ಸಮುದ್ರದಲ್ಲಿ ಮುಳುಗಿದ ಶ್ರೀಕೃಷ್ಣನ ದ್ವಾರಕೆ

ಸಮುದ್ರದಲ್ಲಿ ಮುಳುಗಿದ ಶ್ರೀಕೃಷ್ಣನ ದ್ವಾರಕೆ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ। ಎಸ್. ಆರ್. ರಾವ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೯೫.೦೦ ಮುದ್ರಣ: ೨೦೦೫

ಮಹಾಭಾರತದ ಮೂಲ ಬಿಂದು ಶ್ರೀಕೃಷ್ಣ. ಕೃಷ್ಣನ ಪಾತ್ರ ಮಹಾಭಾರತದುದ್ದಕ್ಕೂ ಹಾಸು ಹೊಕ್ಕಾಗಿದೆ. ಈ ವಾಸುದೇವ ಕೃಷ್ಣನು ದ್ವಾರಕಾನಗರಿಯನ್ನು ಸಮುದ್ರದಲ್ಲಿ ನಿರ್ಮಿಸಿ ಯಾದವರೊಂದಿಗೆ ವಾಸಿಸುತ್ತಿದ್ದನೆಂದೂ ಈ ದ್ವಾರಕೆಯು ನಂತರ ಸಮುದ್ರದಲ್ಲಿ ಮುಳುಗಿ ಹೋಯಿತೆಂದೂ ಹೇಳುತ್ತದೆ.

ಈ ಘಟನೆಯ ಸತ್ಯಾಸತ್ಯತೆ ಎಷ್ಟು? ಕೃಷ್ಣನು ನಿಜವಾಗಿಯೂ ಐತಿಹಾಸಿಕ ವ್ಯಕ್ತಿಯೇ? ಅಥವಾ ಕವಿ ನಿರ್ಮಿತ ಕಾವ್ಯದ ಕಥಾನಾಯಕನೇ? ಕೃಷ್ಣ ನಿಜವಾಗಿ ಐತಿಹಾಸಿಕ ವ್ಯಕ್ತಿಯಾಗಿದ್ದರೆ ಆತ ಬದುಕಿದ್ದನೆನ್ನಲಾದ ಕಾಲ ಯಾವುದು? ಯಾವ ಕಾರಣದಿಂದ ಅಂದಿನ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು ಸಿಗದೆ ಕಣ್ಣುಮುಚ್ಚಾಲೆಯಾಡುತ್ತಿವೆ? ಕೃಷ್ಣನ ಇರುವು ನಿಜವಾದರೆ ಕೃಷ್ಣನ ದ್ವಾರಕೆ ಯಾವುದು? ಮುಂತಾದ ಪ್ರಶ್ನೆ ಏಳುವುದು ಸಹಜ.

ಆ ನಿಟ್ಟಿನಲ್ಲಿ ಕೈಗೊಂಡ ವೈಜ್ಞಾನಿಕ ಸಮುದ್ರೀಯ ಪುರಾತತ್ವೀಯ ಉತ್ಖನನದ ಮಹತ್ವದ ಸಾಧನೆಯನ್ನು ಹೇಳುವುದೇ ಈ ಗ್ರಂಥದ ಉದ್ದೇಶ. ೧೯೮೦ರಿಂದ ಈಚೆಗೆ ಹಲವಾರು ಅಭಿಯಾನಗಳನ್ನು ನಡೆಸಿ ಸಮುದ್ರೀಯ ಪುರಾತತ್ವಜ್ಞರು ಆಧಾರಭೂತರಾಗಿ ಕೃಷ್ಣನ ಇರವನ್ನೂ ದ್ವಾರಕೆಯ ಅವಶೇಷಗಳನ್ನೂ ಬೆಳಕಿಗೆ ತಂದಿದ್ದಾರೆ. ಆ ಮಹತ್ವದ ಸಾಧನೆ ಹೇಗೆ ಬೀಜವಾಗಿ ಹುಟ್ಟಿತು? ಹೇಗೆ ಮೊಳೆತು ಫಲಿಸಿತು? ಸಾಧನೆಯ ಮಾರ್ಗದ ತೊಡಕು ತೊಡರುಗಳೇನು? ಎನ್ನುವ ಎಲ್ಲ ವಿಷಯಗಳನ್ನೂ ಸಂಕ್ಷಿಪ್ತವಾಗಿ ತಿಳಿಸುವುದೇ ಈ ಗ್ರಂಥದ ಉದ್ದೇಶ ಎನ್ನುತ್ತಾರೆ ಲೇಖಕರಾದ ಡಾ। ಎಸ್. ಆರ್. ರಾವ್ ಅವರು.

ತಮ್ಮ ಮುನ್ನುಡಿಯಲ್ಲಿ ಅವರು “ನಮ್ಮ ಜೀವನದಲ್ಲಿ ನಡೆಯುವಂಥಹ ಕೆಲವು ಘಟನೆಗಳು, ಕೆಲವು ನಿರ್ಧಾರಗಳು ನಮ್ಮ ಇಡೀ ಜೀವನದ ಗತಿಯನ್ನೇ ಬದಲಾಯಿಸಿಬಿಡುತ್ತವೆ. ನಮ್ಮ ಜೀವನಕ್ಕೆ ಒಂದು ನಿಶ್ಚಿತವಾದ ಗುರಿಯನ್ನೇ ಕೊಟ್ಟುಬಿಡುತ್ತದೆ. ಜೀವನದ ಸಂಧ್ಯಾಕಾಲದಲ್ಲಿ ಹಿಂದಿರುಗಿ ನೋಡಿದಾಗ ನಡೆದಂತಹ ಘಟನೆಗಳೆಲ್ಲಾ ಪೂರ್ವನಿಯೋಜಿತವೇನೋ ಎನ್ನುವಂತೆ. ದೈವಸಂಕಲ್ಪವೋ ಎಂಬಂತೆ ಕಂಡುಬಂದರೆ ಆಶ್ಚರ್ಯವಿಲ್ಲ. ಈ ಹಿನ್ನಲೆಯಲ್ಲಿಯೇ ನಾನು ಪುರಾತತ್ವ ಇಲಾಖೆಯ ಸೇವೆಗೆ ಸೇರಿದುದನ್ನು, ಅದರ ಫಲಶ್ರುತಿಯಾಗಿ ನಿವೃತ್ತಿಯ ನಂತರ ಸಮುದ್ರೀಯ ಪುರಾತತ್ವ ಅಭಿಯಾನ ಮತ್ತು ಉತ್ಖನನಗಳಲ್ಲಿ ತೊಡಗಿಸಿಕೊಂಡದ್ದನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಬಹುದು. ೧೯೮೦ರಿಂದ ಇತ್ತೀಚಿಗೆ ಸಮುದ್ರೀಯ ವೈಜ್ಞಾನಿಕರು ದ್ವಾರಕೆಯನ್ನು ಕಂಡು ಹಿಡಿದಿದ್ದಾರೆ. ಈ ಮಹತ್ವದ ಸಾಧನೆ ಯಾವ ರೀತಿ ಪ್ರಾರಂಭವಾಗಿ ಕ್ರಮೇಣ ಫಲಿಸಿತು ಎಂಬ ವಿಷಯವನ್ನು ಸಂಕ್ಷಿಪ್ತವಾಗಿ ತಿಳಿಸುವುದೇ ಈ ಗ್ರಂಥದ ಉದ್ದೇಶ" ಎಂದು ಬರೆದಿದ್ದಾರೆ.

ಭಾರತದ ಖ್ಯಾತ ವಿಜ್ಞಾನಿ, ಕನ್ನಡಿಗ ರೊದ್ದಂ ನರಸಿಂಹರವರು ತಮ್ಮ ಮುನ್ನುಡಿಯಲ್ಲಿ “ಭಾರತೀಯ ಸಂಸ್ಕೃತಿಗೆ ಸುಮಾರು ೩೫೦೦ ವರ್ಷಗಳಷ್ಟು ಅಥವಾ ಅದಕ್ಕಿಂತ ಹೆಚ್ಚೇ ಪುರಾತನವಾದ ಇತಿಹಾಸವಿದೆ. ಇಷ್ಟೊಂದು ಸಂಪದ್ಭರಿತವಾದ ಸಂಸ್ಕೃತಿಯ ಪ್ರಾರಂಭದ ದಿನಗಳು ಇಂದಿಗೂ ಕಾಲದ ಒಡಲಲ್ಲಿ ಮಸುಕು ಮಸುಕಾಗಿಯೇ ಇವೆ. ಕಾಲನ ಕಾಲ್ತುಳಿತದಿಂದ ಐತಿಹಾಸಿಕ ಪುರಾವೆಗಳು ಲಭ್ಯವಿರುವ ಸಾಧ್ಯತೆ ಕಡಿಮೆಯಿರುವ ಈ ಸಂದರ್ಭದಲ್ಲಿ ಆ ಪುರಾತನವಾದ ಸಂಸ್ಕೃತಿಗೆ ಕವಿದಿರುವ ತೆರೆಯನ್ನು ಸರಿಸಲು ಕೇವಲ ಇತಿಹಾಸಜ್ಞರಲ್ಲದೇ ಪ್ರಾಚ್ಯಶಾಸ್ತ್ರಜ್ಞರು, ವಿಜ್ಞಾನಿಗಳು, ಭಾಷಾಶಾಸ್ತ್ರಜ್ಞರು ಮತ್ತು ವಿದ್ವಾಂಸರ ಒಟ್ಟಾರೆ ಪ್ರಯತ್ನದ ಅಗತ್ಯವಿದೆ.

ಡಾ. ರಾವ್ ಅವರ ವಿಶೇಷತೆಯನ್ನು ಅವರು ಪ್ರಾಚೀನ ಸಂಸ್ಕೃತಿಯ ಅವಶೇಷಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ಸಾಹಿತ್ಯಗಳ ಸಹಾಯದಿಂದ ಕಟ್ಟುವಲ್ಲಿ ಕಾಣಬಹುದು. ಈ ಪುಸ್ತಕದಲ್ಲಿ ಹೆಜ್ಜೆ ಹೆಜ್ಜೆಗೆ ಅದನ್ನು ನೋಡಬಹುದು. ದ್ವಾರಕೆಯ ಸಂಶೋಧನೆಯನ್ನು ಕುರಿತು ಈ ಪುಸ್ತಕವನ್ನು ಓದುವ ಭಾಗ್ಯ ಕನ್ನಡಿಗರಿಗೆ ಸಂದದ್ದು ಬಹು ಹೆಮ್ಮೆಯ ವಿಷಯ. ಈ ಪುಸ್ತಕಕ್ಕೆ ದೊರೆಯುವ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ ಅವರು ಇನ್ನಷ್ಟು ಇಂತಹ ವಿಜ್ಞಾನ-ಸಂಸ್ಕೃತಿಗಳ ಸಂಗಮದಿಂದ ಉದ್ಭವಿಸುವ ಕೃತಿಗಳನ್ನು ನೀಡಿ ಭವ್ಯವಾದ ಸಂಪದ್ಭರಿತವಾದ, ಜೀವನ್ಮುಖಿಯಾದ, ಭಾರತೀಯ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವಂತಾಗಲಿ” ಎಂದು ಶುಭಹಾರೈಸಿದ್ದಾರೆ. 

ಲೇಖಕರು ಪುಸ್ತಕದಲ್ಲಿ ದ್ವಾರಕೆಯ ಉತ್ಖನನ ಹಾಗೂ ಆ ಸಮಯದಲ್ಲಿ ದೊರೆತ ವಸ್ತುಗಳ ಕುರಿತಾದ ಹಲವಾರು ಚಿತ್ರಗಳನ್ನು ನೀಡಿದ್ದಾರೆ. ಆ ಚಿತ್ರಗಳ ಬಗ್ಗೆ ಸವಿವರವಾದ ಮಾಹಿತಿಯನ್ನೂ ನೀಡಲು ಪ್ರಯತ್ನ ಮಾಡಿದ್ದಾರೆ. ಸುಮಾರು ೧೧೫ ಪುಟಗಳ ಈ ಪುಸ್ತಕವನ್ನು ಓದುತ್ತಾ ನೀವೂ ನಮ್ಮ ಇತಿಹಾಸದ ಪುಟಗಳಲ್ಲಿ ಕಳೆದು ಹೋಗುವ ಸಾಧ್ಯತೆ ಇದೆ.