ಸಮಾನಾಂತರ ಚಿಂತನಾ ಚಿತ್ತ
ಮನಸೆಂಬ ಅದೃಶ್ಯ ಚಿಂತನಾ ಜಗವೆ ವಿಸ್ಮಯ. ಸದಾ, ಅವಿರತದಲಿ ಏನಾದರೂ ಯೋಚಿಸುತ್ತಲೆ, ಚಿಂತಿಸುತ್ತಲೆ ಇರುವ ಈ ಮನಸು ವಿಶ್ರಾಂತಿಯಿಲ್ಲದೆ ಅದು ಹೇಗೆ ಕಾರ್ಯ ನಿರ್ವಹಿಸುವುದೊ ಎಂಬುದು ಒಂದು ಅಚ್ಚರಿಯಾದರೆ, ಒಂದು ಪರಿಧಿಯಲ್ಲಿ ಏನೊ ಚಿಂತಿಸುತ್ತಿರುವ ಅದೇ ಹೊತ್ತಿನಲ್ಲೆ, ಹಿನ್ನಲೆಯ ಸಮಾನಾಂತರ ಪರಿಧಿಯಲ್ಲಿ ಮತ್ತಿನ್ನೊಂದು ವಿಷಯವನ್ನು ಕುರಿತು ಚಿಂತಿಸಬಲ್ಲ ಸಾಮರ್ಥ್ಯ ಮತ್ತೊಂದು ಬಗೆಯ ಅಚ್ಚರಿ. ಹಾಗೆ ಇನ್ನೆಷ್ಟು ಕವಲುಗಳ ಸಮಾನಾಂತರ ಚಿಂತನೆಗಳಿವೆಯೊ ಏನೊ - ನಮ್ಮ ಗ್ರಹಿಕೆಗೆ ನಿಲುಕುವುದು ಬಹುಶಃ ಒಂದೆರಡು ಮಾತ್ರವೆಂದು ಕಾಣುತ್ತದೆ. ಈ ರೀತಿಯ ಸಮಾನಾಂತರ ಕವಲುಗಳೆ ನಮ್ಮಲ್ಲಿನ ಎಷ್ಟೊ ಗೊಂದಲ, ಅಸ್ಪಷ್ಟತೆಗಳಿಗೆ ಕಾರಣವೂ ಇರಬಹುದು. ಆ ಕವಲ ಹಾದಿಯಲ್ಲೆ ತಡುಕಿ ಮೂಲ ತಾಯಿಕಾಂಡ, ತಾಯಿ ಬೇರಿನ ಜುಟ್ಟು ಹಿಡಿಯಲು ಸಾಧ್ಯವಾದರೆ ಬಹುಶಃ ಆ ಮನಸನ್ನು ಸುಲಭದೆ ನಿಭಾಯಿಸಿ, ನಿಯಂತ್ರಿಸುವ ದಾರಿ ಕಾಣಬಹುದೇನೊ ಅನ್ನುವ ಊಹೆಯ ಜತೆ, ಅದನ್ನು ಸಾಧ್ಯವಾಗಿಸಿಕೊಂಡವರೆ ಜಿತೇಂದ್ರಿಯರಾಗುತ್ತರೆನ್ನುವ ಅನಿಸಿಕೆಯನ್ನು ಪ್ರತಿಬಿಂಬಿಸಲೆತ್ನಿಸುವ ಕವನ. ಆ ಆಶಯ ಬಿಂಬಿತವಾಗುವುದರ ಜತೆಗೆ, ಆ ಪ್ರಕ್ರಿಯೆಯ ಮಗ್ಗುಲುಗಳತ್ತ ದೃಷ್ಟಿ ಹಾಯಿಸುವ ಒಂದು ಯತ್ನ...
ಸಮಾನಾಂತರ ಚಿಂತನಾ ಚಿತ್ತ
____________________________
ಮನ ನಿಸ್ತಂತು, ಕಂತು ಕಂತು
ಯೋಚನೆ ಆಲೋಚನೆ ಸುತ್ತು
ಸಮನಾಂತರ ಸಮೃದ್ಧ ಝರಿ
ಸಂಬಂಧವಿರದ ವಸ್ತು ಲಹರಿ ||
ಒಂದಾಲೋಚನೇ ಗಿರಿಗಿಟ್ಟಲೆ
ಗಿರಗಿರ ಸುತ್ತುತಾ ಮುಂದಲೆ
ಹಿಂದೊಳಗಡೆ ಯಾರ ಕವಲೆ
ಚಿಂತೆಯೊಳ ಚಿಂತನೆ ತೆವಲೆ ||
ಬೆಚ್ಚಿ ಬೀಳಿಸಿತಲ್ಲ ಒಳತೋಟಿ
ಸರಣಿ ಸರಣಿ ಸಾಲು ವಸತಿ
ನಾನೂ ತಾನೆಂದು ಜಗ್ಗಾಡುತ
ಒಂದುಸಿರಲೆ ಸಕ್ರೀಯ ಕಡತ ||
ಮಿಶ್ರತೆ ಗೊಂದಲತೇ ಸಮ್ಮಿಶ್ರ
ಅರಿವಾಗದ ಕಲಾತ್ಮಕತೆ ಚಿತ್ರ
ನನ್ನೊಳಗಿದ್ದು ನಾನರಿಯೆ ಚಿತ್ತ
ಹೇಳಲ್ಹವಣಿಸಿದೆಯೇನು ಮೊತ್ತ ? ||
ಕವಲುಗಳೆಲ್ಲಾ ತರ ವೈವಿಧ್ಯತೆ
ಸಂಬಂಧವಿರದ ಜೋಡಿಯಕಥೆ
ಕವಲಿನ ಮೂಲದ ಟೊಂಗೆ ಸಿಗೆ
ತಾಯ್ಕಾಂಡ-ಬೇರ ದಾರಿಯಾಗೆ ||
ಹುಡುಕದೆ ಮೂಲ ಬೇರಿನ ಜಗತ್ತು
ಯಾಕೊ ಮಿಡುಕಿ ಕವಲ ಸವರಿತ್ತು
ಬಯಸದಿದ್ದರು ಸಿಕ್ಕು ಗಂಟಾಗಿತ್ತು
ಬೇಡದಿದ್ದರು ತಾ ಬಂದ ಸವಲತ್ತು ||
ಅದಕೆಂದೆ ಯುದ್ದ ಅಂತರಂಗ ಸಿದ್ದ
ಆಗಿರಲಿ ಬಿಡಲಿ ಕಾಡುತ ಒಳಗಿದ್ದ
ಗೆದ್ದವರು ಮುಕ್ತ ಚೈತ್ರಯಾತ್ರೆಯಲಿ
ಏಕಾಗ್ರವಿರೆ ಮನದಾಚೆಯೆ ಖೋಲಿ ||
ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು
Comments
ಉ: ಸಮಾನಾಂತರ ಚಿಂತನಾ ಚಿತ್ತ
ನಾಗೇಶ ಮೈಸೂರು ರವರಿಗೆ ವಂದನೆಗಳು
ಮನಸು ಒಂದು ಅಣುವಿನಿಂದ ಬೃಹತ್ತದ ವರೆಗೆ ವ್ಯಾಪಿಸುವಷ್ಟು ಗಹನವಾದದ್ದು, ಅದರ ಕುರಿತು ಸಮರ್ಥವಾಗಿ ವ್ಯಾಖ್ಯಾನಿಸಿ ಅಷ್ಟೆ ಅರ್ಥಪೂರ್ಣವಾಗಿ ಕವನದಲ್ಲಿ ಹಿಡಿದಿಟ್ಟಿದ್ದೀರಿ, ಮತ್ತೆ ಮತ್ತೆ ಓದ ಬೇಕೆನ್ನಿಸುವ ಕವನ ಧನ್ಯವಾದಗಳು.
In reply to ಉ: ಸಮಾನಾಂತರ ಚಿಂತನಾ ಚಿತ್ತ by H A Patil
ಉ: ಸಮಾನಾಂತರ ಚಿಂತನಾ ಚಿತ್ತ
ಹಿರಿಯ ಪಾಟೀಲರಿಗೆ ವಂದನೆಗಳು. ಮನಸಿನ ವಿಶೇಷತೆಯೆಂದರೆ, ಅದರ ಕುರಿತು ಬರೆಯ ಹೊರಟಷ್ಟು ಬರಹದಲಿ ಹಿಡಿಯಲಾಗದ ಸಂಕೀರ್ಣತೆಯೊ, ಸರಳವಾಗಿ ಹೇಳಲಾಗದ ಅಸಹಾಯಕತೆಯೊ ಆಗಿ ಕಾಡುವ ವಿಶ್ವರೂಪ. ಬರೆದ ನಂತರವೂ ಇನ್ನು ಅದು ಪರಿಪೂರ್ಣವಲ್ಲವೆಂಬ ಭಾವನೆ, ಇನ್ನು ಮಿಕ್ಕಿದೆಯೆಂಬ ಅನಿಸಿಕೆ ಕಾಡುತ್ತದೆ. ಮನಸಿನ 'ಪ್ಯಾರಲಲ್ ಥಾಟ್ಸ್' ವೈವಿಧ್ಯತೆ, ಸಾಮರ್ಥ್ಯ ಅಗಾಗ್ಗೆ ಕಾಡುತ್ತಿತ್ತು. ಅದನ್ನು ಹಿಡಿದಿಡಲು ಯತ್ನಿಸಿದ ಫಲಿತವಿದು. ಎಂದಿನಂತೆ ಗಹನ ವಸ್ತು ಸರಳದಲಿ ಬಿಂಬಿಸುವ ಪಂಥ ಇಲ್ಲು ಕಾಡಿತು. ತಮ್ಮ ಪ್ರತಿಕ್ರಿಯೆಗೆ ಮತ್ತೆ ನಮನ :-)