ಸಮುದಾಯ ಸಹಾಯ ಕೃಷಿ - ಯು.ಎಸ್.ಎ. ದೇಶದ ಆಂದೋಲನ
ಅಮೆರಿಕಾದ ಯುಎಸ್ಎ ದೇಶದ ಜನರಿಗೆ ಹಂಗಾಮುಗಳ ಹಂಗಿಲ್ಲ. ಯಾವುದೇ ಹಂಗಾಮಿನಲ್ಲಿ ಯಾವುದೇ ಹಣ್ಣು, ತರಕಾರಿ ಮತ್ತು ಆಹಾರವಸ್ತುಗಳನ್ನು ಅವರು ಪಡೆಯಬಹುದು.
ಯಾಕೆಂದರೆ ಭೂಮಿಯ ವಿವಿಧ ಪ್ರದೇಶಗಳಿಂದ ಅಲ್ಲಿನವರಿಗೆ ಬೇಕಾದ ಆಹಾರವಸ್ತುಗಳನ್ನು ಎಲ್ಲ ಕಾಲದಲ್ಲಿಯೂ ಸರಬರಾಜು ಮಾಡುವ ವ್ಯವಸ್ಥೆ ಇದೆ - ಚಿಲಿ ದೇಶದಿಂದ ದ್ರಾಕ್ಷಿ ಮತ್ತು ಸೇಬು, ಮೆಕ್ಸಿಕೋದಿಂದ ಟೊಮೆಟೊ ಮತ್ತು ಕರಿಮೆಣಸು, ಈಕ್ವಡೋರಿನಿಂದ ಕುರಿಮಾಂಸ, ಥೈಲ್ಯಾಂಡಿನಿಂದ ಸಿಗಡಿ ಇತ್ಯಾದಿ. ಅಲ್ಲಿಯ ಸೂಪರ್ ಮಾರ್ಕೆಟುಗಳಲ್ಲಂತೂ 47,000 ವಿಭಿನ್ನ ಆಹಾರ ವಸ್ತುಗಳ ಪ್ರದರ್ಶನ.
ಆದರೆ, ಹೆಚ್ಚೆಚ್ಚು ಅಮೆರಿಕನ್ನರಿಗೆ ಆಹಾರವಸ್ತುಗಳ ಇಂತಹ “ಸಮೃದ್ಧ ಸರಬರಾಜು” ಅನುಕೂಲವಲ್ಲ, ಬದಲಾಗಿ ಅದೊಂದು ಸಮಸ್ಯೆ ಎಂದು ಅನ್ನಿಸತೊಡಗಿದೆ. ತಿನ್ನುವ ಆಹಾರದ ಸುರಕ್ಷಿತತೆ, ಸಾವಿರಾರು ಕಿಮೀ ದೂರ ಆಹಾರವಸ್ತುಗಳನ್ನು ಸಾಗಿಸುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳು, ಸ್ಥಳೀಯ ಕೃಷಿಕರ ಸಮುದಾಯಕ್ಕೆ ಬೆಂಬಲ ನೀಡುವುದು, ಹೊಲದಿಂದ ನೇರವಾಗಿ ಖರೀದಿಸುವ ತಾಜಾ ಹಣ್ಣುತರಕಾರಿಗಳ ಗುಣಮಟ್ಟ - ಈ ಕಾಳಜಿಗಳಿಂದ ಪ್ರೇರಿತರಾದ ಹೆಚ್ಚೆಚ್ಚು ಕುಟುಂಬಗಳು ಹಣ್ಣು, ತರಕಾರಿ, ಕೋಳಿಮೊಟ್ಟೆ ಹಾಗೂ ಮಾಂಸವನ್ನು ಕೃಷಿಕರಿಂದ ನೇರವಾಗಿ ಖರೀದಿಸಲು ಒಪ್ಪಂದ ಮಾಡಿಕೊಳ್ಳುತ್ತಿವೆ.
ಈ ಆಂದೋಲನ “ಸಮುದಾಯ ಸಹಾಯ ಕೃಷಿ” ಎಂಬ ಹೆಸರಿನಿಂದ ಬೆಳೆಯುತ್ತಿದೆ. ಟೊಮೆಟೊ, ಸ್ಪಿನಾಚ್, ಲೆಟ್ಯೂಸ್, ಚೀನಾದ ಗೋಧಿಹುಡಿ ಮತ್ತು ಮೆಕ್ಸಿಕೋದ ಕರಿಮೆಣಸು - ಇವುಗಳಲ್ಲಿ ಹಲವಾರು ವಿಷಾಂಶ ಪ್ರಕರಣಗಳು ವರದಿಯಾದ ಬಳಿಕ ಈ ಆಂದೋಲನ ವ್ಯಾಪಕವಾಗಿ ಪಸರಿಸುತ್ತಿದೆ.
ಜಾರ್ಜಿಯಾ ರಾಜ್ಯದ ನೆಲಗಡಲೆ ಸಂಸ್ಕರಣೆ ಘಟಕವೊಂದರಲ್ಲಿ ಶುರುವಾದ ಸಾಲ್ಮೊನೆಲ್ಲಾ ಸೂಕ್ಷ್ಮಜೀವಿ-ವಿಷದಿಂದಾಗಿ ಅನೇಕ ಉತ್ಪಾದಕರು ತಯಾರಿಸಿದ ನೆಲಗಡಲೆ ಆಧಾರಿತ 3,900 ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ವಾಪಾಸು ಪಡೆಯಲಾಯಿತು. ಇದರಿಂದಾಗಿ ಯುಎಸ್ಎ ದೇಶದ ಆಹಾರ-ಸುರಕ್ಷಾ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗಾಗಿ ಕ್ರಮಕೈಗೊಳ್ಳಲಾಗಿದೆ.
ಆದರೆ, ಹಲವಾರು ಕುಟುಂಬಗಳು ಆಹಾರ-ಸುರಕ್ಷಾ ಕಾಯಿದೆಗಳ ಬದಲಾವಣೆಗಳನ್ನು ನಂಬಿಕೊಂಡು ಕುಳಿತಿಲ್ಲ. ಬದಲಾಗಿ ಸ್ಥಳೀಯ ಕೃಷಿಕರ ಹೊಲಗಳ ಉತ್ಪನ್ನಗಳನ್ನು ನೇರವಾಗಿ ಖರೀದಿಸಲು ತೊಡಗಿದ್ದಾರೆ. ಜೊತೆಗೆ, ತಮ್ಮ ಮಕ್ಕಳನ್ನು ಹೊಲಗಳಿಗೆ ಕರೆದೊಯ್ದು, ಹಣ್ಣುತರಕಾರಿಗಳು ಮಣ್ಣಿನಿಂದ ಬೆಳೆದುಬರುತ್ತಿವೆ ಎಂಬ ಸತ್ಯವನ್ನು ತೋರಿಸಿಕೊಡುತ್ತಿದ್ದಾರೆ.
ಈ ಬಗ್ಗೆ “ಲೋಕಲ್ ಹಾರ್ವೆಸ್ಟ್” ಎಂಬ ಸಂಘಟನೆಯ ಎರಿನ್ ಬಾರ್ನೆಟ್ ಹೀಗೆನ್ನುತ್ತಾರೆ, “ತರಕಾರಿಗಳನ್ನು ನಮ್ಮ ಮಕ್ಕಳು ತಿನ್ನುತ್ತಿರಲಿಲ್ಲ; ಆದರೆ ಈಗ ಹೊಲದಿಂದ ನೇರವಾಗಿ ತಂದ ತರಕಾರಿಗಳನ್ನು ಮಕ್ಕಳು ಚಪ್ಪರಿಸಿ ತಿನ್ನುತ್ತಿದ್ದಾರೆ ಎಂಬುದು ಹಲವಾರು ಹೆತ್ತವರ ಹೇಳಿಕೆ. “ಸಮುದಾಯ ಸಹಾಯ ಕೃಷಿ”ಯಿಂದಾಗಿ ಕೃಷಿಕ ಮತ್ತು ಅವನ ಹೊಲದೊಂದಿಗೆ ಬಳಕೆದಾರರಿಗೆ ನೇರ ಸಂಬಂಧ ಶುರುವಾಗುತ್ತದೆ. ನಮ್ಮ ಆಹಾರದ ಮೂಲದ ಬಗೆಗಿನ ಗೌಪ್ಯ ಮಾಯವಾಗುತ್ತದೆ. ನೀವು ತಿನ್ನುವ ಆಹಾರ ಎಲ್ಲಿಂದ ಬರುತ್ತದೆ ಎಂದು ಗೊತ್ತಾದಾಗ ಮತ್ತು ಅದನ್ನು ಬೆಳೆಸಿದವನ ಜೊತೆ ಒಂದೆರಡು ಮಾತುಗಳನ್ನಾಡಿದಾಗ ನಿಮಗೊಂದು ನೆಮ್ಮದಿಯ ಭಾವ ಮೂಡುತ್ತದೆ.”
“ಸಮುದಾಯ ಸಹಾಯ ಕೃಷಿ”ಯ ಅನುಸರಣೆ ವಿಭಿನ್ನ. ಕೆಲವು ಬಳಕೆದಾರರು ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಕೃಷಿಕನ ಹೊಲಕ್ಕೆ ಹೋಗಿ ಅವನು ಬೆಳೆಸಿದ್ದರಲ್ಲಿ ತಮ್ಮ ಪಾಲು ಖರೀದಿಸುತ್ತಾರೆ. ಇನ್ನು ಕೆಲವು ಬಳಕೆದಾರರು ಪೂರ್ವ-ನಿರ್ಧರಿತ ಸ್ಥಳದಿಂದ ತಮ್ಮ ಪಾಲು ಎತ್ತಿಕೊಂಡು ಬರುತ್ತಾರೆ. ಇನ್ನುಳಿದವರು, ಒಪ್ಪಂದದ ಪ್ರಕಾರ, ಕೃಷಿಕರ ಹೊಲಕ್ಕೆ ಪೂರ್ವ-ನಿಗದಿತ ದಿನಗಳಲ್ಲಿ ಹೋಗಿ ಅಲ್ಲಿ ಕೆಲಸ ಮಾಡುತ್ತಾರೆ.
ಇದಕ್ಕೊಂದು ಉದಾಹರಣೆ, ಮಿಸ್ಸೋರಿಯ ಮೊಬರ್ಲಿಯ ಡಾಂಜೊ ಫಾರ್ಮ್ಸ್. ಡಾನ್ ಮತ್ತು ಜೊಅನ್ನೇ ನೆಲ್ಸನ್ ಅದರ ಮಾಲೀಕರು. ಇವರೊಂದಿಗೆ ಫಾರ್ಮಿನ ಉತ್ಪನ್ನದ ಪಾಲಿಗಾಗಿ ಒಪ್ಪಂದ ಮಾಡಿಕೊಂಡಿರುವ ಕುಟುಂಬಗಳು 46. (ಉತ್ಪನ್ನ ಅಂದರೆ ಹಣ್ಣುಗಳು, ತರಕಾರಿಗಳು, ಕೋಳಿಮೊಟ್ಟೆ, ಕೋಳಿ/ ಹಂದಿ/ ದನದ ಮಾಂಸ). ಈ ಬಗ್ಗೆ ನೆಲ್ಸನರ ಅಭಿಪ್ರಾಯ, “ಈ ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಇಲ್ಲಿಗೆ ಬರುತ್ತವೆ. ಮಕ್ಕಳಿಗೆ ಪ್ರಕೃತಿಯ ಅನುಭವ ಆಗಬೇಕೆಂಬುದು ಹೆತ್ತವರ ಆಶಯ. ಮಕ್ಕಳು ಇಲ್ಲಿ ಆಡುತ್ತಾರೆ ಮತ್ತು ಪ್ರಕೃತಿಯ ಸಂಗತಿಗಳನ್ನು ಕಲಿಯುತ್ತಾರೆ. ಇದರಿಂದ ನಮಗೂ ಸಹಾಯ. ವಾರಾಂತ್ಯದಲ್ಲಿ ಎರಡು-ಮೂರು ಕುಟುಂಬಗಳ ಸದಸ್ಯರು ಬಂದಾಗ ಹೊಲದ ಕೆಲಸಕ್ಕೆ ಅಷ್ಟು ಜನರು ಕೈಗೂಡಿಸುತ್ತಾರೆ." ಸೂಪರ್ ಮಾರ್ಕೆಟುಗಳ ಬೆಲೆಯಲ್ಲೇ ಹಣ್ಣುತರಕಾರಿ ಹಾಗೂ ಮಕ್ಕಳಿಗೆ ಪ್ರಕೃತಿಪಾಠ ಈ ಕುಟುಂಬಗಳಿಗೆ ಅನುಕೂಲ. ಭಾರತದಲ್ಲಿಯೂ ಇಂತಹ ಅಂದೋಲನ ಬೆಳೆಯಲಿ ಎಂದು ಹಾರೈಸೋಣ.
ಫೋಟೋಗಳು: ಅಮೇರಿಕಾದ ವಿಸ್ತಾರ ಹೊಲಗಳು … ಕೃಪೆ: ಅನ್ ಸ್ಪ್ಲಾಸ್.ಕೋಮ್, ಇನ್ವೆಸ್ಟೋಪೀಡಿಯ.ಕೋಮ್