ಸಮಾಧಾನಕರ ಭರವಸೆ

ಸಮಾಧಾನಕರ ಭರವಸೆ

ಎಡಪಂಥೀಯ ಧೋರಣೆಯ ಅನುರ ಕುಮಾರ ದಿಸ್ಸನಾಯಕೆ ಶ್ರೀಲಂಕಾದ ಅಧ್ಯಕ್ಷರಾಗಿ ಚುನಾಯಿತರಾದಾಗ ಭಾರತದಲ್ಲಿ ಆತಂಕ ಮೂಡಿದ್ದು ಸಹಜವೇ ಆಗಿತ್ತು. ಅದಾಗಲೇ ಚೀನಾ ಹಿಡಿತದೊಳಗೆ ಸಿಲುಕಿರುವ ಶ್ರೀಲಂಕಾ ಇನ್ನು ಮುಂದೆ ಮತ್ತಷ್ಟು ಭಾರತ ವಿರೋಧಿಯಾಗಬಹುದು ಎಂಬ ಕಳವಳ ಹುಟ್ಟಿಕೊಂಡಿತ್ತು. ಆದರೆ ದಿಸ್ಸನಾಯಕೆ ಅವರು ಈ ಆತಂಕವನ್ನು ನಿವಾರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮೊತ್ತಮೊದಲಾಗಿ ಭಾರತಕ್ಕೆ ಭೇಟಿ ನೀಡಿರುವ ಅವರು, ಶ್ರೀಲಂಕಾದ ನೆಲವನ್ನು ಭಾರತದ ಭದ್ರತೆಗೆ ಅಪಾಯವಾಗಬಲ್ಲ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಚೀನಾವು ಹಿಂದೂ ಮಹಾಸಾಗರದಲ್ಲಿ ತನ್ನ ಅಧಿಪತ್ಯವನ್ನು ಹೆಚ್ಚಿಸುತ್ತಾ, ಭಾರತದ ಮೇಲೆ ಅಪಾಯದ ಛಾಯೆ ಹರಡುತ್ತಿರುವ ಮಧ್ಯೆಯೇ ಶ್ರೀಲಂಕಾ ನೀಡಿರುವ ಈ ಭರವಸೆಯು ಮಹತ್ವಪೂರ್ಣವಾಗಿದೆ.

ಶ್ರೀಲಂಕಾದ ಹಂಬನ್ ತೋಟ ಬಂದರನ್ನು ಚೀನಾ ತನ್ನ ನೌಕಾನೆಲೆಯನ್ನಾಗಿ ಬದಲಿಸುವ ಮೂಲಕ ಭಾರತಕ್ಕೆ ಅಪಾಯವೊಡ್ಡುತ್ತಿದೆ. ಶ್ರೀಲಂಕಾವು ಚೀನಾದ ಸಾಲ ಮರುಪಾವತಿಸಲು ಅಶಕ್ತವಾದ ಹಿನ್ನಲೆಯಲ್ಲಿ ತನ್ನ ಬಂದರನ್ನು ಚೀನಾಕ್ಕೆ ೯೯ ವರ್ಷಗಳ ಲೀಸ್ ಗೆ ಕೊಡಬೇಕಾಗಿ ಬಂದಿದೆ. ಚೀನಾ ಈ ಬಂದರನ್ನು ತನ್ನ ನೌಕಾಪಡೆಯ ನೆಲೆಯನ್ನಾಗಿ ಮಾಡಿಕೊಂಡಿದ್ದು, ಗುಪ್ತಚರ್ಯೆ ನೌಕೆ ಹಾಗೂ ಖಂಡಾಂತರ ಕ್ಷಿಪಣಿ ವಾಹಕ ನೌಕೆಗಳನ್ನು ಅಲ್ಲಿ ನಿಯೋಜಿಸಿದೆ. ಆ ಮೂಲಕ ಭಾರತದ ಸೇನಾ ಮತ್ತು ನೌಕಾಪಡೆಯ ಚಟುವಟಿಕೆಗಳ ಮೇಲೆ ಸದಾ ಕಣ್ಣಿಟ್ಟಿದೆ. ಚೀನಾದ ಈ ಮಿಲಿಟರಿ ಚಟುವಟಿಕೆಗಳು ಭಾರತದ ಹಿತಾಸಕ್ತಿಗೆ ಮಾರಕವಾಗಿವೆ. ಆದರೀಗ ಶ್ರೀಲಂಕಾವು ತನ್ನ ನೆಲದಿಂದ ಭಾರತಕ್ಕೆ ಅಪಾಯವೊಡ್ಡುವ ಪ್ರಯತ್ನ ನಡೆಸಲು ಯಾವ ದೇಶಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿರುವುದು ಈ ಕುರಿತಾದ ಆತಂಕವನ್ನು ತುಸು ಕಡಿಮೆ ಮಾಡಿದೆ. ಶ್ರೀಲಂಕಾ ಇತ್ತೀಚಿನ ವರ್ಷಗಳಲ್ಲಿ ಚೀನಾ ಪರ ವಾಲುವ ಧೋರಣೆ ತಳೆದಿದ್ದರೂ ಶ್ರೀಲಂಕಾದ ಮನವೊಲಿಸುವಲ್ಲಿ ಭಾರತ ನಡೆಸಿದ ಹಲವಾರು ಪ್ರಯತ್ನಗಳ ಫಲವೇ ಇದಾಗಿದೆ. ಕಷ್ಟಕಾಲದಲ್ಲಿ ನೆರವೀಯುವ ಭಾರತದ ಉದಾತ್ತ ಮನೋಭಾವವೇ ಶ್ರೀಲಂಕಾದ ಮನ ಬದಲಿಸಿದ್ದು ಎನ್ನಬಹುದು. ೨೦೨೧-೨೨ರಲ್ಲಿ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾಗ ಚೀನಾ ಅದರ ನೆರವಿಗೆ ಬಂದಿರಲಿಲ್ಲ. ಅದರ ಬದಲಾಗಿ ಭಾರತವು ಲಂಕಾದ ನೆರವಿಗೆ ಧಾವಿಸಿತ್ತು. ಅದರ ಕೃತಜ್ಞತೆಯ ಕುರುಹಾಗಿಯೇ ಲಂಕಾ ಈಗ ಭಾರತದ ಹಿತಾಸಕ್ತಿಗೆ ಪೂರಕವಾಗಿ ಸ್ಪಂದಿಸಿದೆ ಎನ್ನಬಹುದು.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೯-೧೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ