
ಇದರ ಸಂಪೂರ್ಣ ಲಾಭವನ್ನು ರಾಜಕಾರಣಿಗಳು, ಅಧಿಕಾರಿಗಳು, ಧಾರ್ಮಿಕ ಮುಖಂಡರು, ಕಾರ್ಪೊರೇಟ್ ದಲ್ಲಾಳಿಗಳು ಪಡೆಯುತ್ತಿದ್ದಾರೆ. ಇವರೆಲ್ಲರೂ ಒಟ್ಟಾಗಿ ಒಂದು ನಿರ್ವೀರ್ಯ ( ಸೀಡ್ ಲೆಸ್ ) ಮಾನವ ಸ್ವಭಾವ - ಸಂಸ್ಕೃತಿಯನ್ನು ಹುಟ್ಟು ಹಾಕಿದ್ದಾರೆ. ಪ್ರಶ್ನಿಸುವ ಮನೋಭಾವವನ್ನೇ ಚಿವುಟಿ ಹಾಕಿದ್ದಾರೆ. ಕೇವಲ ಜೀ ಹುಜೂರ್ ಸಂಸ್ಕೃತಿ ಸೃಷ್ಟಿಯಾಗಿದೆ. ಈಗ ಬೇಕಾಗಿರುವುದು ಬಿದ್ದಿರುವ ಕಸವನ್ನು ಗುಡಿಸುವ ಕೆಲಸ ಮಾಡಬೇಕಾಗಿದೆ. ಕೇವಲ ಪಾಸಿಟಿವ್ ಅಂಶಗಳನ್ನು ಮಾತ್ರ ಮಾತನಾಡುವುದು ಮತ್ತು ಮಾಡುವುದು ಸುಲಭ. ಅದಕ್ಕಾಗಿ ಬಹಳಷ್ಟು ಜನರು ಇದ್ದಾರೆ. ಈಗ ನಿಜಕ್ಕೂ ಅವಶ್ಯಕತೆ ಇರುವುದು ನಯ ವಂಚಕರನ್ನು ಗುರುತಿಸಿ ಅವರನ್ನು ನಿರ್ಮೂಲನೆ ಮಾಡುವ ದಿಕ್ಕಿನ ಪ್ರಯತ್ನಗಳು ಮಾತ್ರ. ಅವರು ವಿರಾಟ್ ರೂಪದಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಬೆಳೆಯುತ್ತದ್ದಾರೆ. ಕೆಲವರು ಅವರ ತಂಟಗೆ ಹೋಗದೆ ತಾವು ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ಹಂಚುತ್ತಾ, ಸರ್ಕಾರದಿಂದ ಲಾಭ ಪಡೆಯುತ್ತಾ ಮಹಾ ಸಮಾಜ ಸೇವಕರಂತೆ ಜನರಿಂದ ಮತ್ತು ಮಾಧ್ಯಮಗಳಿಂದ ಪ್ರಶಸ್ತಿ ಪಡೆಯುತ್ತಾ ಆರಾಮವಾಗಿದ್ದಾರೆ. ಸಮಾಜ ಮಾತ್ರ ಆಧೊಗತಿಗೆ ಇಳಿಯುತ್ತಿದೆ.
ಈಗ ಕನಿಷ್ಠ ಮಾನವೀಯ ಸ್ಪಂದನೆಯ ಕೆಲವರಾದರು ತಾವು ಕೆಟ್ಟವರೆನಿಸಿಕೊಂಡರು ಭಯ ಪಡದೆ ಸಮಾಜದ ಶೋಷಕರ ವಿರುದ್ಧ ಮಾತನಾಡಬೇಕಿದೆ. ಕೆಲವರು ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಇಂತಹವರ ಮೇಲೆ ನಿರಂತರ ಒತ್ತಡ ತರುತ್ತಾರೆ. ಅದನ್ನು ಮೀರಿ ಸತ್ಯ ಮತ್ತು ನ್ಯಾಯದ ಪರ ನಿಲ್ಲಬೇಕಾಗುತ್ತದೆ. ಯಾವುದೇ ಪ್ರತಿಫಲಾಪೇಕ್ಷೇ ಬಯಸದೆ ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲಿ ನಿರಾಶರಾಗಬಾರದು.
ಕೆಟ್ಟವರನ್ನು ಮತ್ತು ಕೆಟ್ಟದ್ದನ್ನು ಗುರುತಿಸಿ ಸಮಾಜದಲ್ಲಿ ನಿಷ್ಪಕ್ಷಪಾತವಾಗಿ ಬಹಿರಂಗ ಪಡಿಸುವುದೇ ಇಂದಿನ ನಿಜವಾದ ಅವಶ್ಯಕತೆ ಇರುವ ಸಮಾಜ ಸೇವೆ ಮತ್ತು ಸುಧಾರಣೆ. ಇದು ಮುಂದೆ ಬದಲಾಗುವುದು. ಆದರೆ ಈಗ ತಕ್ಷಣದ ಅನಿವಾರ್ಯ. ದಯವಿಟ್ಟು ಆಸಕ್ತರು ಯೋಚಿಸಿ..
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ