ಸಮುದ್ರಕ್ಕೆ ಕಬ್ಬಿಣದ ಪುಡಿ ಸೇರಿಸಿದರೆ, ವಾತಾವರಣ ಶುದ್ಧ?(ಇ-ಲೋಕ-26)(10/6/2007)

ಸಮುದ್ರಕ್ಕೆ ಕಬ್ಬಿಣದ ಪುಡಿ ಸೇರಿಸಿದರೆ, ವಾತಾವರಣ ಶುದ್ಧ?(ಇ-ಲೋಕ-26)(10/6/2007)

ಬರಹ

 ಇದೇನು ಮ್ಯಾಜಿಕ್ ಎನು ಎಂದು ಹುಬ್ಬೇರಿಸದಿರಿ. ಹೌದು ಕಬ್ಬಿಣದ ಸೂಕ್ಷ್ಮ ಪುಡಿಯನ್ನು ಸಾಗರಕ್ಕೆ ಸೇರಿಸಿದರೆ, ಸಮುದ್ರದ ನೀರಿನಲ್ಲಿರುವ ಪಾಚಿ ಬೆಳವಣಿಗೆ ಅಧಿಕವಾಗುತ್ತದೆ. ಈ ಪಾಚಿ ಸಸ್ಯಕ್ಕೆ ಒಂದು ಸ್ವಾರಸ್ಯಕರ ಗುಣವಿದೆ. ಇದು ಸೂರ್ಯಪ್ರಕಾಶವಿದ್ದಾಗ, ಕಾರ್ಬನ್ ಡಯಾಕ್ಸೈಡ್ ಅನಿಲವನ್ನು ಹೀರಿಕೊಳ್ಳುತ್ತದೆ. ಇದರಿಂದ ವಾತಾವರಣದ ಅನಿಲ ಸಮುದ್ರದ ನೀರಿಗೆ ಹೆಚ್ಚು ಹೆಚ್ಚು ಸೇರಿಕೊಳ್ಳುತ್ತದೆ. ವಾತಾವರಣದಲ್ಲಿ ಕಾರ್ಬನ್ ಡಯಾಕ್ಸೈಡ್ ಇಳಿದರೆ ವಾತಾವರಣ ಶುದ್ಧವಾಗುತ್ತದೆ ತಾನೇ?ಈ ಪಾಚಿ ಸಸ್ಯ ಸತ್ತು ಸಾಗರ ತಳ ಸೇರಿದರೆ,ಕಾರ್ಬನ್ ಡಯಾಕ್ಸೈಡ್‌ಗೆ ಮೋಕ್ಷ ಸಿಕ್ಕಿದಂತೆಯೇ.ಶತಮಾನಗಳ ಕಾಲ ಅನಿಲ ವಾತಾವರಣ ಸೇರದು. ಅಮೆರಿಕದಲ್ಲಿ ಪ್ರತಿ ಕಂಪೆನಿ ಎಷ್ಟು ಕಾರ್ಬನ್ ಡಯಾಕ್ಸೈಡ್ ಮಾಲಿನ್ಯ ಉಂಟು ಮಾಡಬಹುದು ಎಂಬ ಮಿತಿಯಿದೆ. ಯಾವುದೇ ಕಾರಣಕ್ಕೆ ಅವು ಮಿತಿ ಉಲ್ಲಂಘಿಸಿದರೆ, ಮಿತಿಗಿಂತಲೂ ಕಡಿಮೆ ಅನಿಲ ವಿಸರ್ಜನೆಯನ್ನು ಮಾಡಿ ತಮ್ಮ ಕೋಟಾ ಉಳಿಸಿಕೊಂಡ ಕಂಪೆನಿಗಳ ಕಾರ್ಬನ್ ಸಾಲ ಖರೀದಿಸಬೇಕೆಂದು ವಿಧಿಸಲಾಗಿದೆ. ಈಗ ಕೆಲವು ಕಂಪೆನಿಗಳು ಕಬ್ಬಿಣದ ಪುಡಿ ಉದುರಿಸಿ, ಅನಿಲ ಕಡಿಮೆಗೊಳಿಸಿ, ಕಾರ್ಬನ್ ಕ್ರೆಡಿಟ್ ಸಂಪಾದಿಸುವ ಹೊಸ ವ್ಯವಹಾರಕ್ಕೆ ಇಳಿಯಲು ಹವಣಿಸಿವೆ. ಸದ್ಯ ಪ್ರತಿ ಟನ್ ಕಾರ್ಬನ್ ಡಯಾಕ್ಸೈಡ್ ಅನಿಲ ಸಾಲ ಐದು ಡಾಲರು ಬೆಲೆಗೆ ಮಾರಾಟವಾಗುತ್ತಿವೆ.ಕಳೆದ ವರ್ಷವೊಂದರಲ್ಲೇ ಮೂವತ್ತು ಬಿಲಿಯನ್ ಡಾಲರು ಮೊತ್ತದ ಕಾರ್ಬನ್ ಕ್ರೆಡಿಟ್ ಮಾರಾಟವಾಗಿದೆ. ಈ ವರ್ಷ ಇದು ಎರಡು ಪಟ್ಟು ಹೆಚ್ಚಬಹುದಂತೆ. ಅಂದಹಾಗೆ ಒಂದೇ ಸವನೆ ಕಬ್ಬಿಣದ ಪುಡಿ ಸಮುದ್ರಕ್ಕೆ ಸೇರಿಸಿದರೆ, ನೀರಿನ ಆಮ್ಲಜನಕದ ಪ್ರಮಾಣ ತಗ್ಗುವ ಸಮಸ್ಯೆಯಿದೆ.ಸಾರಜನಕದ ಅಂಶ ಹೆಚ್ಚುವುದು, ಕಾರ್ಬೋನಿಕ್ ಆಮ್ಲದ ಪ್ರಮಾಣ ಏರುವುದು ಇನ್ನೊಂದು ಸಮಸ್ಯೆ.

ಹುಡುಕಾಟದ ಫಲಿತಾಂಶ ವಿಭಿನ್ನ ರೀತಿಯಲ್ಲಿ ಒದಗಿಸುವ ಅಂತರ್ಜಾಲ ತಾಣ

 ಗೂಗಲ್ ಶೋಧ ಕಾರ್ಯ ಕೈಗೊಳ್ಳುವಲ್ಲಿ ಅಂತರ್ಜಾಲಿಗರ ಮೊದಲ ಆಯ್ಕೆ.ಯಾಹೂ ಕೂಡಾ ಜನಪ್ರಿಯ ತಾಣಗಳಲ್ಲೊಂದು. ನಾಲ್ಕನೇ ಸ್ಥಾನದಲ್ಲಿರುವ ಆಸ್ಕ್ ಎನ್ನುವ ತಾಣವೀಗ ಶೋಧದ ಫಲಿತಾಂಶಗಳನ್ನು ವಿಭಿನ್ನ ರೀತಿಯಲ್ಲಿ ನೀಡಿ ಜನರ ಮನ ಗೆಲ್ಲಲು ಬಯಸಿದೆ. ಇನ್ನು ಮುಂದೆ www.ask.com ಅಂತರ್ಜಾಲ ತಾಣದಲ್ಲಿ ಶೋಧ ಕಾರ್ಯದ ಫಲಿತಾಂಶವನ್ನು ಮೂರು ಕಂಬಸಾಲುಗಳಲ್ಲಿ ನೀಡಲಾಗುವುದು.ಮೊದಲನೇ ಸಾಲಿನಲ್ಲಿ ಮಾಮೂಲು ರೀತಿಯ ಫಲಿತಾಂಶ ಲಭ್ಯವಾಗುತ್ತದೆ. ಎರಡನೇ ಸಾಲಿನಲ್ಲಿ ಜಾಹೀರಾತುಗಳು,ಜನರಿಗೆ ಉಪಯುಕ್ತವಾದ ಮಾಹಿತಿಗಳು ಇರುತ್ತವೆ. ಮೂರನೇ ಸಾಲಿನಲ್ಲಿ ಶೋಧಕ್ಕೆ ಸಂಬಂಧಿಸಿದ ಚಿತ್ರಗಳು,ಬ್ಲಾಗ್‍ಗಳು ಮತ್ತು ಬಹುಮಾಧ್ಯಮ ಸಂಪನ್ಮೂಲಗಳು ಪ್ರದರ್ಶಿತವಾಗುತ್ತವೆ. ವಿಭಿನ್ನ ಸಂಪನ್ಮೂಲಗಳಿಗೆ ಪ್ರತ್ಯೇಕ ಶೋಧ ನಡೆಸುವ ಅವಶ್ಯಕತೆ ಇದರಿಂದ ಇಲ್ಲವಾಗುತ್ತದೆ.ನಾಲ್ಕನೇ ಸ್ಥಾನದಿಂದ ಮೇಲೇರಲು ಹೊಸ ವೇಷ ಸಹಾಯ ಮಾಡುತ್ತದೋ ಕಾದು ನೋಡಬೇಕು!

ಮೊಬೈಲ್ ಬಳಸಿ ಪಟ್ಟಾಂಗ!

ಏರ್‌ಟೆಲ್ ಮೊಬೈಲ್ ಕಂಪೆನಿಯು ತನ್ನ ಸೇವೆಯ ಪಟ್ಟಿಗೆ ದಿಢೀರ್ ಸಂದೇಶ ವರ್ಗಾವಣೆಯನ್ನೂ ಸೇರಿಸಲಿದೆ.ಕಂಪ್ಯೂಟರ್ ಬಳಸಿ ಪಟ್ಟಾಂಗ ನಡೆಸುವ ಯುವಜನರ ಹವ್ಯಾಸವನ್ನು ಮೊಬೈಲಿಗೂ ವಿಸ್ತರಿಸುವ ನಿಟ್ಟಿನಲ್ಲಿ ಈ ಸೇವೆ ಆರಂಭವಾಗಿದೆ.ಆಗಸ್ಟ್ ಮೂವತ್ತೊಂದರ ವರೆಗೆ ಸೇವೆ ಉಚಿತ.ಮುಂದೆ ಸ್ವಲ್ಪ ಸಮಯ ಆರಂಭಿಕ ಕೊಡುಗೆಯ ರಿಯಾಯಿತಿ ದರ ಅನ್ವಯವಾಗಬಹುದು.ಈ ಸೇವೆ ಪದೆಯಲು ಜಿ ಪಿ ಆರ್ ಎಸ್ ಸೌಲಭ್ಯವಿರುವ ಸೆಲ್‍ಪೋನ್ ಸಾಧನ ಬೇಕು. ಕಂಪೆನಿಯಲ್ಲಿ ನೋಂದಾಯಿಸಿಕೊಂಡ ನಂತರವಷ್ಟೇ ಸೇವೆ ಲಭ್ಯವಾಗುತ್ತದೆ.ಏರ್‌ಟೆಲ್ ಅಲ್ಲದೆ ವಿಶ್ವದ ಹದಿನೈದು ಮೊಬೈಲ್ ಕಂಪೆನಿಗಳು ಪಟ್ಟಾಂಗ ಸೇವೆ ನೀಡಲು ನಿರ್ಧರಿಸಿವೆ. ಮುಂದಿನ ದಿನಗಳಲ್ಲಿ ಕಿರುಸಂದೇಶ ಸೇವೆಯನ್ನು ಪಟ್ಟಾಂಗ ಸೇವೆ ಹಿಂದೆ ಹಾಕಲಿದೆ.

ಗೂಗಲ್ ಪುಸ್ತಕ ಯೋಜನೆಗೆ ಹತ್ತು ವಿಶ್ವವಿದ್ಯಾಲಯಗಳು ಸೇರ್ಪಡೆ

 ಗೂಗಲ್ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಅಂತರ್ಜಾಲಕ್ಕೆ ಸೇರಿಸುವ ಮಹಾಯೋಜನೆ ಹಾಕಿಕೊಂಡಿದೆ. ಆದರೆ ಪುಸ್ತಕಗಳ ಹಕ್ಕುಸ್ವಾಮ್ಯ ಹೊಂದಿದವರು ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.ಹಾವರ್ಡ್,ಕ್ಯಾಲಿಫೋರ್ನಿಯಾದಂತಹ ವಿಶ್ವವಿದ್ಯಾಲಯಗಳು ತಮ್ಮ ಪುಸ್ತಕಗಳನ್ನು ಈ ಯೋಜನೆಗೆ ಸೇರಿಸಲು ಒಪ್ಪಿಗೆ ನೀಡಿವೆ. ಈಗ ಇನ್ನೂ ಹತ್ತು ವಿಶ್ವವಿದ್ಯಾಲಯಗಳು ಈ ಪಟ್ಟಿಗೆ ಸೇರಿವೆ.ಪೆನ್, ಪುರ್ಡ್ಯೂ,ಇಂಡಿಯಾನಾ,ಇಲಿನೋಯಿಸ್,ಮಿಚಿಗನ್,ಒಹಾಯೋ,ಮಿನಿಸೋಟಾ,ಅಯೋವಾ ಇವೆಲ್ಲಾ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿವೆ. ಈ ವಿಶ್ವವಿದ್ಯಾಲಯಗಳ ಬಳಿಯಿರುವ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ, ಅಂತರ್ಜಾಲದಲಿ ಸೇರಿಸುವುದು ಗೂಗಲ್ ಉದ್ದೇಶ. ಹಾಗೆ ಮಾಡುವಾಗ ಹಕ್ಕುಸ್ವಾಮ್ಯ ಇರುವ ಪುಸ್ತಕಗಳನ್ನು ಓದುಗರಿಗೆ ಲಭ್ಯವಾಗದಿರಿಸಲು ಗೂಗಲ್ ಒಪ್ಪಿದೆ.

ಬಟಾಟೆಯಿಂದ ಪ್ಲಾಸ್ಟಿಕ್

 ಬೆಲೆ ಕುಸಿತದಿಂದ ನಷ್ಟ ಅನುಭವಿಸುವ ರೈತರಿಗೆ ಸಿಹಿ ಸುದ್ದಿಯಿದೆ. ಬಟಾಟೆಯನ್ನು ಬಳಸಿ, ಬಯೋಪ್ಲಾಸ್ಟಿಕ್ ಉತ್ಪಾದಿಸುವ ವಿಧಾನ ಈಗ ಯಶಸ್ವಿಯಾಗಿದೆ. ಬಯೋಪ್ಲಾಸ್ಟಿಕ್ ಪೆಟ್ರೋಲಿಯಮ್ ಉತ್ಪನ್ನವಾಗಿರದೆ, ಜೈವಿಕ ಮೂಲದ್ದಗಿರುವುದು ವಿಶೇಷ. *ಅಶೋಕ್‍ಕುಮಾರ್ ಎ